ಅಮೆರಿಕನ್ನಡ
Amerikannada
ಗಣಪತಿ: ಆ ‘ಗಣ’ಗಳು ಯಾರು?
-ಶಿಕಾರಿಪುರ ಹರಿಹರೇಶ್ವರ
ನಮ್ಮ ಬೆನಕ ವಿನಾಯಕನಿಗೆ, ವಿಘ್ನರಾಜ, ದ್ವೈಮಾತುರ, ಏಕದಂತ, ಹೇರಂಬ, ಲಂಬೋದರ, ಗಜಾನನ ಎಂಬ ಹೆಸರುಗಳ ಜೊತೆ ಜೊತೆಗೆ ಗಣಪತಿ, ಗಣಾಧಿಪ, ಗಣೇಶ ಎಂದೂ ಕರೆಯುತ್ತೇವಲ್ಲ, ಹೌದು, ‘ಗಣಪತಿ’ ಅಂದಾಗ, ಇವನು ‘ಗಣ’ ಸಂಕೇತದ ದೈವೀಶಕ್ತಿಗಳ ಒಡೆಯ, ಅಧಿಪತಿ ಅಥವಾ ಸ್ವಾಮಿ ಎಂದೇ ಅರ್ಥ.  ಆದರೆ ಈ ‘ಗಣ’ಗಳು ಯಾರು? ಎಷ್ಟು ಮಂದಿ? ಇವರ ಕಥೆ ಏನು? ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರಿಸುವ ಪ್ರಯತ್ನವಾಗಿ ಬನ್ನಿ, ಒಂದು ವಿಚಾರವಿಹಾರ ಮಾಡೋಣ:
‘ಗಣ’ ಎಂದರೆ ಗುಂಪು:
ಸಾಮಾನ್ಯವಾಗಿ ಒಂದೇ ಬಗೆಯ ಸಮಾನ ವಸ್ತುಗಳ ಅಥವಾ ವ್ಯಕ್ತಿಗಳ ಗುಂಪಿಗೆ ‘ಗಣ’ ಎನ್ನುತ್ತಾರೆ. ಸಮೂಹ, ನಿವಹ, ವ್ಯೂಹ, ಸಂಚಯ, ಸಮುದಾಯ ಹೀಗೆ ಗಣಕ್ಕೆ ಮೂವತ್ತೆರಡು ಪರ್ಯಾಯ ಪದಗಳನ್ನ ಅಮರಕೋಶ  ಕೊಡುತ್ತದೆ. ಅದರಲ್ಲಿ ‘ವರ್ಗ’ವೆಂದರೆ ವಿಶಿಷ್ಟರೀತಿಯಲ್ಲಿ ಎಲ್ಲವೂ ಸಮಾನವಾಗಿರುವವ(ದ)ರ ಗುಂಪು.  ವೇದಗಳಲ್ಲೂ, ಉಪ ನಿಷತ್ತುಗಳಲ್ಲೂ  ಸಾಮಾನ್ಯವಾಗಿ, ಗುಂಪು ಎಂಬ ಅರ್ಥದಲ್ಲೇ ‘ಗಣ’ ಪದ ಬಳಕೆಯಾಗಿದೆ.
‘ಗಣ’ ಎಂದರೆ ಸೈನ್ಯದ ಒಂದು ತುಕುಡಿ:
ಒಂದು ಸೇನೆಯ ಅಂಗಗಳ ಪರಿಮಾಣವನ್ನು ವಿವರಿಸುವಾಗಲೂ ಹಿಂದೆ ‘ಗಣ’ ಎಂಬ ಪಾರಿಭಾಷಿಕ ಪದ ಬಳಕೆಯಲ್ಲಿತ್ತು. ಇಪ್ಪತ್ತೇಳು ಆನೆಗಳು, ಅಷ್ಟೇ ರಥಗಳು, ಎಂಭತ್ತೊಂದು ಕುದುರೆಗಳು ಮತ್ತು ನೂರಾ ಮೂವತ್ತೈದು ಪದಾತಿ(ಕಾಲಾಳು)ಗಳು ಹೀಗೆ ಒಟ್ಟು ಇನ್ನೂರಾ ಎಪ್ಪತ್ತು (೨೭೦) ಯುದ್ಧಸಾಧನಗಳು ಇರುವ ಸೈನ್ಯದ ತುಕುಡಿ ಒಂದು ಪಡೆಗೆ ‘ಗಣ’ವೆಂದು ಹೆಸರು. ಒಂದು ಅಕ್ಷೋಹಿಣಿಯಲ್ಲಿ ಎಂಟುನೂರಾ ಹತ್ತು (೮೧೦) ‘ಗಣ’ಗಳ ಪಡೆಗಳು ಇರುತ್ತವೆ.  ‘ಸೇನೆಯ ಮತ್ತು ಶಿವಭಕ್ತರ ಗುಂಪುಗಳಿಗೆ ಒಡೆಯ’ ಎಂಬ ಎರಡೂ ಅರ್ಥದಲ್ಲಿ ‘ಗಣನಾಥ’ ಪದವನ್ನು, ಕವಿ ರನ್ನ ತನ್ನ ಗದಾಯುದ್ಧದ ನಾಂದೀ ಪದ್ಯದಲ್ಲಿ ಚಮತ್ಕಾರದಿಂದ ಬಳಸುತ್ತಾನೆ; ತನ್ನ ಅರಸು ಸತ್ಯಾಶ್ರಯನನ್ನೂ, ಗಜಮುಖನನ್ನೂ ಶ್ಲೇಷಾರ್ಥದಲ್ಲಿ ಸ್ತುತಿಸುತ್ತಾನೆ: ಅಮ್ಮನ ಗಂಧವಾರಣಂ (=ತಂದೆಯ ಮುದ್ದಿನ ಮದ್ದಾನೆಯಂತಿರುವ), ಜಗತ್ ಪ್ರಿಯನಾದ ದೇವನ್, ಅಂಕದ ಗಣನಾಯಕಂ- ಎಮಗೆ ವರದನ್ ಅಕ್ಕೆ! ಎಂದು ಕವಿ ಆಶಿಸುತ್ತನೆ.
ಕ್ರಿಯಾಪದದ ಧಾತುಗಳ ‘ಗಣ’ಗಳು:
ಸಂಸ್ಕೃತ ವ್ಯಾಕರಣದಲ್ಲಿ ಸುಮಾರು ಎರಡು ಸಾವಿರ ಕ್ರಿಯಾಪದದ ಬೇರೆ ಬೇರೆ ಧಾತುಗಳು ಇವೆ. ಇವು ಮೂಲಪದಗಳು. ಪ್ರತ್ಯಯಗಳನ್ನು ಇವುಗಳೊಂದಿಗೆ ಜೋಡಿಸಿ ಸೇರಿಸಿದಾಗ ವಿಶಿಷ್ಟ ಕ್ರಿಯಾಪದರೂಪ ಪಡೆಯುತ್ತವೆ. ಈ ಧಾತುಗಳು ಹತ್ತು ‘ಗುಂಪು’ಗಳಾಗಿ ವಿಂಗಡಿಸಲ್ಪಟ್ಟಿವೆ. ಈ ಗುಂಪುಗಳಿಗೆ ‘ಗಣ’ ಎನ್ನುತ್ತಾರೆ. ಸಂಸ್ಕೃತದಲ್ಲಿ ‘ಗಣ್’ ಎಂಬುದು ಒಂದು ಸಕರ್ಮಕ ಕ್ರಿಯಾಪದದ ಧಾತು. ‘ಲೆಕ್ಕಿಸು’, ‘ಎಣಿಸು’ ಇತ್ಯಾದಿ ಅರ್ಥವ್ಯಾಪ್ತಿಯುಳ್ಳ ಈ ಧಾತುವಿನಿಂದ ಹಲವು ನಾಮಪದಗಳು(ಗಣ, ಗಣನ, ಗಣಕ, ಗಣಿತ ಇತ್ಯಾದಿ), ವಿಶೇಷಣಗಳು (ಗಣನೀಯ, ಗಣ್ಯ ಇತ್ಯಾದಿ), ಕ್ರಿಯಾಪದಗಳು,  ಇನ್ನಿತರ ರೂಪಗಳೂ ಹುಟ್ಟಿಬಂದಿವೆ. ಈಗ ಆಧುನಿಕ ವೈಜ್ಞಾನಿಕ ವರ್ತಮಾನಕಾಲದಲ್ಲಿ ತುಂಬಾ ಪ್ರಚಾರದಲ್ಲಿರುವ ಪದ ‘ಗಣಕ’ (ಕಂಪ್ಯೂಟರ್).
‘ಗಣ’ ದೇವತೆಗಳು:
ದೇವಯೋನಿಗಳು ಅಂದರೆ ದೈವಾಂಶವುಳ್ಳ ಉಪದೇವತೆಗಳು ಹಲವರಿದ್ದಾರೆ. ಈ ಅಮಾನುಷ ವ್ಯಕ್ತಿಗಳಲ್ಲಿ ವಿದ್ಯಾಧರರು, ಅಪ್ಸರೆಯರು, ಯಕ್ಷರು, ರಕ್ಷಸರು (ರಾಕ್ಷಸರು, ದೈತ್ಯರು), ಗಂಧರ್ವರು, ಕಿನ್ನರರು, ಕಿಂಪುರುಷರು ಪಿಶಾಚರು, ಗುಹ್ಯಕರು, ಸಿದ್ಧರು, ಸಾಧ್ಯರು  ಮತ್ತು ಭೂತಗಳು ಸೇರಿದ್ದಾರೆ.  ಶಿವನ ಅನುಚರರಿಗೆ ಮಾತ್ರ ‘ಗಣ’ ದೇವತೆಗಳೆಂದು ಹೇಳುತ್ತಾರೆಯೇ ಹೊರತು ವಿಷ್ಣುವಿನ ಸಹಚರರಿಗೆ ಈ ಹೆಸರಿನಿಂದ ಕರೆಯುವ ವಾಡಿಕೆಯಿಲ್ಲ.
ವೈದಿಕ ವಾಙ್ಮಯದಲ್ಲಿ ‘ಗಣ’ ಪದಕ್ಕೆ ಮಂತ್ರಗಳ ಸಮೂಹ, ದೇವತೆಗಳ ಗೋಷ್ಠಿ, ಜನಗಳ ಗುಂಪು ಎಂಬ ಅರ್ಥವಿದೆ. ಹಲವರು ವಿನಾಯಕರು ಈ ಭೂತಗಣಗಳಲ್ಲಿ ಇದ್ದರೆಂಬ ಹಿನ್ನಲೆಯಲ್ಲಿ ಶುಕ್ಲ ಯಜುರ್ವೇದ ಮತ್ತು ಶತರುದ್ರೀಯದಲ್ಲಿ ಬರುವ ಗಣಪತಿಯನ್ನ ಬಹುವಚನದಲ್ಲಿ ಕರೆದಿದ್ದಾರೆ. ‘ಗಣಗಳಿಗೆ ನಮನ, ನಿಮಗೆ ಗಣಪತಿಗಳಿಗೆ ವಂದನೆಗಳು’ ಎಂಬ ಮಂತ್ರಕ್ಕೆ, ವೇದಗಳಿಗೆ ಭಾಷ್ಯ ಬರೆದ ಮಹೀಧರನು “ಈ ಗಣಪತಿಗಳು ದೇವತೆಗಳ ಅನುಚರರಾದವರು, ವಿಶಿಷ್ಠ ಕಾರ್ಯ ನಿರ್ವಹಿಸುವ ಭೂತಗಳ ಗುಂಪಿಗೆ ಒಡೆಯರಾದವರು” ಎಂದು ಅರ್ಥೈಸಿದ್ದಾನೆ.
ಗಣದೇವತೆಗಳನ್ನು ಒಂಬತ್ತು ಬಗೆಗಳಾಗಿ ವಿಂಗಡಿಸುವ ಒಂದು ಕ್ರಮವೂ ಉಂಟು: ಆದಿತ್ಯರು, ವಿಶ್ವ ಅಥವಾ ವಿಶ್ವೇದೇವ, ವಸು, ತುಷಿತ, ಅಭಾಸ್ವರ, ಅನಿಲ ಅಥವಾ ವಾಯು, ಮಹಾರಾಜಿಕ, ಸಾಧ್ಯ ಮತ್ತು ರುದ್ರ ಹೀಗೆ ಅವರು ಒಟ್ಟು ನಾಲ್ಕುನೂರ ಇಪ್ಪತ್ತೆರಡು ಗಣಗಳು. ಈ ಗಣಗಳು ಶಿವನ ಪರಿಚಾರಕ ಕೆಲಸ ಮಾಡುತ್ತಿದ್ದರೂ, ಶಿವನೇ ಇವರೆಲ್ಲರ ‘ನಾಥ’ನಾದರೂ,  ಈ ಗುಂಪುಗಳ ಪಡೆಗಳಿಗೆ ವಿಭಾಗದ ಒಡೆಯರಿದ್ದಾರೆ; ಅವರೇ ‘ವಿನಾಯಕರು’.  ಅವರ ಆಜ್ಞಾವರ್ತಿಗಳಾಗಿಯೇ ಇವರು ಕೆಲಸವನ್ನು ನಿರ್ವಹಿಸುವವರು. ಗಣಗಳ ಕಾರ್ಯಸಿದ್ಧಿಗೆ ಸಹಾಯಕನಾಗುವವನೇ ‘ಸಿದ್ಧಿವಿನಾಯಕ’.
ಮಹಿಷಾಸುರನ ವಧೆಯ ಪ್ರಸಂಗದಲ್ಲೂ ಅಂಬಿಕಾ ದೇವಿಯ ಹುಂಕಾರಮಾತ್ರದಿಂದಲೇ ಸಹಸ್ರಾರು ಗಣಗಳು ಉತ್ಪನ್ನರಾಗಿ, ಪರಶು, ಭಿಂದಿಪಾಲ, ಖಡ್ಗ ಮುಂತಾದ ಆಯುಧಗಳಿಂದ ಅಸುರರೊಂದಿಗೆ ಯುದ್ಧ ಮಾಡತೊಡಗಿದರು ಎಂದು ಮಾರ್ಕಾಂಡೆಯಪುರಾಣದ ‘ದೇವೀಮಾಹಾತ್ಮ್ಯ’ ದಲ್ಲಿ ನೋಡುತ್ತೇವೆ. ಆದರೆ, ಇಲ್ಲಿ ದೇವಿಯೇ ಈ ಗಣಗಳಿಗೆ ಒಡತಿ.
ಸಾಮಾನ್ಯವಾಗಿ ದೇವತಾಕಾರ್ಯದಲ್ಲಿ ನೈವೇದ್ಯಸಮರ್ಪಣೆ ಮುಗಿದನಂತರ,
ಬನ್ನಿರೈ ನಂದಿ ಗಣ ಬಾಣ ರಾವಣರೆ,
ಚಂಡಿ, ಭೃಂಗಿ, ರಿಟರಿತ್ತ ಬನ್ನಿ, ದಯಮಾಡಿಸಿ;
ಶಿವ ಹರಸಿತ್ತ ಪ್ರಸಾದವಿದು, ಇಗೋ ಶಾಂಭವರೆ,
ಭಕ್ತಿಯಿಂ ನೀಡುವೆ, ನೀವು ಒಲಿದು ಸ್ವೀಕರಿಸಿ||

  -ಎಂದು ಆಸ್ತಿಕರು ಬಲಿಹರಣ ಹಾಕುತ್ತೀವಲ್ಲ, ಆಗಲ್ಲಿ ನಾವು ಹೆಸರಿಸುವವರೆಲ್ಲಾ ಶಿವಪರಿವಾರಕ್ಕೆ ಸೇರಿದ ಶಾಂಭವ ‘ಗಣ’ ದೇವತೆಗಳೇ.
  ಕನ್ನಡ, ತೆಲುಗು ಹಾಗೂ ಸಂಸ್ಕೃತದಲ್ಲಿ ಉದ್ದಾಮ ಪಂಡಿತನಾದ ಪಾಲ್ಕುರಿಕೆ ಸೋಮನಾಥನು ಭೃಂಗಿರಿಟಿ ಗೋತ್ರದವನೆಂದು ಹೇಳಿಕೊಂಡಿದ್ದಾನೆ. ಸಾಮಾನ್ಯವಾಗಿ ಒಂದು ಸಾವಿರ ಗಣದೇವತೆಗಳನ್ನು ಹೆಸರಿಸುವ, ಸ್ತುತಿಸುವ ಪರಿಪಾಠ ಹಲವು ವೀರಶೈವಗ್ರಂಥಗಳಲ್ಲಿ ಕಾಣಬರುತ್ತದೆ.  ಅಮಾನುಷ ಮತ್ತು ಅಸದೃಶ ಪವಾಡಕಾರ್ಯಗಳನ್ನು ಮಾಡಿ ಮರ್ತ್ಯರು ಗಣಪದವಿಗೆ ಏರುವುದೂ ಉಂಟು. ಬೇರೆ ಧರ್ಮಗಳಲ್ಲಿ ಸಂತಪದವಿಗೆ ಏರಿ ಭಕ್ತಾನುರಾಗಿಗಳಾಗಿ ಲೋಕಕಲ್ಯಾಣ ಮಾಡುವವರಿಲ್ಲವೇ, ಭಕ್ತರ ಪರವಾಗಿ ದೇವರಲ್ಲಿ ಬೇಡಿಕೊಳ್ಳುವವರಿಲ್ಲವೇ, ಹಾಗೆ.  ಇದೇ ರೀತಿಯಲ್ಲಿ ಹಲವು ಶಿವಭಕ್ತರು, ಅರವತ್ತಮೂರು ಪುರಾತನರಲ್ಲಿ ‘ಗಣ’ರಿದ್ದಾರೆ.  ಸ್ತ್ರೀಗಣ ದೇವತೆಗಳೂ ಇವೆ. ‘ಗಣಾ’ ಎಂಬುವಳೊಬ್ಬಳು ಸ್ಕಂದನ ಪರಿಚಾರಿಕೆ ಯಾಗಿದ್ದಳು.
ಗಣನಾಥರು:
ಗಣನಾಥ ಎಂದರೆ ಗುಂಪಿನ ಯಜಮಾನ.  ಶಿವಗಣಗಳ ವಿಭಾಗಾಧ್ಯಕ್ಷರು ಗಣನಾಥರು.  ಕೆಲವರ ಹೆಸರೇ ‘ಗಣನಾಥ’ ಎಂದೂ ಇದ್ದವು.  ಪ್ರಮುಖಗಣಗಳನ್ನೂ ಗಣೇಶ್ವರ, ಗಣನಾಥ ಎಂದೂ ಸಂಬೋಧಿಸುವುದುಂಟು. “ಬಾಗಿಲಿಂ ನಂದಿಕೇಶ್ವರ ಬಿಡಲ್ ಒಳಪೊಕ್ಕು| ಪೋಗಿ ಅಭವನ ಅಡಿಗಳಿಗೆ| ರಾಗದಿಂ ಮೆಯ್ಯಿಕ್ಕಿ ಬೀಳ್ವೇಳ್ವ ಗಣಗಳಿಂದ| ಆಗಳ್ (ಶಿವನ) ಓಲಗ ರಂಜಿಸಿದುದು” ಎನ್ನುತ್ತಾ ನಂಜುಂಡಕವಿ (ಕ್ರಿ.ಶ. ೧೫೦೦), ಕನ್ನಡದ ಕಡುಗಲಿ ಕುಮಾರರಾಮನ ಕತೆಯಾದ ತನ್ನ ರಾಮನಾಥ ಚರಿತೆಯಲ್ಲಿ೨೯  “ಈಶ್ವರಸಭೆ ಶಿವನ ಒಡ್ಡೋಲಗ ಗಣನಾಥರಿಂದ ಕಣ್ಗೆಡ್ಡಂ ಆಯ್ತು” ಎಂದು ವಿವರಿಸುತ್ತಾನೆ.
ಗಣನಾಥರಲ್ಲಿ ‘ವಿನಾಯಕ’ ಪದವಿಯವರೂ ಇದ್ದಾರೆ. ಯಾಜ್ಞವಲ್ಕ್ಯ ಸ್ಮೃತಿಯಲ್ಲಿ (ಕ್ರಿ.ಶ. ಮೂರನೇ ಶತಮಾನ) “ಮಾಡುವ ಕೆಲಸಗಳಿಗೆ ಆಗಬಹುದಾದ ತೊಂದರೆಗಳನ್ನು ನಿವಾರಿಸಲು, ಗಣಗಳಿಗೆ ಯಜಮಾನನಾಗಿ ಇರುವಂತೆ ರುದ್ರನಿಂದಲೂ ಬ್ರಹ್ಮನಿಂದಲೂ ನೇಮಿಸಲ್ಪಟ್ಟವನೇ ಈ ವಿನಾಯಕನು” ಎಂಬ ಮಾತು ಬರುತ್ತದೆ. ಇಲ್ಲಿ, ಒಬ್ಬರು ನೇಮಕ ಮಾಡಿದ್ದಕ್ಕೆ ಅವರ ಸರಿಸಮಾನರ ಒಪ್ಪಿಗೆಯನ್ನೂ ಪಡೆದು, ಎಲ್ಲಾ ಗಣಗಳ ಅಧಿಪತಿಯಾದವನು ಈ ‘ವಿನಾಯಕ’ ನಮ್ಮ ಗಣೇಶ.
ಪ್ರಮಥಗಣಗಳು:
‘ಮಥನ’ವೆಂದರೆ ಕಡೆಯುವುದು, ತಿಕ್ಕುವುದು, ತೊಳಲಾಟಕ್ಕೆ ಒಳಗಾಗಿಸುವುದು. ಮನಸ್ಸಿನಲ್ಲಿ ಗೊಂದಲವುಂಟುಮಾಡುವಂಥ೩೩  ತೊಂದರೆ ಕೊಟ್ಟು ದುಷ್ಟರನ್ನ ಶಿಕ್ಷಿಸುವ ಕೆಲಸವನ್ನ ಈ ಉಪದೇವತೆಗಳು ನಿರ್ವಹಿಸುತ್ತಾರೆ ಎಂಬ ಕಾರಣಕ್ಕೆ ಇವರಿಗೆ ‘ಪ್ರಮಥ’ರು ಎಂಬ ಹೆಸರು ಬಂತು. ಪ್ರಮಥನ ಎಂದರೆ ಪೀಡಿಸುವುದು. ಮನಸ್ಸನ್ನು ಅಲ್ಲೋಲ-ಕಲ್ಲೋಲ ಉಂಟುಮಾಡುವಂಥ ‘ಮಥನ’ (ಕಡೆಯುವುದು) ಮಾಡುತ್ತಾನೆಂದು ತಾನೇ ನಮ್ಮ ರತಿದೇವಿಯ ಗಂಡ ಮದನ, ಮಾರನಿಗೆ ‘ಮನ್ಮಥ’ ಎಂದು ಕರೆಯುವುದು?
ಶಿವನ ಪರಿಚಾರಕ ದೇವತೆಗಳನ್ನ ‘ಪ್ರಮಥಗಣ’ಗಳೆಂದೂ ಕರೆಯುವ ವಾಡಿಕೆ ಇದೆ. ಶಿವನ ಸಭಿಕರಾಗಿರುವ ಪ್ರಮಥರೇ ಈ ‘ಗಣ’ಗಳು ಎನ್ನುತ್ತದೆ ಅಮರಕೋಶ.  ಈ ದೇವತೆಗಳ ಗುಂಪಿಗೆ ಒಡೆಯನೆಂದು ಗಣೇಶನಿಗೆ ‘ಪ್ರಮಥಾಧಿಪ’ ಎಂದು ಕರೆಯುವುದುಂಟು. ಈ ‘ಪ್ರಮಥ ಗಣ’ಗಳು ಒಂದೊಂದು ವಿಶೇಷ ಕಾರ್ಯವನ್ನು ನಿರ್ವಹಿಸುವ ‘ಉಪದೇವತೆ’ಗಳು. ಇವರೇ ಶಿವನ ಭೂತಗಣಗಳು ಮತ್ತು ಪಾರಿಷದರು.  ಪ್ರಮಥಗಣಗಳು ಧರ್ಮಾಧರ್ಮ ವಿಷಯಗಳಲ್ಲಿ ತಿಳುವಳಿಕೆವುಳ್ಳವರಾಗಿದ್ದರು.  ಪ್ರಮಥರು ವಿವಿಧ ರೂಪಗಳನ್ನು ತಳೆಯ ಬಲ್ಲವರಾದರೂ, ಮೂಲತಃ ದುಷ್ಟಶಿಕ್ಷಣಕ್ಕಾಗಿ ನಿಯೋಜಿಸಲ್ಪಡುವ ಉಪದೇವತೆಗಳು; ಆದ್ದರಿಂದ ಇವರು ಹೆದರಿಕೆ ಹುಟ್ಟಿಸುವ ಭಯಂಕರ ಮತ್ತು ವಿಕಾರ ಮುಖದವರು.
  ‘ಕಾಳಿಕಾಪುರಾಣ’ವು ಪ್ರಮಥಗಣಗಳ ಈ ಬಗೆಯ ದುಷ್ಟಶಿಕ್ಷಣ ಯುದ್ಧವನ್ನು ವರ್ಣಿಸುತ್ತಾ ಪ್ರಮಥ ಗಣಗಳ ನಡವಳಿಕೆಯನ್ನು ಮತ್ತು ಅವರು ಬಳಸುವ ಬಗೆಬಗೆಯ ಆಯುಧಗಳನ್ನೂ ವಿವರಿಸುತ್ತದೆ. ಇವರು ಶೂರರು, ಸಾಹಸಿಗಳು. ‘ಸಿಡಿಲ ಸಿಡಿವ, ಶೇಷನ ಪೆಡೆವಣಿಯ ಕಿಳ್ತಿಡುವ, ದಿಕ್-ಕರಿ-ದನ್ತಗಳನು ಉಡಿವ, ಕಡಲನ್ ಏಳ(ನು) ಕುಡಿವ, ಕುಲಾದ್ರಿಯ ಜಡಿವ’ ಧೀರರು. ‘ಕುಲಗಿರಿಗಳ ಕಿಳ್ತಿ ಎಣ್ಣೆಕಲ್ಲಾಡುವ, ಜಲಜಸಖ(ನಾದ) ಇಂದು(ವಿನ) ಬಿಂಬಗಳ ಬಲುಪಿನಿಂ ಸೆಳೆವ, ತಾರೆಗಳನ್ ಅರ್ಚುವ, ಬಲು ಬಲಯುತ’ ಗಣಂಗಳ ಗಡಣ ಇವರದು.  ಶಿವಪರಿವಾರದ ಗಣಗಳಿಗೆ ವಿಧವಿಧವಾದ ಪ್ರಾಣಿಗಳ ಪಕ್ಷಿಗಳ ಮುಖವಿತ್ತೆಂದು ಮಹಾಭಾರತ ಮುಂತಾದ ಗ್ರಂಥಗಳಿಂದ ತಿಳಿಯಬಹುದು. ಈ ಉಲ್ಲೇಖಗಳಿಂದ ಶಿವನ ಪಾರಿಷದರಲ್ಲಿ ಗಣಪತಿಯನ್ನು ಹೋಲುವ ಗಜಮುಖದ ಬೇರೆ ಗಣಗಳೂ ಇದ್ದವೆಂದು ಊಹಿಸಬಹುದು. ದೇವಾಲಯದ ಕೆಲವು ಶಿಲ್ಪಗಳು ಇದನ್ನು ಸಮರ್ಥಿಸುತ್ತವೆ.
‘ಆದಿತ್ಯಪುರಾಣ’ದ ಪ್ರಕಾರ, ಹಿಂದೆ, ಜಗತ್ಪ್ರಥಮಕಾರಣನಾದ ಮಹಾದೇವನನ್ನು ಬ್ರಹ್ಮನು ಸೃಷ್ಟಿಮಾಡುವಂತೆ ಪ್ರಾರ್ಥಿಸಿಕೊಂಡನಂತೆ. ಆಗ ಮೊಟ್ಟಮೊದಲು ತನ್ನ ಸಮಾನರಾದ ಮಾಹೇಶ್ವರ ರುದ್ರಗಣಗಳನ್ನು ಮಾನಸಪುತ್ರರನ್ನಾಗಿ ಸೃಜಿಸಿದನಂತೆ. ಅವರೂ ನೀಲಕಂಠರಾಗಿ, ತ್ರಿನೇತ್ರರಾಗಿ ಜಟಾ-ಮುಕುಟಧಾರಿಗಳಾಗಿದ್ದರಂತೆ. ಆಗ ಹುಟ್ಟಿದ ಪ್ರಮಥರು ರೇಣುಕ ಮತ್ತು ದಾರುಕ ಎಂಬವರು. ಇವರನ್ನು ತನ್ನ ಅನ್ತಃಪುರದ ದ್ವಾರಪಾಲಕರನ್ನಾಗಿ ಶಿವ ನಿಯಮಿಸಿಕೊಂಡನಂತೆ.
ಗಣಪತಿ ಮತ್ತು ಗಣೇಶ:
ಈಗ ಗಣಪತಿಯ ವಿಚಾರಕ್ಕೆ ಬರೋಣ. ಗಣಪ, ಗಣಪತಿ, ಗಣನಾಥ, ಗಣಭರ್ತೃ, ಗಣಾಗ್ರಣಿ, ಗಣಾಧಿಪ, ಗಣಾಧೀಶ, ಗಣಾಧ್ಯಕ್ಷ, ಗಣೇಶ, ಗಣೇಶಾನ, ಗಣೇಶ್ವರ - ಹೀಗೆ ಹೇಳುವಾಗ ಅರ್ಥಸೂಕ್ಷ್ಮತೆಯಿಂದ ಈ ‘ಗಣಗಳಿಗೆ ಒಡೆಯ’ ನಿರ್ವಹಿಸುವ ವಿವಿಧ ಕಾರ್ಯಗಳನ್ನು ಊಹಿಸಬಹುದು. (ಇಲ್ಲೊಂದು ಮಾತು. ಶಿವನಿಗೂ ‘ಗಣನಾಥ’ನೆಂಬ ಪಟ್ಟ ಇದ್ದೇ ಇದೆ. ಅವನ ಪರವಾಗಿ ಈ ‘ಗಣೇಶ’ ಅವನ ಎಲ್ಲ ಪರಿಚಾರಕ ಅನುಚರರನ್ನು ನಿಯಂತ್ರಿಸುತ್ತಾನೆ - ಎಂಬುದು ಸ್ಪಷ್ಟ.) ಇವನು ಪ್ರಮಥಾಧಿಪನೂ  ಹೌದು, ವ್ರಾತರೆಂಬ ಅಲೆಮಾರಿ ಬುಡಕಟ್ಟಿನವರ ಒಡೆಯನೂ ಹೌದು. “ಗಣನಾಂ ತ್ವಾ ಗಣಪತಿಂ ಹವಾಮಹೇ| ಪ್ರಿಯಾಣಾಂ ತ್ವಾ ಪ್ರಿಯಪತಿಂ ಹವಾಮಹೇ.. .. ಗರ್ಭದಂ” ಎಂದಾಗ ಗಣಪತಿಯು ಆ ‘ಸ್ತ್ರೀಗಣ’ಗಳಿಗೆ ಒಡೆಯ ಎನ್ನುವ ಅರ್ಥಹೇಳುತ್ತಾರೆ.
  ಗಣೇಶನ ಹುಟ್ಟು, ಸಾಹಸ, ವೈಶಿಷ್ಟ್ಯ, ಮಾಹಾತ್ಮ್ಯ, ಚರಿತ್ರೆಗಳು ಹಲವಾರು ಪುರಾಣ ಉಪಪುರಾಣಗಳಲ್ಲಿ ಹೇರಳವಾಗಿ ಕಂಡುಬರುತ್ತದೆ.  ಗಣೇಶನ ಕತೆಯನ್ನೇ ಮುಖ್ಯವಾಗಿ ಉಳ್ಳದ್ದು ಎರಡು ಪುರಾಣಗಳು: ಗಣೇಶ ಪುರಾಣ ಮತ್ತು ಮುದ್ಗಲ ಪುರಾಣ. ಗಣಪತಿಯ ಆರಾಧನೆಯನ್ನೇ ಮುಖ್ಯವಸ್ತುವಾಗುಳ್ಳ ಈ ಎರಡು ಪುರಾಣಗಳಲ್ಲಿ ಬಹಳ ಜನಪ್ರಿಯವಾದ ಗಣೇಶನ ಹನ್ನೆರಡು ಹೆಸರುಗಳನ್ನು ಸ್ಮರಿಸುವ ಸ್ತೋತ್ರವಿದೆ.  ನೋಡಲು ತುಂಬಾ ಚೆನ್ನಾಗಿರುವ ಮುಖವುಳ್ಳವನು, ಒಂದೇ ಒಂದು ಕೋರೆಹಲ್ಲಿನ ದಂತ ಇರುವವನು, ಕೆಂಪು ಮೈಬಣ್ಣದವನು, ಆನೆ ಕಿವಿಯುಳ್ಳವನು, ದಪ್ಪಹೊಟ್ಟೆಯವನು, ವಿಕಾರ ಮೈಕಟ್ಟಿನವನು, ಅಡೆತಡೆಗಳನ್ನು ತಂದೊಡ್ಡುವವನು, ಗಣಗಳಿಗೆ ಒಡೆಯನು, ಹೊಗೆಬಣ್ಣದ ಬಾವುಟದವನು, ಗಣಗಳ ಕಾರ್ಯದ ಮೇಲ್ವಿಚಾರಕ ಅಧ್ಯಕ್ಷನು, ಹಣೆಯಲ್ಲಿ ಚಂದ್ರನನ್ನು ಧರಿಸಿದವನು, ಆನೆಮೊಗದವನು ಎಂದು ಈ ಗಣಪತಿಯನ್ನ ವರ್ಣಿಸುವ ಹನ್ನೆರಡು ಹೆಸರುಗಳನ್ನ ಹೇಳುವುದು ವಾಡಿಕೆ; ಇದಕ್ಕೆ ಇನ್ನೂ ನಾಲ್ಕನ್ನ ಸೇರಿಸಿ (ಸುತ್ತಿಕೊಂಡ ಸೊಂಡಿಲಿನವನು, ಅಗಲವಾದ ಮೊರದ ಕಿವಿಯುಳ್ಳವನು, ಪರಾಕ್ರಮದಿಂದ ಕೊಬ್ಬಿದವನು, ಷಣ್ಮುಖನ ಸೋದರ) ಹದಿನಾರು ಹೆಸರುಗಳನ್ನ ಹೇಳುವುದೂ ಉಂಟು. ಗಣಪತಿಗೆ ಶಿವನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಅಧಿಕಾರವನ್ನ ಕೊಟ್ಟ ಕಥೆ ಲಿಂಗಪುರಾಣದಲ್ಲಿ  ಬರುತ್ತದೆ. ವಿಘ್ನನಾಶನಕ್ಕಾಗಿ ಸನ್ನದ್ಧನಾದ ಗಣೇಶನಿಗೆ ಬೇರೆ ಬೇರೆ ದೇವತೆಗಳು ಏನೇನು ಆಯುಧಗಳನ್ನು  ಕೊಟ್ಟರು ಎಂಬ ಪ್ರಸ್ತಾಪ ದೇವಿ ಭಾಗವತ ಪುರಾಣದಲ್ಲಿ  ಇದೆ.
ಎಲ್ಲಕ್ಕೂ ಮೊದಲು ಇವನಿಗೆ ಅಗ್ರಪೂಜೆ:
ಎಲ್ಲಾ ಶುಭ ಕಾರ್ಯಗಳ ಮೊದಲು ಗಣಾಧ್ಯಕ್ಷನನ್ನು ಪೂಜಿಸಬೇಕು ಎಂದು ಪದ್ಮಪುರಾಣ  ಹೇಳುತ್ತದೆ; ಹಾಗೆ ಮಾಡದಿದ್ದಲ್ಲಿ ಅವನ ಕೋಪಕ್ಕೀಡಾಗಿ ತೊಂದರೆಗೊಳಗಾದೀರಿ ಎಂಬ ಎಚ್ಚರಿಕೆಯನ್ನೂ ಅದು ಕೊಡುತ್ತದೆ. ವರಾಹ ಪುರಾಣದಲ್ಲಿ ಶಿವನು ತನ್ನ ಎಲ್ಲಾ ಭೂತಗಣಗಳಿಗೂ ‘ವಿನಾಯಕ’ ಅಂಕಿತದ ಇನ್ನಿತರ ಗಣಗಳಿಗೂ ನಮ್ಮ ಗಜಮುಖನನ್ನೇ ನಾಯಕನಾಗಲಿ ಎಂದು ಆಜ್ಞೆಮಾಡಿ, ಎಲ್ಲರೂ ಎಲ್ಲಾ ಕಾರ್ಯಗಳ ಮೊದಲು ನಿನ್ನನ್ನೇ ಆರಾಧಿಸಬೇಕು. ಇಲ್ಲದೇ ಹೋದರೆ ಅಡೆತಡೆಗಳು ಉಂಟಾಗಿ ಆ ಕಾರ್ಯಗಳು ಅವರಿಗೆ ಕೈಗೂಡದಿರಲಿ ಎಂದು ಆಜ್ಞಾಪಿಸಿದನು ಎಂಬ ವಿಷಯ ಬರುತ್ತದೆ.
ಕ್ರಿಸ್ತ ಶಕದ ಮೊದಲ ವರ್ಷಗಳಲ್ಲೇ ಗಣಪತಿಯ ಅಗ್ರಪೂಜೆಯ ಪದ್ಧತಿ ಪ್ರಾರಂಭವಾಗಿರಬೇಕು. ಗೋಭಿಲ ಸ್ಮೃತಿಯಲ್ಲಿ (ಕಾಲ ಕ್ರಿ. ಶ. ಒಂದನೇ ಶತಮಾನ) ಮೊಟ್ಟ ಮೊದಲಿಗೆ “ಗಣಪತಿಯನ್ನು ಪೂಜಿಸಿಯೇ ಎಲ್ಲಾ ಶುಭಕಾರ್ಯಗಳನ್ನು ಪ್ರಾರಂಭಿಸಬೇಕು” ಎನ್ನುವ ವಿಚಾರ ಬರುತ್ತದೆ. ಬೌಧಾಯನ (ಕ್ರಿ. ಶ. ಒಂದನೇ ಶತಮಾನ) ಗೃಹ್ಯಸೂತ್ರದಲ್ಲಿ  ಗಣಪತಿಯ ಪೂಜೆಯ ನಿಯಮವಿದೆ. ಯಾಜ್ಞವಲ್ಕ್ಯ ಸ್ಮೃತಿ (ಕ್ರಿ. ಶ. ಮೂರನೇ ಶತಮಾನ) ಅದಕ್ಕೆ ವಿಘ್ನಪರಿಹಾರಕ ಕಾರಣ ಹೇಳುತ್ತದೆ.  ಬ್ರಹ್ಮನೇ ಮೊದಲಾದ ದೇವತೆಗಳೂ ಸಹ ತಮ್ಮ ಎಲ್ಲಾ ಕಾರ್ಯಾರ್ಥಗಳನ್ನು ಪ್ರಾರಂಭಿಸುವಾಗ ಯಾರಿಗೆ ಮೊದಲು ಮಣಿದು ಕೃತಕೃತ್ಯರಾದರೋ, ಆ ಗಜಾನನನಿಗೆ ನಮಸ್ಕರಿಸುವೆ ಎನ್ನುವ ಪ್ರಸಿದ್ಧ ಸ್ತುತಿ ಒಂದು ಶಾಸನದಲ್ಲಿದೆ.
ನಾಂದಿ ಪದ್ಯಗಳಲ್ಲಿ ಗಣಪತಿಯನ್ನ ಸ್ತುತಿಸುವ ಕ್ರಮ ಗುಪ್ತರ ಕಾಲದ ನಂತರ ಬಂದಿರಬೇಕೆಂದು ವಿದ್ವಾಂಸರ ಊಹೆ. ಸಂಸ್ಕೃತದ ಹೆಸರಾಂತ ಪ್ರಾಚೀನ ಕವಿಗಳಾದ ಕಾಳಿದಾಸ, ಭಾಸ, ಭಾರವಿ, ಮಾಘ, ಶ್ರೀಹರ್ಷ ಮುಂತಾದವರು ತಮ್ಮ ಕಾವ್ಯಕೃತಿಗಳ ಪ್ರಾರಂಭದಲ್ಲಿ ಗಣಪತಿಯ ಸ್ತುತಿಯನ್ನು ಮಾಡುವುದಿಲ್ಲ. ಆದರೆ, ಕ್ರಿ. ಶ. ೭-೮ನೇ ಶತಮಾನ ಕಾಲದ ಬಾಣ ಭವಭೂತಿಗಳು ಗಣಪತಿಯನ್ನು ಸ್ತುತಿಸಿದ್ದಾರೆ. ಭವಭೂತಿ (ಕ್ರಿ.ಶ. ಏಳನೇ ಶತಮಾನದ ಕೊನೆ) ತನ್ನ ಮಾಲತಿಮಾಧವದಲ್ಲಿ ಗಣಪತಿಯನ್ನು ‘ವಿನಾಯಕ’ನೆಂದು ಸ್ತುತಿಸಿದ್ದಾನೆ. ಧನಂಜಯನು (ಹತ್ತನೇ ಶತಮಾನ) ದಶರೂಪಕ ಎಂಬ ನಾಟ್ಯಶಾಸ್ತ್ರ ಗ್ರಂಥದ ಪ್ರಾರಂಭದಲ್ಲಿ ‘ಶಿವ ತಾಂಡವ ನೃತ್ಯಕ್ಕೆ ಮೋಡದ ಗುಡುಗಿನಂತಿರುವ ಗಣಪತಿಯ ಧ್ವನಿ ಎಷ್ಟು ಪೂರಕವಾಗಿದೆ ಎಂದರೆ ಶಿವ ನೀಲಕಂಠನಾದರೆ, ಗಣಪತಿ ಮೃದಂಗ ಕಂಠ’ ಎನ್ನುತ್ತಾನೆ. ಕನ್ನಡದ ಪ್ರಾಚೀನಕವಿಗಳಂತೂ, ಸಾಮಾನ್ಯವಾಗಿ ಎಲ್ಲರೂ, ಗಣೇಶನನ್ನು ನಾಂದೀಪದ್ಯಗಳಲ್ಲಿ ಸ್ತುತಿಸಿದ್ದಾರೆ. ಹಲವು ಸಂಸ್ಕೃತ ಮತ್ತು ಕನ್ನಡ ಶಾಸನಗಳಲ್ಲಿ ಗಣಪತಿಯನ್ನು ಮೊದಲಿಗೆ ಸ್ತುತಿಸಿದ್ದಾರೆ.