ಅಮೆರಿಕನ್ನಡ
Amerikannada
ಅಮೆರಿಕನ್ನಡ ದಿನ
-ಮಾಗಲು ಮಲ್ಲಿಕಾರ್ಜುನ, ಮೈಸೂರು
ಕೀರ್ತಿಶೇಷ ಶಿಕಾರಿಪುರ ಹರಿಹರೇಶ್ವರ ಅವರ ಎರಡನೇ ವರ್ಷದ ಸವಿನೆನಪಿನಲ್ಲಿ ನಡೆದ ಅರ್ಥಪೂರ್ಣ, ಅದ್ಧೂರಿ ಕಾರ್ಯಕ್ರಮ ಮೈಸೂರಿನ ಶಾರದಾವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಜುಲೈ ೨೨, ೨೦೧೨ ರ ಭಾನುವಾರ ನಡೆಯಿತು. ಈ ಭಾವಪೂರ್ಣ ಕಾರ್ಯಕ್ರಮದಲ್ಲಿ ದಿವಂಗತ ಶಿಕಾರಿಪುರ ಹರಿಹರೇಶ್ವರರು ರಚಿಸಿದ ಸಮಗ್ರ ಪ್ರಬಂಧಗಳನ್ನು ನಾಗಲಕ್ಷ್ಮೀ ಹರಿಹರೇಶ್ವರ ಅವರು ಸಂಕಲಿಸಿ ಸುಮಾರು ಒಂದು ಸಾವಿರದ ನಾಲ್ಕು ನೂರ ಎಂಬತ್ತೈದು ಪುಟಗಳನ್ನೊಳಗೊಂಡ ‘ಹರಿಯ ಕಾಣಿಕೆ’ ಎರಡು ಬೃಹತ್ ಸಂಪುಟಗಳು ಕನ್ನಡದ ವಿದ್ವಜ್ಜನರ ಸಮಕ್ಷಮದಲ್ಲಿ ಸುಮುಹೂರ್ತದಲ್ಲಿ ಲೋಕಾರ್ಪಣೆಯಾಯಿತು. ಜುಲೈ ೨೨ ರ ದಿನವನ್ನು ಇನ್ನು ಮುಂದೆ ‘ಅಮೆರಿಕನ್ನಡ ದಿನ’ ಎಂದು ಘೋಷಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ| ಎನ್.ಎಸ್. ತಾರಾನಾಥ್ ಅವರು ‘ಹರಿಯ ಕಾಣಿಕೆ’ ಎರಡು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾನವತವಾದಿಯಾಗಿದ್ದ ಹರಿಹರೇಶ್ವರ ಅವರು ಅಮೆರಿಕಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡದ ಕೆಲಸ ಮಾಡಿದ್ದಾರೆ. ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕೇವಲ ಕಲ್ಲು, ಮಣ್ಣು, ಮರಳಿನೊಂದಿಗೆ ಕೆಲಸ ಮಾಡುವ ಎಂಜಿನಿಯರ್ ಆಗಿರಲಿಲ್ಲ. ಭಾವಲೋಕದ, ಸಾಹಿತ್ಯಲೋಕದ ಇಂಜಿನಿಯರ್ ಆಗಿ ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಅವರ ಬರವಣಿಗೆಯಲ್ಲಿ ಸಂಶೋಧನಾತ್ಮಕ, ಮಾಹಿತಿ ಆಧಾರಿತ ಹಾಗೂ ಐತಿಹಾಸಿಕ ಅಂಶಗಳ ಜೊತೆಗೆ ವಿಜ್ಞಾನ, ಸಾಹಿತ್ಯ, ಸಂಸ್ಕೃತ, ಭಾಷಾ ವಿಜ್ಞಾನ ಹೀಗೆ ಹಲವು ವಿಷಯಗಳಲ್ಲಿ ಪ್ರಭುತ್ವ ಸಾಧಿಸಿದ ಬಹುಮುಖ ಪ್ರತಿಭೆ ಅವರು ಎಂದರು. ಹರಿಯವರು ಅಮೆರಿಕ ಮತ್ತು ಕರ್ನಾಟಕದ ನಡುವೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಎರಡು ದೇಶಗಳ ನಡುವೆ ಸ್ನೇಹ ಸೇತುವೆ ಕಟ್ಟಿದವರು. ಅಮೆರಿಕಗೆ ಭೇಟಿ ನೀಡಲು ಹೋಗುತ್ತಿದ್ದ ಇಲ್ಲಿನ ಸಾಹಿತಿಗಳಿಗೆ ಅಮೆರಿಕದಲ್ಲಿ ಹರಿಯವರು ನೆಲಸಿದ್ದಾಗ ಅವರ ಮನೆಯಲ್ಲಿ ಪರಮ ಆತಿಥ್ಯ ದೊರಕುತ್ತಿತ್ತು ಎಂದರು. ಸಾತ್ವಿಕ ಹಾಗೂ ಸಜ್ಜನರಾಗಿದ್ದ ಹರಿಹರೇಶ್ವರ ಅವರು, ಕಷ್ಟದಲ್ಲಿ ಯಾರೇ ಇರಲಿ. ಅವರು ಬೇಡಲಿ ಬಿಡಲಿ ನೆರವು ನೀಡುತ್ತಿದ್ದ ಮಾನವತಾವಾದಿ. ಅವರು ಮಾಡಿರುವ ದಾನ ಲೆಕ್ಕಕ್ಕಿಲ್ಲ. ಮನೆಕೆಲಸದಾಕೆಯ ಮಗಳನ್ನು ಎಂಜಿನಿಯರ್ ಓದಿಸಿದರು. ಪೌರಕಾರ್ಮಿಕರು ಸೇರಿದಂತೆ ಎಲ್ಲರಿಗೂ ಪ್ರೀತಿ ಹಾಗೂ ವಿಶ್ವಾಸವನ್ನು ತೋರಿಸುವ ಹಾಗೂ ಸಹಾಯ ಹಸ್ತ ನೀಡುವ ಕರುಣಾಮೂರ್ತಿ ಆಗಿದ್ದರು. ಮನೆಗೆ ಬಂದವರಿಗೆ ಒಂದು ಪುಸ್ತಕವನ್ನು ಕೊಟ್ಟು ಕಳುಹಿಸುತ್ತಿದ್ದ ಅವರ ಪುಸ್ತಕ ಪ್ರೇಮವು ಪುಸ್ತಕ ಸಂಸ್ಕೃತಿಯ ಪ್ರತೀಯಕವಾಗಿತ್ತು ಎಂದರು. ಅವರು ಮಾತಿಗಿಂತ ಕೃತಿ ಲೇಸು ಎಂಬ ನಾಣ್ನುಡಿಯಂತೆ ಬದುಕಿದ್ದವರು. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.
‘ಹರಿಯ ಕಾಣಿಕೆ’ ಎರಡು ಸಂಪುಟಗಳ ಗ್ರಂಥಾವಲೋಕನ ಮಾಡಿದ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಪ್ರಾಧ್ಯಾಪಕ ಪ್ರೊ| ಕೆ. ಅನಂತರಾಮು ರವರು ವೇದಿಕೆ ಮೇಲೆ ಗಂಟೆಗಟ್ಟಲೆ ಮಾತನಾಡುವುದು, ಕೃತಕವಾಗಿ ವಿಚಾರ ಲಹರಿ ಹರಿಸುವುದು ತೀರಾ ಸುಲಭ. ಆದರೆ ನಿಜ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಬದುಕುವುದು ಕಷ್ಟಸಾಧ್ಯ. ಶಿಕಾರಿಪುರ ಹರಿಹರೇಶ್ವರ ಅವರು ನುಡಿದಂತೆ ನಡೆದು ಕಿರಿಯರಿಗೆ ಮಾರ್ಗದರ್ಶಕರಾಗಿ ಬಾಳಿದರು ಎಂದು ಸ್ಮರಿಸಿದರು. ಇತ್ತೀಚಿನ ದಿನಗಳಲ್ಲಿ ಕೃತಿ, ಕಾವ್ಯ, ಪುಸ್ತಕಗಳನ್ನು ಬರೆಯುವುದೇ ದೊಡ್ಡಸಾಧನೆ. ಹೀಗಿರುವಾಗ ಹರಿಯ ಕಾಣಿಕೆ ಕುರಿತ ಎರಡು ಸಂಪುಟಗಳನ್ನು ಹೊರ ತಂದಿರುವುದು ಹರ್ಷ ಮೂಡಿಸಿದೆ. ಒಂದು ಸಾವಿರದ ನಾಲ್ಕು ನೂರ ಎಂಬತ್ತೈದು ಪುಟಗಳನ್ನೊಳಗೊಂಡ ಒಂದು ನೂರ ಇಪ್ಪತ್ತೊಂದು ಲೇಖನಗಳಿವೆ. ನಾನು ಈ ಸಂಪುಟಗಳನ್ನು ಎಚ್ಚರಿಕೆಯಿಂದ ಓದಿದ್ದು, ಸಣ್ಣ ವ್ಯಾಕರಣ ದೋಷವೂ ಕಂಡುಬಂದಿಲ್ಲದಿರುವುದು ಸಂಪುಟದ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದರು. ನಾವು ಎರಡು ತರಹದ ಪುಸ್ತಕಗಳನ್ನು ನೋಡುತ್ತೇವೆ. ಒಂದು ಪುಸ್ತಕ ಓದಿ ಕೈತೊಳೆದುಕೊಳ್ಳುವುದು, ಇನ್ನೊಂದು ಕೈ ತೊಳೆದುಕೊಂಡು ಪುಸ್ತಕ ಓದುವುದು. ಹರಿಯವರ ಹರಿಯ ಕಾಣಿಕೆ ಎರಡನೇ ವಿಭಾಗಕ್ಕೆ ಸೇರಿದ ಶ್ರೇಷ್ಠ ಗ್ರಂಥ ಎಂದು ಬಣ್ಣಿಸಿದರು. ‘ಹರಿಯ ಕಾಣಿಕೆ’ ಸಂಪುಟಗಳ ಪ್ರತಿಯೊಂದೂ ಲೇಖನದಲ್ಲೂ ಜ್ಞಾನ ವಿಜ್ಞಾನಗಳ ಸಂಗಮವಿದೆ ಅವರು ಸಂಶೋಧನೆಯನ್ನು ಲಲಿತ ಪ್ರಬಂಧಗಳ ರೀತಿಯಲ್ಲಿ ಮಂಡಿಸಬಹುದು ಎಂಬುದಕ್ಕೆ ಈ ಕೃತಿಗಳು ಸಾಕ್ಷಿ. ವೇದಗಳ ಕಾಲದಿಂದ ಈವರೆಗೆ ಚರ್ಚೆಗೆ ಬಾರದ ಅನೇಕ ವಿಚಾರಗಳನ್ನು ಅವರು ದಾಖಲಿಸಿದ್ದಾರೆ. ಮಾನವತೆಗೆ ಒತ್ತುಕೊಟ್ಟ ಸೂಫಿ ಸಂತರ ಪ್ರಪಂಚ ಪ್ರವೇಶ ಮಡಿದ್ದಾರೆ. ಸಾಂಖ್ಯಾ ದರ್ಶನ, ಪಕ್ಷ ಲೋಕದ ಕುರಿತ ಅವರ ಬರವಣಿಗೆ ಬುದ್ಧಿ-ಭಾವಗಳ ವಿದ್ಯಾಲಿಂಗನ ಎನಿಸುತ್ತದೆ. ಕನ್ನಡದ ವಿವಿಧ ಕಾಲಘಟ್ಟದ ಕವಿಗಳನ್ನು ಕುರಿತು ಬರೆದಿರುವ ಅವರು ಬಡ್ತಿ, ಸೌಕರ್ಯಕ್ಕಾಗಿ ‘ಸಂತೆಗೆ ಮೂರು ಮೊಳ ನೇಯ್ದಂತೆ’ ಹರಿಹರೇಶ್ವರ ಅವರು ಕೃತಿ ರಚಿಸಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗಲಕ್ಷ್ಮೀ ಹರಿಹರೇಶ್ವರ ಅವರು ಈ ಗ್ರಂಥಕ್ಕೆ ‘ಹರಿಯ ಕಾಣಿಕೆ’ ಎಂಬ ಶೀರ್ಷಿಕೆ ಹಾಗೂ ಗ್ರಂಥದ ವಿಭಾಗಗಳ ಅರ್ಥಪೂರ್ಣ ಶೀರ್ಷಿಕೆಗಳನ್ನು ಇಡಲು ಕಾರಣ, ಹರಿಯ ಆತಿಥ್ಯ ಮನೋಭಾವ, ಅತಿಥಿ ದೇವೋಭವವನ್ನು ಸಾಕ್ಷಾತ್ಕರಿಸಿದ ಮಹಾನುಭಾವ. ನಮ್ಮ ಮನೆಗೆ ಬಂದವರನ್ನು ಪ್ರೀತಿಯಿಂದ, ವಿಶ್ವಾಸದಿಂದ ಸ್ವಾಗತಿಸಿ ಒಳಕ್ಕೆ ಕರೆದು ಅವರ ಆಗಮನವಾದ ನಂತರ ಆಸನವನ್ನು ತೋರಿಸಿ ಕುಳಿತುಕೊಳ್ಳಲು ಹೇಳಿ ಕಾಫಿ, ಟೀ, ಬಾದಾಮಿ ಹಾಲು ಏನು ತೆಗೆದುಕೊಳ್ಳುವಿರಿ? ಎಂದು ಆಸ್ರೇ ಕೊಡುವುದರ ಮೂಲಕ ಕುಶಲೋಪರಿ ಮಾತನಾಡಲು ಶುರುಮಾಡುವರು. ನಂತರ ತಮ್ಮ ಆಕರ ಗ್ರಂಥಗಳು, ಚರ್ಚೆಗೆ ಸಿಗುವ ಗ್ರಂಥಗಳನ್ನು ಪಸರಿಸಿ ವಿಷಯಗಳ ವಿನಿಮಯ ಮಾಡಿಕೊಳ್ಳುವರು. ಹರಿ ಅತಿಥಿಗಳನ್ನು ಮಾತನಾಡಿಸುತ್ತಿದ್ದುದೇ “ನೀವು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಯಾವ ಯಾವ ಪುಸ್ತಕಗಳನ್ನು ಓದಿದ್ದೀರಿ” ಎಂದು. ಒಂದು ವೇಳೆ ಅವರು ಓದಿಲ್ಲ ಎಂದು ಹೇಳಿದರೆ. “ನೀವು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಸಮಾಜದಲ್ಲಿ ಗೌರವದಿಂದ ಬಾಳಲು ಸಹಾಯಕ ವಾಗುತ್ತವೆ”- ಎಂದು ಹೇಳಿ, ತಮ್ಮ ಬಳಿಯಲ್ಲಿರುವ ಅವರಿಗೇ ಸಹಾಯವಾಗುವ ಆಕರ ಗ್ರಂಥಗಳನ್ನು, ಕನ್ನಡ ಪುಸ್ತಕಗಳನ್ನು ಅಟ್ಟದ ಮೇಲೆ ಹೋಗಿ ತಂದು ಕಾಣಿಕೆಯಾಗಿ ನೀಡುತ್ತಿದ್ದರು. ಇದು ಹರಿಹರೇಶ್ವರ ದಂಪತಿಗಳ ದಿನನಿತ್ಯದ ಆಚರಣೆಯಾಗಿತ್ತು, ಪದ್ಧತಿಯಾಗಿತ್ತು. ಮುತ್ತೈದೆಯರಿಗೆ ಕುಂಕುಮ ನೀಡುವುದರ ಜೊತೆಗೆ ಒಂದೊಂದು ಕನ್ನಡ ಪುಸ್ತಕ ನೀಡುವ ಪರಿಪಾಠವನ್ನು ಬೆಳೆಸಿಕೊಂಡ ಅವರು ಬೇರೆಯವರಿಗೆ ಮಾರ್ಗದರ್ಶಕರಾಗಿದ್ದವರು. ವಂದನೆಗಳ ಮುಖಾಂತರ ಬಾಗಿಲವರೆಗೆ, ಕೆಲವೊಮ್ಮೆ ಬಾಗಿಲಾಚೆ ಗೇಟ್ ಆಚೆಯೂ ನಿಂತು ಮಾತನಾಡುತ್ತಾ ಬೀಳ್ಕೊಡುವರು. ಇದು ಹರಿಹರೇಶ್ವರ ದಂಪತಿಗಳ ಪ್ರತಿನಿತ್ಯದ ದಿನಚರಿ.
‘ಹರಿಯ ಕಾಣಿಕೆ’ ಪುಸ್ತಕದ ಒಳಗಣ ಹೂರಣವನ್ನು ಒಂಭತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸ್ವಾಗತ, ಆಗಮನ, ಆಸನ, ಆಸ್ರೇ, ಕುಶಲೋಪರಿ, ಪಸರ, ಕಾಣ್ಕೆ, ವಂದನೆ ಮತ್ತು ಬೀಳ್ಕೊಡುಗೆ ಈ ಸಂಪುಟಗಳ ವಿಷಯಾನುಕ್ರಮಣಿಕೆಯಲ್ಲಿ ಜೋಡಿಸಿದೆ. ಇದರಲ್ಲಿ ಸ್ವಾಗತ, ಆಗಮನ, ಆಸನ, ಆಸ್ರೇ, ಕುಶಲೋಪರಿ ಮೊದಲನೇ ಸಂಪುಟದಲ್ಲಿದ್ದರೆ, ಪಸರ, ಕಾಣ್ಕೆ, ವಂದನೆ ಮತ್ತು ಬೀಳ್ಕೊಡುಗೆ ಎರಡನೇ ಸಂಪುಟದಲ್ಲಿದೆ.
‘ಸ್ವಾಗತ’ ವಿಭಾಗದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿಂದ ಕೂಡಿದ ವೈಚಾರಿಕ ಪ್ರಬಂಧಗಳಿವೆ; ‘ಆಗಮನ’ ವಿಭಾಗದಲ್ಲಿ ಕನ್ನಡ ನಾಡನ್ನು ಕಟ್ಟಿ ಉಳಿಸಿ ಬೆಳಸುವ ಬಗ್ಗೆ ಒಟ್ಟು ಐದು ಲೇಖನಗಳಿವೆ; ‘ಆಸನ’ ವಿಭಾಗದಲ್ಲಿ ದೇವರು ಮತ್ತು ದೇವರ ಕಲ್ಪನೆಗಳ ಬಗ್ಗೆ ವಿಶ್ಲೇಷಿಸಿದ ಒಟ್ಟು ಒಂಭತ್ತು ಲೇಖನಗಳಿವೆ; ಒಟ್ಟು ಹದಿನಾರು ಲಲಿತ ಪ್ರಬಂಧಗಳು ‘ಆಸ್ರೇ’ ವಿಭಾಗದಲ್ಲಿವೆ; ‘ಕುಶಲೋಪರಿ’ ವಿಭಾಗದಲ್ಲಿ ಅವರಿಗೆ ಪ್ರಿಯವಾದ ವಿವೇಚನಾತ್ಮಕ ಪ್ರಬಂಧವಾದ ಗುಬ್ಬಚ್ಚಿಯೊಡನೆ ಮಾತನಾಡಿದ್ದಾರೆ. ‘ಪಸರ’ದಲ್ಲಿ ಕವಿಗಳ ಬಗ್ಗೆ ತಮ್ಮ ಮನದಾಳದ ಒಲವನ್ನು ತೋರಿದ ಒಟ್ಟು ಹತ್ತು ಲೇಖನಗಳಿವೆ; ‘ಕಾಣ್ಕೆ’ ವಿಭಾಗದಲ್ಲಿ ಹರಿಯು ಕೆಲವು ಪುಸ್ತಕಗಳಿಗೆ ಬರೆದಿರುವ ಮುನ್ನುಡಿ, ಬೆನ್ನುಡಿ, ಚೆನ್ನುಡಿ, ಹೊನ್ನುಡಿ, ಜೇನ್‌ನುಡಿಯ ಒಟ್ಟು ಇಪ್ಪತ್ತೆಂಟು ಲೇಖನಗಳಿವೆ; ‘ವಂದನೆ’ಯಲ್ಲಿ ಕಾಶ್ಮೀರದ ಹುಟ್ಟು, ಬೆಳವಣಿಗೆ, ಕಾಣಿಕೆ, ಸಂಸ್ಕಾರ, ಸಂಸ್ಕೃತಿ, ಕವಿ, ಕಾವ್ಯ ಎಲ್ಲವನ್ನೂ ಚಿತ್ರಿಸಿರುವ ಒಟ್ಟು ಹದಿನೇಳು ಲೇಖನಗಳಿವೆ; ಕೊನೆಯಲ್ಲಿ ‘ಬೀಳ್ಕೊಡುಗೆ’ ವಿಭಾಗದಲ್ಲಿ ಒಟ್ಟು ಹದಿನೈದು ಲೇಖನಗಳ ಮುಖಾಂತರ ತಮ್ಮ ಹೃದಯಕ್ಕೆ ಹತ್ತಿರವಾದ ವಿಚಾರಗಳನ್ನೆಲ್ಲ ಹರಿಯಬಿಟ್ಟಿದ್ದಾರೆ. ಈ ಒಂಭತ್ತು ವಿಭಾಗಗಳಲ್ಲಿ ಹರಿಯ ಚಿಂತನಾ ಲಹರಿ ಅಡಗಿದೆ. ಅವರಿಗಿದ್ದ ಸಾಹಿತ್ಯ ಭಂಡಾರದ ಜ್ಞಾನದ ಪರಿಚಯ ಅನುಭವವಾಗುತ್ತದೆ.
ನಾಗಲಕ್ಷ್ಮೀ ಹರಿಹರೇಶ್ವರ ಅವರು ‘ಹರಿಯ ಕಾಣಿಕೆ’ ಲೋಕಾರ್ಪಣೆಗೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಮುನ್ನುಡಿಕಾರರಾದ ಪ್ರೊ| ಕೆ. ಭೈರವಮೂತಿ, ಭಾರತೀ ಪ್ರಕಾಶನ ಪ್ರಕಾಶಕರಾದ ಶ್ರೀ ಶ್ರೀನಿವಾಸ್, ಲಿಪಿ ವಿನ್ಯಾಸ ಮಾಡಿದ ಶ್ರೀ ಮಾಗಲು ಮಲ್ಲಿಕಾರ್ಜುನ, ವಿಮರ್ಶಕರಾದ ಶ್ರೀ ಬಿ.ಆರ್. ನಾಗರತ್ನ, ಅಮೆರಿಕಾದ ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕಾವೇರಿ ಕೃಷ್ಣಮೂರ್ತಿ, ನಿರೂಪಣೆ ಮಾಡಿದ ಸಂಜಯ್, ಎಚ್.ಆರ್. ಜಗದೀಶ್, ಸವಿಗನ್ನಡ ಪತ್ರಿಕೆಯ ಸಂಪಾದಕರಾದ ರಂಗಣ್ಣ, ಸಾಹಿತಿಗಳಾದ ಜಯಪ್ಪ ಹೊನ್ನಾಳಿ, ಪರಂಪರೆ ಕೃಷ್ಣಕುಮಾರ್, ಮೈಸೂರು ಮಿತ್ರ ಪತ್ರಿಕೆಯ ಶ್ರೀ ಎಸ್.ಆರ್. ಕೃಷ್ಣಕುಮಾರ್ ಹಾಗೂ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹರಿಹರೇಶ್ವರ ಅವರಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಪ್ರೀತಿ ಚಿಕ್ಕಂದಿನಿಂದಲೇ ಯಕ್ಷಗಾನದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ಹರಿಗೆ ಅವರ ಮಾವನವರಾದ ಶ್ರೀ ಲಕ್ಷ್ಮೀನಾರಾಯಣಭಟ್ಟರಿಂದ ಅಲ್ಪ ಸ್ವಲ್ಪ ಯಕ್ಷಗಾನದ ಪ್ರಸಂಗಗಳನ್ನು ಕಲಿತಿದ್ದರು. ಸುಮಾರು ಒಂದು ನೂರಕ್ಕೂ ಹೆಚ್ಚು ಯಕ್ಷಗಾನ ಪುಸ್ತಕಗಳನ್ನು ಸಂಗ್ರಹಿಸಿದ್ದ ಹರಿಯವರು ಅನಂತವರ್ಧನರಿಗೆ ಕಾಣಿಕೆಯಾಗಿ ನೀಡಿದ್ದರು. ಅನಂತವರ್ಧನ ಅವರು ಅವುಗಳಲ್ಲಿ ಏಳು ಪೌರಾಣಿಕ ಪ್ರಸಂಗಗಳನ್ನು ಸಂಪಾದಿಸಿದ ‘ಏಳು ಪೌರಾಣಿಕ ಪ್ರಸಂಗಗಳು’ ಎಂಬ ಯಕ್ಷಗಾನ ಪುಸ್ತಕವನ್ನು ವಾಣಿಜ್ಯ ತೆರಿಗೆ ಇಲಾಖೆ ಉಪಾಯುಕ್ತರಾದ ದುರ್ಗಾಪರಮೇಶ್ವರಿ ಅವರು ಲೋಕಾರ್ಪಣೆ ಮಾಡಿದರು.
ಕೃತಿಗಳ ಲೋಕಾರ್ಪಣೆಯ ನಂತರ ಪ್ರದೀಪ್ ವಿ. ಸಾಮಗ ರವರ ನಿರ್ದೇಶನದಲ್ಲಿ ಕರಾವಳಿ ಕಲಾವಿದರಿಂದ ‘ಪಾಶುಪತಾಸ್ತ್ರ’ ಯಕ್ಷಗಾನ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಹೃದಯರಿಗೆ ಮೂರು ಕನ್ನಡ ಪುಸ್ತಕ, ಕೊಬ್ಬರಿ ಮಿಠಾಯಿ ನೀಡಲಾಯಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ನಾಗಲಕ್ಷ್ಮೀ ಹರಿಹರೇಶ್ವರ ಅವರು ಸಹೃದಯರಿಗೆಲ್ಲ ತುಂಬು ಹೃದಯದಿಂದ ಆತಿಥ್ಯ ನೀಡಿ, ಅವರನ್ನು ಬೀಳ್ಕೊಟ್ಟರು.
ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯