ಅಮೆರಿಕನ್ನಡ
Amerikannada
ವಾಯು ವಿಹಾರ
-ಜಯಂತಿ ಅಮೃತೇಶ್
ವಾಯು ವಿಹಾರದಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನಿದೆ? ನಸುಕಿನಲ್ಲಿ ನಡೆದಾಡಲು ಹೋಗಿ ಬರುವುದಷ್ಟೆ ತಾನೆ ಎನ್ನುತ್ತೀರಾ? ಅಲ್ಲ, ಸ್ವಲ್ಪ ಯೋಚಿಸಿನೋಡಿ? ಆಗ ಇದೊಂದು ದೀರ್ಘ ಲೇಖನ ಬರೆಯುವ ವಿಷಯವೇ ಸರಿ ಎನ್ನಿಸುವುದು ಸಹಜ. ಸರಿ, ಈಗ ಓದಿ ನೋಡಿ.
ಶುದ್ಧ ಗಾಳಿಯ ಸೇವನೆ ಮತ್ತು ನಡೆಯುವಿಕೆ ಈ ಕ್ರಿಯೆಗಳಿಗೆ ವಾಯುವಿಹಾರ ಅತ್ಯಾವಶ್ಯಕ. ಹಾಗೆಯೇ ಈ ಕ್ರಿಯೆಗಳು ನಡೆಯುತ್ತಿರುವಾಗ ನಮಗೆ ಅನೇಕ ವಿಷಯಗಳು ಅರಿವಾಗತೊಡಗುತ್ತವೆ. ವಿವಿಧ ಬಗೆಯ ಜನರ ಭೇಟಿ, ಹಲವುರೀತಿಯ ವಿನೋದ ಪ್ರಸಂಗಗಳು, ಹಾಗೆಯೇ ಮುಜುಗರದ ಪ್ರಕರಣಗಳು ಇತ್ಯಾದಿ.
ನಡೆಯುವಾಗ ಕೆಲವರು ಎದುರಿನಲ್ಲಿ ಬರುತ್ತಿರುವವರ ಮುಖನೋಡುತ್ತಾರೆ. ಮೊದ ಮೊದಲಿಗೆ ಈ ಮುಖಾವಲೋಕನದೊಂದಿಗೆ ನಗು ಹಾಗಿರಲಿ, ಮುಗುಳ್ನಗು ಸಹಾ ಇರುವುದಿಲ್ಲ. ಕೆಲವರು ಮುಖ ತಿರುಗಿಸಿಕೊಂಡು ಹೋಗುತ್ತಾರೆ; ಕೆಲವರು ಕೆಲವು ದಿನ ಕಳೆದಂತೆ ಮುಗುಳ್ನಗಲು ಪ್ರಾರಂಭಿಸುತ್ತಾರೆ. ಅನಂತರ “ಹಲೋ” ಎನ್ನಲು ಪ್ರಾರಂಭಿಸುತ್ತಾರೆ; ಈ ಪದದೊಂದಿಗೆ ಒಂದು ಸ್ನೇಹ ಬಾಂಧವ್ಯ ಏರ್ಪಾಡಾದರೆ ಆಶ್ಚರ್ಯವೇನಿಲ್ಲ. ವಾಯುವಿಹಾರದಲ್ಲಿ ಎಲ್ಲರಿಗೂ ಇತರ ಜನರೊಂದಿಗೆ ಬೆರೆಯುವ ಆಸಕ್ತಿ ಇರುವುದಿಲ್ಲ. ಹಲವರು ವಿಷ್ಣು ಸಹಸ್ರನಾಮವನ್ನು ಹೇಳಿಕೊಳ್ಳುತ್ತಾ ನಡೆದರೆ, ಮತ್ತೆ ಹಲವರು ಹೋಲಿ ಬೈಬಲ್‌ನ ಸಾಲುಗಳನ್ನು ಪಠಿಸುತ್ತಾ ಅರ್ಧ ಕಣ್ಣು ಮುಚ್ಚಿಕೊಂಡೇ ನಡೆಯುತ್ತಾರೆ.
ನಸುಕಿನ ವಾಯುವಿಹಾರಕ್ಕೆ ಬರುವವರಲ್ಲಿ ಹೂ ಕೀಳುವವರೇ ಹೆಚ್ಚು ಜನ. ಹೂವಿನ ಸಂಗಡ ಕೊಂಬೆಗಳು ಮಾಯವಾಗುತ್ತವೆ. ಹಲವರ ಮನೆಯ ಸುತ್ತಲ ಗೋಡೆಗೆ. ಅಂದಕ್ಕಾಗಿ ಬಗೆ ಬಗೆಯ ಹಳದಿ, ಕೆಂಪು ಮತ್ತು ನೀಲಿ ಬಣ್ಣದ ಸುಂದರವಾದ ಹೂಗಳನ್ನು ಕೊಡುವ ಬಳ್ಳಿಗಳನ್ನು ಹಬ್ಬಿಸಿರುತ್ತಾರೆ. ಆದರೆ ಈ ಜನರು ಅವನ್ನೆಲ್ಲ ಗಿಡ ಬಳ್ಳಿಗಳಲ್ಲಿ ನಳ ನಳಿಸಲು ಬಿಡುವುದೇ ಇಲ್ಲ. ತಮಗೆ ಎಟುಕುವಷ್ಟು ಎತ್ತರದವರೆಗೆ ಎಲ್ಲ ಹೂಗಳನ್ನೂ ತರಚುತ್ತಾರೆ. ಕರವಸ್ತ್ರದಂತೆ ಮಡಿಸಿ ಮುಚ್ಚಿಟ್ಟುಕೊಂಡಿರುವ ಪ್ಲಾಸ್ಟಿಕ್ ಚೀಲ ಧುತ್ತೆಂದು ಹೊರಬರುತ್ತದೆ!! ಅದನ್ನು ಬಿಡಿಸಿ ಹೂಗಳನ್ನು ತುಂಬಿಸಿಕೊಂಡರಾಯಿತು. ಈ ಕೆಲಸಕ್ಕಾಗಿಯೇ ಅದೆಷ್ಟು ಮುಂಜಾನೆಯೇ ಬಂದಿರುತ್ತಾರೆ ಗೊತ್ತೆ? ಬೆಳಕು ಹರಿಯುವುವ ವೇಳೆಗೆ ಒಂದು ಹೂವು ಸಹಿತ ಉಳಿದಿರುವುದಿಲ್ಲ. ಅವರುಗಳು ಕಿತ್ತೊಯ್ದ ಹೂಗಳಪರಿಮಳ ಪರಿಸರದಲ್ಲಿ ಹರಡಿರುತ್ತದೆ. ಸಂಕ್ರಾಂತಿ, ಉಗಾದಿ, ದೀಪಾವಳಿ ಹಬ್ಬಗಳು ಬಂದರಂತೂ ಮಾವಿನ ಮರ ಬೇವಿನ ಮರಗಳ ಗತಿ ಅಧೋಗತಿ; ಕೊಂಬೆ ರೆಂಬೆಗಳನ್ನು ತರಚಿ ಗಿಡವನ್ನು ಬೋಳು ಮಾಡುವುದರಲ್ಲಿ ಜನಕ್ಕೆ ಅದೇನು ಖುಷಿ?
ಅಲ್ಲೊಂದು ಮಧ್ಯ ವಯಸ್ಸಿನ ದಂಪತಿಗಳ ಜೋಡಿ ಬರುತ್ತದೆ. ಅವರು ಗುಲಗಂಜಿ ಆರಿಸಲೆಂದೇ ಬರುತ್ತಾರೇನೋ ಎಂದು ಅನುಮಾನ? ೧೦:೧೫ ನಿಮಿಷವನ್ನಾದರೂ ಅವರು ಆ ಮರದ ಕೆಳಗೆ ಕಳೆಯುತ್ತಾರೆ. ಇದೇನು ಸೋಜಿಗ? ಹೂವಲ್ಲ ಕಾಯಲ್ಲ, ಬರೀ ಗುಲಗಂಜಿ. ಇಷ್ಟೊಂದು ಗುಲಗಂಜಿಗಳನ್ನು ತೆಗೆದುಕೊಂಡು ಅವರೇನು ಮಾಡುತ್ತಾರೆ? ಬಹುಶಃ ಹಳಗುಳಿ ಮಣೆ ಆಟಕ್ಕಿರಬಹುದೇ? ಇರಬಹುದು. ಮುಂದೊಂದು ದಿನ ಅವರ ಮನೆಗೆ ಹೋದಾಗ ಇದರ ವಿಷಯ ಏನೆಂದು ಗೊತ್ತಾಯಿತು. ಒಂದು ಪಾರದರ್ಶಕ ಬಾಟಲಿಯಲ್ಲಿ ಅವರು ತಾವು ಆರಿಸಿ ತಂದ ಗುಲಗಂಜಿಗಳನ್ನೆಲ್ಲಾ ತುಂಬಿಸಿ ಅಲಂಕಾರವಾಗಿ ಜೋಡಿಸಿಟ್ಟಿದ್ದರು. ಹೀಗೆ “ಲೋಕೋ ಭಿನ್ನರುಚಿಃ” ರಭಸದಿಂದ ಮಳೆ ಬಂದಾಗ ಗುಲಗಂಜಿ ಮರದಿಂದ ಕೊಂಬೆಗಳು ಹಾಗೆಯೇ ಕೆಳಗೆ ಉದುರಿ ಬೀಳುವುದುಂಟು. ಅದನ್ನು ಆಕೆ ಒಂದು ಕಲಾಕೃತಿಯಂತೆ ಜೋಡಿಸಿ ಇಟ್ಟಿದ್ದರು. ಓಹೋ! ಈಗ ಅರಿವಾಯಿತು; ಅವರೇಕೆ ತಮ್ಮ ವಾಹನದಲ್ಲಿ ಗುಲಗಂಜಿಯ ರೆಂಬೆಗಳನ್ನು ತುಂಬಿಸಿಕೊಂಡು ಬರುತ್ತಾರೆಂದು!!
ವಾಯುವಿಹಾರದಲ್ಲಿ ಒಮ್ಮೊಮ್ಮೆ ಕೆಲವರು ಎದುರು ಬಂದ ವ್ಯಕ್ತಿಯನ್ನು ನಿಲ್ಲಿಸಿ ತಾವು ಫಲಾನಾ ಹೆಸರಿನವರೆ? ಇಂಥವರ ಸಂಬಂಧಿಕರೆ ಎಂದು ಕೇಳಿ ಕುಲ ಗೋತ್ರಗಳ ವಿಚಾರಣೆ ಮಾಡುವುದೂ ಉಂಟು. ಅವರಿಗೆ ಒಂದು ವ್ಯಕ್ತಿಯನ್ನು ನೋಡಿದಾಗ ಬೇರೆ ಯಾರದ್ದೋ ಜ್ಞಾಪಕ ಬಂದಿರಬೇಕು. ಹೀಗೆ ಪ್ರಾರಂಭವಾದ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿ ಒಬ್ಬರಿಗೊಬ್ಬರ ಕಷ್ಟ ಸುಖಗಳನ್ನು ಹೇಳಿಕೊಳ್ಳುವಷ್ಟು ಮುಂದುವರಿದು ಮುಂದೆ ಗಾಢ ಸ್ನೇಹಕ್ಕೆ ಬುನಾದಿಯಾದ ಉದಾಹರಣೆಗಳೂ ಇವೆ.
ವಾಯುವಿಹಾರದಲ್ಲಿ ನಮಗೆ ಜಾಗಿಂಗ್ ಹೆಸರಿನಲ್ಲಿ ಅತಿ ವೇಗವಾಗಿ ಓಡುವ ಯುವಕ,ಯುವತಿಯರು ಎದುರು ಸಿಗುತ್ತಾರೆ. ಆದರೆ ಈ ಪಡ್ಡೆ ಹುಡುಗರು ಒಂದುದಿನ ಓಡಿದರೆ ನಾಲ್ಕು ದಿನ ನಿದ್ರಿಸುತ್ತಾರೆ!! ಇದು ನಾವು ಗಮನಿಸಿರುವ ಸತ್ಯ.
ಪತಿಪತ್ನಿಯರು ಮನೆಯಿಂದ ವಾಕಿಂಗ್ ಎಂದುಕೊಂಡು ಜೊತೆಯಾಗಿಯೇ ಹೊರಡುತ್ತಾರೆ. ಆದರೆ ಸಾಗುತ್ತ ಸಾಗುತ್ತ ಪತ್ನಿಯ ಕಾಲ್ನಡಿಗೆ ಪತಿಯದಕ್ಕಿಂತ ಕುಂಠಿತವಾಗುತ್ತದೆ. ಈ ಸಂದರ್ಭದಲ್ಲಿ ಅವರ ನಡುವೆ ನಡೆದ ಸಂಭಾಷಣೆ “ಸರಿ, ನೀನಿಷ್ಟು ನಿದಾನವಾಗಿ ಕಾಲು ಹಾಕಿದರೆ ಹೇಗೆ? ಬೇಗ ನಡೆ”. ಇದಕ್ಕೆ ಆಕೆಯ ಉತ್ತರ “ನಾನು ಸರಿಯಾಗಿಯೇ ನಡೆಯುತ್ತಿದ್ದೇನೆ. ನೀವೇ ಓಡುತ್ತಿರುವುದು. ನೀವಾದರೆ ಮನೆಗೆ ಹೋದ ತಕ್ಷಣ ಕಾಲುಚಾಚಿ ಕೂತು ಪೇಪರ್ ಓದುತ್ತೀರಿ; ನಾನು ಅಡುಗೆ ಮನೆಯೊಳಗೆ ನುಸುಳಿದರೆ ಹನ್ನೊಂದು ಗಂಟೆಯವರೆಗೆ ಬಿಡುವೆಲ್ಲಿ? ಆದ್ದರಿಂದ ನಾನು ವೇಗವಾಗಿ ನಡೆದು ಸುಸ್ತು ಮಾಡಿಕೊಳ್ಳುವುದಿಲ್ಲ.” ಇಷ್ಟೆಲ್ಲ ವ್ಯಾಖ್ಯಾನ ಪತಿದೇವರ ಕಿವಿಗೆಲ್ಲಿ ಬಿದ್ದೀತು? ಅವರಾಗಲೇ ನಾಗಾಲೋಟದಿಂದ ಮುಂದೆ ಸಾಗಿದ್ದರು. ಈ ಜೋಡಿಯನ್ನು ಹಲವು ದಿನಗಳು ಕಣ್ಣಿಟ್ಟು ವೀಕ್ಷಿಸಿದಾಗ ತಿಳಿದು ಬಂದ ಸತ್ಯ ಒಂದಿದೆ. ಅದೇನೆಂದರೆ ಪತಿಗೆ ಪಾಠ ಕಲಿಸಬೇಕೆಂದು ಸಂಕಲ್ಪಿಸಿದ ಆ ಗರತಿ ಒಂದು ದಿನ ಇವರು ಮುಂದೆ ಮುಂದೆ ಸಾಗಿದಾಗ ತಾನು ಸರ್ರೆಂದು ಪಕ್ಕದ ಚಿಕ್ಕ ರಸ್ತೆಯಲ್ಲಿ ನುಸುಳಿಬಿಟ್ಟಳು! ಬೇಕಾದರೆ ಅವರು ಹುಡುಕಲಿ ಎನ್ನುವ ಬಿಗುಮಾನ! ಸರಿ, ಒಂದಷ್ಟು ದೂರ ಹೋಗಿದ್ದ ಪತಿಯು ಪತ್ನಿಯನ್ನು ಕಾಣದೆ ಕಂಗಾಲಾಗಿ ಹಿಂದಕ್ಕೆ ನಡೆದಿದ್ದು ಒಂದು ಸುದ್ದಿಯೇ ಎನ್ನಿ!
ವಾಯುವಿಹಾರಕ್ಕೆ ಜನರು ಆರಿಸಿಕೊಳ್ಳುವ ರಸ್ತೆಗಳು ವಿಶಾಲವಾಗಿರುತ್ತವೆ. ಅದಲ್ಲದೇ ಮುಂಜಾನೆ ಹೆಚ್ಚು ಜನರ ಓಡಾಟ ಇರುವುದಿಲ್ಲವಾದ್ದರಿಂದ ಹೊಸದಾಗಿ ವಾಹನ ಕಲಿಯುವವರ ಹಾವಳಿ ಇರುತ್ತದೆ. ನಾವು ನಡೆಯುವ ರಸ್ತೆಯಲ್ಲಿ ಒಬ್ಬಾಕೆ ನಾಲ್ಕು ಚಕ್ರದ ವಾಹನದ ತರಪೇತಿಯನ್ನು ತೆಗೆದುಕೊಳ್ಳುತ್ತಾಳೆ. ಆ ವಾಹನವನ್ನು ಕಂಡರೆ ಸಾಕು ವಾಕಿಂಗ್ ಹೋಗುವವರೆಲ್ಲರೂ ತಾವೇ ಪಕ್ಕಕ್ಕೆ ಸರಿದು ಆಕೆಗೆ ಗಾಡಿ ಓಡಿಸಲು ಅನುವುಮಾಡಿಕೊಟ್ಟು ಬಿಡುತ್ತಾರೆ!! ಅವರೆಲ್ಲ ಭೀತಿಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿ ಆ ಪತಿದೇವರು ಬಯ್ಯಿಸಿಕೊಂಡದ್ದೂ ಇದೆ! ಹಾಗೆಯೇ ವಾಹನದ ಒಳಗಡೆ ಅವರಿಬ್ಬರ ಮಧ್ಯೆ ನಡೆಯುವ ವಾಗ್ಯುದ್ಧವು ಹೊರಗಡೆ ನಡೆಯುವವರಿಗೂ ಸಹ ಕೇಳಿಸುತ್ತದೆ ಎಂದು ಅವರಿಗೆ ಗೊತ್ತೆ??
ಅಶ್ವಥ್ಥ ಕಟ್ಟೆಯ ಪ್ರದಕ್ಷಿಣೆಯ ಬಗ್ಗೆ ನಿಮಗೆ ಗೊತ್ತೇನು? ಅನೇಕರು ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯ ಸೇರಿಸಿಕೊಂಡು ಆ ಕಟ್ಟೆಯ ಪ್ರದಕ್ಷಿಣೆ ಹಾಕುತ್ತಾರೆ. ಮೆಟ್ಟಿಲುಗಳಿರುವ ಆ ಕಟ್ಟೆಯ ಮೇಲೆ ಪ್ರತಿದಿನವೂ ಹಲವು ಹಿರಿಯರು ಕುಳಿತು ಸಭೆ ನಡೆಸುತ್ತಿರುತ್ತಾರೆ. ಹಾಗಾಗಿ ಹತ್ತು ಹದಿನೈದು ಪ್ರದಕ್ಷಿಣೆಗಳನ್ನು ಹಾಕುವವರು ಅವರನ್ನೂ ಸೇರಿಸಿಕೊಂಡೇ ಪ್ರದಕ್ಷಿಣೆ ಹಾಕಬೇಕಾಗುತ್ತದೆ. ಬೇರೆ ದಾರಿಯಿಲ್ಲ. ಇದೇ ಕಾರಣಕ್ಕಾಗಿ ಕೆಲವರು ಪ್ರದಕ್ಷಿಣೆಯನ್ನೇ ಬಿಟ್ಟಿದ್ದೂ ಉಂಟಂತೆ!!
ಮುಂಜಾನೆ ಮೈದಾನದಲ್ಲಿ ಗಿಡಮರಗಳ ಮಧ್ಯೆ ವ್ಯಾಯಾಮ ಮಾಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈ ನೋಟ ಕಣ್ಣಿಗೆ ಹಬ್ಬ. ಒಂದೆಡೆ ಕುಳಿತು ಯೋಗಾಸನ ಮಾಡುವವರಿಂದ ತೊಂದರೆ ಇಲ್ಲ; ನಡೆದಾಡುವವರು ಅವರನ್ನು ಬಳಸಿ ನಡೆಯ ಬಹುದು. ಆದರೆ ತಮ್ಮ ಎರಡೂ ಕೈಗಳನ್ನು ಭೀಮನ ಗದೆಯಂತೆ ಬೀಸುತ್ತಾ ಅಥವಾ ವಿಷ್ಣು ಚಕ್ರದಂತೆ ಗರಗರ ತಿರುಗಿಸುತ್ತಾ ಬರುತ್ತಾರಲ್ಲ ಅವರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಜಾಗ್ರತೆಯಿಂದಿರಬೇಕು. ಸ್ವಲ್ಪ ಸನಿಹಕ್ಕೆ ಬಂದರೂ ಸಾಕು ಅವರ ಬಲಿಷ್ಟ ಕೈಗಳು ನಮ್ಮ ಮುಖಕ್ಕೋ ಕತ್ತಿಗೋ ತಗುಲಿ ಮೂಳೆ ಮುರಿಯುವ ಸಂಭವ ಹೆಚ್ಚು!
ಈಚೆಗೆ ವಾಯುವಿಹಾರ ನಡೆಯುವ ಸ್ಥಳಗಳಲ್ಲಿ ಅದೇನೋ ತರಕಾರಿ, ಸೊಪ್ಪಿನ ರಸಗಳ ಮಾರಾಟ ಜೋರಾಗಿದೆ. ಆ ಸ್ಥಳದಲ್ಲಿ ದೊಡ್ಡದೊಂದು ಗುಂಪೇ ಇರುತ್ತದೆ. ಆರೋಗ್ಯ ವರ್ಧನೆಗೆ ನಾನಾ ದ್ವಾರಗಳು! ಅಲ್ಲಲ್ಲಿ ಮೊಳಕೆ ಬಂದ ಕಾಳುಗಳ ಮಾರಾಟವೂ ನಡೆದಿದೆ! ನಮ್ಮ ಸ್ನೇಹಿತರೊಬ್ಬರು ಮನೆಯಿಂದ ಒಂದು ಲೋಟವನ್ನು ತರುತ್ತಾರೆ. ಕಾರಣ ಗೊತ್ತೇ? ಆ ಪ್ಲಾಸ್ಟಿಕ್ ಲೋಟದಲ್ಲಿ ಕುಡಿದು ಬಿಸಾಡಿದರೆ ಅದು ಪರಿಸರ ಮಾಲಿನ್ಯಕ್ಕೆ ಸಹಕರಿಸಿದಂತಲ್ಲವೇ? ಅಬ್ಬ, ಅದೇನು ಪರಿಸರದ ಬಗ್ಗೆ ಕಾಳಜಿ ಎಂದು ಸಂತೋಷ ಪಡಬೇಕು ತಾನೆ?
ಜೀವನವೇ ಒಂದು ಶಾಲೆ; ಅಂತೆಯೇ ವಾಯುವಿಹಾರವೂ ಒಂದು ಪಾಠವಲ್ಲವೇ??
-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com