ಅಮೆರಿಕನ್ನಡ
Amerikannada
ಹೀಗೊಂದು ಪ್ರಶ್ನೆ
-ರಂಗನಾಥ್ ಮೈಸೂರು
ಸಂಪಾದಕರು, ಸವಿಗನ್ನಡ ಪತ್ರಿಕೆ

ಕನ್ನಡದ ಕೆಲಸ ಬೆಟ್ಟದಷ್ಟಿರುವಾಗ
ಹೊರಟೇ ಬಿಟ್ಟಿರಲ್ಲಾ ಹರಿ
ಏನಿತ್ತು ಅಂತ ತುರ್ತು ನಿಮಗೆ?

ಇಲ್ಲಿ ‘ಅಕ್ಕ’ ಅನಾಥಳಾಗಿದ್ದಾಳೆ
‘ನಾವಿಕ’ನಿಲ್ಲದ ನೌಕೆ ದಿಕ್ಕುತಪ್ಪಿದೆ
ಕನ್ನಡಮ್ಮನ ಕಣ್ಣ ಮಿಂಚೇಕೋ ಕುಂದಿದೆ
ನೀವಿಲ್ಲದೆ, ಪ್ರತಿಯೊಂದಕ್ಕೂ
ನಿಮ್ಮ ಪ್ರೀತಿಯ ಸ್ಪರ್ಶವಿಲ್ಲದೆ!!

ಕಾಣದ ಲೋಕದಲ್ಲೇನಿತ್ತು ಕೆಲಸ?
ಕಟ್ಟುವವರಿಲ್ಲದೆ ಕನ್ನಡ,
ಕುಟ್ಟುವವರೇ ಹೆಚ್ಚಾಗಿರುವಾಗ
ಮುಗುಳ್ನಗೆಯ ಮಂದಹಾಸದಲ್ಲಿ
ಅರ್ಧನಿಮಿಲಿತ ನೇತ್ರದಲ್ಲಿ
ಮೆದುಮಾತಿನ ಚಾವಟಿಯಲ್ಲಿ,
ಬಾರಿಸಿ, ಬಾರಿಸಿ ಬರೆಸುತ್ತಿದ್ದೀರಲ್ಲ
ಹೇಳದೆ... ಕೇಳದೆ ದಿಢೀರೆಂದು ಹೋಗಿ
ಕಣ್ಣ ತುಂಬ ಕಣ್ಣೀರು ಬರಿಸುತ್ತಿದ್ದೀರಲ್ಲ
ಏನಿತ್ತು ಅಂತ ತುರ್ತು ನಿಮಗೆ?

ಖಾಲಿಯಾದ ಹೃದಯದ
ಹಾಳೆಯ ಮೇಲೆ
ಮುಗುಳ್ನಗೆಯ ಚಿತ್ರಪಟವಾಗಿ
ನಗುತ್ತಾ ನಿಂತಿರಲ್ಲ
ಏನಿತ್ತು ಅಂತ ತುರ್ತು ನಿಮಗೆ?

ನನಗೆ ಗೊತ್ತು ನೀವಿಲ್ಲೇ ಇದ್ದೀರಿ...
ಕ್ಷರವಾಗದ ‘ಅಕ್ಷರದೊಳಗೆ’
ನೆರವು ಪಡೆದವರ ನೆಮ್ಮದಿಯ ನಗೆಯೊಳಗೆ
ಸಾವಿರಾರು ಸಾಹಿತ್ಯ ಪ್ರೇಮಿಗಳ
ಕಣ್ಣ ಕಂಬನಿಯೊಳಗೆ
ನಿಮ್ಮೊಡನಾಟದ ನೆನಪೊಂದೆ
ನಮ್ಮ ಅಮೃತಘಳಿಗೆ