ಅಮೆರಿಕನ್ನಡ
Amerikannada
ಆ......ಕ್ಷಿ......ಕ್ಷಮಿಸಿ ನಾನು ಸ್ವಲ್ಪ ಸೂಕ್ಷ್ಮ ರೀ............
-ಶ್ರೀಕಂಠ ಗುಂಡಪ್ಪ, ಮೈಸೂರು
ಅಕ್ಷಿ .......ಅಕ್ಷಿ......ಆ.....ಕ್ಷಿ.......ಆ.....ಆ.....ಕ್ಷಿ ಕ್ಷಮಿಸಿ..... ನಾನು ಸ್ವಲ್ಪ ಸೂಕ್ಷ್ಮರೀ! ಮೊನ್ನೆ ಏನಾಯ್ತು ಅಂತಿರಾ ದೇವಸ್ಥಾನದಿಂದ ಬಂದವನೆ ಸುಸ್ತಾಗಿ ಕುರ್ಚಿಮೇಲೆ ಕಾಲು ಚಾಚಿ ಕೂತೆ. ಒಂದರ ಹಿಂದೆ ಒಂದು ಹಾಳಾದ್ದು ನಾಮುಂದು ತಾಮುಂದು ಅಂತಾ ಐದಾರು ಸೀನು ಬಂತು. ಅಡಿಗೆ ಮನೆ ಪಾತ್ರೆಗಳು ಹೆಚ್ಚು ಶಬ್ದ ಮಾಡತೊಡಗಿದವು. ನನ್ನ ಆ..... ಕ್ಷಿಗೂ ಆ ಶಬ್ಧಕ್ಕೂ ಏನು ಸಂಬಂಧ ಅಂತ ನೀವು ಕೇಳಬಹುದು. ಹಿಂದೇನೆ ಬಂದ ಗಡಸಾದ ಧ್ವನಿ “ಬಡಕೊಂಡೆ ನಾನು ದೇವಸ್ಥಾನಕ್ಕೆ ಹೋಗಬೇಡಿ ಒಂದು ವೇಳೆ ಹೋದರೂ ಮೂರು ಮೂರು ಸಲ ತಣ್ಣೀರಿನ ತೀರ್ಥ ತೊಗೋಬೇಡಿ ವಿಪ್ರೀತ ಶೀತ ಆಗುತ್ತೇಂತ ಹೇಳ್ದೆ ಹೆಂಗಸರು ಮಾತು ನೀವೆಲ್ಲಿ ಕೇಳ್ತೀರಿ ಹೇಳಿ” ಅಂತ ಗುಡುಗುಡಿಗಿತು. ನಾನಿನ್ನು ಸಮಾಜಾಯಿಸಿ ಹೇಳೋಣ ಅನ್ನುವಷ್ಟರಲ್ಲೆ, “ಅಲ್ರೀ ಮಂಗಳಾರತಿ ತೊಗೋಬೇಕಾದ್ರೂ ದೂರನಿಂತೇ ತೊಗೊಳ್ಳಿ ದಕ್ಷಿಣೆ ಕಾಸು ಹಾಕಬೇಕಾದ್ರೂ ದೂರದಿಂದಲೇ ತಟ್ಟಿಗೆ ಹಾಕಿ ಇಲ್ಲ ಡೈರಕ್ಟಾಗಿ ಕಾಣಿಕೆ ಹುಂಡಿಗೇ ಹಾಕಿ ಹತ್ತಿರ ಹೋದರೆ ಉಷ್ಣ ಆಗುತ್ತೇಂತ ಹೇಳ್ದೆ. ನನ್ನ ಮಾತು ನೀವೆಲ್ಲಿ ಕೇಳ್ತೀರಿ ಹೇಳಿ. ಈ ಗಂಡಸರೇ ಹೀಗೆ ಸ್ವಂತ ಬುದ್ದೀಂತ ಇರೋದಿಲ್ಲ ಮನೆ ಹೆಂಗಸರು ಹೇಳಿದ್ರೆ ಕೇಳೋದಿಲ್ಲ. ನೋಡಿ ನಿಮಗೆ ಉಷ್ಣಕ್ಕೆ ಶೀತ ಆಗಿದೆ.....” ಅಂತ ಡಯಾಗ್ನೈಜ್ ಮಾಡಿ ಗೊಣಗಿಕೊಂಡೇ ಅಡಿಗೆ ಮನೆಗೆ ದಡ ದಡ ನಡೆದಳು. ಪಾತ್ರೆಗಳ ಶಬ್ದ ನಿರಂತರವಾಗಿ ನಡೀತಿತ್ತು.
ನಾನೇನು ಮಾಡ್ಲಿ ಹೇಳಿ? ನಾನು ಸ್ವಲ್ಪ ಸೂಕ್ಷ್ಮ ಅಂತ ಅವಳಿಗೂ ಗೊತ್ತು ರೀ. ಅಂದಹಾಗೆ ನನಗೆ ಥಟ್ ಅಂತ ಒಂದು ಐಡಿಯಾ ಬಂತು. ಇನ್ನು ಮೇಲೆ ದೇವಸ್ಥಾನಗಳಲ್ಲಿ ಕಾದಾರಿದ ನೀರಿನ ತೀರ್ಥ, ಕೂಲಾಗಿ ಎಲೆಕ್ಟ್ರಿಕಲ್ ಮಂಗಳಾರತಿ ಜಾರಿಗೆ ತಂದರೆ ಹೇಗೆ? ಅಂತ ಅನಿಸಿತು! ತಲೆಗಿಲೆ ಕೆಟ್ಟಿದೆ ಅಂತ ಯಾರಾದ್ರು ಅಂದುಕೊಂಡು ಬಿಟ್ಟಾರೆಂದು ಕುರ್ಚಿಯಿಂದ ಎದ್ದು ಮಂಚದ ಮೇಲೆ ಮೈ ಚೆಲ್ಲಿ ತಲೆ ನೇವರಿಸಿಕೊಳ್ಳುತ್ತದ್ದಂತೆ ನೆನಪುಗಳು ಹಿಂದಕ್ಕೆ ಓಡಿದವು. ಅಂಥ ನೆನಪುಗಳನ್ನು ನಿಮ್ಮ ಹತ್ರ ಹಂಚಿಕೊಳ್ಳೊಣ ಅಂತ ಅನ್ನಿಸಿದೇರೀ.
ಡೊನೆಷನ್ನು, ರಿಜರ್ವೇಷನ್ನು ಇಲ್ಲದ ಕಾಲದಲ್ಲಿ ನಾನು ಶಾಲೆಗೆ ಸೇರುವ ಸಂದರ್ಭ. ಅಪ್ಪನ ಜೊತೆ ಹೋಗಿದ್ದೆ. “ನೋಡಿ ಮೇಡಂ ನಂಗೆ ಒಬ್ಬನೇ ಒಬ್ಬ ಮಗ. ತುಂಬಾ ಮುದ್ದಾಗಿ ಸಾಕಿದಿವಿ. ಸ್ವಲ್ಪ ಸೂಕ್ಷ್ಮ ದಯವಿಟ್ಟು ಇವನನ್ನ ಹೊಡ್ದುಡ್ದು ಪಾಠ ಮಾಡಬೇಡಿ. ಕಣ್ಣು ಕೆಂಪಗೆ ಮಾಡಿಕೊಳ್ಳದೆ ದೊಡ್ದದಾಗಿ ಅರಳಿಸದೆ ಮೃದುವಾಗಿ ಹೇಳಿದರೆ ಸಾಕು. ತಿಳಿದುಕೊಂಡು ಬಿಡುತ್ತಾನೆ ನಮ್ಮ ಹುಡುಗ ಜಾಣ ಆದರೂ ತುಂಬಾ ಸೂಕ್ಷ್ಮ” - ಅಂತ ಹೇಳಿ ಅಪ್ಪ ಮೇಡಂಗೆ ಹಸ್ತಲಾಘನ ಮಾಡ್ತಿದ್ದು ನಾನು ಗಮನಿಸುತ್ತಿದುದು ಅವರಿಬ್ಬರಿಗೂ ಗೊತ್ತಾಗಲೇ ಇಲ್ಲ. ಆ ಮೇಡಮ್ಮು ಹಾಗೇ ಅಪ್ಪನ ಕೈ ಕುಲುಕಿದ್ದೂ ಕುಲುಕಿದ್ದೇ. ನಂಗೆ ನೋಡಿ ನೋಡಿ ಸಾಕಾಗಿಹೋಯ್ತು. “ಅಪ್ಪ” ಅಂತ ಎದಗೈ ಕಿರುಬೆರಳು ತೋರಿಸಿದೆ. ಅಪ್ಪಂಗೆ ನನ್ನ ಸೂಕ್ಷ್ಮ ಅರಿವಾಯಿತು. ಅವಸವಸರವಾಗಿ ಕೈಹಿಡಿದುಕೊಂಡು ಹೊರನಡೆದರು.
ಈ ಜ್ವರ ಗಿರ ಬಂದಾಗ ಡಾಕ್ಟರ್ ಹತ್ತಿರ ಹೋದರೆ ಸಾಕು. “ನೋಡಿ ಮಳೆ ಸೀಜನ್ ಶುರುವಾಗಿದೆ. ನೀವು ತುಂಬಾ ಸೂಕ್ಷ್ಮ ಹೊರಗಡೆ ಛಳಿ ಗಾಳೀಲಿ ಹೋಗಿ ತಿರುಗಾಡಿ ತುಂಬಾ ಎಕ್ಸ್‌ಪೋಸ್ ಆಗಬೇಡಿ. ಒಂದು ವೇಳೆ ಹೋಗಲೇ ಬೇಕಾದರೆ ಮಫ್ಲರು, ಸ್ವೆಟ್ಟರ್ ಹಾಕ್ಕೊಂಡು, ಛತ್ರಿ ಹಿಡ್ಕೊಂಡು, ಕಾಲ್ಚೀಲ - ಶೂ ಹಾಕ್ಕೊಂಡು ಹೋಗಿ” - ಅಮ್ತ ಹೇಳಿ ಮಾತ್ರೆ ನುಂಗೋದು ಕಷ್ಟ ಆಗಬಹುದೊಂತ ಡೈರಕ್ಟಾಗಿ ನೀರಿನ ಇಂಜೆಕ್ಷನ್ ಕೊಟ್ಟು ಕಳಿಸ್ತಿದ್ರು.
ಅಂದಹಾಗೆ ನಾನು ಮನೆಯಿಂದ ಹೊರಗೆ ಹೋಗಬೇಕಾದ್ರೆ ಮೊದಲಿನಿಂದಲೂ ಶಕುನ ನೋಡಿಕೊಂಡು ಹೋಗುವ ಅಭ್ಯಾಸ ಕಣ್ರೀ. ನೀವು ನಂಬಿಕೆ ಅನ್ನಿ ಅಥವಾ ಮೂಢನಂಬಿಕೆ ಅನ್ನಿ ನನಗೆ ಬೇಕಾಗಿಲ್ಲ. ತಲೆ ಮೇಲೆ ನೀರಿನ ಬಿಂದಿಗೆ ಹಿಡುಕೊಂಡು ಎದುರಿಗೆ ವಯ್ಯಾರವಾಗಿ ಬೆಡಗಿ ಬಂದರೆ ಓಕೆ. ಬೆಕ್ಕು ಗಿಕ್ಕು ಬಂತೋ ಮನೆಯೊಳಕ್ಕೆ ಬಂದು ಕೈಕಾಲು ಮುಖ ತೊಳೆದುಕೊಂಡು ಸ್ವಲ್ಪ ಹೊತ್ತು ಕೂತು ದೇವರ ಸ್ಮರಣೆ ಮಾಡಿ ಹೊರಡೋನು. ಏಕೆಂದ್ರೆ ನಾನು ಇಂಥ ವಿಚಾರದಲ್ಲೆಲ್ಲಾ ಸ್ವಲ್ಪ ಸೂಕ್ಷ್ಮ ಅಂತ ಆಗಲೇ ಹೇಳಿದಿನಲ್ಲ.
ಮದುವೆ ಪ್ರಸ್ತಾಪ ಮನೇಲಿ, ಯಾರದ್ದೂ ಅಂದ್ರ ನಂದೇರೀ, ಸರಿ ಹುಡಿಗೀನ ನೋಡೋದಕ್ಕೆ ಹೋದ್ವಿ. ಮಾಮೂಲಿನ ಸಂಪ್ರದಾಯದಂತೆ ಉಪ್ಪಿಲ್ಲದ ಉಪ್ಪಿಟ್ಟು, ಗೋಡಂಬಿ ಕಾಣದ ಕೇಸರಿಬಾತ್ ತಿಂದಾದ ಮೇಲೆ ಹುಡುಗಿ ನಾಚಿ ಬಾಗಿಲ ಹತ್ತಿರ ನೆಲ ಕೆರೀತಾ ನಿಲ್ಲಬಹದು ಅಂತಾ ಲೆಕ್ಕ ಹಾಕಿದ್ದೆ. ನನ್ನ ನಿರೀಕ್ಷೆ ಸುಳ್ಳಾಯಿತು. ನೇರವಾಗಿ ಬಂದವಳೆ ನಾನು ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕೊಂತ ಹಿತ್ತಲಿಗೆ ಕರೆದುಕೊಂಡು ಹೋಗಿ ’ನೀವು ತುಂಬಾ ಸೂಕ್ಷ್ಮವಂತೆ. ವರದಕ್ಷಿಣೆ ವರೋಪಚಾರ ಬೇಡ ಅಂದ್ರಂತೆ, ಛತ್ರಗಿತ್ರ ಬೇಡ ಹುಡುಗಿ ಕೊರಳಿಗೆ ಅರಶಿನದಕೊನೆ ತರ್ತೀನಿ. ಅಕ್ಷತೆ ಹಾಕಿ ದೇವಸ್ಥಾನದಲ್ಲಿ ತುಂಬಾ ಸಿಂಪಲ್ಲಾಗಿ ಮದುವೆ ಮಾಡಿಕೊಟ್ರೆ ಸಾಕು ಅಂದ್ರಂತೆ. ಈಗಿನ ಕಾಲದಲ್ಲಿ ಹೆಣ್ಣು ಹೆತ್ತೋರ ಸಂಕಟ ಏನೂಂತ ಇಷ್ಟು ಸೂಕ್ಷ್ಮವಾಗಿ ಅರ್ಥಮಾಡಿಕೊಂಡವರ ಕೈಹಿಡೀತಿದೀನಲ್ಲ ಅನ್ನೋ ಹೆಮ್ಮೆ ನನಗಾಗಿದೆ. ನಿಮಗೆ ತುಂಬಾ ಥ್ಯಾಂಕ್ಸ್’ ಅಂದ್ಬಿಟ್ಲು. ಸೂಕ್ಷ್ಮವಾಗಿ ಕರಗಿ ನೀರಾಗಿ ಹೋದೆ.
ಈ ಸೂಕ್ಷ್ಮದ ಬಗ್ಗೆ ಯೋಚನೆ ಮಾಡುವಾಗ ನನ್ನ ಗೆಳೆಯ ಅಬ್ದುಲ್ ರೇಹಾಮಾನ್ ಪಾಷ ಬರೆದ ರಾಜಕುಮಾರಿ ಕಥೆಯೊಂದು ನೆನಪಾಯಿತು. ಬಹಳ ಹಿಂದೆ ಸುಮಾರು ೧೪-೧೫ ವರ್ಷದ ರಾಜಕುಮಾರಿಯೊಬ್ಬಳು ಅರಮನೇಲಿದ್ದಳಂತೆ. ಅರಮನೆಯಲಲ್ದೆ ಸೆರಮನೇಲಿ ಇರ್ತಾಳಾಂತ ನೀವು ಕೇಳಬಹುದು. ಹೌದು ಅವಳಿಗೆ ಅರಮನೆನೆ ಸೆರೆಮನೆ ಆಗಿತ್ತು. ತಿಂಡಿ ಇಲ್ಲ ತೀರ್ಥವಿಲ್ಲ ಊಟವಿಲ್ಲ ನಿದ್ರೆ ಇಲ್ಲ ಅಳುವಿಲ್ಲ ನಗುವಿಲ್ಲ. ರೂಪ ಸ್ವಭಾವ ಬೊಂಬೆ ರೀತಿ, ಅವಳನ್ನ ನಗಿಸಿದವರಿಗೆ ಅರ್ಧ ರಾಜ್ಯ ಅಂತ ರಾಜ ಡಂಗೂರ ಸಾರಿಸಿದ. ಮಂತ್ರವಾದಿಗಳು ಬಂದರು, ಮನಶಾಸ್ತ್ರದವರು ಬಂದ್ರು ಊಹುಂ ನಗಲಿಲ್ಲ. ನಕಲೀ ಶ್ಯಾಮರು ಚೇಷ್ಟೇ ಮಾಡಿದರೂ ರಾಜಕುಮಾರಿ ನಗಲಿಲ್ಲ, ರಾಜ ರಾಣಿ ಕೊರಗಿದರು. ಅಷ್ಟರಲ್ಲಿ ರಾಜಕುಮಾರಿ ವಯಸ್ಸಿನ ಮೂರು ಹುಡುಗರು ಕದ್ದು ಅರಮನೆ ಪ್ರವೇಶಿಸಿ ಅವಳನ್ನು ರಮ್ಯ ಪ್ರಕೃತಿಯ ಒಡಲಿಗೆ ಕರೆತಂದರು. ಏನಾಶ್ಚರ್ಯ ಅಂತಿರಿ. ಪಂಜರದಿಂದ ತಪ್ಪಿಸಿಕೊಂಡು ಬಂದು ಹಾರಾಡುವ ಹಕ್ಕಿಯಂತೆ ಮನದುಂಬಿ ನಗಲಾರಂಭಿಸಿದಳು. ಸ್ವೇಚ್ಛೆಯಾಗಿ ಕುಣಿದು ಕುಪ್ಪಳಿಸಿದಳು. ರಾಜನಿಗೂ ಖುಷಿಯಾಗಿ ಅರ್ಧರಾಜ್ಯ ಆ ಮಕ್ಕಳಿಗೆ ನೀಡಿದ. ಸ್ವೇಚ್ಛೆಯಾಗಿ ಹಾರಾಡಬೇಕೆಂಬ ಮಕ್ಕಳ ಸೂಕ್ಷ್ಮ ಮನಸ್ಸನ್ನು ಯಾವ ತಂದೆ ತಾಯಿ ಅರ್ಥ ಮಾಡಿಕೊಂಡಿರ್ತಾರೆ ಹೇಳ್ರೀ? ಪರೋಕ್ಷವಾಗಿ ಪ್ರಜಾಪ್ರಭುತ್ವದ ಸೊಗಡನ್ನು ಸೂಕ್ಷ್ಮವಾಗಿ ನವುರಾಗಿ ಬಿಂಬಿಸಲಾದ ಕಥೆ ಅದು.
ನೋಡಿ ಸ್ವಾಮಿ ಬದುಕಿನಲ್ಲಿ ಎಷ್ಟೋ ಸೂಕ್ಷ್ಮಗಳು ನಮಗೆ ಅರ್ಥವಾಗೋದೇ ಇಲ್ಲ. ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ನಾವು ಮಾಡೋದಿಲ್ಲ. ಅದು ಗಂಡ ಹೆಂಡತಿ ನಡುವೆ ಇರಬಹುದು. ಹೆತ್ತವರ ಮತ್ತು ಮಕ್ಕಳ ನಡುವೆ ಇರಬಹುದು, ಗುರುಶಿಷ್ಯರ ನಡುವೆ ಇರಬಹುದು ಅಥವಾ ಪ್ರೇಮಿಗಳ ನಡುವೆ ಇರಬಹುದು, ಮತ್ತೊಬ್ಬರ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದಿರುವುದರಿಂದಲೇ ಈ ಜಗತ್ತು ಅನರ್ಥದೆಡೆಗೆ ಸಾಗಿದೆ ಅಂತ ನನ್ನ ಭಾವನೆ. ನಿಘಂಟುವಿನ ಅರ್ಥವ್ಯಾಪ್ತಿಯಲ್ಲಿ ಹಿಡದಿಡುವಷ್ಟು ಸೂಕ್ಷ್ಮಪದ ಇದಲ್ಲ ಅಂತಾ ನಿಮಗೂ ಗೊತ್ತು, ನಗಬೇಡಿಯಪ್ಪ ನಂತೆ ತುಂಬಾ ನೋವಾಗುತ್ತೆ. ಏಕೆಂದರೆ ನಿಮಗೇ ಗೊತ್ತಲ್ಲ ನಾನು ಸ್ವಲ್ಪ ಸೂಕ್ಷ್ಮ ಅಂತ.