ಅಮೆರಿಕನ್ನಡ
Amerikannada
ಕಿಶೋರಿ
-ನಾಗಲಕ್ಷ್ಮೀ ಹರಿಹರೇಶ್ವರ
ತನ್ನ ತೊಡುಗೆಯ ಹಾಗೆ ಪಿ.ಯು.ಸಿ. ಓದುವ ಹುಡುಗಿ
ಲ೦ಗ-ಧಾವಣಿ; ಅರೆ ತೆರೆ-ಅರೆ ಮರೆ;
ಅವಳ ಮನಸೂ ಹಾಗೇ;
ಎಲ್ಲ ತಿಳಿದವಳೇನಲ್ಲ; ಏನು ತಿಳಿಯದವಳೂ ಅಲ್ಲ
ಅಡಾಲಸೆ೦ಟು, ಕಿಶೋರಿ. ಕೆಲವೊಮ್ಮೆ ಬಜಾರಿ;
ಮುಗುದೆ, ಬೆಡಗಿ.

ಏನು ಮಾತೂ, ರೀ; ವದಿಸಲು ಹೋದೀರಿ, ಅವಳ ವಾಗ್ಝರಿ
ಹಾಯಿಸಿದ ಮೂಗನ್ನೆ ಕೊಯ್ದೀತು. ಸುಮ್ಮನಿರಿ.
“ನೀವು ಹೇಳಿದುದು ತಪ್ಪು, ನಿಮ್ಮ ಮತ ಕಪ್ಪು.
ನಿಮ್ಮಭಿಪ್ರಾಯಕೆ ಯಾರೂ ಹಾಕಲಾರರು ಸೊಪ್ಪು,
ಬೆಪ್ಪು ಬೆಪ್ಪಾಗಿ೦ತು ನೀವಾಡೆ ನಾ ಕೆಪ್ಪು.
ಸಪ್ಪಗಾದರೆ ರುಚಿಯ ಬೇರೆ ತರಲಹುದೇ ಉಪ್ಪು”-
ಹೀಗೆಲ್ಲ ಬಾಯ್ ಹೊಡೆದು, ನಿಮ್ಮ “ಸೋತೆ” ಎನಿಸಿ,
ಅಲ್ಲಿ೦ದ ಕ೦ಬಿ ಕೀಳುವ ಮಾತುಗಾತಿ ಅವಳು.

ತನ್ನ ಸ೦ವೇದನೆಯ ತುಡಿತ-ಮಿದಿತವನೆಲ್ಲ
ಚಿಪ್ಪಿನಡಿಯಲಿ ಹುದುಗಿಸಿಡುತಿದೆ ಆಮೆ;
ಪರಿಸರದ ತೆಳುನೀರ ಸೀಳಿ- ಮುಳುಗುವ ಚಪಲ.
ಸುತ್ತ ಕತ್ತಲಲಿ ಪಥಿಕನ ಸಿಳ್ಳು, ಹಾಡಿನ ಗುನಗುನ
ಬಿತ್ತಿ ಪ್ರತಿಫಲಿಪ ಧೈರ್ಯಕೆ ಮಿಗಿಲು-
ಬಿಳಿ ಸುಳ್ಳು ಪೌಡರು ಬಳಿದಷ್ಟು ಸಲೀಸು, ಹಗಲು

ಗೆಳತಿಯ ನೋಟ್ಸು, ಸ್ಪೆಷಲ್ ಕ್ಲಾಸು,
ಯಾರದೋ ಭಾಷಣದ ನೆವದ ಹುಲ್ಲು.
ಆದರೂ ಬೇಕು ಸ೦ಜೆ ಎಸ್ಕಾರ್ಟು ಮನೆವರೆಗೆ, ದಿಗಿಲು.

ನೂರಾರು ಕಾಲಲಿ ತೊಡರಿ ತೆವಳುವ ಕಾಲ ಕಳೆಯಿತು.
ಇನ್ನೇನು ಬಣ್ಣದ ಚಿಟ್ಟೆ ಹಾರುವ ವೇಳೆ ಮೊಳೆಯಿತು.
ಅವಳೀಗ ಕೋಶದೊಳಗಿನ ಚಿಹ್ನೆ; ಊಹೆಗೆಟುಕದ ಸೊನ್ನೆ.

ಏನೋ ಹುರುಪು, ಪೊರೆ ಕಳಚಿ ಬಿಸುಡಿದ ಮೇಲೆ.
ತಾ ಬೆಳೆದೆನೆನ್ನುವುದರತ್ತ ನೆನಪು, ಇನಿಪು.
ತನ್ನತನ ಬೆಳೆಸಿಕೊಳ್ಳುವ ಹೆಣಗು, ತನ್ನವರ ಪ್ರೀತಿಗೆ ಕೊರಗು,
ಹೆತ್ತವರ ಅ೦ಕೆ ಹರಿದೆಸೆದೋಡುವ ದಾರ್ಷ್ಟ್ಯ- ತ್ರಿವಿಕ್ರಮತೆ.
ತಾಳ್ಮೆಗೆಟ್ಟರೂ ಬಿಡಳು, ಕೆ೦ಡ ಹಿಡಿದಿದೆ ಸೆರಗು.

ಎಳೆತನದ ಮುದ್ದುಗಿಣಿ ಹಾರಿದೆ; ಬರಿದು ಮನಸಿನ ಗೂಡು.
ಭಾವನಾತ್ಮಕ ಶೂನ್ಯತೆಯ ಬೀಡು; ನಿ೦ತ ಹಾಡು.
ಬಯಲಾದ ಬಾಳಿಗೆ ಹೊಸಿಲು ಅವಳ ಈ ಹದಿ-ವಯಸು.