ಅಮೆರಿಕನ್ನಡ
Amerikannada
ಸ್ನೇಹ :: ಒಲಿದವರನು ಉಜ್ಜೀವಿಸುವ ಬಗೆ
-ಶಿಕಾರಿಪುರ ಹರಿಹರೇಶ್ವರ
ನಮ್ಮ ಶಾಲೆಗೆ ಹಲವಾರು ಜನ ಸಾಹಿತಿಗಳು ಬಂದು ಉಪನ್ಯಾಸ ನೀಡುತ್ತಿದ್ದರು. ಶಿವಮೊಗ್ಗಕ್ಕೆ ಬಂದು ಕರ್ನಾಟಕ ಸಂಘದಲ್ಲೋ ಬೇರೆಲ್ಲೋ ಕಾರ್ಯಕ್ರಮ ಕೊಡುತ್ತಿದ್ದ ಸಾಹಿತಿಗಳೆಲ್ಲ ಸಾಮಾನ್ಯವಾಗಿ ನಮ್ಮ ಶಾಲೆಗೂ ಬಂದು ಭಾಷಣ ಮಾಡಿ, ಹೋಗುತ್ತಿದ್ದರು. ಭಾರತದ ಬಿಂದೂರಾಯರ ಗಮಕವಾಚನವನ್ನ ವ್ಯಾಖ್ಯಾನವನ್ನ ಮೊಟ್ಟ ಮೊದಲು ಕೇಳಿದ್ದು ಆಗಲೇ.
ಒಲಿದವರನ್ನ ಉಜ್ಜೀವಿಸುವ ಬಗೆಯನ್ನ ಕುಮಾರವ್ಯಾಸ ತನ್ನ ಗದುಗಿನ ಭಾರತದ ಉದ್ಯೋಗಪರ್ವದಲ್ಲಿ ಎಷ್ಟು ಸೊಗಸಾಗಿ ವಿವರಿಸಿದ್ದಾನಲ್ಲ, ಅದರ ಮಹತ್ವವನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ವ್ಯಾಖ್ಯಾನಕಾರರು ಹೇಳಿದ್ದನ್ನ ಮೊಟ್ಟಮೊದಲ ಕೇಳಿದ್ದು ನಾನು ಹಾಗೆ ಪ್ರೌಢಶಾಲೆಯಲ್ಲಿದ್ದಾಗ. ಅದಿನ್ನೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೊಡ್ಡವರಿಗೆ ಬಲ್ಲವರಿಗೆ ಏನು, ಬೆಳೆವ ಮಕ್ಕಳಿಗೆ ಸಹ, ಏಕೆ ಸರ್ವರಿಗೂ ಸಾರ್ವಕಾಲಿಕವಾಗಿ ಅನ್ವಯಿಸುವ ಜೀವನ ಮೌಲ್ಯವಾದ ಸ್ನೇಹದ ಮಾತುಗಳನ್ನ ಕವಿ ಅಲ್ಲಿ ಸೂಚಿಸಿದ್ದಾನೆ, ದೃಷ್ಟಾಂತರೂಪದಲ್ಲಿ ತಿಳಿಹೇಳಿದ್ದಾನೆ.
ಮಕ್ಕಳಿಗಂತೂ ಕರ್ಣನ ಕತೆ ಬಹಳ ರೋಚಕ. ಕರ್ಣ-ಸುಯೋಧನರ ಸಖ್ಯದ ಮೇಲೆ ಬೆಳಕು ಚೆಲ್ಲುವ ಪ್ರಸಂಗಗಳು ಒಂದಕ್ಕಿಂತ ಒಂದು ಮನೋಜ್ಞವಾದುವು. ಹಾಗೆ ನೋಡಿದರೆ, ಕೃಷ್ಣಸಂಧಾನವೇ ಮಹಾಭಾರತದ ಕತೆಯಲ್ಲಿ ಒಂದು ಮುಖ್ಯ ಘಟ್ಟ. ಆ ಪ್ರಸಂಗವನ್ನು ಪ್ರಧಾನ ಅಂಕವಾಗಿ ಇರಿಸಿಕೊಂಡು, ಅದಕ್ಕೆ ಮುನ್ನ ನಡೆದ ಘಟನೆಗಳ ಹಿನ್ನೋಟ, ಆಗ ನಡೆಯುವ ಕೂಟ ಬೇಟ ಆಟ ನೋಟ, ತದನಂತರ ಜರುಗುವ ಘಟಿಸಿದ ತಿರುವುಗಳ ಪರದಾಟಗಳನ್ನು ವಿವಿಧ ದೃಶ್ಯಗಳನ್ನಾಗಿ ರೂಪಿಸುತ್ತಾ, ಸಮರ್ಥನಾದ ಒಬ್ಬ ಕವಿಯೋ, ಶಿಲ್ಪಿ ಕಲೆಗಾರ ನಾಟಕಕಾರ, ಹರಿಕತೆದಾಸ ಪ್ರವಚನಕಾರ ಉಪನ್ಯಾಸಕ ಯಾ ಮಾತುಗಾರನೋ, ತನಗೊದಗಿದ ಬಣ್ಣದ ಪರದೆಯ ಮೇಲೆ ಭಾರತ ಮಹಾಕಾವ್ಯದ ಒಂದು ಭವ್ಯ ಮಹಾನಾಟಕವನ್ನು ಗಾರುಡಿಗನಾಗಿ ಚಿತ್ರಿಸಲು ಸಾಧ್ಯ. ಅದನ್ನೇ ಈ ವ್ಯಾಖ್ಯಾನಕಾರರು ಮಾಡ ಪ್ರಯತ್ನಿಸುತ್ತಿದ್ದುದು.
ಅದಕ್ಕೆ ಒಂದು ನಿದರ್ಶನವಾಗಿತ್ತು, ಆ ದಿನಗಳಲ್ಲಿ ಶಿವಮೊಗ್ಗದ ತಿಮ್ಮಪ್ಪನ ಕೊಪ್ಪಲಿನಲ್ಲಿ ನಡೆಯುತ್ತಿದ್ದ ಗಮಕಿ ವೆಂಕಟೇಶಯ್ಯ ನವರ ಭಾರತವಾಚನ ಮತ್ತು ಲಕ್ಷ್ಮೀಕೇಶವಶಾಸ್ತ್ರಿಗಳ ವ್ಯಾಖ್ಯಾನ. ಇಬ್ಬರೂ, ಈಗ ‘ಸಂಸ್ಕೃತಗ್ರಾಮ’, ‘ಗಮಕಗ್ರಾಮ’ ಎಂದು ಕರೆಸಿಕೊಳ್ಳುತ್ತಿರುವ, ಶಿವಮೊಗ್ಗದ ಬಳಿಯ ಮತ್ತೂರು ಹೊಸಹಳ್ಳಿಯಲ್ಲಿದ್ದವರು. ಇಲ್ಲಿ ಕುಮಾರವ್ಯಾಸ ಮಂಟಪದಲ್ಲಿ ಸಂಜೆ ಯಾಯಿತೆಂದರೆ, ಕೇಳುಗರು ಕಿಕ್ಕಿರಿದು ನೆರೆದಿರುತ್ತಿದ್ದರು. ಗಮಕಿಗಳು ಸುಶ್ರಾವ್ಯವಾಗಿ ವಾಚಿಸಿದಮೇಲೆ, ತಮ್ಮ ಕಂಚಿನಕಂಠದಿಂದ ಆ ಪದ್ಯದ ಸಾರಸುಧೆ ಯನ್ನೆಲ್ಲ ಶ್ರೋತೃಗಳಿಗೆ ಲಕ್ಷ್ಮೀಕೇಶವಶಾಸ್ತ್ರಿಗಳು ಉಣಬಡಿಸುತ್ತಿದ್ದರು. ಆ ಭೂರಿಭೋಜನದಲ್ಲಿ ವೇದ ಉಪನಿಷತ್ತು ಸ್ಮೃತಿ ಪುರಾಣ ಕಾವ್ಯಗಳ ಆಯ್ದ, ಸಂಬಂಧಿತ ಸಮಯೋಚಿತ ಸ್ವಾದಿಷ್ಟ ಭಕ್ಷ್ಯ ಭೋಜ್ಯ ಉಲ್ಲೇಖವ್ಯಂಜನಗಳಲ್ಲಿ ಷಡ್ರಸಗಳು ಜಿನುಗುತ್ತಿದ್ದವು.
ಸ್ನೇಹದ ವಿಚಾರವನ್ನೇ ತೆಗೆದುಕೊಳ್ಳಿ: ಆ ಬಾಲ್ಯದ ದಿನಗಳಲ್ಲಿ ಕಿವಿಗೊಟ್ಟು ಕೇಳಿ ಆನಂದಿಸಿದ ಈ ಉದ್ದಾಮ ಸಾಹಿತಿಗಳ ಚಿಂತನಧಾರೆಯ ವಾಗ್‌ಝರಿ-ಗಳ ಸೊಗಸೇ ಸೊಗಸು. ಅಲ್ಲಿ ಸವಿದ ಆಖ್ಯಾನಗಳು, ಉಪಕತೆಗಳೇ ಈ ಸ್ನೇಹದ ಅಂಟುಲೇಪಕ್ಕೆ ತಕ್ಕ ಭೂಮಿಕೆಯಾದವೇನೋ. ಆಮೇಲೆ ಓದಿ ತಿಳಿದ, ಜೊತೆಗೆ ಪ್ರಭಾವಬೀರಿದ ಜೀವನದ ನನ್ನ ಕಹಿ-ಸಿಹಿ ಅನುಭವಗಳಿಗೆ ಪುಷ್ಟಿಗೊಟ್ಟವೆಂಬುದು ನಿಜ. ಜೀವನದಲ್ಲಿ ನೆಮ್ಮದಿಯೇ ಮುಖ್ಯ. ಅದಕ್ಕಾಗಿ ಮನಸ್ಸನ್ನ ಆದಷ್ಟು ಹಗುರವಾಗಿ ಇರಿಸಿಕೊಂಡಿರಬೇಕು; ನವಿರಾದ ಬಿರಿದ ಹೂವಾಗಿರಿಸಿಕೊ ನಿನ್ನ ಮನಸನ್ನ-ಎನ್ನುತ್ತಾನೆ ಸಂಸ್ಕೃತ ಕವಿ ಕ್ಷೇಮೇಂದ್ರ ತನ್ನ ‘ಚಾರುಚರ್ಯಾ ಶತಕ’ದಲ್ಲಿ:
ಹಗೆಯ ಮುಳ್ಳಿಲ್ಲದಿಹ ನುಣುಪಿನ ಹಗುರ
ಬಿರಿದ ಹೂವಾಗಿಸಿಕೋ ನಿನ್ನ ಮನಸ ನವಿರ;
ಹಗೆಯ ಹೊಗೆ ಧಗೆ ತಟ್ಟಿ ದೇವದಾನವರ
ಸುಟ್ಟು ಹುಟ್ಟಡಗಿಸಿತಲ್ಲ; ಬೇಡವೋ ಸಮರ!||

ಎಲ್ಲ ಸದ್ದು ಗದ್ದಲ, ಸ್ವಪ್ರತಿಷ್ಠೆ, “ಆತ್ಮವನೆ ತಿನ್ನುವ ತೀಕ್ಷ್ಣತಮ ಮನ್ನಣೆಯ ದಾಹ” ಎಲ್ಲ ಅಡಗಿದ ಮೇಲೆ, ಹಬೆ ಹಾರಿ ಕೊನೆಗೆ ನಮ್ಮದಾಗಿ ಉಳಿಯುವ ಪುಟ್ಟ ಗಟ್ಟಿ ಗಂಟೊಂದೇನು? ಅದೇ ಸ್ನೇಹ. ಸ್ಮೃತಿಕಾರ ಮನು ಕೇಳುತ್ತಾನೆ: ಏನು ಬರುವುದು ಜೊತೆಗೆ? ಹೌದು ಕೊನೆಯವರೆಗೂ ಬರುವ ಜೊತೆಗಾರ ಯಾವುದು?
ಗೆಳೆತನದ ನಡೆನುಡಿಯೊಲವು, ಅದು ತಂದ ನೆಮ್ಮದಿಯ
ಜೊತೆ ಬರುವುದುಸಿರೆಳದ ಮೇಲೂ ನೆನಪನುಳಿಸಿ;
ಉಳಿದುದೆಲ್ಲವು ನಶಿಸೆ, ಒಡಲೊಡನೆ ಹಿಡಿ ಹಿಡಿ ಮಣ್ಣು,
ಇಲ್ಲಿಯೇ ಕಳೆದೀತು, ಅವು ಇದ್ದವೇ ಎನಿಸಿ!

ಎಲ್ಲಿ, ಯಾರು ಮಿತ್ರರು? ಎಂಬುದಕ್ಕೆ ಚಾಣಕ್ಯನ ಉತ್ತರ ಒಂದಿದೆ: ಬೇರೆ ಊರಿಗೆ ಹೋದಾಗ ಕಲಿತ ವಿದ್ಯೆ, ಮನೆಯಲ್ಲಿ ಹೆಂಡತಿ, ರೋಗಿಗೆ ಔಷಧಿ ಪಥ್ಯಗಳು, ಅಸು ನೀಗಿದಾಗ ದಡ ದಾಟಲು ಧರ್ಮ ಇವೇ ನಿಜವಾದ ಸ್ನೇಹಿತರು. ಇರಲಿ, ಇವೆಲ್ಲಾ ಹುಡುಕಿ ಗುರುತಿಸಬಲ್ಲ ಕಣ್ಣುಗಳಿಗೆ ಮಾತ್ರ. ಏನು ಈ ನೇಹದ ನಂಟಿನ ಗುಟ್ಟು, ಚಹರೆ? ಎನ್ನುವುದಕ್ಕೆ ಪಂಚತಂತ್ರದ ಉತ್ತರ ಬಹಳ ಅರ್ಥಪೂರ್ಣವಾಗಿದೆ:
ಕೊಟ್ಟು ಕೊಳ್ಳುವುದುಂಟು, ಹೇಳಿ ಕೇಳುವ ಗುಟ್ಟುಂಟು,
ಜೊತೆಗೆ ತಿನ್ನುವ, ತಿನಿಸಿ ಮೆಲ್ಲುವ ತುಂಟಾಟವುಂಟು;
ದೇಹವೆರಡರ ನಡುವೆ ಜೀವ ಒಂದಾಗಿರುವ ನಂಟು-
ಪ್ರೀತಿ ಸ್ನೇಹದ ಬೆರಗಿನ ಅಂಟು, ನೂರೆಳೆಯ ಗಂಟು.

ನಿಜವಾದ ಗೆಳೆಯ/ಗೆಳತಿ ನಯವಾಗಿಯೋ ಮೆಲುಸಾಗಿಯೋ, ಬಿರುಸಾಗಿಯೋ ಗಡುಸಾಗಿಯೋ ಕಟುವಾಗಿಯೋ ಇದ್ದುದನ್ನು ಇದ್ದಂತೆ ಸಮಯೋಚಿತವಾಗಿ ತನ್ನ ಒಡನಾಡಿಗೆ ತಿಳಿಹೇಳಿ, ಗಾಡಿ ಹಳಿ ತಪ್ಪದ ಹಾಗೆ ನೋಡಿಕೊಳ್ಳುತ್ತಾನೆ/ಳೆ. “ಚಿನ್ನದ ಜಿಂಕೆಯಾಗಿ ವೇಷ ತಳೆದು ರಾಮಸೀತೆಯರ ಮುಂದೆ ಸುಳಿದಾಡು” ಎಂದು ಹೇಳಿದಾಗ ಅದಕ್ಕೆ ಸಮ್ಮತಿಸದೆ, “ವಿನಾಕಾರಣ ರಾಮನನ್ನು ಎದುರುಹಾಕಿಕೊಳ್ಳಬೇಡ” ಎಂದು ಹಿತವಚನ ಹೇಳುವ ಸಂದರ್ಭದಲ್ಲಿ, ಲೋಕದಲ್ಲಿ ಬೆಣ್ಣೆ ಮಾತಾಡುವವರೇನು ಕಡಿಮೆಯಿಲ್ಲ ಎನ್ನುತ್ತ, ವಾಲ್ಮೀಕಿಯ ಮಾರೀಚ ರಾವಣನಿಗೆ ಹೀಗೆ ಹೇಳುತ್ತಾನಂತೆ:
ಸಿಹಿಯನಾಡುವ ಸಖರು ಸಿಗುವರೆಲ್ಲೆಡೆ ಜನರು,
ಬೆಣ್ಣೆ ಮಾತಾಡಿ ಸಂತಸತರುವ ಹಾದಿಯೋ ಸರಳ;
ಪ್ರಿಯವಲ್ಲವೆ೦ದರಿತೂ ತಪ್ಪು ಒಪ್ಪನು ತಿಳಿಸಿ,
ಸರಿದಾರಿ ತೋರುವ, ಕೇಳುವ ಗಟ್ಟಿಗರೆ ವಿರಳ.

ಇದನ್ನೇ ನಮ್ಮ ಸರ್ವಜ್ಞ, ಮೆಚ್ಚಿಸಲು ಒಲಿದವರ ಇಚ್ಛೆಯನೆ ನುಡಿಯುವುದು| ತುಚ್ಛದಿಂದಾರ ನುಡಿದಿಹರೆ ಅವನಿರವು| ಬಿಚ್ಚುವಂತಕ್ಕು ಸರ್ವಜ್ಞ- ಎನ್ನುತ್ತ, ಕಂಡಂತೆ ಹೇಳಿದರೆ ಕೆಂಡ ಉರಿಯುವುದು ಭೂ| ಮಂಡಲದ ಒಳಗೆ ಖಂಡಿತವನಾಡುವರ| ಕಂಡಿಹುದೆ ಕಷ್ಟ ಸರ್ವಜ್ಞ- ಎಂದಿಲ್ಲವೇ?
ಸ್ನೇಹಸಂವರ್ಧನೆಗೆ ಸಹಾಯಕ ಪರಿಕರಗಳೂ ಇವೆ. ಬೆಳೆಸಿಕೊಂಡ, ಗಳಿಸಿಕೊಂಡ ಸ್ನೇಹವನ್ನ ಉಳಿಸಿಕೊಳ್ಳುವುದು ಬೇಡವೇ? ಸುಭಾಷಿತಗಳ ಬೇಕು ಬಹುದು ಬೇಡ-ಗಳ ಹಿತವಚನ ಈ ಬಗ್ಗೆ ವಿಪುಲವಾಗಿವೆ; ಸುಭಾಷಿತ ರತ್ನಭಾಂಡಾಗಾರ ಹೇಳುತ್ತೆ;
ಬಿರುಕು ಬೀಳದೆ ಸ್ನೇಹ ಕೊನೆವರೆಗೆ ಗಟ್ಟಿ ಇರಬೇಕೇನು?-
ಈ ಮೂರೂ ನಡೆಯದೊಲು ನೋಡಿಕೋ, ಥೋಡಾ;
ಒಣ ಜಗಳಕೆಡೆಬೇಡ; ಸಾಲ ಮಾಡ, ಕೊಡಲೂ ಬೇಡ;
ಅವನ ಹೆ೦ಡತಿಯೊಡನೆ ಒಬ್ಬನೇ ಕುಳಿತು ಹರಟಬೇಡ!

ಇದಕ್ಕೆ ಪೂರಕ ಸುಭಾಷಿತವೊಂದಿದೆ: ಯೊಗ್ಯತೆ ಇರಲಿ ಬಿಡಲಿ, ಗೆಳೆಯನಿಗಿಂತ ಬಲುಬೇಗ ಉನ್ನತಸ್ಥಾನಕ್ಕೆ ಏರುವುದೂ ಸಹ ಮೈತ್ರಿಭಂಗಕ್ಕೆ ಕಾರಣ!
ಈ ಕೊನೆಯ ಜೇನ್ನುಡಿಯ ಹಿನ್ನೆಲೆಯಲ್ಲಿ ಕರ್ಣ-ಸುಯೋಧನರ ಸಖ್ಯದ ವೈಶಿಷ್ಟ್ಯವನ್ನು ಮಹಾಭಾರತದ ವ್ಯಾಖ್ಯಾನಕಾರರು ವಿವರಿಸುತ್ತಿದ್ದರು. ಬೇರೆ ಭಾರತಗಳಲ್ಲಿ ಕಂಡು ಬರದ, ಪಂಪ ಮಾತ್ರ ಕಲ್ಪಿಸಿಕೊಂಡ ಕರ್ಣ- ಭಾನುಮತಿಯರ ಪಗಡೆಯಾಟದ ಪ್ರಸಂಗವಂತೂ ಈ ಗೆಳೆಯರಿಬ್ಬರ ಸ್ನೇಹದ ಪರಾಕಾಷ್ಠತೆಯ ಒಂದು ಸುಂದರ ಸನ್ನಿವೇಶ:
ಸುಯೋಧನ ರಾಜಕಾರ್ಯನಿಮಿತ್ತ ಹೊರಗೆಲ್ಲೋ ಹೋಗಿದ್ದಾನೆ. ಅದು ಗೊತ್ತಿಲ್ಲದ ಕರ್ಣ ಅವನನ್ನು ಹುಡುಕಿಕೊಂಡು ಅರಮನೆಗೆ ಬಂದಿದ್ದಾನೆ. ಹುಡುಕುತ್ತ, ಹುಡುಕುತ್ತ ತನಗೆ ಅನುಮತಿ ಇದ್ದ ಕಾರಣ, ಅವನ ಅಂತಃಪುರವನ್ನೂ ಕರ್ಣ ಪ್ರವೇಶಿಸಿದ್ದಾನೆ. ಭಾನುಮತಿ ಕರ್ಣನನ್ನು ಬರಮಾಡಿಕೊಂಡು, ಕುಶಲಪ್ರಶ್ನೆಗಳ ಯೋಗಕ್ಷೇಮ ಸಮಾಚಾರ ಪ್ರಶ್ನೋತ್ತರಗಳ ನಂತರ, ಗೆಳೆಯ ಬರುವವರೆಗೂ ಕಾಲಕಳೆಯಲು ವಿನೋದಕ್ಕಾಗಿ ಪಗಡೆಯಾಟಕ್ಕೆ ಕರೆದಿದ್ದಾಳೆ. ಸುಮ್ಮನೆ ಆಡಿದರೆ ಸೊಗಸಿಲ್ಲವೆಂದುಕೊಂಡು ಭಾನುಮತಿ ತನ್ನ ಮುತ್ತಿನ ಹಾರವನ್ನೇ ಪಣವಿಟ್ಟು ಆಡಿದ್ದಾಳೆ. (ಅದು ಎದೆಯುದ್ದ ಜೋತು ಬಿದ್ದಿರುವ ಮುತ್ತಿನ ಹಾರ; ಅದಕ್ಕೆ ಲಂಬಣವೆನ್ನುತ್ತಾರೆ). ಆಟದ ರಭಸದಲ್ಲಿ, ಕಾವಿನಲ್ಲಿ ಇಬ್ಬರೂ ಮೈಮರೆತಿದ್ದಾರೆ. ಭಾನುಮತಿ ಸೋಲುತ್ತಾಳೆ. ಗೆದ್ದಿದ್ದಕ್ಕಾಗಿ ಪಣವಿಟ್ಟ ತೊಟ್ಟ ಹಾರವನ್ನು ತನಗೆ ಕೊಡಬೇಕೆಂದು ಕರ್ಣ ಆಗ್ರಹಿಸುತ್ತಾನೆ. ಭಾನುಮತಿ ಸ್ತ್ರೀಸಹಜ ಸ್ವಭಾವ ಮತ್ತು ಸಲಿಗೆಯಿಂದ ನಿರಾಕರಿಸುತ್ತಿದ್ದಾಳೆ. ತಾನು ಯಾರು, ಎಲ್ಲಿದ್ದೇನೆ, ಎದುರಾಳಿಯಾರು ಎಂಬುದೆಲ್ಲವನ್ನೂ ಆಟದ ಭರದಲ್ಲಿ ಮರೆತ ಗೆದ್ದ ಕರ್ಣ ಭಾನುಮತಿಯ ಕುತ್ತಿಗೆಗೇ ಕೈಹಾಕಿ, ಅವಳ ಸರವನ್ನು ಕಿತ್ತು ಕೊಳ್ಳಲು ಪ್ರಯತ್ನಿಸಿದ್ದಾನೆ. ಭಾನುಮತಿ ಹಿಂದಕ್ಕೆ ಸರಿದಾಗ, ಕೊರಳ ಸರ ಕಿತ್ತು ಹೋಗಿದೆ. ಮುತ್ತುಗಳು ಪಗಡೆ ಹಾಸಿನ ಮೇಲೆ ಮತ್ತು ಕೋಣೆಯಲ್ಲೆಲ್ಲಾ ಚೆಲ್ಲಾಡಿವೆ. ಆ ವೇಳೆಗೆ ಸುಯೋಧನ ಅಂತಃಪುರಕ್ಕೆ ಆ ಕೋಣೆಯ ಬಾಗಿಲಿಗೆ ಬಂದು ನಿಂತಿದ್ದಾನೆ. ಇದನ್ನು ಕಂಡು ಕರ್ಣ ಬೆವತು ಹೋಗಿದ್ದಾನೆ. ಆದರೆ, ನಡೆದುದೆಲ್ಲ ತನಗೆ ಗೊತ್ತಿದೆ ಎಂಬುದನ್ನ ಸೂಚ್ಯವಾಗಿ ತಿಳಿಸುತ್ತ, ಸುಯೋಧನ ಹರಡಿ ಚೆಲ್ಲಿಹೋದ ಒಂದೊಂದೇ ಮುತ್ತನ್ನು ಬಗ್ಗಿ ಬಗ್ಗಿ ಆರಿಸಿ ಒಟ್ಟುಗೂಡಿಸಿ ಕರ್ಣನಿಗೆ ಕೊಡಲು ತೊಡಗಿದ್ದಾನೆ.
ಇಂತಹ ಗೆಳೆಯ ಸುಯೋಧನನಿಗೆ ಕರ್ಣ ವಿಶ್ವಾಸದ್ರೋಹ ಮಾಡಲು ಎಂದಾದರೂ ಮನಸ್ಸಾಗುತ್ತದೆಯೇ?
ವಿಕ್ರಮಾರ್ಜುನವಿಜಯದ ಪಂಪನ ಮಾತುಗಳಿಗೆ ಭಾರತ ವಾಚನ-ವ್ಯಾಖ್ಯಾನಕಾರರು ಪುಷ್ಠಿಕೊಡುತ್ತಿದ್ದರು: ಅಣ್ಣಾ, ಮಹಾಭಾರತದಲ್ಲಿ ಇನ್ನು ಪೆರರಾರುವಂ (ಬೇರೆ ಯಾರನ್ನೂ) ನೀನು ನೆನೆಯ ಬೇಕಾಗಿಲ್ಲ. ಒಂದೇ ಚಿತ್ತದಿಂ (ಮನಸ್ಸಿನಿಂದ) ನೆನೆಯ ಬೇಕೆಂದಿದ್ದರೆ ಆ ರಾಧೇಯ ಕರ್ಣನನ್ನು ಜ್ಞಾಪಿಸಿಕೋ. ಹೇಳು, ಕರ್ಣನಿಗೆ ಸಮಾನರಾರಿದ್ದಾರೆ? ಕರ್ಣನ ಏರು (ಕಾಳಗ, ಔನ್ನತ್ಯ), ಕರ್ಣನ ಕಡು ನನ್ನಿ (ಸತ್ಯನಿಷ್ಠೆ), ಕರ್ಣನ ಅಳವು (ಸಾಮರ್ಥ್ಯ), ಎಲ್ಲಕ್ಕೂ ಮಿಗಿಲಾಗಿ ಕರ್ಣನ ಹೆಸರಾಂತ ಆ ಚಾಗ (ತ್ಯಾಗ)- ಇವೆಲ್ಲ ನಮ್ಮ ಕರ್ಣನ ಪಡೆಮಾತಿನೊಳ್ (ವೃತ್ತಾಂತದಲ್ಲಿ) ತುಂಬಿದೆಯೆಂದೇ ಭಾರತಂ ಕರ್ಣರಸಾಯನಂ ಅಲ್ತೆ? (ಕಿವಿಗೆ ಇಂಪಲ್ಲವೇ?).
ಇದರಲ್ಲಿ ಬರುವ ಕಡುನನ್ನಿ, ತನ್ನ ಸ್ನೇಹಿತನ ಬಗ್ಗೆ ಕರ್ಣ ಕೊಟ್ಟ ವಚನದ ಪರಿಪಾಲನೆಯ ನಿಷ್ಠೆಯ ಒಂದು ದ್ಯೋತಕ. ಬೇಡಿ ಬಂದವರಿಗೆ ಸ್ವಾರ್ಥರಹಿತವಾಗಿ, ಏನೇನನ್ನೋ ದಾನ ಮಾಡಿ, ತತ್ಕಾರಣ ಆಪತ್ತುಗಳನ್ನ ತನ್ನ ಮೇಲೆ ತಂದುಕೊಂಡ ಕತೆಗಳು ಒಂದು ತೂಕದವಾದರೆ, ನಂಬಿದ ಸ್ನೇಹಿತನಿಗೆ ಏನೇ ಆದರೂ ಎರಡು ಬಗೆಯುವ ಕೆಲಸ ಮಾಡಲಾರೆ ಎಂಬ ದೃಢ ನಿಲುವು ಅದಕ್ಕೂ ಮೀರಿದ ತೂಕ.
ಆಸೆ ಆಮಿಷಗಳು ನೂರಾರು ಸುತ್ತು ಸುಳಿದಾವು, ಸೆಳೆದಾವು. ಇನತನೂಜನ ಕೂಡೆ ಮೈದುನತನದ ಸರಸವನೆಸಗಿದ ಕುಮಾರವ್ಯಾಸನ ಕೃಷ್ಣ, ಅವನನ್ನು ತನ್ನ ರಥಕ್ಕೆ ಬರಸೆಳೆದು ಪೀಠದೊಳು ಕುಳ್ಳರಿಸಿಕೊಂಡಾಗ, ಇದರಲ್ಲಿ ಏನೋ ರಾಜಕಾರಣದ ಕುಟಿಲೋಪಾಯವಿದೆಯೇ ಎಂದು ಅಂಜುತ್ತ ಅಂಜುತ್ತ ಅನ್ಯಮನಸ್ಕನಾಗಿದ್ದ ಕರ್ಣನಿಗೆ ಅವನ ಜನ್ಮವೃತ್ತಾಂತವನ್ನು ಅರುಹಿ, “ನೀನೇ ಪಾಂಡವರ ಮೊದಲಿಗ, ಶೂರ ಧೀರ. ನೀನು ಮನಸ್ಸು ಮಾಡು. ಸುಯೋಧನನ ಪಕ್ಷ ಬಿಟ್ಟು ಬಿಡು; ಇತ್ತ ಕಡೆ ಬಂದು ಬಿಡು. ಕದನವನ್ನು ತಪ್ಪಿಸು. ಪಾಂಡವರೂ ಕೌರವರೂ ನಿನ್ನ ಅಡಿಯಾಳಾಗಿ ಬಿಡುತ್ತಾರೆ. ಸಾರ್ವಭೌಮನಾಗಿ ಇಬ್ಬರ ಸೇವೆಯನ್ನೂ ಅನುಭವಿಸುತ್ತಾ ಸುಖಪಡು” ಎಂದು ಹೇಳುತ್ತಾನೆ. ಆಗ ಕರ್ಣ ಕೊಟ್ಟ ಉತ್ತರ ಜಗದ್ ವಿಖ್ಯಾತವಾಗಿದೆ: “ಮರಳು, ಮಾಧವ; ನಿನ್ನ ಸಿರಿಗೆ ಸೋಲುವನಲ್ಲ!” ಎಷ್ಟೊಂದು ಅರ್ಥವೈಖರಿ ಈ ಮಾತಿನದು! “ಹೋಗು, ಹೋಗು; ನಿನ್ನ ಈ ಆಕರ್ಷಣೆಗೆ ಬಡಪೆಟ್ಟಿಗೆ ಬಲಿ ಬೀಳುವವ ನಾನಲ್ಲ!” ಎಂದು ಹೇಳಿದ್ದೆಂದು ಒಮ್ಮೆ ಅನಿಸಿದರೆ, “ಮಾಧವ, ನಿನಗೆಲ್ಲೋ ಅರುಳು ಮರ(ರು)ಳು. ಇಂತಹ ಸೆಳೆತಕ್ಕೆ ಸಿಲುಕುವ ದುರ್ಬಲ ಮನೋನಿಶ್ಚಯದವನೆಂದು ನನ್ನನ್ನೆಣಿಸಿದೆಯಾ?” ಎಂದೂ, “ನೀನು ತೋರುತ್ತಿರುವ ಸಾಮ್ರಾಜ್ಯಶಾಹಿ ವೈಭವದ ಈ ಚಿನ್ನದ ಹರಳುಗಳು ನನ್ನ ಪಾಲಿಗೆ ಮರಳು, ಕೇವಲ ಮಣ್ಣಿನ ಹುಡಿ ಮಾತ್ರ!”- ಎಂದೂ ಬಗೆಬಗೆಯಲ್ಲಿ ಅರ್ಥೈಸಬಲ್ಲ ನುಡಿಗಟ್ಟನ್ನ ಕವಿ ನಾರಾಣಪ್ಪ ಬಳಸಿದ್ದಾನೆ.
ಈ ಪ್ರಸಂಗಗಳೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉಪಯುಕ್ತ ಸಂದೇಶಗಳನ್ನ ಒಳಗೊಂಡವು. ಅದಕ್ಕೇ ಕುಮಾರವ್ಯಾಸ ಹೇಳಿದ್ದು; ಅದನ್ನೇ ಶಾಲೆಯಲ್ಲಿ ಅತಿಥಿ ಉಪನ್ಯಾಸಕರು, ತಿಮ್ಮಪ್ಪನ ಕೊಪ್ಪಲಿನಲ್ಲಿ ಭಾರತವಾಚನದ ಶಾಸ್ತ್ರಿಗಳೂ ಮಾರ್ದನಿಗೊಟ್ಟದ್ದು: ವೇದ ಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನ ಫಲ, ಇತ್ಯಾದಿ ಇತ್ಯಾದಿ ಏನೇನೋ ಪುಣ್ಯಕಾರ್ಯಗಳನ್ನ ಎಸಗಿದ ಫಲವೆಲ್ಲ “ಭಾರತದೊಳ್ ಒಂದಕ್ಷರವ ಆದರಿಸಿ ಕೇಳ್ದರಿಗೆ!”- ಅಹುದು ಅಂತ!