ಅಮೆರಿಕನ್ನಡ
Amerikannada
ಸಹೃದಯಿ
ಡಾ. ಬಿ.ಎನ್. ಸತ್ಯನಾರಾಯಣರಾವ್, ಬೆಂಗಳೂರು ದರ್ಶನ್ ಕುಮಾರ್ ನ್ಯೂಯಾರ್ಕಿನಲ್ಲಿ ನಿಯೋಟೆಕ್ ಕಂಪನಿಯ ಆಫೀಸಿನಲ್ಲಿ ಕಲಸ ಮಾಡುತ್ತಿದ್ದ. ಅವನೀಗ ಅವನ ತಂದೆಯಂತೆಯೇ ಒಬ್ಬ ಸಾಫ್ಟ್’ವೇರ್ ಎಂಜಿನಿಯರ್. ಬೋಸ್ಟನ್’ನ ಪ್ರತಿಷ್ಠಿತವಾದ ಎಮ್.ಐ.ಟಿ ನಲ್ಲಿ ಎಮ್.ಟೆಕ್ ಡಿಗ್ರೀ ಮಾಡಿ, ನಿಯೋಟೆಕ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಮೂರು ವರ್ಷವಾಗಿತ್ತು. ಒಂದು ಪ್ರಾಜೆಕ್ಟ್ ಕ್ಲಿಷ್ಟವಾದ ಸಮಸ್ಯೆಗಳನ್ನೊಡ್ಡಿ ಕಗ್ಗಂಟಾಗಿ ಕೂತಿತ್ತು. ಅದನ್ನು ಸರಿಪಡಿಸಲು ದರ್ಶನ್ ಮೂರು ದಿನಗಳಿಂದ ಹಗಲೂ ರಾತ್ರಿ ಹೆಣಗುತ್ತಿದ್ದ. ಸಧ್ಯಕ್ಕೆ ಅದು ಒಂದು ಹಂತಕ್ಕೆ ಬಂದಮೇಲೆ ನಿಟ್ಟುಸಿರು ಬಿಟ್ಟಿದ್ದ. ಅವನ ಸೂಪರ್ವೈಸರ್ ಮೈಕೇಲ್ ಹಾರ್ಟನ್ ಇನ್ನೊಬ್ಬ ವ್ಯಕ್ತಿಯ ಜೊತೆ ಬಂದು “ಕೆಲಸ ಎಲ್ಲಿಯ ತನಕ ಬಂತು” ಎಂದು ಕೇಳಿದರು
“ಎಲ್ಲಾ ಲಾಕ್ ಜ್ಯಾಂ ಆಗಿತ್ತು. ಈಗ ಶೇಕಡ ಐವತ್ತರಷ್ಟನ್ನು ಸರಿಮಾಡಿದ್ದೀನಿ. ನಾಳೆ ಹೊತ್ತಿಗೆ ಎಲ್ಲ ಸರಿಯಾಗಬಹುದು” ಎಂದ.
“ಗುಡ್ ವರ್ಕ್ ದರ್ಶನ್. ಕೀಪ್ ಇಟ್ ಅಪ್. ಇವರು ಜಿಮ್ ಜಾನ್ಸನ್ ಅಂತ. ಇಲ್ಲಿಗೆ ಹೊಸದಾಗಿ ಸೇರಿರುವ ಸಾಫ್ಟ್‌ವೇರ್ ಎಂಜಿನಿಯರ್. ಇವರನ್ನು ನಿನ್ನ ಪ್ರಾಜೆಕ್ಟ್‌ಗೆ ಹಾಕಿದ್ದೀನಿ. ಅವರಿಗೆ ನಿನ್ನ ಪ್ರಾಜೆಕ್ಟ್‌ಗಳ ಎಲ್ಲಾ ವಿವರಗಳನ್ನು ಕೊಟ್ಟು ಅವರ ಜೊತೆ ಕೆಲಸ ಮಾಡು. ಅವರಿಗೆ ನಿನಗಿಂತ ಮೂರು ವರ್ಷ ಹೆಚ್ಚಿನ ಅನುಭವವಿದೆ. ಮುಂದಿನ ವರ್ಷ ನೀನು ಬೆಂಗಳೂರಿನಲ್ಲಿರುವ ಏಶ್ಯನ್ ಡಿವಿಶನ್‌ಗೆ ಹೋಗುತ್ತಿರುವುದರಿಂದ, ಈ ಪ್ರಾಜೆಕ್ಟ್‌ಗಳನ್ನು ಅವರು ಪೂರ್ಣಗೊಳಿಸಲು ಅನುಕೂಲವಾಗುತ್ತೆ” ಎಂದು ಅವನನ್ನು ಪರಿಚಯಿಸಿದರು.
“ವೆರಿ ಪ್ಲೀಸ್ಡ್ ಟು ಮೀಟ್ ಯು” ಎಂದು ಅವನ ಕೈ ಕುಲುಕಿದ. ಅವನನ್ನು ಅಲ್ಲಿಯೇ ಬಿಟ್ಟು ಮೈಕ್ ಹಾರ್ಟನ್ ಅಲ್ಲಿಂದ ಹೊರಟರು.
ಜಿಮ್, ಇಲ್ಲಿ ನನ್ನ ಇವತ್ತಿನ ಕೆಲಸ ಮುಗಿಯಿತು. ನಾಳೆ ನಿನಗೆ ಪ್ರಾಜೆಕ್ಟ್‌ಗಳ ವಿವರ ತಿಳಿಸ್ತೀನಿ. “ಹಾಗೇ ಆಗಲಿ” ಎಂದು ಜಿಮ್ ಹೊರಟು ಹೋದ.
ಮಾರನೇ ದಿನದಿಂದ ಜಿಮ್ ದರ್ಶನ್ ಜೊತೆ ಕೆಲಸ ಶುರು ಮಾಡಿದ. ಅವನಿಗೆ ಆಗಲೇ ಸಾಕಷ್ಟು ಅನುಭವವಿದ್ದರಿಂದ ಪ್ರಾಜೆಕ್ಟ್‌ಗಳಲ್ಲಿ ಬೇಗನೇ ತೊಡಗಿಕೊಂಡ. ಅವನಿಂದ ದರ್ಶನ್ ಅನೇಕ ತಾಂತ್ರಿಕ ವಿಷಯಗಳನ್ನೂ ಕಲಿತ. ಇಬ್ಬರೂ ಬಹು ಬೇಗನೇ ಮಿತ್ರರಾದರು. ಒಂದು ದಿನ ಲಂಚ್ ವೇಳೆಯಲ್ಲಿ ದರ್ಶನ್ ಕೇಳಿದ.
“ಜಿಮ್, ನಿನ್ನ ತಂದೆ ತಾಯಿಗಳು ಯಾರು? ನಿನ್ನ ಫ್ಯಾಮಿಲಿ ವಿಷಯ ಹೇಳು” “ನನ್ನ ತಾಯಿ ಜಾನೆಟ್ ಮತ್ತು ನನ್ನ ತಂದೆ ಮೆಲ್ ಜಾನ್ಸನ್. ಈಗ ಅವರು ನನ್ನ ಹುಟ್ಟಿದೂರಾದ ರಾಚೆಸ್ಟರ್‌ನಲ್ಲಿದ್ದಾರೆ. ಅದು ಇಲ್ಲಿಂದ ಸುಮಾರು ಇನ್ನೂರೈವತ್ತು ಮೈಲಿ, ನಾಲ್ಕು ಗಂಟೆ ಪ್ರಯಾಣ. ನನ್ನ ತಂದೆ ಒಂದು ಗಾರ್ಮೆಂಟ್ ಸ್ಟೋರ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ. ನನ್ನ ತಾಯಿ ಒಬ್ಬ ನರ್ಸ್. ಅಲ್ಲಿ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ನಾನು ಒಬ್ಬನೇ ಇದ್ದೀನಿ. ನಾನು ರಾಚೆಸ್ಟರ್‌ನಲ್ಲಿ ಹೈಸ್ಕೂಲ್ ಮುಗಿಸಿ, ಪಿಟ್ಸ್‌ಬರ್ಗಿನ ಕಾರ್ನಿಗೆ ಮೆಲನ್ ಯೂನಿವರ್ಸಿಟೀಲಿ ಎಂಜಿನಿಯರಿಂಗ್ ಡಿಗ್ರೀ ಮಾಡಿದೆ. ನಂತರ ಅಲ್ಲಿಯೇ ಎಲೆಕ್ಟ್ರಾನಿಕ್ಸ್‌ನಲ್ಲಿ ಎಮ್.ಎಸ್. ಡಿಗ್ರೀ ಮಾಡಿ, ಚಿಕಾಗೋನಲ್ಲಿ ಹ್ಯೂಲೆಟ್ ಪ್ಯಾಕಾರ್ಡ್’ ಕಂಪನೀಲಿ ನಾಲಕ್ಕು ವರ್ಷ ಕೆಲಸ ಮಾಡಿದೆ. ಈಗ ಇಲ್ಲಿ ಸೇರಿದ್ದೀನಿ.ನಿನ್ನ ಫ್ಯಾಮಿಲಿ...?” ಎಂದು ಪ್ರಶ್ನಿಸಿದ.
“ನನ್ನ ತಂದೆ ಇಂಡಿಯಾದಲ್ಲಿ ಬೆಂಗಳೂರಿನಲ್ಲಿದ್ದಾರೆ”
“ಅದೇ, ಇಂಡಿಯಾದ ಸಿಲಿಕಾನ್ ಸಿಟಿ ಅಂತಾರಲ್ಲ. ಇನ್ಫೋಸಿಸ್ ಇದೆಯಲ್ಲ, ಅದೇ ತಾನೆ?”
“ಹೌದು. ಅವರು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಡಿಗ್ರೀ ಪಡೆದು, ಬರ್ಕ್ಲೀನಲ್ಲಿ ಎಮ್.ಎಸ್ ಮಾಡಿ ನಮ್ಮ ಈ ನಿಯೋಟೆಕ್ ಕಂಪನಿಯಲ್ಲಿ ಒಂಬತ್ತು ವರ್ಷ ಕೆಲಸ ಮಾಡಿದ್ದರು. ಆಗಿನ್ನೂ ಈ ಕಂಪನಿ ಹೊಸದಾಗಿ ಶುರುವಾಗಿತ್ತು. ಇದರ ಏಳಿಗೆಗೆ ಅವರು ಬಹಳ ಶ್ರಮಪಟ್ಟಿದ್ದರು. ಆಮೇಲೆ ಅವರು ಬೆಂಗಳೂರಿನ ಶಾಖೆಗೆ ವರ್ಗಾಯಿಸಿಕೊಂಡು, ಅದನ್ನು ಬಡಾಯಿಸಿ, ಕ್ರಮೇಣ ಏಷ್ಯಾದಲ್ಲೆಲ್ಲ ನಮ್ಮ ಕಂಪನಿ ಹರಡುವಂತೆ ಮಾಡಿ, ಈಗ ನಿಯೋಟೆಕ್‌ನ ಏಶ್ಯನ್ ಡಿವಿಶನ್ ಹೆಡ್ ಆಗಿದ್ದಾರೆ. ಹೆಡ್ ಕ್ವಾರ್ಟರ್ಸ್ ಬೆಂಗಳೂರಿನಲ್ಲೇ ಇದೆ. ನನ್ನ ತಾಯಿ ಕಾಮರ್ಸ್ ಡಿಗ್ರೀ ಮಾಡಿ, ಎಮ್.ಬಿ.ಎ ಡಿಗ್ರೀ ಮಾಡಿದ್ದಾರೆ. ಬೆಂಗಳೂರಿನ ನಿಯೋಟೆಕ್ ಶಾಖೆಯಲ್ಲಿ ಹೆಚ್.ಆರ್.ಒ ಆಗಿದ್ದಾರೆ. ನನ್ನ ತಾಯಿ ತಂದೆಗೆ ನಾನೊಬ್ಬನೇ ಮಗ. ನಾನು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಡಿಗ್ರೀ ಮಾಡಿ, ಎಮ್.ಐ. ಟಿ ನಲ್ಲಿ ಎಮ್.ಟೆಕ್ ಮಾಡಿ, ಇಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದೀನಿ.”
“ಅಂದರೆ ನಿನ್ನ ತಂದೆ ನಡೆದ ದಾರಿಯಲ್ಲೇ ನೀನು ನಡೆಯುತ್ತಿರುವಂತಿದೆ. ನಿನ್ನ ತಾಯಿ ತಂದೆಗಳಿಂದ ಇಷ್ಟು ದೂರ ಬಂದಿದ್ದೀಯಲ್ಲ. ಬೇಸರವಾಗುವುದಿಲ್ಲವೆ? ಅಲ್ಲೇ ಕೆಲಸ ಮಾಡಬಹುದಿತ್ತಲ್ಲ?”
“ನನ್ನ ತಂದೆ ಅಮೆರಿಕಾದಲ್ಲೇ ನಮ್ಮ ಪೇರೆಂಟ್ ಕಂಪನಿಯಲ್ಲೇ ಕೆಲವು ವರ್ಷ ಅನುಭವ ಪಡಿ ಅಂತ ಇಲ್ಲಿ ಕೆಲಸ ಕೊಡಿಸಿದರು. ಮುಂದಿನ ವರ್ಷ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡು ಹೋಗೋಣ ಅಂತಿದ್ದೀನಿ. ಈ ಪ್ರಾಜೆಕ್ಟ್‌ಗಳು ಮುಗಿಯಲಿ ಅಂತ ಕಾಯ್ತಿದೀನಿ. ಈಗ ನೀನು ಬಂದಿದೀಯ. ನನ್ನ ಕೆಲಸ ಹಗುರವಾಯ್ತು. ನಾನು ಬೇಗನೇ ಹೋಗಬಹುದು. ನೀನು ನನ್ನ ಪ್ರಾಜೆಕ್ಟ್‌ಗಳನ್ನ ಪೂರೈಸಬಹುದು. ಅದಿರಲಿ ಜಿಮ್. ನೀನೇಕೆ ಮದುವೆಯಾಗಿಲ್ಲ?”
“ಮದುವೆಯಾಗಿದ್ದೆ. ಚಿಕಾಗೋನಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ನ್ಯಾನ್ಸೀನ ಮದುವೆಯಾದೆ. ಆದರೆ ಎರಡು ವರ್ಷದಲ್ಲೆ ಡೈವೋರ್ಸ್ ಆಯಿತು. ಕಾರಣ ಕೇಳಬೇಡ. ಆ ಕಾರಣದಿಂದಲೇ ನಾನು ಕೆಲಸ ಬದಲಾಯಿಸಿ ಇಲ್ಲಿಗೆ ಬಂದೆ”
“ಸಾರಿ”
ನಾನು ಈ ವಾರಾಂತ್ಯದಲ್ಲಿ ರಾಚೆಸ್ಟರ್‌ಗೆ ಹೋಗುತ್ತಿದ್ದೀನಿ. ನೀನೂ ನನ್ನ ಜೊತೆ ಬಂದು ನನ್ನ ತಂದೆ ತಾಯಿಗಳನ್ನು ಭೇಟಿ ಮಾಡಬಹುದಲ್ಲ
“ಹಾಗೇ ಆಗಲಿ. ನನಗೂ ಅವರನ್ನು ನೋಡಬೇಕೆನ್ನಿಸುತ್ತಿದೆ”
ಆ ಶನಿವಾರ ಜಿಮ್ ಮತ್ತು ದರ್ಶನ್, ಕಾರಿನಲ್ಲಿ ರಾಚೆಸ್ಟರ್‌ಗೆ ಹೊರಟರು. ಮಧ್ಯಾಹ್ನ ನಾಲಕ್ಕು ಗಂಟೆಗೆ, ರಾಚೆಸ್ಟರ್‌ನ ಹೊರವಲಯದಲ್ಲಿದ್ದ (ಸಬರ್ಬಿನಲ್ಲಿದ್ದ) ಮೆಲ್ ಜಾನ್ಸನ್ ಅವರ ಮನೆ ತಲುಪಿದರು. ಅದೊಂದು ರ‍್ಯಾಂಚ್ ಹೌಸ್. ರ‍್ಯಾಂಚ್ ಹೌಸ್‌ಗಳು ವಿಶಾಲವಾಗಿರುವ ಒಂದೇ ಅಂತಸ್ತಿನ ಮನೆಗಳು. ಸುತ್ತಲೂ ಒಂದು ಎಕರೆಯಷ್ಟು ಹಚ್ಚ ಹಸಿರಾದ ಲಾನ್ ಮತ್ತು ಲ್ಯಾಂಡ್ ಸ್ಕೇಪ್ ಮಾಡಿ ಬೆಳೆಸಿದ್ದ ಹೂದೋಟ. ಕಾರಿನ ಶಬ್ದ ಡ್ರೈವ್ ವೇ ನಲ್ಲಿ ಕೇಳಿಸಿದ ಕೂಡಲೆ, ಜಾನೆಟ್ ಜಾನ್ಸನ್ ಮನೆಯ ಮುಂಬಾಗಿಲು ತೆಗೆದು ಹೊರಗೆ ಬಂದರು. ತಾಯಿ ಮಗನನ್ನು ಅಪ್ಪಿಕೊಂಡು, “ಜಿಮ್. ನೀನು ಹೇಗಿದ್ದೀಯ? ನೀನು ಬಂದು ಆಗಲೆ ಮೂರು ತಿಂಗಳಾಯಿತು” ಎಂದರು.
“ನಾನು ಚೆನ್ನಾಗಿದೀನಮ್ಮ. ಹೊಸ ಕೆಲಸ ನೋಡು. ಅದಕ್ಕೇ ಪುರುಸೊತ್ತಿರಲಿಲ್ಲ ಅಷ್ಟೇ. ಅಂದಹಾಗೇ ಇವನು ದರ್ಶನ್. ನನ್ನ ಸಹೊದ್ಯೋಗಿ”
“ನೀನು ಬಂದಿದ್ದು ಬಹಳ ಸಂತೋಷ ದರ್ಶನ್. ನಿನ್ನ ವಿಷಯ ಜಿಮ್ ಫೋನ್‌ನಲ್ಲಿ ಮಾತನಾಡುವಾಗ ಹೇಳುತ್ತಲೇ ಇರ್ತಾನೆ” ಎಂದು ಕೈ ಕುಲುಕಿದರು.
“ಡ್ಯಾಡಿ ಎಲ್ಲಿ?” ಜಿಮ್ ಕೇಳಿದ.
“ಬಾತ್ ರೂಮಿನಲ್ಲಿ ಒಂದು ಫಾಸೆಟ್ ಲೀಕ್‌ನ ಸರಿಮಾಡ್ತಿದಾರೆ. ನೀವು ಒಳಗೆ ಬನ್ನಿ”
ಮೂವರೂ ಒಂದು ದೊಡ್ಡ ಹಜಾರದಲ್ಲಿ ಮಾತನಾಡುತ್ತ ಕುಳಿತರು. ಮೆಲ್ ಜಾನ್ಸನ್ ಬಟ್ಟೆ ಬದಲಿಸಿ ಹಜಾರಕ್ಕೆ ಬಂದರು. ಜಿಮ್ ಅವರಿಗೆ ದರ್ಶನ್‌ನ ಪರಿಚಯ ಮಾಡಿಸಿದ.ಜಾನೆಟ್ ಸ್ಟ್ರಾಬೆರಿ ಐಸ್‌ಕ್ರೀಮ್, ಬಿಸ್ಕತ್, ಆಪಲ್ ಪೈ, ಮತ್ತು ಟೀ ತಂದಿಟ್ಟರು. ಟೀ ಕುಡಿಯುತ್ತ ಜಾನೆಟ್ ದರ್ಶನ್‌ನ, ಎಲ್ಲಾ ಅಮೆರಿಕನ್ನರೂ ವಿದೇಶೀಯರಿಗೆ ಕೇಳುವಂತೆ ಕೆಲವು ಪ್ರಶ್ನೆಗಳನ್ನು ಕೇಳಿದರು.
“ನೀನು ಇಂಡಿಯಾ ದೇಶದಲ್ಲಿ ಹೈ ಟೆಕ್ ಸಿಟಿ ಎಂದು ಹೆಸರುವಾಸಿಯಾಗಿರುವ ಬೆಂಗಳೂರಿಂದ ಬಂದವನೆಂದು ತಿಳಿಯಿತು. ಇಲ್ಲಿ ನಿಮ್ಮ ದೇಶದಿಂದ ಬಂದಿರುವ ಅನೇಕ ಡಾಕ್ಟರುಗಳು ನಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿದ್ದಾರೆ. ತುಂಬಾ ನಿಸ್ಪೃಹತೆಯಿಂದ ಕೆಲಸ ಮಾಡುತ್ತಾರೆ. ಬಹಳ ಒಳ್ಳೆ ಜನ. ನಿನಗೆ ಈ ದೇಶ ಏನನ್ನಿಸುತ್ತೆ ದರ್ಶನ್? ಚೆನ್ನಾಗಿ ಹೊಂದಿಕೊಂಡಿರುವಂತೆ ಕಾಣುತ್ತೀಯ”
“ಅಮೆರಿಕನ್ನರೂ ಬಹಳ ಒಳ್ಳೆ ಜನ. ಮೊದಮೊದಲು ಇಲ್ಲಿನ ಸಂಸ್ಕೃತಿ, ಮಾತನಾಡುವ ಅಕ್ಸೆಂಟ್, ಔಪಚಾರಿಕತೆ, ರೂಢಿಯಾಗುವತನಕ ಸ್ವಲ್ಪ ಕಷ್ಟವಾಯಿತು. ಅದಲ್ಲದೆ ಹೊರದೇಶಕ್ಕೆ ಬಂದಿದ್ದು ಇದೇ ಮೊದಲು ತಾನೆ. ಆದ್ದರಿಂದ ಸಾಂಸ್ಕೃತಿಕ ಆಘಾತವನ್ನು (ಕಲ್ಚರ್ ಷಾಕ್) ಅನುಭವಿಸಿದೆ. ಆರೇಳು ತಿಂಗಳಿನಲ್ಲಿ ಕ್ರಮೇಣ ಎಲ್ಲಾ ಸರಿಹೋಯಿತು. ಆದರೂ ಆಗಾಗ್ಗೆ ನನ್ನ ತಂದೆ ತಾಯಿಗಳ ನೆನಪು ಕಾಡುತ್ತಿರುತ್ತದೆ”
“ನೀನು ಇಲ್ಲೇ ಇರಲು ಇಷ್ಟಪಡೋದಿಲ್ಲವೇ?”
“ಇಷ್ಟವೇನೋ ಇದೆ. ಆದರೆ ನಾನು ತಂದೆ ತಾಯಿಗಳ ಒಬ್ಬನೇ ಮಗ. ಅವರಿಗೆ ನನ್ನನ್ನು ಬಿಟ್ಟಿರುವುದು ಬಹಳ ಕಷ್ಟ. ಮುಂದಿನ ವರ್ಷ ಬೆಂಗಳೂರಿನ ಶಾಖೆಗೆ ನನ್ನನ್ನು ವರ್ಗಾಯಿಸುತ್ತಾರಂತೆ. ನನ್ನ ಕಂಪನಿಯ ಇಲ್ಲಿನ ಜವಾಬ್ದಾರಿಯನ್ನೆಲ್ಲ ಜಿಮ್‌ಗೆ ಕೊಟ್ಟು ನಾನು ಹೋಗಲು ನಿಶ್ಚಯಿಸಿದ್ದೇನೆ”
“ಅದೂ ನಿಜ. ನಮ್ಮ ಮಕ್ಕಳು ನಮ್ಮ ಹತ್ತಿರವಿದ್ದರೇನೆ ಚೆನ್ನ. ಆದರೂ ಬಹಳ ಜನ ಇಂಡಿಯನ್ಸ್ ಇಲ್ಲಿಯೇ ನೆಲಸಿದ್ದಾರೆ. ನನಗೂ ಕೆಲವು ಕುಟುಂಬಗಳ ಪರಿಚಯವಿದೆ. ಅವರಿಂದ ಕೆಲವು ಇಂಡಿಯಾದ ತಿಂಡಿಗಳನ್ನು ಮಾಡೋದನ್ನೂ ಕಲಿತಿದ್ದೇನೆ. ನಿನಗೆ ಚಿಕನ್ ಕರ್ರಿ ಮಾಡಿ ತೋರಿಸಲ?”
“ಥ್ಯಾಂಕ್ ಯು. ನನಗೆ ಅಮೆರಿಕನ್ ಫುಡ್ ಸಹ ಅಭ್ಯಾಸವಾಗಿದೆ”
“ನಿನ್ನ ತಂದೆ ತಾಯಿ ....?”
“ನನ್ನ ತಂದೆ ಅಮಿತ್ ಕುಮಾರ್ ಅಂತ. ನಿಯೋಟೆಕ್ ಕಂಪನಿಯ ಏಶ್ಯನ್ ಡಿವಿಶನ್‌ನ ಸಿ.ಇ.ಒ ಆಗಿದ್ದಾರೆ. ಅವರೂ ಕೂಡ ಬಹಳ ಹಿಂದೆ ಹನ್ನೆರಡು ವರ್ಷ ಇಲ್ಲಿಯೇ ನ್ಯೂಯಾರ್ಕ್‌ನಲ್ಲಿ ಸ್ಥಾಪಿತವಾಗಿದ್ದ ಆಗಿನ ಮೂಲ ಶಾಖೆಯಲ್ಲಿ ಕೆಲಸ ಮಾಡಿದ್ದರಂತೆ. ಆಮೇಲೆ ಅವರೇ ಬೆಂಗಳೂರಿನ ಶಾಖೆಯನ್ನು ಅಭಿವೃದ್ಧಿಗೊಳಿಸಿ ಇಡೀ ಏಶ್ಯಾದ ಡಿವಿಶನ್ ಹೆಡ್ ಆಗಿದ್ದಾರೆ. ಇನ್ನೇನು ನಿವೃತ್ತಿಯಾಗುವುದರಲ್ಲಿದ್ದಾರೆ. ನನ್ನ ತಾಯಿ ರೋಹಿಣಿ ಅಂತ. ಅವರೂ ಕೂಡ ನಿಯೋಟೆಕ್‌ನ ಬೆಂಗಳೂರು ಶಾಖೆಯಲ್ಲಿ ಹೆಚ್.ಆರ್.ಓ ಆಗಿದ್ದಾರೆ”
ಜಾನೆಟ್ ಮತ್ತು ಮೆಲ್ ರವರ ಮುಖಗಳಲ್ಲಿ ಅಮಿತ್ ಕುಮಾರ್ ಹೆಸರು ಕೇಳಿದ ಕೂಡಲೆ ಒಂದು ಕಪ್ಪು ಛಾಯೆ ಸುಳಿದು ಇಬ್ಬರೂ ಗಂಭೀರವಾಗಿದ್ದನ್ನು ಜಿಮ್ ಮತ್ತು ದರ್ಶನ್ ಗಮನಿಸದಿರಲಿಲ್ಲ.
“ದಯವಿಟ್ಟು ಕ್ಷಮಿಸಿ. ಬಾತ್‌ರೂಮ್ ಲೀಕ್ ಸರಿಮಾಡಲು ಆಗಲಿಲ್ಲ. ಹೊಸ ಫಾಸೆಟ್‌ನೇ ತರಬೇಕಾಗಿದೆ. ಹಾಗೇನೆ ಗ್ಯಾಸ್ ಸ್ಟೇಶನ್‌ನಲ್ಲಿ ಕಾರಿನ ಸರ್ವಿಸ್ ಮಾಡಿಸಿಕೊಂಡು ಡಿನ್ನರ್ ಹೊತ್ತಿಗೆ ಬರುತ್ತೀನಿ” ಎಂದು ಮೆಲ್ ಎದ್ದು ಹೊರಟರು.
ಜಿಮ್ ಕೇಳಿದ. “ಅಮ್ಮ ದರ್ಶನ್ ತನ್ನ ತಂದೆ ತಾಯಿಗಳ ವಿಷಯ ಹೇಳಿದಕೂಡಲೇ ನಿನ್ನ ಮತ್ತು ಡ್ಯಾಡಿಯ ಮುಖ ಕಪ್ಪಿಟ್ಟಿತು. ಅಪ್ಪ ಏನೋ ನೆವ ಹೇಳಿ ಎದ್ದು ಹೋದರು. ದರ್ಶನ್ ಹೇಳಿದ್ದರಲ್ಲಿ ನಿಮಗೆ ಬೇಸರ ಮಾಡುವಂಥದ್ದು ಏನಿತ್ತಮ್ಮ?”
“ಹಾಗೇನಿಲ್ಲ. ಅವರಿಗೆ ಬೇಕಾದ ಸಾಮಾನುಗಳನ್ನು ತರಲು ಹೋಗಿದ್ದಾರೆ. ಅದಲ್ಲದೆ ಕಾರ್ ಬ್ಯಾಟರಿ ಬೇರೆ ವೀಕ್ ಆಗಿತ್ತು. ಅದಕ್ಕೇ ಹೋದರು. ವಾರಾಂತ್ಯ ಬಿಟ್ಟರೆ ಅವರಿಗೆ ಬೇರೆ ಯಾವಾಗ ಪುರುಸೊತ್ತಿದೆ ಹೇಳು?”
ಜಿಮ್ ಸುಮ್ಮನಾದ. ಅವತ್ತು ಸಾಯಂಕಾಲ ಡಿನ್ನರ್ ಭರ್ಜರಿಯಾಗಿತ್ತು. ಜಿಮ್‌ಗೆ ಇಷ್ಟವಾದ ಒಂದು ಫಿಶ್ ಡಿಶ್ ಮತ್ತು ದರ್ಶನ್‌ಗೋಸ್ಕರ ಚಿಕನ್ ಕರ್ರಿ ಮತ್ತು ಬಾಯಿಲ್ಡ್ ರೈಸ್ ಮಾಡಿದ್ದರು. ಜಾನೆಟ್ ಹೇಳಿದರು
“ಇಲ್ಲೊಂದು ಇಂಡಿಯನ್ ಫ್ಯಾಮಿಲಿ ಕೋಮಲ್ ಸಿಂಗ್ ಮತ್ತು ಅವರ ಪತ್ನಿ ಅಮೃತ ನನಗೆ ಪರಿಚಯ. ಅಮೃತ ನನಗೆ ಚಿಕನ್ ಕರ್ರಿ ಮಾಡೋದು ಹೇಳಿಕೊಟ್ಟರು. ಮೆಲ್‌ಗೂ ಇದು ಇಷ್ಟ. ಹೇಗಿದೆ ಹೇಳು?”
“ತುಂಬಾ ಚೆನ್ನಾಗಿದೆ. ನನಗೋಸ್ಕರ ತೊಂದರೆ ತೆಗೆದುಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್”
“ಚಿಕನ್ ಕರ್ರಿ ಎಂದರೆ ನನಗೂ ಬಹಳ ಇಷ್ಟ.” ಮೆಲ್ ದನಿಗೂಡಿಸಿದರು.
ರಾತ್ರಿ ದರ್ಶನ್‌ನ ಒಂದು ಗೆಸ್ಟ್ ರೂಮಿನಲ್ಲಿ ಮಲಗಲು ಅಣಿ ಮಾಡಿಕೊಟ್ಟು ಜಿಮ್ ತನ್ನ ರೂಮಿಗೆ ಹೋದ. ದರ್ಶನ್‌ಗೆ ನಿದ್ದೆ ಬರಲಿಲ್ಲ. “ನನ್ನ ಮನೆ ವಿಷಯ ಹೇಳಿದ ಕೂಡಲೆ ಮೆಲ್ ಮತ್ತು ಜಾನೆಟ್ ಯಾಕೆ ಹಾಗೆ ಪ್ರತಿಕ್ರಿಯಿಸಿದರು?” ಎಂದು ಬಹಳ ಚಿಂತಿಸಿದ. ಅಪ್ಪ ಇಲ್ಲಿದ್ದಾಗ ಅವರಿಗೇನಾದರು ಅಪಚಾರ ಮಾಡಿದ್ದರೇ? ಅವರಿದ್ದಿದ್ದು ನ್ಯೂಯಾರ್ಕಿನಲ್ಲಿ. ಇವರಿದ್ದಿದ್ದು ರಾಚೆಸ್ಟರ್‌ನಲ್ಲಿ. ಬಹುಶಃ ಅವರೂ ನ್ಯೂಯರ್ಕಿನಲ್ಲಿದ್ದಿರಬಹುದಲ್ಲವೇ? ಜಿಮ್ ಅವರ ವಿಷಯ ಜಾಸ್ತಿ ಏನೂ ಹೇಳಿರಲಿಲ್ಲ. ನಾನು ಕೇಳಿರಲೂ ಇಲ್ಲ. ಹೊರಗಡೆ ಹಜಾರದಲ್ಲಿ ಜಿಮ್ ತಾಯಿ ತಂದೆಗಳ ಜೊತೆ ಬಹಳ ಹೊತ್ತು ಮಾತನಾಡುತ್ತಿದ್ದ. ಅವರ ಮಾತು ಅಷ್ಟು ಸ್ಪಷ್ಟವಾಗಿ ಕೇಳಲಿಲ್ಲ. ಜಾನೆಟ್ ಅಳುತ್ತಿದ್ದಂತೆ ತೋರಿತು. ಹೊಂಚಿ ಕೇಳೋದು ಸಭ್ಯವಲ್ಲವೆಂದು ಬಾಗಿಲನ್ನು ಮುಚ್ಚಿದ. ಅದು ಅವರ ಸ್ವಂತ ವಿಷಯ ಏನೋ ಇರಬಹುದು ಎಂದುಕೊಂಡು ಸುಮ್ಮನಾದ. ಜಿಮ್ ಒಬ್ಬ ಚೈನೀಸ್ ಹುಡುಗಿ ಜೊತೆ ಒಡನಾಡುತ್ತಿದ್ದುದು ದರ್ಶನ್‌ಗೆ ಗೊತ್ತಿತ್ತು. ಆ ವಿಷಯವಾಗಿಯೇ ಏನೋ ವಿವಾದವಿರಬಹುದೆಂದು ಊಹಿಸಿದ.
ಭಾನುವಾರ ಬೆಳಿಗ್ಗೆ ಎದ್ದು ಬ್ರೆಕ್‌ಫಾಸ್ಟ್ ಮುಗಿಸಿದರು. ಫ್ರೆಂಚ್ ಟೋಸ್ಟ್, ಸ್ಕ್ರ್ಯಾಂಬಲ್ಡ್ ಎಗ್ಸ್, ಬೇಕನ್, ಆರಂಜ್ ಜ್ಯೂಸ್, ಕಾಫಿ ಮತ್ತು ದರ್ಶನ್‌ಗೋಸ್ಕರವೆಂದು ಉಪ್ಪುಮಾ ತಯಾರಾಗಿತ್ತು.
“ನಿನಗೆ ಕಾಫಿ ಇಷ್ಟವೆಂದು ಜಿಮ್ ಹೇಳಿದ. ಕಾಫಿ ಸರಿಯಾಗಿಲ್ಲದಿದ್ದರೆ ಕ್ಷಮಿಸು” ಜಾನೆಟ್ ಹೇಳಿದರು.
“ಎಲ್ಲಾ ಚೆನ್ನಾಗಿದೆ. ಆದರೆ ನನಗೋಸ್ಕರ ಯಾಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತೀರಿ”
“ನನ್ನ ಅಡಿಗೆ ಕುಶಲತೆಯನ್ನು ಪರೀಕ್ಷಿಸಿಕೊಳ್ಳಲು ಇದೊಂದು ಅವಕಾಶ. ನಿನ್ನನ್ನು ಗಿನಿ ಪಿಗ್ ಮಾಡಿದೆ.” ಜಾನೆಟ್ ನಕ್ಕರು. ಆದರೂ ಹಿಂದಿನ ದಿನದ ಉತ್ಸಾಹ ಕಮ್ಮಿಯಾಗಿದ್ದಂತೆ ತೋರಿತು. ಮೆಲ್ ಎದ್ದು ಬಾತ್ ರೂಂ ಫಾಸೆಟ್ ರಿಪೇರಿಗೆ ಹೊರಟರು. ಜಿಮ್ ಮತ್ತು ಜಾನೆಟ್ ದರ್ಶನ್ ಜೊತೆ ಹರಟುತ್ತಿದ್ದರು.
“ನೀವು ನ್ಯೂಯಾರ್ಕಿನಲ್ಲಿ ಯಾವಾಗಲಾದರು ವಾಸವಾಗಿದ್ದಿರ?” ಜಿಮ್ ಕೇಳಿದ. ಜಾನೆಟ್’ಗೆ ಚಳುಕು ಹೊಡೆದಂತಾಯಿತು. ಸಾವರಿಸಿಕೊಂಡು ಹೇಳಿದರು, “ಹೂಂ. ನನ್ನ ನರ್ಸಿಂಗ್ ಟ್ರೈನಿಂಗ್ ಅಲ್ಲೇ ಆಗಿದ್ದು. ಐದಾರುವರ್ಷ ಅಲ್ಲೇ ಕೆಲಸ ಮಾಡುತ್ತಿದ್ದೆ. ಮೆಲ್‌ನ ಮದುವೆಯಾದ ಮೇಲೆ ರಾಚೆಸ್ಟರ್’ಗೆ ಬಂದೆವು. ರಾಚೆಸ್ಟರ್ ನಮ್ಮಿಬ್ಬರ ಹುಟ್ಟಿದೂರು” ಮೆಲ್ ಫಾಸೆಟ್ ರಿಪೇರಿಯಾದ ಮೇಲೆ ಒಂದು ಟ್ರಾಕ್ಟರ‍್ನಲ್ಲಿ ಕುಳಿತು, ಲಾನ್ ಕತ್ತರಿಸಲು ಶುರು ಮಾಡಿದರು. ಟ್ರಾಕ್ಟರ್ ಶಬ್ದ ಕೇಳಿ ಜಿಮ್ ಮತ್ತು ದರ್ಶನ್ ಹೊರಗೆ ಬಂದರು.
“ಮೆಲ್, ಟ್ರಾಕ್ಟರ್ ನನಗೆ ಕೊಡಿ. ನಾನು ಲಾನ್ ಕತ್ತರಿಸುತ್ತೀನಿ.” ಎಂದು ದರ್ಶನ್ ಕೇಳಿದ.
“ಬಿ ಮೈ ಗೆಸ್ಟ್. ಐ ಯಾಂ ಟೈರ‍್ಡ್ ಆಫ್ ಕಟ್ಟಿಂಗ್ ದಿ ಲಾನ್ ಎವ್ವೆರಿ ವೀಕ್. ನೋ ಪನ್ ಇಂಟೆಂಡೆಡ್ ಬಿಕಾಸ್ ಯು ಆರ್ ಮೈ ಗೆಸ್ಟ್ ಇಂಡೀಡ್. ಐ ವಿಲ್ ವರ್ಕ್ ಆನ್ ದಿ ಶ್ರಬ್ಸ್” ಎಂದರು.
ಮಧ್ಯಾಹ್ನ ಲಂಚ್ ಮುಗಿಸಿ ದರ್ಶನ್ ಮತ್ತು ಜಿಮ್ ನ್ಯೂಯಾರ್ಕಿಗೆ ಹೊರಟರು. ಜಿಮ್‌ನ ಅಪ್ಪ ಅಮ್ಮ ಅವನನ್ನು ಆಲಿಂಗಿಸಿ, ದರ್ಶನ್‌ನ ಕೈ ಕುಲುಕಿ, “ನೀನು ಬಂದಿದ್ದು ನಮಗೆ ಬಹಳ ಸಂತೋಷವಾಯಿತು. ಪ್ಲೀಸ್ ಕಂ ಅಗೈನ್” ಎಂದು ಹೇಳಿ ಬೀಳ್ಕೊಟ್ಟರು.
ಜಿಮ್ ಕಾರ್ ಡ್ರೈವ್ ಮಾಡುತ್ತಿದ್ದ. ಗಂಭೀರವಾಗಿ ಯಾವುದೋ ಯೋಚನೆಯಲ್ಲಿದ್ದಂತಿತ್ತು.
“ಜಿಮ್, ನೀನು ಯಾಕೆ ತುಂಬಾ ಬೇಸರವಾಗಿರುವಂತೆ ಕಾಣುತ್ತಿದ್ದೀಯ, ಕೇಳ ಬಹುದ?”
“ಏನೂ ಇಲ್ಲ” ಎಂದು ಜಿಮ್ ಜಾರಿಕೊಂಡ.
“ನೀನು ರಾತ್ರಿ ಸರಿಯಾಗಿ ನಿದ್ದೆ ಮಾಡಿದಂತಿಲ್ಲ. ನೆನ್ನೆ ರಾತ್ರಿ ನೀವುಗಳೆಲ್ಲ ಏನೋ ಚರ್ಚೆ ಮಾಡುತ್ತಿದ್ದಂತಿತ್ತು. ನನಗೆ ಮಧ್ಯ ರಾತ್ರಿ ಎಚ್ಚರವಾದಾಗ ನೀವು ಇನ್ನೂ ಮಲಗಿರಲಿಲ್ಲ”
“ಹೌದು ಏನೋ ಗೊಂದಲದಲ್ಲಿದ್ದೆವು.” “ನಿನ್ನ ಮಿತ್ರನಾದ ನನ್ನಲ್ಲಿ ಹಂಚಿಕೊಳ್ಳಬಹುದಲ್ಲ”
ಜಿಮ್ ಕೆಲವು ನಿಮಿಷಗಳು ಸುಮ್ಮನಿದ್ದು ಕೊನೆಗೆ ಅವನೇ ಮಾತು ತೆಗೆದ. “ಇದು ನಿನಗೂ ಸಂಬಂಧಿಸಿದ ವಿಷಯ. ಹೇಗೆ ಹೇಳುವುದೋ ಗೊತ್ತಾಗುತ್ತಿಲ್ಲ”
“ನೇರವಾಗಿ ಹೇಳಿಬಿಡುವುದೇ ಉತ್ತಮ. ಏನಿದ್ದರೂ ನಾನು ಎದುರಿಸಲು ಸಿದ್ಧ. ನಿಮ್ಮ ಮನೆ ವಿಷಯಕ್ಕೂ ನನಗೂ ಏನೋ ಸಂಬಂಧವಿರಬಹುದೆಂದು ನನಗೂ ಗೊಂದಲವಾಗಿದೆ. ಏಕೆಂದರೆ ನಾನು ನನ್ನ ತಂದೆ ತಾಯಿಗಳ ವಿಷಯ ಹೇಳಿದಾಗ ನಿನ್ನ ಅಪ್ಪ ಮತ್ತು ಅಮ್ಮ ಪ್ರತಿಕ್ರಿಯಿಸಿದ ಬಗೆಯನ್ನು ನೀನೇ ನೋಡಿದೆಯಲ್ಲ. ಹೀಗೆ ನೀನು ಅರ್ಧಂಬರ್ಧ ಹೇಳಿ ಒಗಟಿನಂತೆ ಮಾತನಾಡಿದರೆ ಹೇಗೆ ಜಿಮ್?”
“ಆಗಲಿ ಹೇಳುತ್ತೀನಿ ಕೇಳು. ನಿನಗೆ ಆಶ್ಚರ್ಯ ಮತ್ತು ಷಾಕ್ ಆಗಬಹುದು. ನನಗಾದ ಷಾಕ್‌ನಿಂದ ನಾನಿನ್ನೂ ಚೇತರಿಸಿಕೊಂಡಿಲ್ಲ.”
“ಅದೇನೇ ಇರಲಿ ಹೇಳು, ಪರವಾಗಿಲ್ಲ.”
“ನೀನು ವಯಸ್ಸಿನಲ್ಲಿ ಮತ್ತು ನಡತೆಯಲ್ಲಿ ನನ್ನ ತಮ್ಮನಂತಿದ್ದೀಯ. ಆದರೆ ನೀನು ನಿಜವಾಗಲೂ ನನ್ನ ತಮ್ಮನೆಂದರೆ ನಂಬುತ್ತೀಯ?”
“ಆ! ನೀನು ಏನು ಹೇಳುತ್ತಿದ್ದೀಯ? ಇದರ ತಲೆಬುಡವೆ ಅರ್ಥವಾಗುತ್ತಿಲ್ಲ. ಅದೇನೆಂದು ಸರಿಯಾಗಿ ಬಿಡಿಸಿ ಹೇಳು. ಅದು ಹೇಗೆ ಸಾಧ್ಯ?”
ನಿನ್ನೆ ರಾತ್ರಿ ಚರ್ಚಿಸುತ್ತಿದ್ದುದು ಇದೇ ವಿಷಯವನ್ನು. ನಾನು ಹುಟ್ಟಿದಾಗಲಿಂದ ನಿನ್ನೆ ತನಕ ಮುಚ್ಚಿಟ್ಟಿದ್ದ ಸತ್ಯವೊಂದನ್ನು ನನಗೆ ತಿಳಿಸಲಾಯಿತು. ನೀನು ನಿನ್ನ ತಂದೆ ತಾಯಿಗಳ ವಿಷಯ ಹೇಳಿದಾಗ ನನ್ನ ಅಪ್ಪ ಅಮ್ಮನಿಗೆ ಷಾಕ್ ಆಗಿದ್ದು ನಿಜ. ನಿನ್ನೆ ರಾತ್ರಿ ನಾನು ಅದರ ಬಗ್ಗೆಯೇ ಕೇಳಿದೆ. ನೀವು ನನ್ನಿಂದ ಏನನ್ನೋ ಮುಚ್ಚಿಡುತ್ತಿದ್ದೀರ. ಸತ್ಯ ಹೇಳಿ ಎಂದು ಆಗ್ರಹ ಮಾಡಿದೆ. ಕೊನೆಗೆ ನನ್ನ ತಾಯಿ ಹೀಗೆ ಹೇಳಿದರು.....
ಜಿಮ್, ಮೈ ಡಿಯರ್, ಈಗ ನಾನು ಹೇಳುವ ಒಂದು ಸತ್ಯ ನಿನಗೆ ಮತ್ತು ದರ್ಶನ್‌ಗೆ ಆಘಾತಮಾಡುವಂಥಾದ್ದೇ. ಅದು ನನಗೆ ಗೊತ್ತು. ದರ್ಶನ್ ಅವನ ತಂದೆ ತಾಯಿಗಳ ವಿಷಯ ಹೇಳಿದ ಕೂಡಲೆ, ಜೀವನದಲ್ಲಿ ಒಂದಲ್ಲ ಒಂದು ದಿನ ನಾವು ಎದುರಿಸಬೇಕಾಗಬಹುದು ಎಂದುಕೊಂಡಿದ್ದ ಸಂದರ್ಭ, ನಾವು ಎಷ್ಟೇ ಅಸಾಧ್ಯ ಎಂದು ಭಾವಿಸಿದ್ದರೂ ಅಕಸ್ಮಾತ್ತಾಗಿ ಈಗ ಬಂದಿದೆ ಎನ್ನಿಸಿತು. ನಮ್ಮ ಭಾವನೆಗಳನ್ನು ಮುಚ್ಚಿಡಲು ನಮಗೆ ಸಾಧ್ಯವಾಗಲಿಲ್ಲ. ಅದು ನಿನಗೆ ಕಾಣಿಸಿಕೊಂಡು ನೀನು ನನ್ನನ್ನು ಪ್ರಶ್ನಿಸುತ್ತಿದ್ದೀಯ. ನಾನು ಹಿಂದೆ ಅನಿವಾರ್ಯವಾಗಿ ನಡೆದ ಘಟನೆಗಳನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಎಂದಾದರೊಂದು ದಿನ ಹೊರಗೆ ಬರಬೇಕಾದದ್ದೆ. ಪ್ರಪಂಚ ಇಷ್ಟು ಕಿರಿದಾಗಿ ಅಸಾಧ್ಯಗಳನ್ನು ಹತ್ತಿರ ತಂದು ನಿಲ್ಲಿಸುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ಎಣಿಕೆ ತಪ್ಪಾಗಿ ಆ ಸಂದರ್ಭ ಈಗ ನಮ್ಮ ಮುಂದಿದೆ ನೋಡು.
ಸುಮಾರು ಮುವತ್ತು ವರ್ಷಗಳ ಹಿಂದೆ ನಾನು ನ್ಯೂಯಾರ್ಕಿನ ಕಾರ್ನೆಲ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ಆಗಿನ್ನೂ ನನಗೆ ಇಪ್ಪತ್ತನಾಲಕ್ಕು ವರ್ಷ. ನಮ್ಮ ಆಸ್ಪತ್ರೆಗೆ ಒಂದು ರಾತ್ರಿ, ನಿಯೋಟೆಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಅಮಿತ್ ಕುಮಾರ್ ಎಂಬ ವ್ಯಕ್ತಿ ಅಡ್ಮಿಟ್ ಆದ. ಅವನಿಗೆ ಕಾರ್ ಅಕ್ಸಿಡೆಂಟ್ ಆಗಿ ತಲೆಗೆ ಪೆಟ್ಟು ಬಿದ್ದು, ಒಂದು ಕಾಲು ಮುರಿದಿತ್ತು. ಅವನಿಗೆ ಪ್ರಜ್ಞೆ ಇರಲಿಲ್ಲ. ನಾನು ಅವನ ಶುಶ್ರೂಷೆ ಮಾಡಿದೆ. ಪ್ರಾಣಾಪಾಯದಲ್ಲಿದ್ದ ಅವನಿಗೆ ನ್ಯೂರೋಸರ್ಜೆರಿ ಆಯಿತು. ಮೆದುಳಿನಲ್ಲಿದ್ದ ಹೆಪ್ಪುಗಟ್ಟಿದ ರಕ್ತವನ್ನು ತೆಗೆಯಲಾಯಿತು. ಅವನು ಹೇಗೋ ಉಳಿದುಕೊಂಡ. ಸಂಪೂರ್ಣವಾಗಿ ಗುಣವಾಗಲು ಮೂರು ತಿಂಗಳಾಯಿತು. ನಮ್ಮಿಬ್ಬರಿಗೂ ಈ ಸಂಪರ್ಕದಿಂದಾಗಿ ಪರಿಚಯವಾಗಿ ಕ್ರಮೇಣ ಪ್ರೇಮಕ್ಕೆ ತಿರುಗಿತು. ಅಮಿತ್ ಬಹಳ ಸಂಕೋಚ ಸ್ವಭಾವದ ವ್ಯಕ್ತಿ. ಆದರೆ ನನ್ನಲ್ಲಿ ಬಹಳ ಪ್ರೀತಿಯಿತ್ತು. ನನ್ನನ್ನು ಮದುವೆಯಾಗಬೇಕೆಂದು ಇಷ್ಟಪಟ್ಟ. ಆದರೆ ಅವನು ಸಧ್ಯದಲ್ಲೇ ಬೆಂಗಳೂರಿಗೆ ಹೋಗಿ ಅಲ್ಲಿಯ ನಿಯೋಟೆಕ್ ಶಾಖೆಯಲ್ಲಿ ಕೆಲಸ ಮಾಡುವ ಗುರಿಯನ್ನಿಟ್ಟುಕೊಂಡಿದ್ದ. ನನಗೆ ಅದು ಅಷ್ಟು ಇಷ್ಟವಿರಲಿಲ್ಲ. ಆದ್ದರಿಂದ ಅವನಿಗೆ ಅನೇಕ ಗೊಂದಲಗಳಿದ್ದು ಯಾವ ನಿರ್ಧಾರಕ್ಕೂ ಬರಲಾಗದೆ ಒದ್ದಾಡುತ್ತಿದ್ದ. ಅವನ ಮನೆಯವರು ತುಂಬಾ ಸಂಪ್ರದಾಯಸ್ಥರು. ನಮ್ಮ ಮದುವೆಗೆ ಸುತರಾಂ ಒಪ್ಪುತ್ತಿರಲಿಲ್ಲ. ಅವರ ತಾಯಿ, ’ನೀನು ವಿದೇಶಿ ಹುಡುಗಿಯನ್ನು ಮದುವೆಯಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದರಂತೆ. ಅವನು ಈ ಗೊಂದಲದಿಂದ ಹೊರಗೆ ಬರಲಿ ಎಂದು ನಾನು ಕಾಯುತ್ತಿದ್ದೆ. ನಮ್ಮಿಬ್ಬರಲ್ಲಿ ನಿಕಟವಾದ ಸಂಬಂಧ ಬೆಳೆದಿತ್ತು. ಕೊನೆಗೆ ನಾನು ನನ್ನ ನಿರ್ಧಾರ ಬದಲಿಸಿ ಹೇಳಿದೆ ’ನಾನು ನಿನ್ನ ಜೊತೆ ಬೆಂಗಳೂರಿಗೆ ಬಂದು ನೆಲಸಲು ತಯಾರಿದ್ದೇನೆ. ಆದರೆ ನಿನ್ನ ಅಪ್ಪ ಅಮ್ಮನ ಒಪ್ಪಿಗೆಯಿದ್ದರೆ ಮಾತ್ರ. ಅವರ ಇಷ್ಟಕ್ಕೆ ವಿರುದ್ಧವಾಗಿ ನಡೆದು ನಿಮ್ಮ ತಾಯಿಯ ಆತ್ಮಹತ್ಯೆಗೆ ಕಾರಣವಾಗಲು ನನಗೆ ಖಂಡಿತ ಇಷ್ಟವಿಲ್ಲ’ ಎಂದು ಹೇಳಿದೆ. ಅಮಿತ್ ಬೆಂಗಳೂರಿಗೆ ಹೋಗಲು ಇನ್ನು ಕೆಲವೇ ವಾರಗಳಿದ್ದವು. ’ನಾನು ಈಗಲೇ ಬೆಂಗಳೂರಿಗೆ ಹೋಗಿ ಅಪ್ಪ ಅಮ್ಮನನ್ನು ಖುದ್ದಾಗಿ ನೋಡಿ ನಮ್ಮ ಮದುವೆಗೆ ಒಪ್ಪಿಸುತ್ತೀನಿ ಎಂದು ಹೇಳಿ ಬೆಂಗಳೂರಿಗೆ ಹೋಗಿ ಒಂದು ವಾರದಲ್ಲಿ ವಾಪಸ್ ಬಂದ. ವಾಪಸ್ ಬಂದಮೇಲೆ ಅವನು ಇದ್ದಕ್ಕಿದ್ದಂತೆ ಮೌನಿಯಾದ. ಎಷ್ಟು ಕೇಳಿದರೂ ಏನನ್ನೂ ಹೇಳುತ್ತಿರಲಿಲ್ಲ. ಊಟ ತಿಂಡಿ ಸರಿಯಾಗಿ ಮಾಡುತ್ತಿರಲಿಲ್ಲ. ಅವನು ಎಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೋ ಎಂದು ಭಯಪಟ್ಟೆ. ಅವನ ತಾಯಿ ತಂದೆ ಒಪ್ಪಲಿಲ್ಲ ಎಂದು ನಾನು ಊಹಿಸಿದೆ. ನಾನು ಬಹಳ ಚಿಂತಿಸಿ ಒಂದು ನಿರ್ಧಾರಕ್ಕೆ ಬಂದೆ. “ಅವನ ಕುಟುಂಬಕ್ಕೆ ನಾನು ವಿಷಪ್ರಾಯವಾಗಿರುವುದು ಸರಿಯಲ್ಲ. ಅದರಿಂದ ಯಾರಿಗೂ ಸುಖವಿಲ್ಲ. ನನ್ನ ಪ್ರೇಮವನ್ನು ತ್ಯಾಗಮಾಡುವುದೇ ಉತ್ತಮ” ಎಂದು. ಒಂದು ದಿನ ನಾನೇ ಅವನಿಗೆ ಹೇಳಿದೆ. “ನೀನು ಮಾತನಾಡದಿದ್ದರೂ ಪರವಾಗಿಲ್ಲ. ನಿನಗೆ ಕೇಳಿಸುತ್ತೆಂದು ನನಗೆ ಗೊತ್ತು. ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ. ನನಗೆ ನಿನ್ನ ಪರಿಸ್ಥಿತಿ ಅರ್ಥವಾಗಿದೆ. ನನಗೆ ಅನ್ಯಾಯ ಮಾಡಿದೆ ಅಥವಾ ನಿನ್ನ ತಾಯಿಯ ಸಾವಿಗೆ ಕಾರಣನಾದೆ ಎಂಬ ಪಾಪಪ್ರಜ್ಞೆ ನಿನಗೆ ಬೇಡ. ನಾನೇ ನಿನ್ನನ್ನು ತ್ಯಜಿಸುತ್ತಿದ್ದೇನೆ. ನಾನು ಹೇಗೋ ಸುಧಾರಿಸಿಕೊಂಡು ಹೊಸ ಜೀವನವನ್ನು ರೂಪಿಸಿಕೊಳ್ಳುತ್ತೇನೆ. ನನ್ನ ಬಗ್ಗೆ ನಿನಗೆ ಆತಂಕ ಬೇಡ. ನೀನು ನಿನ್ನ ಇಚ್ಛೆಯಂತೆ ಬೆಂಗಳೂರಿಗೆ ಹೋಗಿ ನಿನ್ನ ಜೀವನವನ್ನೂ ಹೊಸದಾಗಿ ರೂಪಿಸಿಕೊ. ನನಗೆ ನಿನ್ನ ಮೇಲೆ ಕೋಪವಿಲ್ಲ. ಅನುಕಂಪವಿದೆ’ ಎಂದು ಸಮಾಧಾನ ಹೇಳಿದೆ. ಅವನು ನನ್ನ ಕೈ ಹಿಡಿದುಕೊಂಡು ನನ್ನನ್ನು ಕ್ಷಮಿಸು, ನಾನು ನಿಸ್ಸಹಾಯಕ ” ಎಂದು ಒಂದೇ ಸಮನೆ ಅತ್ತ. ನಾನು ಅವನಿಗೆ ಸಮಾಧಾನ ಮಾಡಿ ಅವನಿಂದ ದೂರವಾದೆ. ಅದಾಗಿ ಎರಡು ವಾರದಲ್ಲಿ ಅವನು ಬೆಂಗಳೂರಿಗೆ ಹೊರಟು ಹೋದ ಎಂದು ತಿಳಿಯಿತು. ಆದರೆ ಮುಂದಿನ ತಿಂಗಳೇ ನನಗೆ ತಿಳಿಯಿತು “ನಾನು ಎರಡು ತಿಂಗಳ ಗರ್ಭಿಣಿ” ಎಂದು. ನನಗೆ ಏನು ಮಾಡಲೂ ತೋಚಲಿಲ್ಲ. ಅಮಿತ್‌ನ ಕರೆದು ವಿಷಯ ತಿಳಿಸೋಣವೆಂದುಕೊಂಡೆ. ಆದರೆ ಏನು ಪ್ರಯೋಜನ ಹೇಳು?. ಅವನ ಜೀವನವನ್ನು ದುಸ್ತರ ಮಾಡಿ ನಾನೇನು ಸಾಧಿಸಿದಂತಾಗುತ್ತಿತ್ತು?. ಅವನು ನನ್ನ ಮೇಲಿನ ಪ್ರೀತಿಯಿಂದ, ನಮ್ಮ ಮಗುವಿನ ತಂದೆಯೆಂಬ ಕರ್ತವ್ಯಪ್ರಜ್ಞೆಯಿಂದ ವಾಪಸ್ ಬಂದು ನನ್ನ ಮದುವೆಯಾಗಿ ಇಲ್ಲಿಯೇ ನೆಲೆಸುತ್ತೇನೆಂದರೂ ಕೂಡ, ಅವನ ತಾಯಿ ಆತ್ಮಹತ್ಯೆ ಮಾಡಿಕೊಂಡರೇನು ಗತಿ, ಎನ್ನಿಸಿತು. ಆ ಪಾಪ ನನಗೆ ಬೇಡವೇ ಬೇಡ. ಹೇಗೋ ನಿಭಾಯಿಸಿದರಾಯಿತು ಎಂದು ಸುಮ್ಮನಾದೆ.
ಆ ಸಮಯದಲ್ಲೇ ಒಂದು ದಿನ ಮೆಲ್ ಜಾನ್ಸನ್‌ನ ಭೇಟಿಯಾಯಿತು. ಅವನು ನ್ಯೂಯಾರ್ಕಿಗೆ ಯಾವುದೋ ಕೆಲಸದಮೇಲೆ ಬಂದಿದ್ದ. ಮೆಲ್ ನನಗೆ ಹೈಸ್ಕೂಲಿನ ದಿನಗಳಿಂದ ಪರಿಚಯವಿದ್ದ ನಮ್ಮೂರಿನ ಹುಡುಗ. ನನಗಿಂತ ಎರಡು ವರ್ಷ ದೊಡ್ಡವನು. ಮೆಲ್‌ಗೆ ನನ್ನನ್ನು ಮದುವೆಯಾಗಲು ಇಷ್ಟವಿತ್ತು. ಆದರೆ ಆಗ ನನಗಿನ್ನೂ ಚಿಕ್ಕ ವಯಸ್ಸು. ನಾನು ಯಾರನ್ನೂ ಮದುವೆಯಾಗಲು ಇಷ್ಟಪಡಲಿಲ್ಲ. ನಾನು ನ್ಯೂಯಾರ್ಕಿಗೆ ನರ್ಸಿಂಗ್ ಟ್ರೈನಿಂಗ್‌ಗೆ ಬಂದು ಸೇರಿದಮೇಲೆ ಅವನ ಸಂಪರ್ಕ ತಪ್ಪಿ ಹೋಗಿತ್ತು. ಮೆಲ್‌ಗೆ ನನ್ನ ಪರಿಸ್ಥಿತಿ ವಿವರಿಸಿ ಅಬಾರ್ಶನ್‌ಗೆ ಸಹಾಯಮಾಡಲು ಕೇಳಿದೆ. ಮಹಾ ಉದಾರಿಯಾದ ಅವನು “ನನಗೆ ಇನ್ನೂ ನಿನ್ನನ್ನು ಮರೆಯಲು ಆಗಿಲ್ಲ. ಈಗಲೂ ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತಾನೆ” ಎಂದ. ಸಧ್ಯಕ್ಕೆ ನನಗೆ ಅಬಾರ್ಶನ್‌ಗೆ ಸಹಾಯಮಾಡು. ಆಮೇಲೆ ನಿಧಾನವಾಗಿ ನಮ್ಮ ಮದುವೆ ವಿಷಯ ಯೋಚಿಸೋಣ. ಸ್ವಲ್ಪ ನನಗೆ ಕಾಲಾವಕಾಶಕೊಡು’ ಎಂದೆ. ’ ನೀನು ಎಷ್ಟು ಕಾಲ ಬೇಕಾದರೂ ತೆಗೆದುಕೋ. ಆದರೆ ನಾನು ಅಬಾರ್ಶನ್‌ಗೆ ಒಪ್ಪೋದಿಲ್ಲ. ನಾನು ಕ್ಯಾಥೊಲಿಕ್. ಅಬಾರ್ಶನ್ ನನ್ನ ಧರ್ಮಕ್ಕೆ ವಿರುದ್ಧ. ಇದು ಕಾನೂನು ಬಾಹಿರ ಕೂಡ. ಅದು ನನ್ನ ಮಗುವಲ್ಲದಿದ್ದರೂ ಪರವಾಗಿಲ್ಲ. ನಾವು ಬೇಗಲೆ ಮದುವೆಯಾಗೋಣ. ಆ ಮಗುವಿಗೆ ನಾನೇ ತಂದೆಯಾಗ್ತೀನಿ ಅಂದ. ನಿನಗಿಷ್ಟವಿಲ್ಲದಿದ್ದರೆ ಮಗು ಹುಟ್ಟಿದ ಮೇಲೆ ನಾವು ಮದುವೆಯಾಗಿ ಅದಕ್ಕೆ ನಾನು ಮಲ ತಂದೆಯಾಗ್ತೀನಿ’ ಎಂದ. ನಾವಿಬ್ಬರೂ ಯೋಚಿಸಿ ಬೇಗನೇ ಮದುವೆಯಾಗಿ ಮಗುವಿಗೆ ಮೆಲ್‌ನೇ ತಂದೆಯೆಂದು ದಾಖಲಿಸುವುದು ಉತ್ತಮ ಎನ್ನಿಸಿತು. ಅಂತೆಯೇ ನಾವು ಮದುವೆಯಾದೆವು. ಇನ್ನೇಳು ತಿಂಗಳಲ್ಲಿ ನೀನು ಹುಟ್ಟಿದೆ. ಆದರೆ ಪ್ರಸವ ಕಾಲದಲ್ಲಿ ಏನೋ ತೊಂದರೆಯಾಗಿ ನನ್ನ ಗರ್ಭಕೋಶವನ್ನು ತೆಗೆಯ ಬೇಕಾಯಿತು. ನನಗೆ ಮತ್ತೆ ತಾಯಿಯಾಗುವ ಭಾಗ್ಯವಿಲ್ಲದಾಯಿತು. ಮೆಲ್ ಹೇಳಿದ ’ನೋಡು, ಈ ಮಗುವನ್ನು ದೇವರೇ ನಮಗಾಗಿ ಉಳಿಸಿದ್ದಾನೆ. ಎಲ್ಲಾ ಅವನ ಇಚ್ಛೆ. ಇದನ್ನೇ ನನ್ನ ಸ್ವಂತ ಮಗುವೆಂದು ತಿಳಿಯುತ್ತೇನೆ’ ಎಂದು ನನಗೆ ಸಮಾಧಾನಮಾಡಿದ. ಅವನ ಮೇಲಿನ ನನ್ನ ಪ್ರೇಮ ಇಮ್ಮಡಿಯಾಯಿತು. ಅವನ ಔದಾರ್ಯಕ್ಕೆ ನಾನು ಚಿರಋಣಿ. ಆಗ ತಾನೆ ಹುಟ್ಟಿದ್ದ ನಿನಗೆ, ಬೆಳೆದ ಮೇಲೆ ಈ ವಿಷಯ ತಿಳಿಸಿ ಗೊಂದಲ ಹುಟ್ಟಿಸುವುದು ಅನವಶ್ಯಕ ಎಂದು ನಿನಗೆ ಹೇಳಲಿಲ್ಲ. ನಿನ್ನ ಹುಟ್ಟಿನ ಪ್ರಮಾಣ ಪತ್ರದಲ್ಲಿ ಮೆಲ್‌ನೇ ನಿನ್ನ ತಂದೆಯೆಂದು ದಾಖಲಿಸಲಾಗಿದೆ. ನೀನು ನನ್ನ ಮತ್ತು ಮೆಲ್‌ನ ಮಗುವಾಗೇ ಬೆಳೆದೆ. ಇಲ್ಲಿಯವರೆಗೆ ಯಾವ ತೊಂದರೆಯೂ ಇಲ್ಲದೆ ಸುಖವಾಗಿ ಬಾಳಿ ನಿನ್ನನ್ನು ಬೆಳೆಸಿದೆವು. ಈಗ ದರ್ಶನ್‌ನ ಅನಿರೀಕ್ಷಿತ ಆಗಮನದಿಂದ ಎಲ್ಲಾ ತಳೆಕೆಳಗಾಯಿತು. ನೀನು ಆಗ್ರಹ ಮಾಡಿದ್ದರಿಂದ ಈ ಕಹಿ ಸತ್ಯವನ್ನು ಹೇಳಬೇಕಾಯಿತು. ನಾವು ತಪ್ಪು ಮಾಡಿದ್ದರೆ ಕ್ಷಮಿಸು. ’ ಎಂದರು. ನಮ್ಮಪ್ಪನ ಕಣ್ಣಲ್ಲೂ ನೀರು ಹರಿಯುತ್ತಿತ್ತು. ಆಗ ನನಗಾದ ಆಘಾತ ವರ್ಣಿಸಲಸಾಧ್ಯ. ಆದರೆ ಅದು ಒಂದೆರಡು ನಿಮಿಷಗಳು ಮಾತ್ರ. ಅದಕ್ಕಿಂತ ಮಿಗಿಲಾಗಿ ನನ್ನ ಮನಸ್ಸಿಗೆ ತಟ್ಟಿದ್ದು ನಮ್ಮಪ್ಪನ ಉದಾರಗುಣ, ಧಾರ್ಮಿಕ ಬುದ್ಧಿ ಮತ್ತು ಸಹೃದಯತೆ. ಹಿ ಈಸ್ ಎ ಟ್ರೂ ಕ್ರಿಶ್ಚಿಯನ್. ನಾನು ಅವರಿಬ್ಬರನ್ನೂ ತಬ್ಬಿಕೊಂಡು ಹೇಳಿದೆ. “ನೀವು ತೆಗೆದುಕೊಂಡ ನಿರ್ಧಾರವೇ ಸರಿಯಾದದ್ದು, ಮಾನವೀಯತೆಯಿಂದ ತುಂಬಿದ್ದು. ಅದರಲ್ಲೇನೂ ತಪ್ಪಿಲ್ಲ. ಅಪ್ಪ ನೀನು ನನಗೆ ಜನ್ಮದಾತನಲ್ಲದಿರಬಹುದು ಆದರೆ ನೀನೇ ನನ್ನ ನಿಜವಾದ ತಂದೆ. ನಿಮ್ಮ ಮಗನಾಗಲು ನಾನು ನಿಜವಾಗಲೂ ಪುಣ್ಯಮಾಡಿದ್ದೆ. ಅಮ್ಮ ನೀನು ಚಿಂತಿಸಬೇಡಮ್ಮ ನಿನ್ನದೇನೂ ತಪ್ಪಿಲ್ಲ. ನೀನೂ ಮಹಾ ತ್ಯಾಗಿ. ನಿನ್ನ ಪ್ರೇಮವನ್ನು ತ್ಯಜಿಸಿ ಅಮಿತ್‌ನನ್ನು ಅವನ ಕುಟುಂಬವನ್ನು ರಕ್ಷಿಸಿದೆ.”
ಈ ನಿರೂಪಣೆಯನ್ನು ಕೇಳಿ ದರ್ಶನ್‌ಗೆ ಸಖೇದಾಶ್ಚರ್ಯವಾಯಿತು. ವಿಧಿ ಈ ಜಿಮ್‌ನ ನನ್ನ ಬಳಿ ಕಳುಹಿಸಿ, ಈ ಸತ್ಯವನ್ನು ಈಗ ಅರುಹಬೇಕಿತ್ತೆ? ಇಲ್ಲಿನ ಕೆಲಸಗಳನ್ನು ಮುಗಿಸಿ ಹಾಯಾಗಿ ಬೆಂಗಳೂರಿಗೆ ಹೋಗಿ ನೆಲಸೋಣ ಅನ್ನುವಷ್ಟರಲ್ಲಿ ಈ ಆಘಾತವೇ? ಹೇಗೋ ಸಾವರಿಸಿಕೊಂಡು ಹೇಳಿದ.
“ಥ್ಯಾಂಕ್ಸ್, ಜಿಮ್. ನಿನ್ನಂಥ ಬ್ರದರ್ ನನಗೆ ಸಿಕ್ಕಿದ್ದು ನನಗೆ ಸಂತಸವೇ ಆಗಿದೆ. ನಮ್ಮ ತಂದೆ ತಾಯಿಗಳನ್ನು, ನೀತಿ, ನ್ಯಾಯಗಳ ತಕ್ಕಡಿಯಲ್ಲಿ ತೂಗುವುದು ಬೇಡ. ಈ ವಿಷಯವನ್ನು ಇಲ್ಲಿಗೇ ಬಿಡೋಣ. ನೀನು ನನಗೆ ಈ ವಿಷಯ ಹೇಳಿದ್ದರಿಂದ ಆಘಾತವೇನೋ ಆಯಿತು. ಆದರೆ ಅದು ತಾತ್ಕಾಲಿಕ. ನಾನು ಅರಗಿಸಿಕೊಳ್ಳುತ್ತೇನೆ. ನೀನು ಹೇಳದಿದ್ದರೆ ಅವ್ಯಕ್ತವಾದ ಸತ್ಯವೊಂದಿದೆ ಎಂಬ ಅರಿವು ನನ್ನನ್ನು ಕೊನೆಯ ತನಕ ಕಾಡುತ್ತಿತ್ತು.”
“ಆಯಿತು. ಆದರೆ ನನ್ನನ್ನು ಕ್ಷಮಿಸು. ನಾನು ಇದನ್ನು ನಿನಗೆ ತಿಳಿಸದೇ ಈ ರಹಸ್ಯವನ್ನು ಕಾಪಾಡಿದ್ದರೆ ಚೆನ್ನಾಗಿತ್ತೇನೋ. ಆದರೆ ಇದನ್ನು ತಿಳಿದುಕೊಳ್ಳುವ ಹಕ್ಕು ನಿನಗಿದೆ ಎನ್ನಿಸಿತು. ಆದರೆ ನಿನ್ನ ನಿರ್ಮಲ ಮನಸ್ಸನ್ನು ಕದಡಿದಂತಾಯಿತು”
“ಪರವಾಗಿಲ್ಲ. ಒಳ್ಳೆಯದೇ ಆಯಿತು. ನನಗೊಬ್ಬ ತಮ್ಮನಿದ್ದಾನೆಂದರೆ ಖುಷಿಪಡುವಂಥ ವಿಷಯವೇ.” ದರ್ಶನ್ ಹೇಳಿದ.
“ನಿನ್ನ ತಂದೆಗೆ ಏನಾದರು ಹೇಳುವೆಯಾ?”
“ಹೇಳಬಾರದು ಅನ್ನಿಸುತ್ತೆ. ಜಾನೆಟ್ ಮತ್ತು ನನ್ನ ತಂದೆಗೆ ಇದು ಮೂವತ್ತು ವರ್ಷಗಳ ಹಿಂದೆಯೇ ಮುಗಿದುಹೋದ ಕಥೆ. ಅದನ್ನು ಕೆದಕಿ ಪ್ರಯೋಜನವೇನು? ತೊಂದರೆಯಾದರೂ ಆಗಬಹುದು. ನಿನಗೆ ಜನ್ಮ ಕೊಟ್ಟ ತಂದೆಯನ್ನು ನೋಡಬೇಕೆನ್ನಿಸಿದರೆ ಹೇಳು. ನನ್ನದೇನೂ ಅಭ್ಯಂತರವಿಲ್ಲ. ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ”
“ನನಗೆ ಇಷ್ಟವಿಲ್ಲ. ಅದಲ್ಲದೆ ಅವರನ್ನು ನಿರಪರಾಧಿ ಎಂದು ಯೋಚಿಸಲು ಒಂದು ಕಾರಣವಿದೆ. ಅವರಿಗೆ ನನ್ನ ಅಮ್ಮನಿಂದ ದೂರವಾಗಿ ಹೋಗುವಾಗ. ಆಕೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಆಮೇಲೂ ಗೊತ್ತಾಗಲಿಲ್ಲ. ಅಕಸ್ಮಾತ್ ನನ್ನ ತಾಯಿ ಇದನ್ನು ತಿಳಿಸಿದ್ದರೆ, ಅವರು ಮನಸ್ಸು ಬದಲಿಸಿ, ತಂದೆ ತಾಯಿಗಳ ಇಷ್ಟಕ್ಕೆ ವಿರುದ್ಧವಾಗಿ ಅವರನ್ನು ಮದುವೆಯಾಗಿ, ಇಲ್ಲಿಯೋ ಅಥವ ಇಂಡಿಯಾದಲ್ಲೋ ನೆಲಸುತ್ತಿರಲಿಲ್ಲ ಎಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ಮೊಮ್ಮಗು ಹುಟ್ಟುವುದಕ್ಕೆ ಮುಂಚೆಯೋ ಅಥವಾ ಆನಂತರವೋ, ಅವರ ತಂದೆ ತಾಯಿಗಳ ಮನಸ್ಸು ಬದಲಾಗುತ್ತಿರಲಿಲ್ಲವೆನ್ನುವುದಕ್ಕೂ ಯಾವ ಆಧಾರವೂ ಇಲ್ಲ. ಅನುಮಾನದ ಕೃಪೆಗೆ ಅವರು ಅರ್ಹರು. ( ಬೆನಿಫಿಟ್ ಆಫ್ ಡೌಟ್). ಆದ್ದರಿಂದ, ನಾನು ಅವರ ಮುಂದೆ ನಿಂತು ’ ನಾನು ನಿಮ್ಮ ಮೊದಲನೆ ಮಗ’ ಎಂದು ಹೇಳಿ, ಅವರ ಸುಂದರವಾದ ಜೀವನದ ಸಂಜೆಯಲ್ಲಿ ಬಿರುಗಾಳಿ ಎಬ್ಬಿಸಲು ನನಗೆ ಇಚ್ಛೆಯಿಲ್ಲ. ಅವರನ್ನು ಒಮ್ಮೆ ನೋಡ ಬೇಕೆನಿಸಿದೆ. ಆದರೆ ಈ ವಿಷಯವನ್ನು ತಿಳಿಸುವುದಿಲ್ಲ. ಇದರ ನಿರ್ಧಾರವನ್ನು ನಿನಗೆ ಬಿಟ್ಟಿದ್ದೇನೆ.”
“ನಾನು ಯಾವ ನಿರ್ಧಾರಕ್ಕೂ ಬಂದಿಲ್ಲ. ಗಂಭೀರವಾಗಿ ಚಿಂತಿಸಬೇಕಾಗಿದೆ”
ಜಿಮ್ ಕಂಪನಿಗೆ ಸೇರಿದ ಒಂದು ವರ್ಷದ ನಂತರ ದರ್ಶನ್ ತನ್ನ ಪ್ರಾಜೆಕ್ಟ್‌ಗಳನ್ನೆಲ್ಲ ಅವನಿಗೆ ವಹಿಸಿ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡ. ಅವನು ಅಮೆರಿಕಾಗೆ ಬಂದು ಆಗಲೇ ಎಂಟು ವರ್ಷಗಳಾಗಿದ್ದವು. ತನ್ನ ತಂದೆಯ ಬಗ್ಗೆ ಮಿಶ್ರವಾದ ಭಾವನೆಗಳೆದ್ದಿದ್ದವು. ತಾನೂ ಅದೇ ಪರಿಸ್ಥಿತಿಯಲ್ಲಿರುವುದನ್ನು ಯೋಚಿಸಿದ. ಆದರೆ ಅವನು ಯಾರನ್ನೂ ಪ್ರೇಮಿಸಿರಲಿಲ್ಲ. ಮದುವೆಯ ಮಟ್ಟಕ್ಕಂತೂ ಖಂಡಿತ ಹೋಗಿರಲಿಲ್ಲ. ಅಕಸ್ಮಾತ್ ಒಂದು ಅಮೆರಿಕನ್ ಹುಡುಗಿಯನ್ನು ಮದುವೆಯಾಗಲು ಇಷ್ಟಪಟ್ಟರೂ, ಈಗ ಕಾಲ ಬದಲಾಗಿದೆ. ನನ್ನ ತಂದೆಯಿದ್ದ ಪರಿಸ್ಥಿತಿ ಈಗಿಲ್ಲ. ನನ್ನ ತಂದೆ ತಾಯಿಗಳು ಅಜ್ಜ ಅಜ್ಜಿಯಷ್ಟು ಸಂಪ್ರದಾಯ ಶರಣರಲ್ಲ. ನನ್ನ ಅಮ್ಮನಂತೂ ವಿದ್ಯಾವಂತೆ. ಪ್ರಪಂಚ ತಿಳಿದವಳು. ಆತ್ಮಹತ್ಯೆಯ ಬೆದರಿಕೆಯನ್ನು ಖಂಡಿತ ಹಾಕುವವಳಲ್ಲ. ಅಪ್ಪ ತಮ್ಮ ಸ್ವಂತ ಅನುಭವದಿಂದ ಇದನ್ನು ಪ್ರತಿಭಟಿಸಲು ನೈತಿಕವಾಗಿ ಸಾಧ್ಯವೂ ಇರಲಿಲ್ಲ. ಅದಲ್ಲದೆ ಈಗ ಬೆಂಗಳೂರಿನಲ್ಲೇ ಸಾಕಷ್ಟು ಅವಕಾಶಗಳಿರುವುದರಿಂದ, ನನ್ನ ದೇಶದಲ್ಲಿ ನಮ್ಮ ಸಂಸ್ಕೃತಿಯ ಹುಡುಗಿಯನ್ನೇ ಮದುವೆಯಾಗಿ ಅಲ್ಲೇ ನೆಲೆಸುವುದು ಒಳಿತೆನಿಸಿತು. ಅಪ್ಪನಿಗೆ ಜಾನೆಟ್ ಮತ್ತು ಮೆಲ್‌ನ ಭೇಟಿ ಮಾಡಿದ್ದನ್ನು ಹೇಳುವುದೋ ಬೇಡವೋ ಎಂದು ಚಿಂತಿಸಿದ. ಅವರಿಗೆ ಇನ್ನೊಬ್ಬ ಬೆಳೆದ ಮಗನಿದ್ದಾನೆಂದು ಹೇಳುವುದು ಈಗ ಸೂಕ್ತವೇ? ಮೂವತ್ತು ವರ್ಷಗಳ ಹಿಂದಿನ ಘಟನೆಯನ್ನು ಜ್ಞಾಪಿಸಿ, ಗೊಂದಲ ಸೃಷ್ಟಿಸುವುದು ಸರಿಯೇ. ಅದರಿಂದ ಆಗುವ ಅನಾಹುತಗಳೇನು? ಅಮ್ಮ ಇದನ್ನು ಹೇಗೆ ಸ್ವೀಕರಿಸುವಳು? ಅಪ್ಪ ಅಮ್ಮನ ಮಧ್ಯೆ ವಿರಸ ಬರಬಹುದೆ? ಇಬ್ಬರ ಸಂತೋಷಕ್ಕೂ ಧಕ್ಕೆ ಬರುವುದಿಲ್ಲವೆ? ಅಪ್ಪ ಒಂದು ವೇಳೆ ಜಾನೆಟ್ ವಿಷಯದಲ್ಲಿ ನಿಷ್ಕರುಣಿಯಾಗಿದ್ದರು, ಸ್ವಾರ್ಥಿಯಾಗಿದ್ದರು, ಅಜ್ಜ, ಅಜ್ಜಿ ಅವರನ್ನು ಈ ಕೃತ್ಯಕ್ಕೆ ತಳ್ಳಿದರು ಎಂದುಕೊಂಡರೂ, ಈ ವಿಷಯವನ್ನು ಈಗ ಬಯಲು ಮಾಡಿ ಅಪ್ಪನಿಗೆ, ಅಜ್ಜ ಅಜ್ಜಿಗೆ, ಅವರ ಕೃತ್ಯಕ್ಕೆ ತಕ್ಕ ಶಾಸ್ತಿ ಮಾಡುತ್ತೇನೆಂದುಕೊಂಡರೂ, ಅದರ ಪರಿಣಾಮ ನಿರಪರಾಧಿಯಾದ ಅಮ್ಮನಮೇಲೂ ಆಗುವುದಿಲ್ಲವೇ? ಅಪ್ಪ, ಅಜ್ಜ, ಅಜ್ಜಿ, ಈ ಸತ್ಯವನ್ನು ಹೇಗೆ ಇಷ್ಟು ವರ್ಷಗಳು ಮುಚ್ಚಿಟ್ಟರು? ಇದನ್ನೆಲ್ಲ ಕೇಳಲು ನಾನ್ಯಾರು? ಅಪ್ಪನಿಗೆ ಜಾನೆಟ್ ಗರ್ಭಿಣಿಯಾಗಿದ್ದು ತಿಳಿದಿದ್ದರೆ ಏನು ಮಾಡುತ್ತಿದ್ದರು? ಅಜ್ಜ, ಅಜ್ಜಿಯನ್ನು ಎದುರಿಸಿ ಅವಳನ್ನು ಮದುವೆಯಾಗುತ್ತಿದ್ದರ? ಅಜ್ಜಿ ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ? ಅದು ಗೊಡ್ಡು ಬೆದರಿಕೆಯಾಗಿರಬಹುದಲ್ಲವೆ? ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮುಕ್ತವಾಗಿ ಹೇಳುವವರು ಸಾಧಾರಣವಾಗಿ ಹಾಗೆ ಮಾಡುವುದಿಲ್ಲ ಎಂದು ಹೇಳುತ್ತಾರಲ್ಲವೇ? ಈಗ ಸತ್ಯವನ್ನು ತಿಳಿಸಿದರೂ, ಅಪ್ಪ ಏನು ಪರಿಹಾರ ಕೊಡಬಲ್ಲರು? ಎಲ್ಲವನ್ನೂ ಮರೆತು ಮೆಲ್‌ನ ಹೃದಯವಂತಿಕೆಯಿಂದ ಸಂತೋಷವಾಗಿರುವ ಅವರ ಸಂಸಾರದಲ್ಲಿ ನಾನು ಕಾಣಿಸಿಕೊಂಡು ಮಾಡಿರುವ ಆಘಾತ ಸಾಲದೆ. ಅದನ್ನೂ ಇನ್ನೂ ಹೆಚ್ಚಿಸಬೇಕೆ? ಜಿಮ್ ಹೇಳಿದ ಹಾಗೆ ಅಪ್ಪನಿಗೆ ’ಅನುಮಾನದ ಕೃಪೆ’ ಯನ್ನು ಕೊಡಬೇಡವೆ? ಸತ್ಯ ತಿಳಿದ ನಂತರ ಜಿಮ್‌ಗೆ ಅವನ ತಂದೆಯ ಮೇಲೆ ಪ್ರೀತಿ ಹೆಚ್ಚಿತು. ಅವರ ಮಗನಾಗಲು ಹೆಮ್ಮೆ ಎನಿಸಿತು. ಅವರ ಔದಾರ್ಯ, ಸಹೃದಯತೆ, ಮಾನವೀಯತೆ, ಕ್ರಿಶ್ಚಿಯನ್ ಮನೋಭಾವದಿಂದ ಬಂದ ಕ್ಷಮಾಶೀಲತೆಗಳನ್ನು ಮೆಚ್ಚಿದ. ನನಗಾದರೋ ಅದೇ ಸತ್ಯ ನನ್ನ ತಂದೆ ಮತ್ತು ಅಜ್ಜ ಅಜ್ಜಿಯ ಬಗ್ಗೆ ತಿರಸ್ಕಾರ, ಅವರು ನಿಷ್ಕರುಣಿಗಳು, ಸ್ವಾರ್ಥಿಗಳು ಎಂಬ ಭಾವನೆಗಳು ಹುಟ್ಟಿಸಿದೆಯೇ ಹೊರತು ಮೆಚ್ಚುಗೆಯಲ್ಲ. ಆದರೆ ಹಾಗೆ ಹೇಳಲು ನಾನ್ಯಾರು? ಆಗಿನ ಕಾಲ, ದೇಶ, ಸಂದರ್ಭಗಳು, ಸಾಮಾಜಿಕ ಧೋರಣೆಗಳು ಬೇರೆ ರೀತಿಯವೇ ಆಗಿರಲಿಲ್ಲವೆ? ಅದೆಲ್ಲ ನನಗೇನು ಗೊತ್ತು. ನನ್ನ ಅಪ್ಪ ಅಮ್ಮನಷ್ಟು, ವಿದ್ಯೆಯಾಗಲೀ, ಆಧುನಿಕ ಮನೊಭಾವಗಳು ಅಜ್ಜ ಅಜ್ಜಿಯ ಕಾಲದವರಿಗೆ ಇರಲಿಲ್ಲ. ಅದು ಅವರ ತಪ್ಪೆ?... ಹೀಗೇ ನೂರಾರು ಪ್ರಶ್ನೆಗಳು ದರ್ಶನ್‌ನ ಕಾಡಿದವು. ಯಾವುದಕ್ಕೂ ಸರಿಯಾದ ಉತ್ತರಗಳಿರಲಿಲ್ಲ.
ದರ್ಶನ್ ನ್ಯೂಯಾರ್ಕಿನಿಂದ ಹೊರಡುವ ದಿನ ಬಂದೇ ಬಿಟ್ಟಿತು. ಏರ್‌ಪೋರ್ಟಿಗೆ ಅವನನ್ನು ಬೀಳ್ಕೊಡಲು ಜಿಮ್, ಜಾನೆಟ್, ಮೆಲ್ ಮತ್ತು ಹಲವಾರು ನಿಯೋಟೆಕ್ ಸಹೋದ್ಯೋಗಿಗಳು ಬಂದಿದ್ದರು. ಜಾನೆಟ್ ಒಂದು ಸಣ್ಣ ಗಿಫ್ಟ್ ರ‍್ಯಾಪ್ ಮಾಡಿದ ಪೊಟ್ಟಣವನ್ನು ಕೊಟ್ಟು ’ಇದು ನಿನ್ನ ತಂದೆಗೆ’ ಎಂದು ಹೇಳಿದಳು
ಬೆಂಗಳೂರಿನಲ್ಲಿ ಅಮಿತ್ ಕುಮಾರ್ ಮನೆಯಲ್ಲಿ ದರ್ಶನ್ ಬರುವ ಸಂಭ್ರಮವೋ ಸಂಭ್ರಮ. ತೊಂಬತ್ತು ವಯಸ್ಸಿನ ಮೋಹನ್ ಕುಮಾರ್ (ಅಜ್ಜ) ಮತ್ತು ಎಂಬತ್ತೈದು ವಯಸ್ಸಿನ ರುಕ್ಮಿಣಿ (ಅಜ್ಜಿ ) ಯವರಿಗೆ ಮೂವತ್ತು ವರ್ಷಗಳ ಹಿಂದೆ ಅಮಿತ್ ಅಮೆರಿಕಾದಿಂದ ಬೆಂಗಳೂರಿಗೆ ಬಂದಾಗಿನ ಸಂಭ್ರಮ ಮರುಕಳಿಸಿದಂತಾಯಿತು. ರೋಹಿಣಿ ಮತ್ತು ಅಮಿತ್ ಕುಮಾರ್ ಏರ್‌ಪೋರ್ಟಿಗೆ ಹೋಗಿ ದರ್ಶನ್‌ನ ಸ್ವಾಗತಿಸಿ ಮನೆಗೆ ಕರೆತಂದರು. ಮನೆಯಲ್ಲಿ ಭಾರಿ ಔತಣವೇ ಏರ್ಪಾಡಾಗಿತ್ತು. ದರ್ಶನ್ ಮನೆಗೆ ಬಂದ ಕೂಡಲೇ ಅಜ್ಜ ಅಜ್ಜಿಯವರ ಕಾಲಿಗೆ ನಮಸ್ಕಾರಿಸಿ ಆಲಿಂಗಿಸಿದ. ಊಟ ಉಪಚಾರಗಳೆಲ್ಲ ಮುಗಿದ ಮೇಲೆ ದರ್ಶನ್ “ನನಗೆ ಜೆಟ್ ಲ್ಯಾಗ್ ಆಗಿದೆ. ಸ್ವಲ್ಪ ಹೊತ್ತು ನಿದ್ರೆ ಮಾಡ್ತೀನಿ” ಎಂದು ಹೋಗಿ ತನ್ನ ಹಳೆಯ ರೂಮಿನಲ್ಲಿ ಮಲಗಿದ. ಎಚ್ಚರವಾದಾಗ ಸಂಜೆ ಆರು ಗಂಟೆ. ಎದ್ದು ಪ್ರಕ್ಷಾಳನ ಮಾಡಿ ಬಟ್ಟೆ ಬದಲಿಸಿ ಸೂಟ್‌ಕೇಸ್ ತೆಗೆದು ಎಲ್ಲರಿಗೂ ತಂದಿದ್ದ ಗಿಫ್ಟ್‌ಗಳನ್ನು ತೆಗೆದಿಡುತ್ತಿದ್ದ. ಬಾಗಿಲನ್ನು ತಟ್ಟಿ ಅಮಿತ್ ಕುಮಾರ್ ಏನನ್ನೋ ಹೇಳಲು ಒಳಗೆ ಬಂದರು. ದರ್ಶನ್ ಇದೇ ಅವರಿಗೆ ಜಾನೆಟ್ ಕೊಟ್ಟ ಗಿಫ್ಟನ್ನು ಕೊಡಲು ಸುಸಮಯವೆಂದುಕೊಂಡು ತಂದೆಯನ್ನು ಕೂರಲು ಹೇಳಿದ.
“ನಿಯೋಟೆಕ್ ಕಂಪನಿಯ ಬೆಂಗಳೂರು ಶಾಖೆಯವರು ನಾಳೆ ಸಾಯಂಕಾಲ ನಿನ್ನನ್ನು ಸ್ವಾಗತಿಸಲು ಏರ್ಪಾಡು ಮಾಡಿಕೊಂಡಿದ್ದಾರೆ. ನೀನು ಬೇರೇನು ಕಾರ್ಯಕ್ರಮವನ್ನೂ ಇಟ್ಟುಕೊಳ್ಳ ಬೇಡ” ಎಂದರು ಅಮಿತ್ ಕುಮಾರ್.
ದರ್ಶನ್ ಅವರಿಗೆಂದು ಜಾನೆಟ್ ಕೊಟ್ಟಿದ್ದ ಕೊಟ್ಟಿದ್ದ ಗಿಫ್ಟನ್ನು ಕೊಡಲು ಕೈಗೆ ತೆಗೆದುಕೊಂಡ. ಆದರೆ ಅದೇಕೋ ಅದನ್ನು ಕೊಡಲು ಮುಂದಕ್ಕೆ ಚಲಿಸುತ್ತಿದ್ದ ಕೈ ಹಾಗೇ ನಿಂತು ಹಿಂದಕ್ಕೆ ಹೋಯಿತು. ಇದು ಈಗಲೇ ಬೇಡ ಎಂದು ತಕ್ಷಣವೇ ಮನಸ್ಸು ಬದಲಾಯಿಸಿದ.
“ಸರಿ ಹಾಗೇ ಆಗಲಪ್ಪ” ಎಂದ. ಅಮಿತ್ ಎದ್ದು ಹೊರಟು ಹೋದರು.
ದರ್ಶನ್ ಅನುಮಾನಿಸುತ್ತ ಕೈಲಿದ್ದ ಪೊಟ್ಟಣವನ್ನು ಬಿಚ್ಚಿದ. ಅದರಲ್ಲೊಂದು ಸಣ್ಣ ಪೆಟ್ಟಿಗೆಯಿತ್ತು. ತೆಗೆದು ನೋಡಿದ. ಅದರಲ್ಲೊಂದು ವಜ್ರದ ಉಂಗುರವಿತ್ತು. ಬಹುಶಃ ಜಾನೆಟ್’ಗೆ ಅಪ್ಪ ಕೊಟ್ಟಿದ್ದ ಎಂಗೇಜ್‌ಮೆಂಟ್ ಉಂಗುರ. ಇದರಲ್ಲಿ ಅಪ್ಪನನ್ನು ಘಾಸಿಗೊಳಿಸಿ ನಮ್ಮ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸುವ ಒಂದು ರಹಸ್ಯವೇ ಅಡಗಿದೆ. ಇದು ಹೊರಗೆ ಬರದಿರುವುದೇ ಲೇಸು. ಇದನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕುತ್ತೇನೆ’ ಎಂದು ಅದನ್ನು ಮತ್ತೆ ಸೂಟ್ ಕೇಸ್ ಒಳಗೆ ಹಾಕಿ, ನಿಟ್ಟುಸಿರು ಬಿಟ್ಟ. ಸುಭಾಷಿತ ಮಂಜರಿಯಲ್ಲಿ ಓದಿದ ಒಂದು ನುಡಿ ನೆನಪಿಗೆ ಬಂತು.
ಸತ್ಯಂ ಬ್ರೂಯಾತ್ ಪ್ರಿಯಂ ಭ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಂ
ಪ್ರಿಯಂ ಚ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ
(-ಮನುಸ್ಮೃತಿ, ೪-೧೩೮)

ಸತ್ಯವನ್ನೇ ಹೇಳಬೇಕು. ಅಪ್ರಿಯವಾದ ಸತ್ಯವನ್ನಾಗಲೀ, ಪ್ರಿಯವಾದ ಸುಳ್ಳನ್ನಾಗಲೀ ಹೇಳಬಾರದು. ಇದು ಸನಾತನ ಕಾಲದಿಂದಲೂ ಬಂದ ಧರ್ಮ.