ಅಮೆರಿಕನ್ನಡ
Amerikannada
ಹರನಾಮವನು ಬಿಡದೆ .. ..
- ನಿಜಗುಣ ಶಿವಯೋಗಿ, ಕೈವಲ್ಯಪದ್ಧತಿ
ಹರನಾಮವನು ಬಿಡದೆ ಜಪಿಸಬಲ್ಲವರ ಭವ
ಮರಣಮಾಯಾಕರ್ಮಮಲಪಾಶಬಂಧಬಹು
ದುರಿತಸಂಸಾರಸಂತಾಪಸಂಚಯವಳಿದು ವರಭೋಗಮೋಕ್ಷವಹುದು |ಪ|

ಶಿವ ಮಹಾದೇವ ಶಂಕರ ಶರ್ವ ಪಾರ್ವತೀ
ಧವ ನಂದಿವಾಹ ದೇವೇಶಾನುದಕ್ಷ ವಾ
ಸವನತಪದಾಂಭೋಜ ನಗಚಾಪ ನಿರ್ಮಲ ನಿರಾತಂಕ ನೀಲಕಂಠ
ಭುವನೇಶ ವಿಜಯ ವೇದಾಂಗ ವೈಶ್ರವಣಸಖ
ಪವಮಾನ ಪಂಚಮುಖ ಪಶುಪತಿ ಸಹಸ್ರಾಕ್ಷ
ಭವ ಭರ್ಗ ಭಸಿತಾಂಗ ಭಾಳಲೋಚನ ಮೇರುಕಾರ್ಮುಕ ಕಪರ್ದಿಯೆಂದು ||೧||

ಸೋಮ ಶಾಂತಾಭಯ ವಿರೂಪಾಕ್ಷ ವಿಶ್ವಾಭಿ
ರಾಮ ಗಂಭೀರ ಕಾಲಾರಿ ಕೂಟಸ್ಥ ವಿಭು
ವಾಮದೇವಾಘೋರ ಪಂಚಾಕ್ಷರೋಂಕಾರ ತತ್ಪುರುಷ ರುದ್ರ ಭದ್ರ
ಭೀಮ ಸದ್ಯೋಜಾತ ಮೃಡ ಮಹಾಕಾಲ ಜಿತ-
ಕಾಮ ಮೃತ್ಯುಂಜಯ ಪುರಾತನ ಪರಾತ್ಪರ ನಿ
ರಾಮಯಾನಂತತೇಜೋರಾಶಿ ಸರ್ವಜ್ಞ ಶಾಶ್ವತ ಕಪಾಲಿಯೆಂದು ||೨||

ಶೂಲಿ ಸುಜನೈಕಬಾಂಧವ ಸದಾಶಿವ ಚಂದ್ರ
ಮೌಳಿ ಮಹಿಮೋಗ್ರಚರ್ಮಾಂಬರಾಸುರಶಿರೋ
ಮಾಲಿ ಮಂದಾಕಿನೀಧರ ಮಹೇಶ್ವರ ಮೇಘವಾಹ ಮಂದರನಿವಾಸ
ನೀಲಲೋಹಿತ ಪಾರಿಜಾತ ಪಾವನ ಲೋಕ
ಪಾಲ ಕೈಲಾಸಮಂದಿರ ಮಂತ್ರಮಯ ಭಕ್ತಿ
ಲೋಲ ಪಂಚಬ್ರಹ್ಮ ಪರನಾದ ಬಿಂದು ಪರಮಾತ್ಮ ಪುರವೈರಿಯೆಂದು ||೩||

ವರದ ವಾಗೀಶ ವರ್ಣಾತೀತ ವಂದ್ಯ ಜಯ
ಪರಮ ಪರತರ ಪರಂಜ್ಯೋತಿ ಪರಮಾನಂದ
ನಿರಪಾಯ ನಿರುಪಮ ನಿರಾವರಣ ನಿರ್ಲೇಪ ನಿರವಯವ ನಿತ್ಯತೃಪ್ತ|
ಉರಗಕಂಕಣ ವಿಶ್ವತೋಬಾಹು ವಿಶ್ವಾತ್ಮ
ಸುರಗಣಾರ್ಚಿತ ಸನಾತನ ಸದಾಗತಿ ಹಂಸ
ಗಿರಿಶ ಗಾಂಗೇಯಪಿತ ಗಣನಾಥ ಜಗದೀಶ ವಿಷಧರ ಪಿನಾಕಿಯೆಂದು ||೪||

ಉದಯಾಸ್ತಮಾನದೊಳು ನೂರೆಂಟು ನಾಮವನು
ಪದುಳದಿಂದೋದಿಕೇಳಿದವರ್ಗೆ ಶಂಭುಲಿಂ
ಗದ ಕರುಣದಿಂದಿನಿತುಕೊರತೆಯಿಲ್ಲದೆ ಸಕಲ ಸಂಪದದೊಳೊಂದುಗೂಡಿ|
ಸದಮಲಜ್ಞಾನಸದ್ಭಕ್ತಿಗಳು ಮೇಲೆ ಮೇ
ಲೊದವಿ ಕೈಸಾರುತಿಹವಿಹದಲ್ಲಿ ಪರದೊಳೊಂ
ದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆವುದಿದು ಸತ್ಯವೆಂದು ||೫||