ಅಮೆರಿಕನ್ನಡ
Amerikannada
ಮೈತುಂಬಿ ಹರಿದಾಳೆ ಕಾವೇರಿ ತಾಯಿ...
ಭವಾನಿ ಲೋಕೇಶ್, ಮಂಡ್ಯ
ಎಂಗೋಪ್ಪಾ, ಈ ಸರ್ತಿ ಕಟ್ಟೆ ತುಂಬೈತೆ.... ‘ಆ ನಮ್ತಾಯಿ ಕಾವೇರಮ್ಮ ನಮ್ಯಾಲೆ ದಯೆ ತೋರವ್ಳೆ’. ಹೀಗಂತ ಒಂದು ಮಾತನ್ನು ನೀವು ಕೇಳಿದ್ರೆ ಅದು ನಮ್ಮ ಮಂಡ್ಯ ಜಿಲ್ಲೆಯ ಜನ ಆ ಕಾವೇರಿ ತಾಯಿಯ ಮೇಲಿಟ್ಟ ಭಕ್ತಿ, ಪ್ರೀತಿ ಅರ್ಥವಾಗುತ್ತದೆ.
ಇಲ್ಲಿನ ಸಹಸ್ರಾರು ರೈತರ ಕೂಲಿಯವರ, ಬಡವರ ಹೊಟ್ಟೆ ತುಂಬಿಸುತ್ತಾಳೆ ಕಾವೇರಿ ತಾಯಿ. ಅದ್ಯಾವಘಳಿಗೆಯಲ್ಲಿ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮನಸ್ಸಿನಲ್ಲಿ ಇಂತಹದ್ದೊಂದು ಯೋಜನೆ ಮೂಡಿತ್ತೋ ಆ ಯೋಜನೆಯೊಂದಿಗೆ ಈ ಜಿಲ್ಲೆಯ ಜನ ಇವತ್ತಿಗೂ ಅನ್ನದಾತ ಎಂತಲೇ ಪೂಜೆ ಮಾಡುತ್ತಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಸಾರ್ಥಕ ಸೇವೆ ಕನ್ನಂಬಾಡಿಯನ್ನು ಕಟ್ಟಿ ನಿರ್ಮಿಸುವುದರ ಮೂಲಕ ಮಂಡ್ಯ ಜಿಲ್ಲೆಯ ಜನತೆಗೆ ದೊರೆಯಿತು. ಉದ್ಭವಿಸಿ ಉದ್ಭುದ್ಧ ಶುದ್ಧ ನೀರೆಯಾಗಿ, ಜಲಧಾರೆಯಾಗಿ ಹರಿವಕಾವೇರಿ ತಾಯಿ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿ ಜೀವ ಗಂಗೆಯಾಗಿ ಇಲ್ಲಿನ ಜನರ ದಾಹವನ್ನಷ್ಟೇ ತಣಿಸುತ್ತಿಲ್ಲ, ಮಾತ್ರವಲ್ಲದೆ ಇಲ್ಲಿ ಬೆಳೆವ ಭತ್ತ, ಕಬ್ಬು, ತೆಂಗು, ಬೆಳೆಗಳಿಗೆ ಜೀವದಾಯಿನಿಯಾಗಿದ್ದಾಳೆ. ಭತ್ತದ ಪ್ರತಿಯೊಂದು ತೆನೆಯಲ್ಲೂ ತೆಂಗಿನ ಎಳನೀರಿನಲ್ಲೂ ಕಬ್ಬಿನೊಳಗಿನ ಸಹಿಯಲ್ಲೂ ಅವಳ ಇರುವಿಕೆ ಸುಪ್ತವಾಗಿದೆ.
ಕಾವೇರಿ ತಾಯಿಯನ್ನು ನಾವು ಮಾತೃ ಸ್ಥಾನದಲ್ಲಿರಿಸಿದ್ದೇವೆ. ಅಷ್ಟೇ ಯಾಕೆ ಭೋರ್ಗರೆದು ಹರಿದು ಬರುವ ಅವಳನ್ನು ಪ್ರೀತಿಯಿಂದ ಕಟ್ಟಿ ಹಾಕಿ ನಮ್ಮೂರ ಗದ್ದೆಗಳಿಗೂ ನೀರುಣಿಸು ತಾಯಿ ಎಂದು ಕಟ್ಟೆಕಟ್ಟಿದ ವಿಶ್ವೇಶ್ವರಯ್ಯನವರನ್ನು ಅಭಿಮಾನದಿಂದ ನೆನಯುತ್ತೇವೆ. ಅದಕ್ಕೆ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಫೋಟೋವನ್ನು ಮನೆಮನೆಯಲ್ಲೂ ಇಟ್ಟು ಪೂಜಿಸುತ್ತೇವೆ. ಈ ಮಣ್ಣಿನ ಜನ ತಕ್ಕಮಟ್ಟಿನ ಇಷ್ಟು ಶ್ರೀಮಂತಿಕೆಯನ್ನು ಅನುಭವಿಸಲಿಕ್ಕೆ ಗದ್ದೆಗೊಂದಷ್ಟು ನೀರು ಹಾಯಿಸಿ ಉಳಿದ ಕಾಲಕ್ಕೆ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಮಂಡ್ಯದೊಳಗೆ ಸಂಭ್ರಮಿಸಲು ಬರುವ ಇಷ್ಟು ಶ್ರೀಮಂತಿಕೆಯನ್ನು ದಯಪಾಲಿಸಿದ್ದು ಆ ಕಾವೇರಿ ತಾಯಿ ಅಲ್ಲವೆ?
ಹಾಂ! ತಮಾಷೆಗೆ ಹಾಗಂದೆ. ಒಟ್ಟಿನಲ್ಲಿ ಈ ಜಿಲ್ಲೆ ಇಷ್ಟು ಸುಮೃದ್ಧವಾಗಿದೆ ಎಂದು ಅಕ್ಕೆ ಆ ತಾಯಿ ಕಾವೇರಮ್ಮನೆ ಕಾರಣ. ಅವಳನ್ನು ಕಂಡರೆ ನಮಗೆ ಇನ್ನಿಲ್ಲದ ಪ್ರೀತಿ. ಅದು ತೀರಾ ಪೊಸೆಸೀವ್ ಕುಡಾ ಆಗಿರಬಹುದೇನೋ.... ನಮಗೆ ಹೊಟ್ಟೆ ತುಂಬಿದ್ದರೆ ಬೇರೆಯವರಿಗೂ ನಾವು ಅನ್ನ ಹಾಕುತ್ತೇವೆ. ಹಾಗೆಯೇ ನಮ್ಮೆಲ್ಲಾ ಅವಶ್ಯಕತೆಯನ್ನು ತಣಿಸಿದ ಮೇಲಷ್ಟೇ ಕಾವೇರಿಯನ್ನು ಮುಂದೆ ಹೋಗುವಂತೆಯೂ ಬಿಡುತ್ತೇವೆ. ಕಾವೇರಿಯೊಂದಿಗಿನ ಪೊಸೆಸೀವ್ ಪ್ರೀತಿಯಿಂದಾಗ ಆದ ಜಗಳಗಳೆಷ್ಟೋ, ಮುರಿದ ಮನಸ್ಸುಗಳೆಷ್ಟೋ ಇವತ್ತಿಗೂ ಪಕ್ಕದ ತಮಿಳುನಾಡನ್ನು ಪಾಕಿಸ್ತಾನದಂತೆಯೇ ನೋಡುವ ನಮ್ಮ ವರ್ತನೆಗೆ ಕಾವೇರಿ ವಿವಾದವೇ ಮುಖ್ಯ ಕಾರಣ. ಹಾಗಂತ ನಾವೇಣು ಸ್ವಾರ್ಥಿಗಳಲ್ಲ. ನಮ್ ಕಡೆ ಒಂದು ಗಾದೆ ಇದೆ. ‘ನನ್ಗೇ ಮಡಕಿಟ್ಟು ನಿನಗೆಲ್ಲಿ ತಡಕಿಟ್ಟು’ ಅಂತ ನನಗೆ ಅಂದ್ರೆ ಮಡಿಯೊಳಗಿನ ಹಿಟ್ಟು ಮಾತ್ರವೇ ನನ್ನ ಪಾಲಿಗಿರುವಾಗ ನಿನಗೆ ಅಂತ ಕೊಡಲಿಕ್ಕೆಲ್ಲಿದೆ ಅನ್ನುವ ಅರ್ಥವಿದು. ಕಟ್ಟೆಯಲ್ಲಿ ನಮಗೆ ಸಾಕಾಗುವಷ್ಟು ನೀರಿಲ್ಲದಿದ್ದಾಗಲು ರಾಜಕೀಯದ ಒತ್ತಡಗಳಿಂದಾಗಿ ಕಾವೇರಿಯನ್ನು ಕಳಿಸಿಕೊಡುವ ಪರಿಸ್ಥಿತಿ ಎಷ್ಟೋ ಬಾರಿ ಬಂದೇ ಇದೆ. ಅದರಿಂದಾಗಿಯೇ ಜಗಳ, ಹೋರಾಟ, ಉಪವಾಸ ದೊಂಬಿಗಳೆಲ್ಲಾ ನಡೆದಿದೆ. ನನಗೆ ಈಗಲೂ ನೆನಪಿದೆ. ಕಾವೇರಿ ಗಲಾಟೆ ೯೧-೯೨ರ ಆಸುಪಾಸಿನಲ್ಲಿ ಎಲ್ಲರೊಲಗೆ ಮೂಡಿಸಿದ್ದ ಕಿಚ್ಚು ಹೇಗಿತ್ತೆಂದರೆ ಆ ಸಮಯದಲ್ಲೇ ಹಲವಾರು ವಿದ್ಯಾರ್ಥಿ ಸಂಘಗಳು ಪುಡಿ ರಾಜಕರಣಿಗಳು ಬೆಳಕಿಗೆ ಬಂದಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ಎಲ್ಲಾ ಜನರನ್ನು ಕಟ್ಟಿಕೊಂಡು ಹೋರಾಟ ಮಾಡಿದಂತೆಯೇ. ಹೆಚ್ಚು ಕಡಿಮೆ ಈ ಹೋರಾಟ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿಸಿದರು. ವಿದ್ಯಾರ್ಥಿಗಳೊಳಗೂ ಆ ಕಿಚ್ಚು ಹತ್ತಿಸಿದ್ದರು. ರಸ್ತೆಗಳಲ್ಲಿ ಇದಕ್ಕೆಲ್ಲಾ ಕಾರಣಕರ್ತರಾದ ರಾಜಕಾರಣಿಗಳ ಕಟೌಟ್‌ಗಳನ್ನು ಸುಟ್ಟರು. ಬಸ್‌ಗೆ ಬೆಂಕಿ ಹಚ್ಚಿದರು.
ಮುಂದೆ ಯಾವತ್ತೂ ಈ ನಷ್ಟವನ್ನೆಲ್ಲಾ ಸರ್ಕಾರಕ್ಕೆ ಯಾವುದೋ ರೂಪದಲ್ಲಿ ನಾವೇ ತುಂಬಿಕೊಡಬೇಕೆಂದು ತಿಳಿದಿದ್ದರೂ ಇಂತಹ ಅವಘಡಗಳನ್ನೆಲ್ಲಾ ಎಗ್ಗಿಲ್ಲದೆ ಮಾಡಿದ್ದರು.
ಒಂದು ಸಂತಸದ ವಿಷಯವೆಂದರೆ ಕವನಗಳನ್ನು ಬರೆಯಬೇಕೆನ್ನುವ ನನ್ನ ಹಪಹಪಿಕೆ ಶುರುವಾಗಿದ್ದೇ ಈ ಕಾವೇರಿ ಗಲಾಟೆಯ ಮೇಲೊಂದು ಪದ್ಯ ಬರೆದಾಗಿನಿಂದ. ಓ ತಾಯಿ ಕಾವೇರಿ ನೋಡು ನಮ್ಮ ಪಾಡು ಈ ಕರ್ನಾಟಕವಲ್ಲವೆ ನಿನ್ನ ನೆಲೆವೀಡು ಆದರೂ ಏಕೆ ಬೇಕು ಆ ತಮಿಳುನಾಡು ಕೊನೆಗೂ ಅವರು ಹಿಡಿದರಲ್ಲ ನಿನ್ನ ಜಾಡು.
ಅನ್ನುತ ಪ್ರಾಸವಿಟ್ಟು ಪದ್ಯ ಬರೆವ ಗೀಳು ಹುಟ್ಟಿಕೊಂಡಿದ್ದೇ ಆಗ. ಈ ಪದ್ಯವನ್ನು ಓದಿದರೆ ಈಗಲೂ ತಮಾಷೆ ಎನಿಸುತ್ತದೆ. ಹೈಸ್ಕೂಲಿನ ದಿನಗಳಲ್ಲೇ ನಮ್ಮೊಳಗಿನ ಸ್ವಾರ್ಥ ಎಷ್ಟರ ಮಟ್ಟಿಗೆ ಆ ಪದ್ಯದೊಳಗೆ ವ್ಯಕ್ತವಾಗಿತ್ತಲ್ಲವೇ ಅಂತ. ಇರಲಿ ಬಿಡಿ ಮತ್ತೆ ವಿಷಯಕ್ಕೆ ಬರ್ತೀನಿ.
ಮೊನ್ನೆ ಯಾವುದೋ ಸಮಾರಂಭದಲ್ಲಿ ಸ್ವಾಮೀಜಿಯೊಬ್ಬರು ಒಂದು ಮಾತನ್ನು ಹೇಳಿದರು. ನೀವು ಮಂಡ್ಯ ಜಿಲ್ಲೆಯ ಜನ ಬಹಳ ಅದೃಷ್ಟವಂತರಿದ್ದೀರಿ. ಮನೆ ಮನೆಗಳ ಬಾಗಿಲಿಗೂ ಕಾವೇರಿಯನ್ನು ಕರೆಸಿಕೊಳ್ತೀರಿ. ನಮ್ಮದು ಹಾಗಲ್ಲ ಅಂತ ಹೌದಲ್ಲವೆ! ಇವತ್ತು ನೀರೇ ಎಲ್ಲಾ. ನೀನೇ ಎಲ್ಲಾ ಅನ್ನುವ ಮಟ್ಟಕ್ಕೆ ಆ ತಾಯಿಯನ್ನು ನೆನೆಸಿಕೊಳ್ಳಬೇಕು. ‘ಜಲವೆಂದರೆ ಕೇವಲ ನೀರಲ್ಲ... ಅದು ಪಾವನ ತೀರ್ಥ’ ಅನ್ನುವ ಕವಿಸಾಲುಗಳನ್ನು ಜಪಿಸಬೇಕು ನಾವು. ನಾವಷ್ಟೇ ಅಲ್ಲ ರಾಜ್ಯದ ಮೂಲೆಮೂಲೆಗಳಿಂದ ಮಂಡ್ಯಕ್ಕೆ ಬಂದು ನೆಲೆಸಿರುವ ಅದೆಷ್ಟೋ ಕುಟುಂಬಗಳು ಇಂತಹ ಹಸನಾದ ಸಮೃದ್ದವಾದ ಜಿಲ್ಲೆಯನ್ನು ಬಿಟ್ಟು ಹೋಗಲಿಕ್ಕೆ ಮನಸ್ಸಾಗದೆ ಮಂಡ್ಯದವರೇ ಆಗಿ ಬಿಟ್ಟಿದ್ದಾರಲ್ಲಾ. ಅವರೆಲ್ಲಾ ಕೂಡ ನೆನೆಯಬೇಕು.
ಪ್ರತಿ ವರ್ಷದಂತೆ ಈ ವರ್ಷವೂ ಕಾವೇರಮ್ಮ ಮೈತುಂಬಿ ಬಂದಿದ್ದಾಳೆ. ಎಲ್ಲೆಡೆ ನಿರಂತರವಾಗಿ ಆಗುತ್ತಿರುವ ಮಳೆಯಿಂದಾಗಿ ತನ್ನ ಎಲ್ಲೆಯನ್ನು ಮೀರಿ ಹರಿಯುತ್ತಿದಾಳೆ. ಮನೆಯ ಹೆಣ್ಣು ಮಗಳಿಗೆ ಬಾಗಿನ ನೀಡಬೇಕಲ್ಲ ಅದಕ್ಕೆಂದೇ ಈ ಬಾರಿ ನೂತನ ಮುಖ್ಯಮಂತ್ರಿ ಸದಾನಂದಗೌಡರು ಬಾಗಿನ ಅರ್ಪಿಸಿದ್ದಾರೆ. ತಾನು ಹೋದಡೆಯಲ್ಲೆಲ್ಲಾ ಭೂಮಿಯನ್ನು ಸಮೃದ್ಧಗೊಳಿಸುವ ಆ ತಾಯಿಯ ಮಮಕಾರ ಯಾವತ್ತಿಗೂ ಈ ಮಣ್ಣಿನ ಮಕ್ಕಳ ಮೇಳಿದೆ. ಅದೇ ಪ್ರೀತಿಯನ್ನು ಭಕ್ತಿಯನ್ನು ಈ ಜಿಲ್ಲೆಯ ಜನ ಕರುಣಿಸಿದ್ದಾರೆ. ಕಟ್ಟೆಯೊಂದು ನಮ್ಮ ಪಾಲಿಗಿಲ್ಲದಿದ್ದರೆ ಇಲ್ಲಿನ ಜನರ ಬದುಕು ಮೂರಾಬಟ್ಟೆಯಾಗುತ್ತಿದ್ದು ದಂತೂ ಖಚಿತ. ಹಾಗಾಗಲಿಲ್ಲ ಸದ್ಯ ಅನ್ನೋ ಅಭಿಮಾನದೊಂದಿಗೆ ಕಾವೇರಿಗೊಮ್ಮೆ ಜೈ ಅನ್ನುವಾ....