ಅಮೆರಿಕನ್ನಡ
Amerikannada
ಬಾಳಗೀತೆ
ಪ್ರೊ. ಎಚ್.ಜಿ. ಸುಬ್ಬರಾವ್, ಮೈಸೂರು
ನೀನೆನಗೆ ವ್ಯಸನದಲಿ ಹೇಳಬೇಕಾಗಿಲ್ಲ
ಬಾಳೊಂದು ಬರಿಗನಸು ಏನಿಲ್ಲವೆಂದು
ನಿದ್ದೆಹೋಗಿರುವಾತ್ಮ ಇದ್ದರೂ ಸತ್ತಿಹುದು
ತೋರುವಂತಿಲ್ಲವು ವಸ್ತುಗಳ ನಿಜಸ್ಥಿತಿಯು.

ಜೀವನವು ವಾಸ್ತವವು ಶ್ರದ್ಧೆಯದರಲ್ಲುಂಟು
ಇಹಲೋಕ ತ್ಯಜಿಸುವುದು ಜೀವನದ ಗುರಿಯಲ್ಲ
ನೀನು ಮಣ್ಣಿನಮೂರ್ತಿ ಮಣ್ಣಾಗಿ ಹೋಗಲಿದೆ
ಈ ಮಾತಿಗಪವಾದ ನಿನ್ನಾತ್ಮ ಶಾಶ್ವತವು.

ನೋವು ನಲಿವುಗಳೆರಡು ಅವಿಭಾಜ್ಯ ಅಂಗಗಳು
ವಿಧಿವಿಧಾನಗಳೆಂಬ ಕಟ್ಟುಪಾಡುಗಳಿರದು
ಇಂದಿನಾ ಬದುಕು ನಾಳೆಯಾ ಮುನ್ನುಡಿಯು
ಹೀಗೆ ಹರಿಯುತ್ತಿಹುದು ಜೀವನದಿ ವಾಹಿನಿಯು.

ಮಿತಿಯಿಲ್ಲ ಜ್ಞಾನಕ್ಕೆ ಕಾಲ ಓಡುತಲಿಹುದು
ನಮ್ಮ ಹೃದ್ಬಲ ಶೌರ್ಯ ಎಷ್ಟು ಇದ್ದರೂ ಕೂಡಾ
ಕೇಳಿ ಮದ್ದಲೆ ಬಡಿತ ಸಾವು ಸೂಚಕ ಶಬ್ದ
ಆಗಲೇ ಹೊರಟಿಹುದು ಮೃತದೇಹ ಮಸಣಕ್ಕೆ

ಆನಂದ ಆಕರ್ಷಣೆಯ ನಾಳೆಯನು ನಂಬದಿರು
ನೆನ್ನೆ ಮೊನ್ನೆಯದನ್ನು ಬಲು ಬೇಗ ಮರೆತುಬಿಡು
ಒಳಗಿರುವ ಹೃದಯಕ್ಕೆ ಮೇಲಿರುವ ದೇವನಿಗೆ
ಸಲ್ಲಿಸುವ ಕಾಣಿಕೆಯೆ ವರ್ತಮಾನದ ಬದುಕು.

ಜಗವೊಂದು ರಣರಂಗ ಜೀವನವು ಹೋರಾಟ
ಮೂಕ ಪ್ರಾಣಿಗಳಂತೆ ಅಟ್ಟಿದೆಡೆ ಹೋಗುವುದು
ಬುದ್ಧಿಪ್ರಜ್ಞೆಗಳಿರುವ ಮಾನವಗೆ ಶೋಭಿಸದು
ಹೋರಾಡಿ ಬದುಕುವುದು ವೀರ ಯೋಧನ ಹೂಟ.

ಮಹಾಮಹಿಮರ ಬಾಳ್ವೆ ನೆನೆಯುತ್ತ ನಾವೆಲ್ಲ
ನಮ್ಮ ಜೀವನವನ್ನು ಉದ್ಧರಿಸಿಕೊಳಬಹುದು
ಬಾಳ ತ್ಯಜಿಸುವ ಮುನ್ನ ಉಳಿಸಿ ಹೋಗಲು ಬಹುದು
ಕಾಲಮರುಭೂಮಿಯಲಿ ನಮ್ಮ ಹೆಜ್ಜೆಯ ಗುರುತ.

ಸಂಸಾರ ಸಾಗರದಿ ಬಾಳನೌಕೆಯು ಮುಳುಗಲ್
ಈಜಿ ದಡ ಸೇರಿದ ನಿರ್ಭಾಗ್ಯ ಸೋದರನು
ಕಾಲದುಸುಕಲಿ ಕಂಡು ನಮ್ಮ ಹೆಜ್ಜೆಯ ಗುರುತ
ಕೊರಡಾದ ಬಾಳಕುಡಿ ಮತ್ತೆ ಕೊನರಲು ಬಹುದು

ಅದಕಾಗಿ ನಾವೆಲ್ಲ ಮೇಲೆದ್ದು ಶ್ರಮಿಸೋಣ
ಎಲ್ಲ ಅಡೆತಡೆಗಳನ್ನು ಧೈರ್ಯದಿಂ ದಾಟೋಣ
ನಮ್ಮಗುರಿ ಸಾಧಿಸಲು ಮುನ್ನುಗ್ಗಿ ಹೋಗೋಣ
ಫಲ ನಿರೀಕ್ಷಣೆಯಲಿ ತಾಳ್ಮೆಯಿಂ ಕಾಯೋಣ

ಹೆನ್ರಿ ವಡ್ಸ್ ವರ್ತ್ ಲಾಂಗ್ ಫೆಲೋ ಕವಿಯ A Psalm of Life ಪದ್ಯದ ಭಾವಾನುವಾದ
ಪ್ರೊ. ಎಚ್.ಜಿ. ಸುಬ್ಬರಾವ್
‘ಇಂಚರ’, ನಂ. ಎ/೫, ಜೆ ಬ್ಲಾಕ್,
ರಮಣಮಹರ್ಷಿ ರಸ್ತೆ, ಕುವೆಂಪುನಗರ,
ಮೈಸೂರು-೫೭೦ ೦೨೩,
ಫೋನ್: ೦೮೨೧-೨೫೪೬೮೮೬