ಅಮೆರಿಕನ್ನಡ
Amerikannada
ಹದಿನಾಲ್ಕನೇ ಶತಮಾನದ ಸಮಾಜ ಸುಧಾರಕ
ಮೂಡಲ ಮಲೆಯ ಶ್ರೀ ಮಹದೇಶ್ವರ

-ನಗರ್ಲೆ ಶಿವಕುಮಾರ, ಮೈಸೂರು
ಕರ್ನಾಟಕ ಶರಣರ ಸಂತರ ದಾಸರ ಪವಾಡ ಪುರುಷರ ಮಹಾತ್ಮರ ಪುಣ್ಯಧಾಮ. ಸಕಲ ಜೀವಾವಳಿಗೆ ಲೇಸನ್ನು ಬಯಸುವುದೇ ಅವರ ಸಾಧನೆಯ ಸಂಕಲ್ಪವಾಗಿದೆ. ಇಂಥ ಮಹಾಮಹಿಮರಲ್ಲಿ ಶ್ರೀ ಮಲೆ ಮಹದೇಶ್ವರರು ಒಬ್ಬರು. ಶ್ರೀ ಮಲೆಯ ಮಾದೇಶ್ವರರ ಪುಣ್ಯ ಕ್ಷೇತ್ರವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪೂರ್ವ ಘಟ್ಟಗಳ ಶ್ರೇಣಿಯಲ್ಲಿರುವ ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ.
ಏಳುಮಲೆಯ ಮಾದೇಶ್ವರ ಜನಪದರ ಆರಾಧ್ಯ ದೈವ. ಏಳುಮಲೆಯ ದಟ್ಟ ಕಣಿವೆಯಲ್ಲಿ ಬೆಟ್ಟ ಕಾಡುಗಳ ನಡುವೆ ಮಹದೇಶ್ವರ ಕ್ಷೇತ್ರವಿದೆ. ಮಹದೇಶ್ವರನಿಗೆ ಸಂಬಂಧಿಸಿದ ಶಾಸನಗಳಿವೆ. ಮಹದೇಶ್ವರನ ಬೆಟ್ಟದಲ್ಲಿ ಶಿವರಾತ್ರಿ, ಯುಗಾದಿ, ದೀಪಾವಳಿ ಸಂದರ್ಭದಲ್ಲಿ ವಿಶೇಷ ಜಾತ್ರೆ ಹಾಗೂ ಉತ್ಸವಗಳು ನಡೆಯುತ್ತವೆ.
“ಸತ್ಯವಂತ ಶಿವನ ಕಂಡು ಬರುವಾ ಬನ್ನಿ. ಹುಟ್ಟಿದ್ದು ಉತ್ತರ ದೇಶ, ಬೆಳದದ್ದು ದಕ್ಷಿಣ ದೇಶ. ಇರುವುದು ಇಷ್ಟು ಪಾಕ್ಷಿ ಗಿಡದಲ್ಲಿ ವಾಸ.”
ಬಾಲ್ಯ ಯೌವನ:
ಕಾಡಿನ ಮಧ್ಯೆ ಹುಟ್ಟಿ, ಬೆಳೆದು, ಹೆಮ್ಮರವಾದವರು ಶ್ರೀ ಮಹದೇಶ್ವರರು. ಶ್ರೀ ಶೈಲದ ಕಾಡಿನ ಮಧ್ಯದ ಊರು ಉತ್ತಮಾಪುರ. ಶಿವಭಕ್ತರಾದ ಶ್ರೀ ಚಂದ್ರಶೇಖರಮೂರ್ತಿ. ಶ್ರೀಮತಿ ಉತ್ತರಾಜಮ್ಮ ದಂಪತಿಗಳ ಪುತ್ರ ಮರಿದೇವರು. ಶ್ರೀ ಶೈಲದ ಮಲ್ಲಿಕಾರ್ಜುನನ ದರ್ಶನಕ್ಕೆಂದು ಹೊರಟಿದ್ದ ಗುಂಪಿನ ಜೊತೆಯಲ್ಲಿ ಬಂದು ಶ್ರೀಶೈಲದ ವ್ಯಾಘ್ರಾನಂದರ ಮೆಚ್ಚಿನ ಶಿಷ್ಯರಾಗಿ ಮರಿದೇವರು ರೂಪುಗೊಳ್ಳುತ್ತಾರೆ. ವ್ಯಾಘ್ರಾನಂದರ ಹುಲಿಗೂ, ಮರಿದೇವರಿಗೂ ಸಖ್ಯ ಬೆಳೆಯುತ್ತದೆ. ಯೋಗಾಭ್ಯಾಸದಲ್ಲಿ ತೊಡಗಿ ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವ ಎಂಬ ಅಷ್ಟ ಸಿದ್ಧಿಗಳನ್ನು ಪಡೆದುಕೊಳ್ಳುತ್ತಾರೆ.
ಶ್ರೀಶೈಲದಿಂದ ಕನ್ನಡ ನಾಡಿನ ದಕ್ಷಿಣದ ಕಡೆಗೆ ಮರಿದೇವರು ಯಾತ್ರೆಯನ್ನು ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಂಜನಗೂಡು ತಾಲ್ಲೂಕಿನ ಸುತ್ತೂರು ಮಠಕ್ಕೆ ಬರುತ್ತಾರೆ. ಒಂದು ಗಾದೆ ಮಾತಿದೆ. ‘ಸುತ್ತೂರು ಸುಖವೆಂದು ಬಂದರೆ, ಕುಕ್ಕೆಯಲ್ಲಿ ರಾಗಿ ತುಂಬಿತ್ತು’ ಎಂದು. ಮಠಕ್ಕೆ ಯಾರೇ ಬಂದರೂ ರಾಗಿ ಬೀಸಿ ನಂತರ ಪ್ರಸಾದ ಸ್ವೀಕರಿಸಬೇಕು. ಶ್ರೀಮಹದೇಶ್ವರರು ತಮ್ಮ ಪವಾಡದಿಂದ ಖಂಡುಗ ರಾಗಿಯನ್ನು ಕ್ಷಣಾರ್ಧವೇ ಬೀಸಿ ಮಹಿಮೆಯನ್ನು ಮರೆಯುತ್ತಾರೆ.
ಶ್ರೀ ಮಠದಲ್ಲಿ ಇಂದಿಗೂ ರಾಗಿ ಕಲ್ಲನ್ನು ಕಾಣಬಹುದು. ಮುಂದಿನ ಪ್ರಯಾಣದಲ್ಲಿ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಕೆಲವು ದಿನಗಳಿದ್ದು ಶಂಭುಲಿಂಗ ಕ್ಷೇತ್ರದ ಶ್ರೀ ಪ್ರಭುಸ್ವಾಮಿಗಳ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿ ಕೆಲವು ವರ್ಷಗಳ ಕಾಲ ಸಾಧನೆ ಮಾಡುತ್ತಾರೆ.
ಶಂಭುಲಿಂಗ ಕ್ಷೇತ್ರವನ್ನು ಬಿಟ್ಟು ಮೂಡಲ ಮಲೆಯಕ್ಕೆ ಬಂದ ಶ್ರೀ ಮಹದೇಶ್ವರರು ಮೊದಲಿಗೆ ಸಾಲೂರು ಮಠಕ್ಕೆ ಬರುತ್ತಾರೆ. ಈ ಮಠ ಮಹದೇಶ್ವರರು ಅಲ್ಲಿಗೆ ಬರುವ ಮೊದಲೇ ಸ್ಥಾಪಿತವಾಗಿತ್ತು. ಮಲೆಯ ಪ್ರದೇಶಕ್ಕೆ ಹೋದಂತಹ ಮಹದೇಶ್ವರರಿಗೆ ಎದುರಾದ ಜನರೆಂದರೆ ಅಲ್ಲಿನ ಕಾಡು ಕುರುಬರು, ಸೋಲಿಗರು, ಬೇಡರು. ಮನುಷ್ಯನ ಬದುಕಿನ ಸಾಧ್ಯತೆಗಳ ಸಾಮಾನ್ಯ ಜ್ಞಾನವೂ ಇಲ್ಲದಿದ್ದ ಈ ಜನಕ್ಕೆ ವಿದ್ಯೆ, ಸಂಸ್ಕೃತಿ ದಕ್ಕಿರಲಿಲ್ಲ. ಅವರವರ ಆಚರಣೆ, ನಂಬಿಕೆ, ನಡಾವಳಿಕೆಗಳಿಗೆ ತಕ್ಕಂತೆ ಅವರು ಇಡೀ ಮಲೆ ಪ್ರದೇಶದ ಬೇರೆ ಬೇರೆ ಕಡೆ ಹಂಚಿ ಹೋಗಿದ್ದರು. ಅವರುಗಳನ್ನು ಭೇಟಿ ಮಾಡುವುದೇ ಒಂದು ದುಸ್ತರವಾದ ಕೆಲಸವಾಗಿತ್ತು. ಇಂತಹ ಸವಾಲನ್ನು ಮಹದೇಶ್ವರರು ನಿಶ್ಚಲ ಮನಸ್ಸಿನಿಂದಲೇ ಸ್ವೀಕರಿಸುತ್ತಾರೆ.
“ಕೋಲು ಮಂಡೆ ಜಂಗಮರು, ಕೋರಣ್ಯಕ್ಕೆ ದಯಮಾಡವರೆ, ಕೋರಣ್ಯಗಳ ನೀಡಮ್ಮ ಕೋಡು ಗಲ್ಲಯ್ಯನಿಗೆ”
ಸಾಧನೆ ಸಿದ್ಧಿ:
ಸಂಸ್ಕಾರ ರಹಿತವಾಗಿದ್ದ ಗಿರಿಜನರಿಗೆ ಸಂಸ್ಕಾರ ನೀಡುತ್ತಾರೆ. ಪಶು ಪಕ್ಷಿಗಳನ್ನು ಬೇಟೆಯಾಡಿ ಜೀವಿಸುತ್ತಿದ್ದ ಬೇಡರಿಗೆ ವ್ಯವಸಾಯ ಮಾಡುವ ವೃತ್ತಿಯನ್ನು ಕಲಿಸಿಕೊಡುತ್ತಾರೆ. ಅಸ್ಪೃಶ್ಯರಿಗೆ ಸಂಸ್ಕಾರ ನೀಡುವುದರ ಜೊತೆಗೆ ಲಿಂಗದೀಕ್ಷೆಯನ್ನು ನೀಡಿ ಆಚಾರ ವಿಚಾರವಂತರನ್ನಾಗಿ ಮಾಡುತ್ತಾರೆ.
ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಸುತ್ತುಮಲೆ, ನಾಗಮಲೆ ಹೀಗೆ ಎಪ್ಪತ್ತೇಳು ಮಲೆಗಳನ್ನು ಸಂಚರಿಸಿ ಅಲ್ಲಿ ವಾಸಿಸುತ್ತಿದ್ದ ಕಾಡು ಜನರನ್ನು ಒಳ್ಳೆಯ ಸುಸಂಸ್ಕೃತರನ್ನಾಗಿ ಮಾಡಿ ಧಾರ್ಮಿಕ ಭಾವನೆಗಳ ಕಡೆಗೆ ಅವರ ಗಮನ ಹರಿಸುವಂತೆ ಮಾಡಿ ಶ್ರೀ ಮಹದೇಶ್ವರರು ಅವರನ್ನು ಉದ್ಧರಿಸುತ್ತಾರೆ.
“ಎಪ್ಪತ್ತೇಳು ಮಲೆಯಲ್ಲಿ ತಪ್ಪದೆ ನಾಟ್ಯವಾಡುವಂತ ನಮ್ಮ ಮುದ್ದು ಮಾದಪ್ಪನ ಪಾದಕ್ಕೆ ಒಂದು ಸಾರಿ ಉಘೇ ಅನ್ನಿ”
ಮೂಡಣ ಮಲೆಯಲ್ಲಿ ನೆಲೆಸಿರುವ ಶ್ರೀ ಮಾದೇಶ್ವರರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರಾಗಿ ವಿರಾಜಿಸುತ್ತಿದ್ದಾರೆ. ಶ್ರೀ ಮಹದೇಶ್ವರ ಕ್ಷೇತ್ರ ಏಳು ಮಲೆಗಳ ಕೈಲಾಸ. ಈ ಕ್ಷೇತ್ರದ ಸುತ್ತಲೂ ಮಹಾಮಹಿಮರಿರುವ ನೆಲವೀಡುಗಳು ಇವೆ. ಶಿವಶರಣರ ನೆಲೆಗಳು ಶ್ರೀ ಮಾದೇಶ್ವರ ಕ್ಷೇತ್ರದ ಸುತ್ತಲೂ ಆವರಿಸಿರುವ ಎಪತ್ತೇಳು ಮಲೆಗಳ ಒಡೆಯರಾಗಿದ್ದಾರೆ. ಮಿಣ್ಯದ ಗುರುಸಿದ್ಧ ಕವಿಯು ತನ್ನ ಸಾಂಗತ್ಯದಲ್ಲಿ ಈ ಎಲ್ಲಾ ದೇವತೆಗಳನ್ನು ಹೆಸರಿಸಿದ್ದಾನೆ. ಎಲ್ಲ ಮಹಿಮರೂ ಮೂಡಲ ಮಲೆಯ ಮಹನೀಯರೇ ಆಗಿದ್ದಾರೆ.