ಅಮೆರಿಕನ್ನಡ
Amerikannada
ಸಂಧ್ಯಾ ಸುರಕ್ಷ
ವೃದ್ಧಾಪ್ಯದಲ್ಲಿ ದೈಹಿಕ, ಮಾನಸಿಕ, ಆರ್ಥಿಕ ಮತ್ತು ಸಂವೈಧಾನಿಕ ಸುರಕ್ಷೆ

ಜಿ.ಆರ್. ವಿದ್ಯಾರಣ್ಯ
ಹಿರಿಯ ನಾಗರಿಕರು ಜೀವನದ ಉದ್ದಕ್ಕೂ ತಮ್ಮ ಕುಟುಂಬದ ಹಾಗೂ ಮತ್ತಿತರರ ಏಳಿಗೆಗಾಗಿ ಅಹೋರಾತ್ರಿ ದುಡಿದು, ಬಳಲಿ, ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಇಚ್ಛಿಸುತ್ತಿರುವ ಜೀವಗಳು. ನ್ಯಾಯವಾಗಿ ಸಿಗಬೇಕಾದುದು ಮಾತ್ರ ತಮಗೆ ಸಿಗಲಿ ಎಂದು ಕೇಳುವವರೇ ಹೊರತು ಅದಕ್ಕಾಗಿ ಹೋರಾಟದ ದಾರಿ ಹಿಡಿಯುವವರಲ್ಲ. ತಮ್ಮ ಮಕ್ಕಳು ತಮ್ಮನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಿ ಎಂಬ ಆಸೆ ಇದ್ದರೂ ಸಹ ಮಕ್ಕಳ ಪ್ರಗತಿಗೆ, ಜೀವನ ಶೈಲಿಗೆ ತಮ್ಮಿಂದ ಅಡಚಣೆಯಾಗಬಾರದೆಂಬ ಮನೋಭಾವ ಉಳ್ಳವರು. ಬೆಳೆದ ಮಕ್ಕಳು ಸಂಕಷ್ಟದಲ್ಲಿದ್ದಾಗ ತಮ್ಮ ಕೈಲಿದ್ದುದನ್ನು ಅವರಿಗೆ ನೀಡಿ ತಮ್ಮ ಸ್ವಂತ ಭವಿಷ್ಯದ ಯೋಚನೆ ನಿರ್ಲಕ್ಷಿಸುವಷ್ಟು ಮುಗ್ಧರು. ದಿನ ಬೆಳಗಾದರೆ ವೃತ್ತಪತ್ರಿಕೆ ಮತ್ತು ದೃಶ್ಯಮಾಧ್ಯಮದಲ್ಲಿ ಬರುತ್ತಿರುವ ನಿರಂತರ ಸುದ್ದಿಗಳಲ್ಲಿ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ, ಬೆದರಿಕೆ, ಸುಲಿಗೆ, ಹಲ್ಲೆಗಳಿಂದ ಹೆದರಿದರೂ ಅದಕ್ಕಾಗಿ ಏನು ಮಾಡಬೇಕು ಎಂದು ಸರಿಯಾದ ಮಾಹಿತಿ ಇಲ್ಲದೆ ದಿಗ್ಭ್ರಮೆಗೊಳಗಾಗಿ ಮನೆಯೊಳಗೆ ಕುಳಿತಿರಬೇಕಾದ ಪರಿಸ್ಥಿತಿ ಹಿರಿಯ ನಾಗರಿಕರದಾಗಿದೆ. ಜೀವನ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾಗಿ ಬದುಕುತ್ತಿರುವ ವಯೋವೃದ್ಧರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ತಮ್ಮ ದೈಹಿಕ ನಿಃಶಕ್ತಿಯಿಂದಾಗಿ ಇವರು ನಿರ್ದಾಕ್ಷಿಣ್ಯವಾದ ಮನೆ ಕೆಲಸಗಾರರಿಗೆ, ನೆರೆಹೊರೆಯವರಿಗೆ, ನೆಂಟರಿಗೆ, ಅಪರಿಚಿತರಿಗೆ, ಕಳ್ಳಕಾಕರಿಗೆ, ಇತರ ಸಮಾಜಘಾತಕರಿಗೆ ಸುಲಭವಾಗಿ ಸಿಗುವ ಬಲಿಪಶುಗಳಾಗುತ್ತಾರೆ. ಅನಾರೋಗ್ಯ, ಮರೆವು ಮತ್ತು ಅಜಾಗರೂಕತೆ ಇವುಗಳಿಂದಾಗಿ ಮನೆಯಲ್ಲೂ ನಡೆಯುವ ಸಣ್ಣ-ಪುಟ್ಟ ಅಪಘಾತಗಳಿಗೆ ನಿರಂತರವಾಗಿ ಸಿಲುಕುತ್ತಾ ಸದಾಕಾಲ ಆತಂಕದ ಜೀವನ ನಡೆಸುವಂತಾಗಿದೆ. ಈ ಪರಿಸ್ಥಿತಿಯನ್ನು ಹೋಗಲಾಡಿಸಿ ವೃದ್ಧರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿರುವುದು ಸಮಾಜದ ಕರ್ತವ್ಯ. ಇದಕ್ಕೆ ವೃದ್ಧರ, ಅವರ ಸಂಬಂಧಿಕರ, ಸರಕಾರದ ವಿವಿಧ ಅಂಗಗಳ, ಸರಕಾರೇತರ ಸಮಾಜ ಸೇವಾ ಸಂಸ್ಥೆಗಳ, ನಮ್ಮ-ನಿಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ. ವೃದ್ಧಾಪ್ಯದಲ್ಲಿ ಇವರಿಗೆ ಬೇಕಾಗಿರುವುದು ದೈಹಿಕ, ಮಾನಸಿಕ, ಆರ್ಥಿಕ ಮತ್ತು ನಮ್ಮ ದೇಶದಲ್ಲಿರುವ ಸಂವೈಧಾನಿಕ ಸುರಕ್ಷೆ ಅಥವಾ ಅದರ ಬಗ್ಗೆ ಸಾಧ್ಯವಾದಷ್ಟು ಮಾಹಿತಿ.
ದೈಹಿಕ ಸುರಕ್ಷೆ ಎಂದರೆ ನಮಗೆ ನೆನಪಾಗುವುದು ಪೊಲೀಸ್ ಅಥವಾ ವೈದ್ಯರು. ಆದರೂ ಅವರಲ್ಲಿಗೆ ಹೋಗಲು ನಮಗೆ ಏನೋ ಭಯ. ಅದರಲ್ಲೂ ಪೊಲೀಸರ ಬಗ್ಗೆ ಭಯ ಹೋಗಲಾಡಿಸುವ ಕೆಲಸ ಸ್ವತಃ ಪೊಲೀಸರೇ ಮಾಡಬೇಕು. ಆದರೆ ಕಾನೂನು ಪಾಲಿಸುವ ನಾಗರಿಕರಾಗಿ ನಾವು ಅವರಲ್ಲಿಗೆ ಹೋಗದೇ ಬೇರೆ ದಾರಿ ಇಲ್ಲ. ದಂಪತಿಗಳು ಅಥವಾ ಒಂಟಿಯಾಗಿ ವಾಸಿಸುತ್ತಿರುವ ವೃದ್ಧರು ತಮ್ಮ ಸಮೀಪದ ಆರಕ್ಷಕ ಠಾಣೆಯಲ್ಲಿ ಲಿಖಿತವಾಗಿ ತಿಳಿಸಿದಲ್ಲಿ ಅವರ ಮನೆಗಳ ಹತ್ತಿರ ಪೊಲೀಸರ ಪಥ ಸಂಚಲನೆ ಹೆಚ್ಚಿಸಲಾಗುತ್ತದೆ. ಒಂಟಿಯಾಗಿ ವಾಸಿಸುತ್ತಿರುವ ಹಿರಿಯರ ಬಗ್ಗೆ ಸಂಬಂಧಿಕರು ಅಥವಾ ನೆರೆಹೊರೆಯವರು ತಿಳಿಸಿದಲ್ಲಿ ಸಹ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ನೆರೆಹೊರೆಯವರ ಪಾತ್ರ ಇದರಲ್ಲಿ ಬಹು ಮುಖ್ಯ. ಇದಲ್ಲದೆ ವೃದ್ಧರು (ಅಥವಾ ಅವರ ಸಂಬಂಧಿಕರು) ಮನೆಗೆ ಎರಡನೆಯ ಕಬ್ಬಿಣದ ಮುಂಬಾಗಿಲು, ಮನೆಯ ಸುತ್ತಲು ಕಬ್ಬಿಣದ ಜಾಲಿ (grill), ಪಕ್ಕದ ಮನೆಗಳಿಗೆ ಕೇಳಿಸುವಂತಹ ಆಪತ್ಕಾಲೀನ ಕರೆಗಂಟೆ (Alarm) ವ್ಯವಸ್ಥೆ, ಮುಂತಾದ ಆಧುನಿಕ ತಂತ್ರಜ್ಞಾನದ ವಿವಿಧ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು. ತುರ್ತುಪರಿಸ್ಥಿತಿಯಲ್ಲಿ ಬೇಕಾಗುವ ಸಹಾಯಕರ (ಪೊಲೀಸ್, ಅಗ್ನಿಶಾಮಕ ದಳ, ವೈದ್ಯರು, ಸಮೀಪದ ನೆಂಟರು, ಮಿತ್ರರು, ಮುಂತಾದವರ) ದೂರವಾಣಿ ಸಂಖ್ಯೆಗಳ ಪಟ್ಟಿ (ದಪ್ಪ ಅಕ್ಷರದಲ್ಲಿ) ಕಣ್ಣಿಗೆ ಕಾಣುವಂತೆ ಗೋಡೆಯ ಮೇಲೆ ಅಂಟಿಸಬೇಕು ಅಥವಾ ಕೈಗೆಟುಕುವಂತೆ ಇಟ್ಟುಕೊಳ್ಳಬೇಕು. ಸಾಧ್ಯವದಷ್ಟು ಮಟ್ಟಿಗೆ, ಮನೆಯಲ್ಲಿ ಅಧಿಕ ಹಣವಾಗಲಿ, ಬೆಲೆ ಬಾಳುವ ಉಪಕರಣಗಳಾಗಲಿ ಇಟ್ಟುಕೊಳ್ಳಬಾರದು. ಮನೆ ಕೆಲಸಕ್ಕೆ ಜನರನ್ನು ಇಟ್ಟುಕೊಳ್ಳುವ ಮುನ್ನ ಅವರ ಪೊಲೀಸ್ ತನಿಖಾ ವರದಿ/ಒಪ್ಪಿಗೆ ಮಾಡಿಸಿ. ಸಾಧ್ಯವಾದಲ್ಲಿ ಕೆಲಸಗಾರರ ಸಂಪೂರ್ಣ ಹೆಸರು, ವಿಳಾಸ, ಚಹರೆ, ಭಾವಚಿತ್ರ ಪೊಲೀಸರಿಗೆ ಸುಲಭವಾಗಿ ಸಿಗುವ ವ್ಯವಸ್ಥೆ ಮಾಡಿರಬೇಕು.
ಆರೋಗ್ಯವೇ ಭಾಗ್ಯ. ಯಾವ ಕಾರಣಕ್ಕೂ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಸಕ್ಕರೆ ಕಾಯಿಲೆ ಅಥವಾ ಬಿ.ಪಿ. ಇದ್ದರಂತೂ ಇನ್ನೂ ಹೆಚ್ಚು ಜಾಗೃತೆ ವಹಿಸಬೇಕು. ಸಾಧ್ಯವಾದಲ್ಲಿ ತಿಂಗಳಿಗೊಮ್ಮೆ ತಮ್ಮ ಮನೆ ವೈದ್ಯರನ್ನು (ಫ್ಯಾಮಿಲಿ ಫಿಸಿಷಿಯನ್) ಕಂಡು ದೇಹದಲ್ಲಿ ಯಾವ ತೊಂದರೆಯಿದ್ದರೂ ತಿಳಿಸಬೇಕು ಮತ್ತು ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ಇದರಿಂದ ಸಣ್ಣ ಖರ್ಚಿನಲ್ಲಿ ಮುಂದೆ ಬರಬಹುದಾದ ದೊಡ್ಡ ತೊಂದರೆ ಹಾಗೂ ಖರ್ಚು ಎರಡನ್ನೂ ತಪ್ಪಿಸಬಹುದು.
ಮಾನಸಿಕ ಸುರಕ್ಷೆ ಅಂದರೆ ನಮಗೆ ನೆನಪಾಗುವುದು ನಮ್ಮ ಮನೆ. ಮಾನವ ಒಂಟಿ ಜೀವಿಯಲ್ಲ, ಸಂಘ ಜೀವಿ. ಕುಟುಂಬ (ಮನೆ) ಸಮಾಜದ ಅತಿ ಚಿಕ್ಕ ಘಟಕ. ನಮ್ಮಲ್ಲಿ ಮೊದಲಿಗಿದ್ದ ಅವಿಭಕ್ತ ಕುಟುಂಬಗಳ ಶಕ್ತಿ ಕ್ಷೀಣವಾಗುತ್ತ ಬಂದಂತೆ ನಮ್ಮಮನಸ್ಸು-ಕುಟುಂಬಗಳು ಚಿಕ್ಕದಾಗುತ್ತಾ ಬಂದವು. ಮನೆಯಲ್ಲಿಇರುವ ನಾಲ್ಕೈದು ಜನ ಒಬ್ಬರನ್ನೊಬ್ಬರು ಅರಿತು ಅನುಸರಿಸಿ ನಡೆಯಲಾಗದೆ, ಹಿರಿಯ ನಾಗರಿಕರ ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಕುಟುಂಬಗಳು ಚಿಕ್ಕದಾಗಿದ್ದರಿಂದ ಪ್ರತಿಯೊಂದು ಮನೆಯಲ್ಲೂ ಆರ್ಥಿಕ, ವೈಯುಕ್ತಿಕ ಪ್ರಗತಿಯಾಗಿದೆ. ಸಾಮಾನ್ಯವಾಗಿ ನಮ್ಮಲ್ಲಿ ಈಗ ಬಡತನವಿಲ್ಲ, ಆದರೂ ಕುಟುಂಬದ ಒಳಗೆ ಒಂದು ವಿಧವಾದ ತಳಮಳ, ಆತಂಕ, ಮಾನಸಿಕ ಅಸುರಕ್ಷತತೆ ಎದ್ದು ಕಾಣುತ್ತಿದೆ. ಮಾನಸಿಕ ಆರೋಗ್ಯ ಅಂದರೆ ನಮಗೆ ನೆನಪಾಗುವುದು ಮನೋವೈದ್ಯರು. ಆದರೆ ಜನ ನಮ್ಮ ಬಗ್ಗೆ ತಪ್ಪು ಕಲ್ಪನೆ ಮಾಡುತ್ತಾರೇನೋ ಎಂಬ ಭಾವನೆಯಿಂದ ಮನೋರೋಗ ತಜ್ಞರನ್ನು ನಾವು ಕಾಣಲು ಇಚ್ಛಿಸುವುದಿಲ್ಲ. ಹಿರಿಯ ನಾಗರಿಕರ ಸಮಸ್ಯೆಯನ್ನು ನಾವು ಕುಟುಂಬದ ಸದಸ್ಯರಲ್ಲಿ ಸಹಕಾರವಿಲ್ಲದೆ ಇದ್ದಾಗ ಬಗೆಹರಿಸುವುದು ಕಷ್ಟ. ಹೀಗೆ ಕೌಟುಂಬಿಕ ಸಮಸ್ಯೆ ಕುಟುಂಬದ ಒಳಗೆ ಪರಿಹಾರವಾಗದಿದ್ದಲ್ಲಿ ಅದು ಸಾಮಾಜಿಕ ಸಮಸ್ಯೆಯಾಗುತ್ತದೆ. ಆದರೆ ಮೊದಲೇ ಹೇಳಿದಂತೆ ಮನುಷ್ಯ ಸಂಘ ಜೀವಿ ಮತ್ತು ಕುಟುಂಬ ಸಮಾಜದ ಅತಿ ಚಿಕ್ಕ ಘಟಕ ಎಂಬುದನ್ನು ಅರಿತರೆ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು. ಇಲ್ಲಿಯೂ ವಯೋವೃದ್ಧರ, ಕುಟುಂಬದ, ಸಮಾಜ ಸೇವಾ ಸಂಸ್ಥೆಗಳ, ಸರಕಾರದ ಪಾತ್ರ ಹಾಗೂ ಸಹಕಾರ ಅತ್ಯಗತ್ಯವಾಗಿರುತ್ತದೆ. ಸಮಸ್ಯೆಯನ್ನು ನಾವು ತುರ್ತು (acute) ಮತ್ತು ದೀರ್ಘಕಾಲೀನ (chronic) ಎಂದು ವಿಂಗಡಿಸಬಹುದು. ತುರ್ತು ಸಮಸ್ಯೆ ಪರಿಹಾರದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸುರಕ್ಷರಾಗಿರುವ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಅವರಿಗೆ ಬೇಕಾದ ಊಟ, ವಸತಿ, ವೈದ್ಯಕೀಯ ನೆರವು, ತಜ್ಞರಿಂದ ಮಾನಸಿಕವಾಗಿ ಧೈರ್ಯತುಂಬುವ ಸಮಾಲೋಚನೆ ನೀಡಬೇಕು. ಇದರಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮುಖ್ಯ. ಸಮಸ್ಯೆಗೆ ತುರ್ತು ಚಿಕಿತ್ಸೆಗಿಂತಲೂ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇದಕ್ಕಾಗಿ, ವೃದ್ಧರಿಗೆ, ಕುಟುಂಬಗಳಿಗೆ ಸರಿಯಾದ ಮಾಹಿತಿ ನೀಡುವ ಕಾರ್ಯಾಗಾರ ಏರ್ಪಡಿಸುವ ಮತ್ತು ಅವರನ್ನು ಸಂಘಟಿಸುವ ಅವಶ್ಯಕತೆ ಇದೆ. ಸಂಘಟನೆಯಿಂದ ಅವರು ತಮಗೆ ಬೇಕಾದ ಸಹಾಯ, ಸರಕಾರದಲ್ಲಿರುವ ಸೌಲಭ್ಯಗಳನ್ನು ಪಡೆದು ಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.
ಹಿರಿಯರು ತಮ್ಮ ಕೌಟುಂಬಿಕ ಜವಾಬ್ದಾರಿಗಳು ಕಡಿಮೆಯಾಗುತ್ತಾ ಬಂದಂತೆ ಹೆಚ್ಚು ಸಮಾಜ ಮುಖಿಯಾಗಬೇಕು. ಇದರಿಂದ ಅವರ ಸಮಯ ಸಾರ್ಥಕವಾಗುವುದರ ಜೊತೆಗೆ ಮಾನಸಿಕ ಆರೋಗ್ಯ ಸುರಕ್ಷಿತವಾಗುತ್ತದೆ. ಒಂಟಿತನ ಕಾಡುವುದಿಲ್ಲ.
ನಮಗೆ ದೈಹಿಕ, ಮಾನಸಿಕ ಆರೋಗ್ಯ ನೀಡುವವನು ದೇವರು. ಆ ದೇವರ ಧ್ಯಾನ ಎಲ್ಲಕ್ಕಿಂತ ಮುಖ್ಯ. ಧಾರ್ಮಿಕ ಆಚಾರ, ವಿಚಾರ ವೈಯುಕ್ತಿಕ ಅಭಿಪ್ರಾಯಕ್ಕೆ ಬಿಟ್ಟಿದ್ದು, ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ನಿಮ್ಮ ನಿಮ್ಮ ಪಂಗಡ, ಉಪಪಂಗಡದ ಆಧಾರದ ಮೇರೆಗೆ ನಿಮಗೆ ಬೇಕಾದ ಧಾರ್ಮಿಕ ಮಾರ್ಗದರ್ಶನವನ್ನು ನಿಮ್ಮ ಧಾರ್ಮಿಕ ಮುಖಂಡರಿಂದ ಪಡೆಯಬೇಕಾಗಿ ವಿನಂತಿ.
ಆರ್ಥಿಕ ಸುರಕ್ಷೆ ಎಂದರೆ ನಮಗೆ ನೆನಪಾಗುವುದು ಸರಕಾರದಿಂದ ಬರುವ ಪಿಂಚಣಿ. ಸರಕಾರಿ ನೌಕರಿ ಎಲ್ಲರಿಗೂ ಸಿಗದ ಕಾರಣ ಸರಕಾರೇತರ ನೌಕರರು ವೃದ್ಧಾಪ್ಯದಲ್ಲಿ ತಮ್ಮ ಆರ್ಥಿಕ ಸುರಕ್ಷತೆಗಾಗಿ ಮೊದಲಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಕೈಲಿದ್ದ ಹಣವನ್ನೆಲ್ಲಾ ಮಕ್ಕಳಿಗೆ ಹಂಚಿ ಅವರು ತಮ್ಮನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತಾರೆಂದು ನಂಬುವುದು ಶತಮೂರ್ಖತನ. ಬ್ಯಾಂಕಿನ ಬಡ್ಡಿದರ ಅನಿಶ್ಚಿತವಾಗಿರುವುದರಿಂದ, ಹೆಚ್ಚಿನ ಬಡ್ಡಿಯ ಆಸೆಗಾಗಿ ಅಸಲಿಗೆ ಸಂಚಕಾರವಾಗುವಂತಹ ಹಣಹೂಡುವ (ಬ್ಲೇಡ್) ಕಂಪನಿಗಳಿಂದ ಮೊದಲು ದೂರವಿರಬೇಕು. ಈ ಬಗ್ಗೆ ಪ್ರಮಾಣಿತ ಆರ್ಥಿಕ ಸಲಹೆಗಾರರಿಂದ (Certified Financial Advisor) ಸಲಹೆ ಪಡೆಯುವುದು ಸೂಕ್ತ. ನಿಯಮಿತ ಆದಾಯವಿದ್ದಾಗ ಸ್ವಲ್ಪ ಸ್ವಲ್ಪವಾಗಿ ಹಣವನ್ನು ವಿವಿಧ ಆಸ್ತಿಗಳಲ್ಲಿ ತೊಡಗಿಸಬೇಕು (ಆರೋಗ್ಯ ವಿಮೆ, ಜೀವ ವಿಮೆ, ನಿಶ್ಚಿತ ಠೇವಣಿ, ಚಿನ್ನ, ಜಮೀನು, ಶೇರು-ಬಾಂಡುಗಳು ಇತ್ಯಾದಿ). ಎಲ್ಲವನ್ನೂ ಒಂದೇ ಕಡೆ ಎಂದೂ ಹಾಕಬಾರದು. ಸಾಧ್ಯವಾದಷ್ಟು ಮಟ್ಟಿಗೆ ಮಾಸಿಕ ಆದಾಯ ಬರುವಂತೆ ನೋಡಿಕೊಳ್ಳಬೇಕು. ಇದರಿಂದ ನಮ್ಮ ಮಾಸಿಕ ಅಂದಾಜು ವೆಚ್ಚಗಳ ಪಟ್ಟಿ (ಬಜೆಟ್) ಸರಿದೂಗಿಸಲು ಸಹಾಯವಾಗುತ್ತದೆ. ವಾಸಕ್ಕೆ ಸ್ವಂತ ಮನೆ ಇರುವ ಹಿರಿಯರು ಮಾಸಿಕ ಆದಾಯ ಏನೂ ಇಲ್ಲದೆ ಇದ್ದಾಗ ಬ್ಯಾಂಕಿನವರು ನೀಡುತ್ತಿರುವ ರಿವರ್ಸ್ ಮಾರ್ಟ್‌ಗೇಜ್ (reverse mortgage) ವಿಧಾನದಿಂದ ವಾಸವಿರುವ ಮನೆಯ ಮೇಲೆ ಸಾಲ ಪಡೆಯಬಹುದಾಗಿದೆ. ಏನೂ ಇಲ್ಲದವರು ಸರಕಾರದ ವೃದ್ಧಾಪ್ಯ ಮಾಸಾಶನಕ್ಕೆ ಅಥವಾ ವಿಧವಾ ಮಾಸಾಶನಕ್ಕೆ ಅರ್ಜಿ ಸಲ್ಲಿಸಬಹುದು. ಸರಕಾರದ ಮಾಸಾಶನ ನಿಜವಾಗಿ ಅಗತ್ಯವಿರುವರು ಈ ಬಗ್ಗೆ ಸಂಧ್ಯಾ ಸುರಕ್ಷ ಯೋಜನೆಯ ಸಹಾಯ ಪಡೆಯಬಹುದು.
ಸಂವೈಧಾನಿಕ ರಕ್ಷಣೆ:
ಹಿರಿಯ ನಾಗರಿಕರ ರಕ್ಷಣೆಗಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ UNO ಶೃಂಗಸಭೆಯಲ್ಲಿ 1948, 1969, 1971, 1978 ಮತ್ತು 1982ರಲ್ಲಿ ಚರ್ಚೆಯಾಗಿ, 1991ರಲ್ಲಿ ಪಂಚತತ್ವಗಳನ್ನು UNO ಜನರಲ್ ಅಸೆಂಬ್ಲಿ ಅನುಮೋದಿಸಿದೆ. ಈ ತತ್ವಗಳ ಆಧಾರದ ಮೇಲೆ ಭಾರತ ಸರಕಾರವೂ ಸಹ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ನಮ್ಮ ದೇಶದ ಸಂವಿಧಾನದ ಕಲಂ 41 ಮತ್ತು 46 ರಲ್ಲಿ ಹಿರಿಯ ನಾಗರಿಕರ ಹಿತ ರಕ್ಷಣೆಯೂ ಅಡಕವಾಗಿದೆ.
ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಹಿರಿಯರು ಕೆಲವು ದಾಖಲೆಗಳನ್ನು ಒದಗಿಸಬೇಕು. ಈ ದಾಖಲೆಗಳನ್ನು ಹೇಗೆ ಪಡೆಯಬಹುದು ಎಂದು ಮೊದಲು ತಿಳಿಯೋಣ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ನಾಗರಿಕರ ಕಾರ್ಡ್: ಅತ್ಯಂತ ಸುಲಭ. ನಿಮ್ಮ ವಿಳಾಸ, ಭಾವಚಿತ್ರ ಮತ್ತು ವಯಸ್ಸು ಧೃಡೀಕರಣ ಪಡಿಸುವ ಯಾವುದೇ ಸರಕಾರಿ ದಾಖಲೆ (ಮತದಾರರ ಕಾರ್ಡ್, ಪಡಿತರ ಚೀಟಿ, ವಾಹನ ಚಾಲನೆ ಪರವಾನಗಿ, ಆದಾಯ ತೆರಿಗೆ ಪ್ಯಾನ್ ಕಾರ್ಡ್, ಪೆನ್ಷನ್ ಪುಸ್ತಕ) ಮುಂತಾದವುಗಳ ಮೂಲ ಪ್ರತಿ ಮತ್ತೊಂದು ಝೆರಾಕ್ಸ್ ಹಾಗೂ ಎರಡು ಇತ್ತೀಚಿನ ಭಾವಚಿತ್ರ ತೆಗೆದುಕೊಂಡು ನಗರ ಮುಖ್ಯ ಬಸ್ ನಿಲ್ದಾಣಕ್ಕೆ ಹೋದಲ್ಲಿ, ರೂ.1/- ಹಣ ಪಾವತಿಸಿದರೆ ಹಿರಿಯ ನಾಗರಿಕರ ಕಾರ್ಡ್ ಸ್ಥಳದಲ್ಲೇ ಮಾಡಿಕೊಡಲಾಗುತ್ತದೆ. ಕರ್ನಾಟಕ ಸರಕಾರದ ಹಿರಿಯ ನಾಗರಿಕರ ಕಾರ್ಡ್: ಸರಕಾರ ನಿಗದಿ ಪಡಿಸಿದ ಅರ್ಜಿಯೊಂದಿಗೆ 2 ಭಾವಚಿತ್ರ, ವಯಸ್ಸು, ಮತ್ತು ವಿಳಾಸ ದೃಢೀಕರಣ ದಾಖಲೆಯ ಝೆರಾಕ್ಸ್, ಇವನ್ನು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಕಛೇರಿಗೆ ನೀಡಿದಲ್ಲಿ 2-3 ತಿಂಗಳಲ್ಲಿ ಕಾರ್ಡ್ ತಯಾರಾಗುತ್ತದೆ. ಮತ್ತೊಮ್ಮೆ ಹೋಗಿ ಪಡೆಯಬೇಕು.

ಆಧಾರ್ ಕಾರ್ಡ್: ಮೈಸೂರು, ಮತ್ತಿತರ ಜಿಲ್ಲೆಗಳಲ್ಲಿ ಈಗ ಮಾಡಲಾಗುತ್ತಿರುವ ಆಧಾರ್ ಕಾರ್ಡಿಗಾಗಿ ತೆರೆಯಲಾಗಿರುವ ಹಲವಾರು ಕೇಂದ್ರಗಳ ಪೈಕಿ ಒಂದಕ್ಕೆ ಭೇಟಿ ನೀಡಿ. ನಿಮ್ಮ ವಯಸ್ಸು, ವಿಳಾಸ ಮತ್ತು ಖಚಿತ ಗುರುತಿನ ಚೀಟಿ ಇದ್ದಲ್ಲಿ, ಅವರು ನೀಡುವ ಫಾರಂ ತುಂಬಿಸಿ, ಅದು ಸರಿಯಿದೆಯೇ ಎಂದು ಪರಿಶೀಲಿಸಿ, ಅವರು ಹೇಳಿದ ದಿನದಂದು ಮತ್ತೊಮ್ಮೆ ಹೋದಲ್ಲಿ ನಿಮ್ಮ ಭಾವಚಿತ್ರ, ಬೆರಳಚ್ಚು, ಅಕ್ಷಿಪಟಲದ ಸ್ಕ್ಯಾನಿಂಗ್ ಮಾಡಿ, ನಿಮಗೆ ಸ್ವೀಕೃತಿ ನೀಡಲಾಗುತ್ತದೆ. ಎರಡು ತಿಂಗಳ ನಂತರ ಕಾರ್ಡ್ ಮನೆಗೆ ಬರುತ್ತದೆ. ಸಂಧ್ಯಾ ಸುರಕ್ಷ ಮಾಸಾಶನಕ್ಕೆ ಇದು ಅತ್ಯಗತ್ಯ.
ಕರ್ನಾಟಕ ರಾಜ್ಯ ಸರಕಾರದ ಕಂದಾಯ ಇಲಾಖೆ ವತಿಯಿಂದ ಜಾರಿಯಲ್ಲಿರುವ ಸಂಧ್ಯಾ ಸುರಕ್ಷ ಮಾಸಾಶನ ಕಾರ್ಡ್ ವಿವರಕ್ಕೆ ತಹಸೀಲ್ದಾರ್ ಕಛೇರಿ ಸಂಪರ್ಕಿಸಿ. ಅಲೆದಾಟ ತಪ್ಪಿದ್ದಲ್ಲ. ಇದಲ್ಲದೆ ಸರಕಾರದ ಹಲವು ಯೋಜನೆಗಳು 60 ವಯಸ್ಸಿನ ನಂತರ ಜಾರಿಗೆ ಬಂದರೆ ಹಲವು ಯೋಜನೆಗಳ ಲಾಭಕ್ಕೆ ೬೫ರವರೆಗೆ ಕಾಯಬೇಕು. ಕೆಲವು ಯೋಜನೆಗಳಲ್ಲಿ ಪುರುಷ/ಸ್ತ್ರೀಯರಿಗೆ ಬೇಧಭಾವವೂ ಇದೆ. ತಿಳಿದ ಮಟ್ಟಿಗೆ ವಯೋಮಿತಿಗಳನ್ನು ಆಯಾ ಯೋಜನೆಯ ಹೆಸರಿನ ಕೊನೆಯಲ್ಲಿ ನೀಡಲಾಗಿದೆ. ಸಂಬಂಧಿಸಿದ ಇಲಾಖೆಯನ್ನು ಒಮ್ಮೆ ವಿಚಾರಿಸಬೇಕಾಗಿ ವಿನಂತಿ.

* ಸಂಧ್ಯಾ ಸುರಕ್ಷ ವೃದ್ಧಾಪ್ಯ / ವಿಧವಾ ಮಾಸಾಶನ. (65)
* ಹಿರಿಯರಿಗೆ ಆದಾಯ ತೆರಿಗೆಯಲ್ಲಿ ವಿನಾಯತಿ. (60/58)
* ಹಿರಿಯ ನಾಗರಿಕರಿಗೆ ಬ್ಯಾಂಕ್/ಪೊಸ್ಟ್ ಆಫೀಸ್ ಖಾತೆಯಲ್ಲಿ ಹೆಚ್ಚಿನ ಬಡ್ಡಿದರ. (60)
* ಹಿರಿಯರಿಗೆ ಪ್ರತ್ಯೇಕ ವೈಯುಕ್ತಿಕ ಸಾಲದ ವ್ಯವಸ್ಥೆ. (60)
* ವಾಸವಿರುವ ಸ್ವಂತ ಮನೆಯಮೇಲೆ ಸಾಲದ ಸೌಲಭ್ಯ. (60)
* ಬಸ್/ ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ. (65/60)
* ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ. (65)
* ಜನಸಂದಣಿ ಇರುವಲ್ಲಿ ಹಿರಿಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ. (60)
* ಸಾರ್ವಜನಿಕ ವಾಹನದಲ್ಲಿ ಕಾಯ್ದಿರಿಸಿರುವ ಆಸನಗಳು. (60)
* ಸರಕಾರಿ ವಸತಿ ಯೋಜನೆಯಲ್ಲಿ ಹಿರಿಯರಿಗೆ ಆದ್ಯತೆ. (65)
* ಅಂತ್ಯೋದಯ ಅನ್ನ ಯೋಜನೆ (ಕೆಲವು ರಾಜ್ಯಗಳಲ್ಲಿ) ಕಡಿಮೆ ಬೆಲೆಯಲ್ಲಿ ಪಡಿತರ ವಿತರಣೆ. ( 60)
* ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ. ಕೆಲವು ಖಾಸಗಿ ಆಸ್ಪತ್ರೆಯವರೂ ಹಿರಿಯರಿಗೆ ವಿನಾಯತಿ. (60)
* ಹಲವು ರಾಜ್ಯಗಳಲ್ಲಿ ಉಚಿತ ಕಾನೂನು ಸಲಹೆ, ಅರ್ಜಿ ನ್ಯಾಯಾಲಯದಲ್ಲಿ ಶೀಘ್ರ ವಿಲೇವಾರಿ. (60)

ಇದಲ್ಲದೆ ಭಾರತ ಸರ್ಕಾರದ ಕಾನೂನು The Maintenance and Welfare of Parents and Senior Citizen’s Act, 2007 ಹಿರಿಯರ ಸಂರಕ್ಷಣೆಗೆಂದೇ ರಚಿಸಲ್ಪಟ್ಟಿದೆ. ಈ ಕಾಯಿದೆಯನ್ವಯ ಹಿರಿಯ ನಾಗರಿಕರು ತಮ್ಮ ಮಕ್ಕಳ ಮೇಲೆ ಅಥವಾ ಮಕ್ಕಳಿಲ್ಲದ ಹಿರಿಯರು, ತಮ್ಮ ಹತ್ತಿರದ ಸಂಬಂಧಿಕರ ಮೇಲೆ ಜೀವನಾಂಶಕ್ಕೆ (ಊಟ-ವಸತಿ, ಬಟ್ಟೆ-ಬರೆ, ವೈದ್ಯಕೀಯ ಖರ್ಚು ಮತ್ತು ಇತರ ಸೌಕರ್ಯಕ್ಕಾಗಿ) ಅರ್ಜಿ ಹಾಕಬಹುದು. ಹಿರಿಯ ನಾಗರಿಕರು ಸ್ವತಃ, ಅಥವಾ ಅವರ ಪರವಾಗಿ ಸ್ವಯಂಸೇವಾ ಸಂಸ್ಥೆಗಳು, ಅರ್ಜಿ ಸಲ್ಲಿಸಬಹುದು. ಈ ಕಾಯಿದೆಯನ್ವಯ ಕೆಲಸ ಮಾಡುವ ಟ್ರಿಬ್ಯೂನಲ್ ಅರ್ಜಿ ಹಾಕಿದ ೯೦ (ತೊಂಬತ್ತು) ದಿನಗಳ ಒಳಗೆ ಹಿರಿಯ ಅಧಿಕಾರಿಯಿಂದ ವಿಚಾರಣೆ ನಡೆಸುತ್ತದೆ. ಅರ್ಜಿ ಸಲ್ಲಿಸಿದ ೩೦ ದಿನದೊಳಗೆ ಇದನ್ನು ಸಂಧಾನಕ್ಕೆ ಕಳುಹಿಸಲಾಗುತ್ತದೆ. ಸಿವಿಲ್ ನ್ಯಾಯಾಲಯದ ಎಲ್ಲಾ ನಿಯಮಾವಳಿಯನ್ನು ಪಾಲಿಸುವ ಈ ಟ್ರಿಬ್ಯೂನಲ್‌ಗೆ ನ್ಯಾಯಾಲಯಕ್ಕಿರುವ ಎಲ್ಲಾ ಅಧಿಕಾರಗಳು ಇರುತ್ತವೆ. ಈ ಟ್ರಿಬ್ಯೂನಲ್ ರೂ.10,000/-ರ ವರೆಗೆ ಮಾಸಿಕ ಜೀವನಾಂಶ ಮಂಜೂರು ಮಾಡಬಹುದು. ಈ ಆದೇಶವನ್ನು 30 ದಿನದ ಒಳಗೆ ಪ್ರತಿವಾದಿ ಪಾಲಿಸಬೇಕು, ಇಲ್ಲದಿದ್ದಲ್ಲಿ ಜೈಲು ಶಿಕ್ಷೆಯನ್ನು ವಿಧಿಸುವ ಹಕ್ಕು ಈ ಟ್ರಿಬ್ಯೂನಲ್‌ಗೆ ಇರುತ್ತದೆ. ಜೀವನಾಂಶ ತಡವಾದಲ್ಲಿ ಶೇ. 5 ರಿಂದ 18 ವರೆಗಿನ ಬಡ್ಡಿಯನ್ನೂ ವಿಧಿಸಬಹುದು. ಜೀವನಾಂಶ ನಿಲ್ಲಿಸಿದಲ್ಲಿ ಮತ್ತೆ ಜೈಲು ಶಿಕ್ಷೆ ವಿಧಿಸಬಹುದು. ಈ ಟ್ರಿಬ್ಯೂನಲ್‌ನಲ್ಲಿ ಸಿವಿಲ್ ನ್ಯಾಯಾಲಯ ಮಧ್ಯ ಪ್ರವೇಶಿಸಿ ತಡೆಯಾಜ್ಞೆ ನೀಡುವುದಾಗಲಿ ಅಥವಾ ಕೇಸ್ ವರ್ಗಾವಣೆ ಮಾಡುವಂತಿಲ್ಲ. ವಕೀಲರು ಹಿರಿಯ ನಾಗರಿಕರನ್ನು ಪ್ರತಿನಿಧಿಸುವಂತಿಲ್ಲ. ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳ ಅಥವಾ ಬೇರೊಬ್ಬರ ಹೆಸರಿಗೆ ದಾನವಾಗಿ, ಬಳುವಳಿಯಾಗಿ, ಉಯಿಲಾಗಿ ವರ್ಗಾಯಿಸಿದ್ದರೆ ಅಂತಹ ಹಿರಿಯರನ್ನು ಪ್ರತಿವಾದಿಗಳು ನೋಡಿಕೊಳ್ಳದ ಸಂದರ್ಭದಲ್ಲಿ ಈ ಟ್ರಿಬ್ಯೂನಲ್ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಬಹುದು. ವಿಶೇಷ ಸೂಚನೆ: ಈ ಕಾನೂನಿನಲ್ಲಿ ಹಲವು ಲೋಪದೋಷಗಳೂ ಇವೆ. ಆದರೆ ಈ ಕಾನೂನಿನ ಸಂಪೂರ್ಣ ಚರ್ಚೆ ಈ ಲೇಖನದಲ್ಲಿ ಸಾಧ್ಯವಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿರುವವರು ತಮ್ಮ ನಂಬಿಕಸ್ಥ ವಕೀಲರನ್ನು ಸಂಪರ್ಕಿಸಬಹುದು.

ಉಯಿಲು ಬರೆದಿಡಿ:
ಇನ್ನೊಂದು ಮುಖ್ಯವಾದ ವಿಚಾರ, ಹಿರಿಯ ನಾಗರಿಕರು ತಮ್ಮ ಉಯಿಲು ಮಾಡಬೇಕಾಗಿರುವುದು. ಉಯಿಲು ಮಾಡಿದಾಕ್ಷಣ ನಿಮ್ಮ ಅಂತ್ಯಕಾಲ ಸನ್ನಿಹಿತವಾಗಿದೆಯೆಂದು ಭಾವಿಸಬೇಡಿ. ನೀವು ಉಯಿಲು ಮಾಡದೆ ಸತ್ತರೆ ಆಗುವ ತೊಂದರೆಗಳು ಏನೇನು ಎಂದು ಯೋಚಿಸಿ. ನಿಮ್ಮ ಆಸ್ತಿಗಾಗಿ ಮಕ್ಕಳಲ್ಲಿ ಆಗುವ ಕಾದಾಟದ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಇಬ್ಬರು ಸಾಕ್ಷಿಗಳ ಎದುರು ಉಯಿಲು ಬರೆದು ನಿಮ್ಮ ಸ್ವಯಾರ್ಜಿತ ಆಸ್ತಿಯನ್ನು ನಿಮಗೆ ಬೇಕಾದವರಿಗೆ ನೀಡುವುದು ಎಷ್ಟು ಸುಲಭ, ಇಲ್ಲವಾದಲ್ಲಿ ಅವರು ಪಡಬೇಕಾದ ಕಷ್ಟ ಎಷ್ಟು ಎಂಬುದನ್ನು ಗಮನಿಸಿ. ಉಯಿಲು ಬರೆಯುವಾಗ ಕೆಲವು ಅಂಶಗಳನ್ನು ಗಮನದಲ್ಲಿಡುವುದು ಸೂಕ್ತ. ಒಳ್ಳೆಯ ದಪ್ಪ ಕಾಗದ ಉಪಯೋಗಿಸಿ, ಕಪ್ಪು ಶಾಯಿಯಲ್ಲಿ ಬರೆಯಿರಿ ಅಥವಾ ಒಳ್ಳೆಯ ಕೈಬರಹವಿರುವವರಿಂದ ಬರೆಸಿ. ಎರಡು ಪ್ರತಿಗಳನ್ನು ತಯಾರಿಸಿ. ಒಂದು ಪ್ರತಿಯನ್ನು ನಂಬಿಕಸ್ಥ ವ್ಯಕ್ತಿಗೆ ನೀಡಿ, ಇನ್ನೊಂದು ಪ್ರತಿಯನ್ನು ಬೇರೆ ಕಡೆಯಲ್ಲಿ ಸುರಕ್ಷಿತವಾಗಿ ಪ್ಲಾಸ್ಟಿಕ್ ಲಕ್ಕೋಟೆಯಲ್ಲಿಮುದುರಿ ಹೋಗದಂತೆ ಭದ್ರವಾಗಿರಿಸಿ. ಸಾಕ್ಷಿ ಹಾಕುವವರು ನಿಮಗಿಂತ ಚಿಕ್ಕವರಾಗಿದ್ದರೆ ಉತ್ತಮ. ಪಿತ್ರಾರ್ಜಿತ ಆಸ್ತಿಗಳಿಗೆ ಉಯಿಲು ಬರೆಯುವಂತಿಲ್ಲ ಮತ್ತು ಸಾಕ್ಷಿ ರುಜು ಹಾಕುವವರು ಆಸ್ತಿಯಲ್ಲಿ ಪಾಲುದಾರರಾಗಲು ಸಾಧ್ಯವಿಲ್ಲ. ಉಯಿಲಿಗೆ ತಾರೀಕು ಹಾಕಿರಬೇಕು ಮತ್ತು ಅದನ್ನು ಬದಲಾಯಿಸಿದ್ದರೆ, ಅತ್ಯಂತ ಕೊನೆಯ ತಾರೀಕಿನ ಉಯಿಲು ಊರ್ಜಿತಗೊಳ್ಳುವುದು. ಆಸ್ತಿಯ ಮೌಲ್ಯ ದಿನೇದಿನೇ ಬದಲಾಗುವುದರಿಂದ ಪ್ರತಿಯೊಬ್ಬರಿಗೂ ಸಿಗಬಹುದಾದ ಭಾಗಾಂಶವನ್ನು ಪ್ರತಿಶತದಲ್ಲಿ ಕಾಣಿಸುವುದು ಸೂಕ್ತ. ಕೆಲವು ಕಡೆ ನಿಗದಿತ ಮೊತ್ತವನ್ನೂ, ವಸ್ತುಗಳನ್ನು ಕಾಣಿಸಬಹುದು. ಅದೇ ರೀತಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೆ, ಇನ್ಷ್ಯೂರೆನ್ಸ್ ಪಾಲಿಸಿಗಳಿಗೆ, ಷೇರು ಡಿಮ್ಯಾಟ್ ಖಾತೆಗಳಿಗೆ, ಮ್ಯುಚ್ಯುವಲ್ ಫಂಡ್ ಖಾತೆಗೆ, ನಾಮಿನೇಷನ್ ಫಾರಂ ತುಂಬಿಸುವುದು ಬಹಳ ಮುಖ್ಯ.
ಸಹಾಯವಾಣಿ:
ಮೈಸೂರಿನಲ್ಲಿ ನಗರ ಪೋಲಿಸ್, ಕರ್ನಾಟಕ ಸರಕಾರದ ಅಂಗವಿಕಲರ ಕ್ಷೇಮಾಭಿವೃದ್ಧಿ ಇಲಾಖೆ ಮತ್ತು ಜೆ.ಎಸ್.ಎಸ್. ವೈದ್ಯಕೀಯ ಸೇವಾ ಟ್ರಸ್ಟ್ ವತಿಯಿಂದ ನಗರದ ರಾಮಾನುಜ ರಸ್ತೆಯಲ್ಲಿರುವ ಜೆ. ಎಸ್. ಎಸ್. ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಸಹಾಯವಾಣಿ (ದೂರವಾಣಿ: 1090 ಅಥವಾ 105 ಅಥವಾ 2548253) ಕೆಲಸ ಮಾಡುತ್ತಿದೆ. ಈ ದೂರವಾಣಿ ಉದ್ವೇಗಕ್ಕೆ ಒಳಗಾಗಿರುವವರಿಗೆ ಸಾಂತ್ವನ ನೀಡುವ ಅಥವಾ ಹಿರಿಯರಿಗೆ ಆರೋಗ್ಯ ಮತ್ತು ಕಾನೂನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಸಲಹೆ ನೀಡುತ್ತದೆ. ಮಂಡ್ಯ ಮತ್ತು ಬೆಂಗಳೂರಿನಲ್ಲೂ ಸಹ ದೂರವಾಣಿ 1090 ಕೆಲಸ ಮಾಡುತ್ತಿದೆ. ಇತರ ನಗರದಲ್ಲಿ ವಿಚಾರಿಸಿಕೊಳ್ಳಿ.
ಆರೋಗ್ಯ ವಿಮೆ:
ಸ್ಟಾರ್ ಹೆಲ್ತ್ ಇನ್ಷ್ಯೂರೆನ್ಸ್ ಕಂಪನಿಯವರು 60 ರಿಂದ 74 ವರ್ಷದ ವರೆಗಿನ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ (ಹೆಲ್ತ್ ಇನ್ಷ್ಯೂರೆನ್ಸ್) ಪಾಲಿಸಿ ನೀಡುತ್ತಿದ್ದಾರೆ. 74ರ ನಂತರವೂ ಈ ಪಾಲಿಸಿ ಮುಂದುವರೆಯಬಹುದು. ಆರೋಗ್ಯ ತಪಾಸಣೆಯಿಲ್ಲದೆ, ಮೊದಲನೆಯ ವರ್ಷದಿಂದಲೇ ಈಗಿರುವ ಎಲ್ಲಾ ರೋಗಗಳಿಗೂ ರಿಯಾಯಿತಿ ಸಿಗುವ ರೂ. 1 ಲಕ್ಷದ ರೆಡ್ ಕಾರ್ಪೆಟ್ ಪಾಲಿಸಿಗೆ ವಾರ್ಷಿಕ ಪ್ರೀಮಿಯಂ ಸುಮಾರು ರೂ. 5,000/- ಎಂದು ಜಾಹಿರಾತಿನಲ್ಲಿ ತಿಳಿಸಿರುತ್ತಾರೆ. ಬೇರೆ ಬೇರೆ ಕಂಪನಿಗಳಲ್ಲೂ ಇಂತಹ ಪಾಲಿಸಿ ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ವಿಶ್ವಾಸದ ಇನ್ಷ್ಯೂರೆನ್ಸ್ ಏಜೆಂಟರನ್ನು ಸಂಪರ್ಕಿಸಿ.
ಜಿ. ಆರ್. ವಿದ್ಯಾರಣ್ಯ
ಎಂ.ಐ.ಜಿ. – 891, ಸಿ.ಐ.ಟಿ.ಬಿ.
2ನೇ ಹಂತ, ಕುವೆಂಪುನಗರ
ಮೈಸೂರು-570023
ಫೋನ್: 97310 61861
ಇ-ಮೇಲ್: g..r.vidyaranya@gmail.com