ಅಮೆರಿಕನ್ನಡ
Amerikannada
ಹಾಳೂರ ಗುರು
ಪ್ರೊ. ಎಚ್.ಜಿ. ಸುಬ್ಬರಾವ್, ಮೈಸೂರು
ಹಾದಿಯಂಚಿನ ಹರಕು ಬೇಲಿಯಲ್ಲರಳಿ
ವ್ಯರ್ಥವಾಗುತಲಿಹುದು ವನಸುಮದ ಸುರಳಿ
ನೋಡಲ್ಲಿ ಕಾಣುತಿದೆ ನಾಡಹೆಂಚಿನ ನಿಲಯ
ಹಾಳೂರ ಜನತೆಯ ವಿಶ್ವವಿದ್ಯಾನಿಲಯ.

ಅದಕೊಬ್ಬ ಮಾಸ್ತರನಿದ್ದ ಶಿಕ್ಷಣದ ರೂವಾರಿ
ವ್ಯಕ್ತಿ ನೋಡಲು ಒರಟ, ಒಳಗೆ ತಾಯಿಯ ಹೃದಯ;
ಹಗಲು ಸಿಸ್ತಿನ ಪಾಠ, ಸಂಜೆ ಚೆಂಡುದಾಂಡಿನ ಆಟ;
ಹಾಳೂರ ಹಿರಿಯರಿಗೆ ರಾತ್ರಿ ಅಕ್ಷರ ಕೂಟ.

ಉಂಡಾಡಿಗುಂಡರಿಗೆ ಸೋಮಾರಿ ಸಿದ್ದರಿಗೆ
ಅವನು ಸಿಂಹಸ್ವಪ್ನ ಅನಿವಾರ್ಯ ಶಿಕ್ಷೆ
ಕಲಿಕೆಯಲಿ ಆಸಕ್ತ ಸನ್ನಡತೆ ಚಿಣ್ಣರಿಗೆ
ಮುಗ್ಧಶಿಷ್ಯರಿಗಿತ್ತು ಮಾಸ್ತರನ ಶ್ರೀರಕ್ಷೆ

ಹಾಸ್ಯಲೇಪಿತ ಪಾಠ ಪಾಂಡಿತ್ಯ ಪ್ರವಚನವ
ಮಕ್ಕಳೂ ಮೆಚ್ಚುವರು ಚಪ್ಪಾಳೆ ತಟ್ಟುವರು;
‘ಜೋಕುಗಳ ಭಾಂಡಾರಿ ಹಾಸ್ಯಬ್ರಹ್ಮನು’ ಎಂದು-
ಸುಳ್ಳುನಗೆ ಬೀರುವರು ತರಗತಿಯ ಹೈದಗಳು.

ಅವನ ಹುಬ್ಬೇರಿದರೆ ಏನೊ ಕಾದಿದೆಯೆಂದು,
ಕಣ್ಣಸನ್ನೆಯ ಮಾಡಿ ಕಟುವಾರ್ತೆ ಹರಡುವರು;
ಪುಂಡಭಂಡರು ಎಲ್ಲ ಗಡಗಡನೆ ನಡುಗುವರು;
ಸಭ್ಯ ಶಿಷ್ಯರು ಮಾತ್ರ ನಿರಾಳವಾಗಿಹರು.

ಮಾಸ್ತರನ ನಡೆವಳಿಕೆ ಕಠಿನವೆನಿಸಲು ಸಾಕು,
ಅದು ಅವನ ತಪ್ಪಲ್ಲ ಅದಕೆ ಕಾರಣ ಹುಡುಕು;
ಓದಿನಲಿ ಉತ್ಸಾಹ ಗುರುಭಕ್ತಿಯಲಿ ಕೊರತೆ
ಸರಸತಿಗೆ ಅಪಚಾರ ಅವನು ಸಹಿಸದ ನಡತೆ.

ಗಣಿತಜ್ಞ ಕೃಷಿತಜ್ಞ ನಿಪುಣ ಮೋಜಣಿದಾರ
ಈಸ್ಟರ್ ಹಬ್ಬದ ದಿನವ ನಿಖರ ನಿರ್ಣಯಕಾರ;
ಒಟ್ಟಾರೆ ಹಳ್ಳಿಗರ ಸರ್ವಜ್ಞ ನೇತಾರ-
ಅವರನುದ್ಧರಿಸಲು ಬಂದ ದೇವದೂತನಿವನು.

ಸೋತರೂ ಛಲಬಿಡದ ವಾಗ್ವಿಶಾರದನವನು;
ಅವನ ವಾಗ್ಝರಿಗೆ ಬೆರಗಾದ ಶೋತೃಗಳು
ಪುಟ್ಟತಲೆಯಲಿಷ್ಟು ತುಂಬಿಕೊಂಡಿಹನಲ್ಲ!
ಮೂಕವಿಸ್ಮಿತರಾಗಿ ಅಚ್ಚರಿಯ ಸೂಸುವರು.

ಹೀಗಿತ್ತು ಹಾಳೂರ ಶಿಕ್ಷಣದ ಅಭಿಯಾನ
ಶಿಕ್ಷಕನು ಗಳಿಸಿದ್ದ ಊರವರ ಅಭಿಮಾನ
ಶಾಲೆ ನಾಟಕರಂಗ ಗುರುವದರ ನಿರ್ದೇಶಕನು
ಪಾತ್ರವರ್ಗದಿ ಶಿಷ್ಯ ಪೋಷಕನೆ ಪ್ರೇಕ್ಷಕನು

ಶೈಕ್ಷಣಿಕ ಮಾರ್ಗದಲಿ ಪದವಿ ಸಂಪಾದನೆಯು
ಮೂರ್ಖ ವಿರಮಿಸಲಿರುವ ಮೈಲಿಗಲ್ಲು
ಜ್ಞಾನಕ್ಕೆ ಮಿತಿಯಿಲ್ಲ ನಿನ್ನ ಜೀವನ ಕ್ಷಣಿಕ
ಕಲಿಕೆಯನು ನಿಲಿಸದಿರು ಕೊನೆಯತನಕ!

ಆಲಿವರ್ ಗೋಲ್ಡ್ ಸ್ಮಿತ್ ಕವಿಯ The Deserted Village ಪದ್ಯದ ಭಾವಾನುವಾದ