ಅಮೆರಿಕನ್ನಡ
Amerikannada
ಅಲಂಕಾರ
-ಜ್ಯೋತಿ ಮಹದೇವ್ (ಸುಪ್ತದೀಪ್ತಿ), ಮಣಿಪಾಲ
ಕಂದನ ಚಂದಗೊಳಿಸಿದಳು ಗೋಪಿ
ಅಂದದ ಚದುರನ ಮುದ್ದಿಸಿ ರಮಿಸುತ

ಎಣ್ಣೆಯ ಸವರಿ ತೋಯಿಸಿ ಕಾಯಿಸಿ
ಎರೆದೆರೆದೆರೆದು ಮಸೆಯಿಸಿ ಮೀಯಿಸಿ
ಏಳೇಳೆಂದು ಅವಸರಿಸುತ್ತಾ
ಎಂತಹ ತುಂಟನ ತಲೆ ಒರೆಸಿದಳು

ಗಂಧವ ಲೇಪಿಸಿ ಚಂದನ ಪೂಸಿ
ಗಗನಾಂಬರಗೆ ರೇಶಿಮೆ ಉಡಿಸಿ
ಗಾಳಿಯಲಾಡುವ ಗೌಳಿಗನಂಘ್ರಿಗೆ
ಗಲುಗಲಿರೆಂಬ ಕಿರುಗೆಜ್ಜೆಯನಿಟ್ಟು

ಕತ್ತನು ಸುತ್ತಲು ಮುತ್ತಿನ ಹಾರ
ಕೈಯಲಿ ಕೊಳಲು ಕಮಲಿನಿದಳಸರ
ಕೋಲುಗೆನ್ನೆಯಲಿ ದಿಟ್ಟಿಬೊಟ್ಟಿಟ್ಟು
ಕುರುಳಿಗೆ ನವಿಲಗರಿಯ ತಾ ಮುಡಿಸಿ