ಅಮೆರಿಕನ್ನಡ
Amerikannada
‘ಹರಿಯ ಕಾಣಿಕೆ’ ಪ್ರಸ್ತಾವನೆ
ನಾಗಲಕ್ಷ್ಮೀ ಹರಿಹರೇಶ್ವರ, ಮೈಸೂರು
ಶಿವಮೊಗ್ಗದಲ್ಲೇ ಇರಲಿ, ನೈವೇಲಿಯಲ್ಲೇ ಇರಲಿ ದೂರದ ನೇಫಾ, ಅರುಣಾಚಲಪ್ರದೇಶದಲ್ಲೇ ಇರಲಿ, ಇರಾನಿನಲ್ಲೇ ಇರಲಿ, ಅಮೆರಿಕಾದಲ್ಲೇ ಇರಲಿ ಅವರ ಉಸಿರು ಕನ್ನಡ, ಕನ್ನಡವೇ ಅವರ ಜೀವ. ಕನ್ನಡಕ್ಕಾಗಿ ತಮ್ಮ ತನು, ಮನ, ಧನ ಅರ್ಪಿಸಿ ಕನ್ನಡದ ಕೈಂಕರ್ಯಕ್ಕಾಗಿ ದುಡಿಯಲು ಸದಾ ಸಿದ್ಧರಾಗಿದ್ದವರು ಹರಿಯವರು.
ಹರಿ ಮತ್ತು ನಾನು ಇಬ್ಬರೂ ಒಂದೇ ರೀತಿಯಲ್ಲಿ ಆಲೋಚಿಸು ವುದು, ಒಂದೇ ರೀತಿಯಲ್ಲಿ ನುಡಿಯುವುದು ಕೆಲವೊಮ್ಮೆ ಏಕೆ? ಹೆಚ್ಚು ಕಡಿಮೆ ನಮ್ಮ ಪದಗಳು ಒಂದೇ ಆಗಿರುತ್ತಿದ್ದವು. ಅದಕ್ಕೆ ನಮ್ಮನ್ನು ಹತ್ತಿರದಿಂದ ಬಲ್ಲವರು ಗಂಡುಭೇರುಂಡಕ್ಕೆ ಹೋಲಿಸುತ್ತಿದ್ದರು. ಕಾರಣ ನಮ್ಮಿಬ್ಬರ ಮುಖಗಳು ಬೇರೆ ಇದ್ದರೂ, ದೇಹ ಒಂದೇ ಆಗಿರುತ್ತಿತ್ತು. ಒಂದೇ ರೀತಿಯ ಆಲೋಚನೆಗಳು, ವಿಚಾರ ಲಹರಿಗಳು ಹರಿಯುತ್ತಿದ್ದವು. ನಮ್ಮ ಮನೆಯಲ್ಲಿ ಊಟಕ್ಕಾಗಲಿ, ಹಣದ ವಿಚಾರಕ್ಕಾಗಲಿ, ಇನ್ನು ಮುಂತಾದ ಬೇರೆ ಯಾವುದೇ ವಿಷಯಕ್ಕೆ ಜಗಳ ಬರುತ್ತಿರಲಿಲ್ಲ. ನಾವಿಬ್ಬರು ಜಗಳವಾಡುತ್ತಿದ್ದುದು, ಒಂದು ಪದಕ್ಕೆ, ಒಂದು ವಾಕ್ಯಕ್ಕೆ, ಒಂದು ವಿಷಯಕ್ಕೆ.
ನಮ್ಮ ಮನೆಯಲ್ಲಿರುವ ಎಲ್ಲಾ ಪುಸ್ತಕಗಳನ್ನು ನಾನು ಓದಿಲ್ಲ ನಿಜ. ಆದರೆ ಆ ಪುಸ್ತಕಗಳ ಪರಿಚಯ ನನಗೆ ಇರುತ್ತಿತ್ತು. ಅದಕ್ಕೆ ಕಾರಣ ಹರಿ. ಹರಿ ತಾವು ಓದಿದ ಪುಸ್ತಕಗಳ ಬಗ್ಗೆ ಟಿಪ್ಪಣಿ ಹಾಕಿಕೊಂಡು ನನ್ನ ಬಳಿ ಆ ಪುಸ್ತಕದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆ ಕಾರಣದಿಂದಲೇ ಈ ಬೃಹತ್ ಪ್ರಬಂಧ ಸಂಪುಟವನ್ನು ಹೊರತರಲು ನನಗೆ ಕಷ್ಟವಾಗಲೇ ಇಲ್ಲ. ಸ್ವತಃ ನಾನೇ ಬರೆದ ಗ್ರಂಥ ಇದು ಎನ್ನುವ ಭಾವನೆ ಮೂಡುತ್ತಿದೆ ಎಂದರೆ ನೋಡಿ ನಮ್ಮಿಬ್ಬರ ಅನ್ಯೋನ್ಯತೆ ತಿಳಿಯಲು ನಿಮಗೆ ಕಷ್ಟಸಾಧ್ಯವಾಗದು.
ಮೂವತ್ತು ವರ್ಷಗಳ ಕಾಲ ಅಮೆರಿಕೆಯಲ್ಲಿದ್ದು, ಭಾರತಕ್ಕೆ ಮರಳಿ ಬರಲು ಹರಿ ಸ್ವಲ್ಪ ಅನುಮಾನ ವ್ಯಕ್ತಪಡಿಸಿದರೂ, ನನ್ನ ಬಲವಂತಕ್ಕೆ ಇಲ್ಲಿ ಬಂದ ನಂತರ ಮೈಸೂರನ್ನು, ಅದರಲ್ಲೂ ಸರಸ್ವತಿಪುರವನ್ನು, ಇಲ್ಲಿಯ ಜನಗಳನ್ನು, ಇಲ್ಲಿ ಗಳಿಸಿದ ಮಿತ್ರರನ್ನು ಬಲುವಾಗಿ ಪ್ರೀತಿಸಿದರು, ಜೀವಿಸಿದರು. ತಮಗೆ ಹೇಗೇ ಬೇಕೋ ಹಾಗೆ ಜೀವನವನ್ನು ನಡೆಸಿದರು. ಇಲ್ಲಿ ಸಾಹಿತ್ಯಪರ ಚಟುವಟಿಕೆಗಳಲ್ಲಿ ಇನ್ನಷ್ಟು ತೀವ್ರವಾಗಿ ತೊಡಗಿಸಿಕೊಳ್ಳಲು ಅವರಿಗೆ ಹೇರಳವಾಗಿ ಅವಕಾಶಗಳು ಒದಗಿದವು. ಅವುಗಳಲ್ಲಿ ಮುಖ್ಯವಾದದ್ದು ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳ ಓದು, ಚರ್ಚೆ, ವಿಚಾರ ಮಥನ, ಚಿಂತನೆ ಮತ್ತು ಅವರ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವರಿಗೆ ಅನೇಕ ವೇದಿಕೆಗಳು ಒದಗಿದವು.
ಹರಿ, ಸರಸ್ವತಿಯ ಪುತ್ರ, ನನಗಿಂತ ಹೆಚ್ಚಾಗಿ ಅವರು ಪುಸ್ತಕಗಳನ್ನೇ ಪ್ರೀತಿಸುತ್ತಿದ್ದರು, ಅದೇ ಅವರ ಉಸಿರಾಗಿತ್ತು, ಜೀವನವಾಗಿತ್ತು. ಹರಿ ದಿನಕ್ಕೆ ಕೇವಲ ಮೂರು ಗಂಟೆಗಳ ಕಾಲ ಮಲಗುತ್ತಿದ್ದರು. ಅದೂ ವಿಶ್ರಾಂತಿಗಾಗಿಯೇ ಹೊರತು, ಗಡದ್ದಾಗಿ ನಿದ್ದೆ ಮಾಡುವುದಕ್ಕಲ್ಲ. ಅವರ ದಿನದ ಸಮಯವನ್ನೆಲ್ಲ ಪುಸ್ತಕಗಳನ್ನು ಓದುವುದರಲ್ಲೇ ಕಳೆಯುತ್ತಿದ್ದರು. ಅವರು ಓದಿದ ಪುಸ್ತಕಗಳ ಮಾರ್ಜಿನ್ ಭಾಗದಲ್ಲಿ ಟಿಪ್ಪಣಿಗಳನ್ನು ಗುರುತುಹಾಕಿಕೊಳ್ಳುತ್ತಿದ್ದರು. ಓದಿದ ಪುಸ್ತಕ ಮನಸಿಗೆ ಹಿಡಿಸಿದಾಗ ಸಮಯವನ್ನೂ ಲೆಕ್ಕಿಸದೇ ಲೇಖಕರಿಗೆ ಫೋನ್ ಮಾಡಿ ಪುಸ್ತಕದ ಬಗ್ಗೆ ಹರಟುತ್ತಿದ್ದರು. ನಾನು ಕೆಲವೊಮ್ಮೆ ಹರಿ ಈಗ ಸಮಯ ಎಷ್ಟು ಈ ಸಮಯದಲ್ಲೆಲ್ಲ ಅವರಿಗೆ ಫೋನ್ ಮಾಡಿ ತೊಂದರೆ ಕೊಡಬೇಡಿ ಎಂದು ಹೇಳುತ್ತಿದ್ದೆ. ಕೆಲವು ಪುಸ್ತಕಗಳಲ್ಲಿ ಕೆಲವು ಲೋಪದೋಷಗಳು ಕಂಡುಬಂದರೆ ತಕ್ಷಣ ಲೇಖಕರಿಗೆ ಫೋನ್ ಮಾಡಿ ಪುಸ್ತಕ ರಚನೆಯ ಬಗ್ಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಆದ್ದರಿಂದ ಸಾಹಿತ್ಯಲೋಕದಲ್ಲಿ ಹರಿ ಅವರನ್ನು ಕಂಡರೆ ಎಲ್ಲಾ ಲೇಖಕರಿಗೂ ಪ್ರೀತಿ ಹಾಗೂ ಅಚ್ಚುಮೆಚ್ಚು.
ಯಾವುದೇ ಕೆಲಸವನ್ನಾಗಲಿ ಮಾಡಿ ತೋರಿಸಬೇಕು, ಓದು ಬರೆಹ ವ್ಯರ್ಥವಾಗಬಾರದು, ಅದನ್ನು ಆಚರಣೆಗೆ ತರಬೇಕು ಎಂಬುದು ಹರಿಯವರ ನಂಬಿಕೆ. ತಮ್ಮ ಬದುಕಿನುದ್ದಕ್ಕೂ ಮತ್ತೆ ಸಾವಿನಲ್ಲೂ ಅದನ್ನು ಆಚರಿಸಿ ತೋರಿಸಿದ್ದಾರೆ. ಸತ್ತವರಾರೂ ಬದುಕಿ ಬಂದಿಲ್ಲವಾದ ಕಾರಣ ನಂತರ ಏನು? ಹೇಗೆ? ಎಂಬ ಪ್ರಶ್ನೆಗಳಿಗಿಂತ ಬದುಕಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿ, ಒಳ್ಳೆಯದನ್ನು ಯೋಚಿಸಿ, ಸಮಾಜದಿಂದ ಋಣ ಪಡೆದದ್ದನ್ನು ಸಮಾಜಕ್ಕೆ ಸಲ್ಲಿಸ(ಕೆರೆಯ ನೀರನ್ನು ಕೆರೆಗೆ ಚೆಲ್ಲಿ)ಬೇಕೆಂಬುದು ಹರಿಯವರ ಆಶಯ. ಆತ ಒಬ್ಬ ತಪಸ್ವಿ, ಸಾಧಕ, ಜನಗಳ ಹಿತ ಚಿಂತಕ, ಕನ್ನಡ ಪರಿಚಾರಕ.
ಜುಲೈ ೨೨, ೨೦೧೨ ರಂದು ಹರಿಯವರ ಎರಡನೇ ವರ್ಷದ ಸವಿನೆನಪಿನ ಕಾಣಿಕೆಯಾಗಿ ಹರಿಯವರು ಬರೆದಿರುವ ಸಮಗ್ರ ಪ್ರಬಂಧಗಳನ್ನು ‘ಹರಿಯ ಕಾಣಿಕೆ’ ಎಂಬ ಶೀರ್ಷಿಕೆಯಡಿ ಎರಡು ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಗ್ರಂಥಕ್ಕೆ ‘ಹರಿಯ ಕಾಣಿಕೆ’ ಎಂಬ ಶೀರ್ಷಿಕೆ ಹಾಗೂ ಗ್ರಂಥದ ವಿಭಾಗಗಳ ಶೀರ್ಷಿಕೆಗಳನ್ನು ಇಡಲು ಕಾರಣ ಹರಿಯ ಆತಿಥ್ಯ ಮನೋಭಾವ, ಅತಿಥಿ ದೇವೋಭವವನ್ನು ಸಾಕ್ಷಾತ್ಕರಿಸಿದ ಮಹಾನುಭಾವ. ನಮ್ಮ ಮನೆಗೆ ಬಂದವರನ್ನು ಪ್ರೀತಿಯಿಂದ, ವಿಶ್ವಾಸದಿಂದ ಸ್ವಾಗತಿಸಿ ಒಳಕ್ಕೆ ಕರೆದು ಅವರ ಆಗಮನವಾದ ನಂತರ ಆಸನವನ್ನು ತೋರಿಸಿ ಕುಳಿತುಕೊಳ್ಳಲು ಹೇಳಿ ಕಾಫಿ, ಟೀ, ಬಾದಾಮಿ ಹಾಲು ಏನು ತೆಗೆದುಕೊಳ್ಳುವಿರಿ? ಎಂದು ಆಸ್ರೇ ಕೊಡುವುದರ ಮೂಲಕ ಕುಶಲೋಪರಿ ಮಾತನಾಡಲು ಶುರುಮಾಡುವರು. ನಂತರ ತಮ್ಮ ಆಕರ ಗ್ರಂಥಗಳು, ಚರ್ಚೆಗೆ ಸಿಗುವ ಗ್ರಂಥಗಳನ್ನು ಪಸರಿಸಿ ವಿಷಯಗಳ ವಿನಿಮಯ ಮಾಡಿಕೊಳ್ಳುವರು. ಹರಿ ಅತಿಥಿಗಳನ್ನು ಮಾತನಾಡಿಸುತ್ತಿದ್ದುದೇ ನೀವು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಯಾವ ಯಾವ ಪುಸ್ತಕಗಳನ್ನು ಓದಿದ್ದೀರಿ ಎಂದು. ಒಂದು ವೇಳೆ ಅವರು ಓದಿಲ್ಲ ಎಂದು ಹೇಳಿದರೆ. ನೀವು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಸಮಾಜದಲ್ಲಿ ಗೌರವದಿಂದ ಬಾಳಲು ಸಹಾಯಕ ವಾಗುತ್ತವೆ- ಎಂದು ಹೇಳಿ, ತಮ್ಮ ಬಳಿಯಲ್ಲಿರುವ ಅವರಿಗೇ ಸಹಾಯವಾಗುವ ಆಕರ ಗ್ರಂಥಗಳನ್ನು, ಕನ್ನಡ ಪುಸ್ತಕಗಳನ್ನು ಅಟ್ಟದ ಮೇಲೆ ಹೋಗಿ ತಂದು ಕಾಣಿಕೆಯಾಗಿ ನೀಡುತ್ತಿದ್ದರು. ಇದು ನಮ್ಮ ದಿನನಿತ್ಯದ ಆಚರಣೆಯಾಗಿತ್ತು, ಪದ್ಧತಿಯಾಗಿತ್ತು. ಮುತ್ತೈದೆಯರಿಗೆ ಕುಂಕುಮ ನೀಡುವುದರ ಜೊತೆಗೆ ಒಂದೊಂದು ಕನ್ನಡ ಪುಸ್ತಕ ನೀಡುವ ಪರಿಪಾಠವನ್ನು ಬೆಳೆಸಿಕೊಂಡ ನಾವು ಬೇರೆಯವರಿಗೆ ಮಾರ್ಗದರ್ಶಕರಾಗಿದ್ದೆವು. ವಂದನೆಗಳ ಮುಖಾಂತರ ಬಾಗಿಲವರೆಗೆ, ಕೆಲವೊಮ್ಮೆ ಬಾಗಿಲಾಚೆ ಗೇಟ್ ಆಚೆಯೂ ನಿಂತು ಮಾತನಾಡುತ್ತಾ ಬೀಳ್ಕೊಡುವರು. ಇದು ಹರಿಯ ಪ್ರತಿನಿತ್ಯದ ದಿನಚರಿ.
‘ಹರಿಯ ಕಾಣಿಕೆ’ ಪುಸ್ತಕದ ಒಳಗಣ ಹೂರಣವನ್ನು ಒಂಭತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸ್ವಾಗತ, ಆಗಮನ, ಆಸನ, ಆಸ್ರೇ, ಕುಶಲೋಪರಿ, ಪಸರ, ಕಾಣ್ಕೆ, ವಂದನೆ ಮತ್ತು ಬೀಳ್ಕೊಡುಗೆ ಈ ಸಂಪುಟಗಳ ವಿಷಯಾನುಕ್ರಮಣಿಕೆಯಲ್ಲಿ ಜೋಡಿಸಿದೆ. ಇದರಲ್ಲಿ ಸ್ವಾಗತ, ಆಗಮನ, ಆಸನ, ಆಸ್ರೇ, ಕುಶಲೋಪರಿ ಮೊದಲನೇ ಸಂಪುಟದಲ್ಲಿದ್ದರೆ, ಪಸರ, ಕಾಣ್ಕೆ, ವಂದನೆ ಮತ್ತು ಬೀಳ್ಕೊಡುಗೆ ಎರಡನೇ ಸಂಪುಟದಲ್ಲಿದೆ.
‘ಸ್ವಾಗತ’ ವಿಭಾಗದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿಂದ ಕೂಡಿದ ವೈಚಾರಿಕ ಪ್ರಬಂಧಗಳಿವೆ; ‘ಆಗಮನ’ ವಿಭಾಗದಲ್ಲಿ ಕನ್ನಡ ನಾಡನ್ನು ಕಟ್ಟಿ ಉಳಿಸಿ ಬೆಳಸುವ ಬಗ್ಗೆ ಒಟ್ಟು ಐದು ಲೇಖನಗಳಿವೆ; ‘ಆಸನ’ ವಿಭಾಗದಲ್ಲಿ ದೇವರು ಮತ್ತು ದೇವರ ಕಲ್ಪನೆಗಳ ಬಗ್ಗೆ ವಿಶ್ಲೇಷಿಸಿದ ಒಟ್ಟು ಒಂಭತ್ತು ಲೇಖನಗಳಿವೆ; ಒಟ್ಟು ಹದಿನಾರು ಲಲಿತ ಪ್ರಬಂಧಗಳು ‘ಆಸ್ರೇ’ ವಿಭಾಗದಲ್ಲಿವೆ; ‘ಕುಶಲೋಪರಿ’ ವಿಭಾಗದಲ್ಲಿ ಅವರಿಗೆ ಪ್ರಿಯವಾದ ವಿವೇಚನಾತ್ಮಕ ಪ್ರಬಂಧವಾದ ಗುಬ್ಬಚ್ಚಿಯೊಡನೆ ಮಾತನಾಡಿದ್ದಾರೆ. ‘ಪಸರ’ದಲ್ಲಿ ಕವಿಗಳ ಬಗ್ಗೆ ತಮ್ಮ ಮನದಾಳದ ಒಲವನ್ನು ತೋರಿದ ಒಟ್ಟು ಹತ್ತು ಲೇಖನಗಳಿವೆ; ‘ಕಾಣ್ಕೆ’ ವಿಭಾಗದಲ್ಲಿ ಹರಿಯು ಕೆಲವು ಪುಸ್ತಕಗಳಿಗೆ ಬರೆದಿರುವ ಮುನ್ನುಡಿ, ಬೆನ್ನುಡಿ, ಚೆನ್ನುಡಿ, ಹೊನ್ನುಡಿ, ಜೇನ್‌ನುಡಿಯ ಒಟ್ಟು ಇಪ್ಪತ್ತೆಂಟು ಲೇಖನಗಳಿವೆ; ‘ವಂದನೆ’ಯಲ್ಲಿ ಕಾಶ್ಮೀರದ ಹುಟ್ಟು, ಬೆಳವಣಿಗೆ, ಕಾಣಿಕೆ, ಸಂಸ್ಕಾರ, ಸಂಸ್ಕೃತಿ, ಕವಿ, ಕಾವ್ಯ ಎಲ್ಲವನ್ನೂ ಚಿತ್ರಿಸಿರುವ ಒಟ್ಟು ಹದಿನೇಳು ಲೇಖನಗಳಿವೆ; ಕೊನೆಯಲ್ಲಿ ‘ಬೀಳ್ಕೊಡುಗೆ’ ವಿಭಾಗದಲ್ಲಿ ಒಟ್ಟು ಹದಿನೈದು ಲೇಖನಗಳ ಮುಖಾಂತರ ತಮ್ಮ ಹೃದಯಕ್ಕೆ ಹತ್ತಿರವಾದ ವಿಚಾರಗಳನ್ನೆಲ್ಲ ಹರಿಯಬಿಟ್ಟಿದ್ದಾರೆ. ಈ ಒಂಭತ್ತು ವಿಭಾಗಗಳಲ್ಲಿ ಹರಿಯ ಚಿಂತನಾ ಲಹರಿ ಅಡಗಿದೆ. ಅವರಿಗಿದ್ದ ಸಾಹಿತ್ಯ ಭಂಡಾರದ ಜ್ಞಾನದ ಪರಿಚಯ ಅನುಭವವಾಗುತ್ತದೆ.
ಹರಿಯವರ ಕೆಲವೇ ಕೆಲವು ಪುಸ್ತಕಗಳು ನಮ್ಮಲ್ಲಿ ಉಳಿದುಕೊಂಡಿರುವ ಕಾರಣ, ಅವರ ಎಲ್ಲ ಪ್ರಬಂಧಗಳು ಒಂದು ಕಡೆ ದೊರೆಯುವಂತಾಗಲಿ ಎಂಬ ಕಾರಣದಿಂದ ಸಮಗ್ರ ಪ್ರಬಂಧದ ಈ ಎರಡು ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ. ಹರಿ ನನ್ನ ಜೊತೆಯೇ ಇದ್ದು, ರಿಮೋಟ್ ಕಂಟ್ರೋಲ್ ಮೂಲಕ ನನ್ನ ಕೈಯಲ್ಲಿ ಈ ಎಲ್ಲ ಕೆಲಸವನ್ನು ಮಾಡಿಸುತ್ತಿದ್ದಾರೆ. ನನ್ನ ಗೆಳೆಯನಿಗೆ ನನ್ನ ಕಾಣಿಕೆ ಅದೇ ‘ಹರಿಯ ಕಾಣಿಕೆ’.
ಈ ಪ್ರಬಂಧ ಸಂಪುಟಗಳಲ್ಲಿ ಸಂಗ್ರಹವಾಗಿರುವ ವಿಷಯಗಳೆಲ್ಲ ಮುಕ್ಕಾಲು ಪಾಲು ಅಮೆರಿಕಾದಲ್ಲಿ ಕುಳಿತು ಬರೆದದ್ದು. ಯಾವುದೇ ವಿಷಯ ವಾದರೂ ಮೂಲಕ್ಕೆ ಹೋಗಿ ಅದರ ಆಳ ಅಗಲಗಳನ್ನು ಹುಡುಕಿ ಬರೆದಿರುವ ಸಂಶೋಧನಾ ಲೇಖನಗಳೇ ಇದರಲ್ಲಿ ಹೆಚ್ಚಾಗಿವೆ. ಅಮೆರಿಕಾದಲ್ಲಿರುವಾಗ ಅವರ ಸಂಶೋಧನೆಗೆ ಆಕರ ಗ್ರಂಥಗಳು ಅಮೆರಿಕೆಯಲ್ಲಿ ಲಭ್ಯವಿಲ್ಲದೇ ಹೋಗಿದ್ದರೆ ಭಾರತದಿಂದ ತರಿಸಿಕೊಂಡು ಓದುತ್ತಿದ್ದರು.
ಒಂದು ಸಣ್ಣ ಲೈಬ್ರರಿಯೇ ನಮ್ಮ ಮನೆಯಾಗಿದ್ದ ಕಾರಣ ಅಮೆರಿಕದಲ್ಲಿ ‘ಅಮೆರಿಕನ್ನಡ’ ಎಂಬ ದ್ವೈಮಾಸಿಕ ಪತ್ರಿಕೆಯನ್ನು ಅಮೆರಿಕೆಯಲ್ಲಿ ನಡೆಸಲು ಸಾಧ್ಯವಾಗುತ್ತಿತ್ತು. ನಮ್ಮ ಮನೆಯ ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕಗಳನ್ನೂ ಹರಿ ಕಣ್ಣಾಡಿಸಿದ್ದಾರೆ, ಕೈಯಲ್ಲಿಟ್ಟುಕೊಂಡು ಪೂಜೆಮಾಡಿ ಸಂತೋಷಪಟ್ಟಿದ್ದಾರೆ. ಜ್ಞಾನ ಪಿಪಾಸು ಆಗಿದ್ದ ಕಾರಣ ಅವರ ಓದು, ದೇಶ ಭಾಷೆ ಮತ್ತು ಧರ್ಮದ ಬಗ್ಗೆ ಸಿಕ್ಕ ಎಲ್ಲ ವಿಷಯಗಳನ್ನು ಓದಿ, ಚರ್ಚಿಸಿ ಅನುಭವಿಸಿ ಆನಂದಿಸಿದ್ದಾರೆ. ಅವರು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾದ ಗ್ರಂಥಗಳನಷ್ಟೇ ಅವರು ಬರೆದಿಲ್ಲ. ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಬೌದ್ಧ, ಜೈನ ಧರ್ಮದ ಗ್ರಂಥಗಳನ್ನೂ ಅವರು ಓದಿ, ತಿಳಿದು, ಕೆಲವೊಮ್ಮೆ ಆಯಾ ಧರ್ಮದ ಧರ್ಮಗುರುಗಳೊಂದಿಗೆ ಚರ್ಚಿಸಿ ಲೇಖನಗಳನ್ನು ಬರೆದಿದ್ದಾರೆ. ಅವರಿಗೆ ಜಾತಿ ಧರ್ಮದ ಮಿತಿಯಿರಲಿಲ್ಲ, ಬಡವ ಬಲ್ಲಿದ ಎಂಬ ಮೇಲು ಕೀಳು ತೋರಿಸಿದವರೇ ಅಲ್ಲ ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು, ಎಲ್ಲರಲ್ಲೂ ಸ್ನೇಹ ಸಂಬಂಧ ಬೆಳೆಸಿಕೊಂಡಿದ್ದರು.
ಕಾಲಕಾಲಕ್ಕೆ ಹರಿಯವರು ಬರೆದ ವೈಚಾರಿಕ ಲೇಖನಗಳ ಸಂಕಲನ ಇದು. ಹಾಗೆ ಬರೆಯುವಾಗ ಸಂಶೋಧನಾತ್ಮಕ ಪ್ರವೃತ್ತಿಯಿಂದ ಅಧ್ಯಯನ ಮಾಡಿದ ವಸ್ತುಗಳನ್ನು ಕೇಂದ್ರವಾಗಿರಿಸಿಕೊಂಡು ಬರೆದ ಬರೆಹಗಳು ಇವು. ಇದರಲ್ಲಿ ಕೆಲವು ಸಂಕ್ಷಿಪ್ತ ರೂಪದಲ್ಲಿ ಅಂಕಣ ಲೇಖನಗಳಾಗಿ ಕೆಲವು ನಿಯತ ಕಾಲಿಕೆಗಳಲ್ಲಿ ಬೆಳಕುಕಂಡಿವೆ.
ಸಹೃದಯರೇ, ಹರಿಯ ಈ ಎರಡೂ ಸಂಪುಟವನ್ನು ಕನ್ನಡದ ಕುಲದೇವಿ ಶ್ರೀ ಭುವನೇಶ್ವರಿ ತಾಯಿಗೆ ಹಾಗೂ ಸಮಸ್ತ ಕನ್ನಡ ಕುಲಕೋಟಿಗೆ ಅರ್ಪಿಸಲು ಕಾರಣ, ಹರಿಯವರಿಗಿದ್ದ ಕನ್ನಡ ಭಾಷೆ ಹಾಗೂ ಕನ್ನಡದ ಜನಗಳ ಮೇಲಿನ ಅಭಿಮಾನ ಹಾಗೂ ಅತೀವ ಪ್ರೀತಿ. ಅದಕ್ಕಾಗಿಯೇ ಈ ಎರಡೂ ಬೃಹತ್ ಸಂಪುಟಗಳನ್ನು ಕನ್ನಡ ಸಾಹಿತ್ಯ ಭಂಡಾರಕ್ಕೆ ಹರಿಯು ಕಾಣಿಕೆಯಾಗಿ ನೀಡಿದ್ದಾರೆ. ‘ಹರಿಯ ಕಾಣಿಕೆ’ಯನ್ನು ನಿಮಗೆ ಕಾಣಿಕೆಯಾಗಿ ಸಲ್ಲಿಸುತ್ತಿದ್ದೇನೆ ದಯವಿಟ್ಟು ಓದುಗರು ಕೊಂಡು ಓದಿ, ತಮ್ಮ ಅಭಿಪ್ರಾಯಗಳನ್ನು ಕರೆದು/ ಬರೆದು ತಿಳಿಸಬೇಕಾಗಿ ವಿನಂತಿಸಿಕೊಳ್ಳುವೆ.