ಅಮೆರಿಕನ್ನಡ
Amerikannada
ಜೀವನದ ನಾಟಕಕ್ಕೂ ತಾಲೀಮು ಬೇಕು!
-ನಾಗಲಕ್ಷ್ಮೀ ಹರಿಹರೇಶ್ವರ
ಜೀವನವನ್ನ ಒಂದು ಆಟವೆಂದು ಪರಿಗಣಿಸಿರಿ- ಎಂದು ಬುದ್ಧಿಮಾತು ಹೇಳುವರುಂಟು. ಅದು ತುಂಬಾ ಅರ್ಥವತ್ತಾದ ಮಾತು. ಈ ಕ್ರೀಡೆಯಿಂದ ಬರುವ ಮನೋಲ್ಲಾಸ, ತರುವ ನೆಮ್ಮದಿಯೇ ಬಾಳ ಹೆಗ್ಗುರಿ- ಎಂಬ ಮಾತನ್ನೂ ಒಪ್ಪ ಬಹುದು. ಆದರೆ, ಯಾವ ಆಟಕ್ಕಾದರೂ ತಯಾರಿ ಬೇಡವೇ? ಸರಿಯಾದ ಪೂರ್ವ ಸಿದ್ಧತೆ ಬೇಡವೇ? ಅದರಲ್ಲೂ ಒಬ್ಬ ಹೆಣ್ಣು ಎಷ್ಟೆಷ್ಟು ಮೊದಲೇ ಸಿದ್ಧಳಾಗಿದ್ದಾಳೆಂದರೆ ಅಷ್ಟಷ್ಟು ಅವಳ ಜೀವನ ಹಸನು.
ಮದುವೆ ಎಂಬುದು ಒಬ್ಬ ಹುಡುಗಿಯ ಜೀವನದಲ್ಲಿ ಬಹು ಪ್ರಮುಖ ಘಟ್ಟ. ಅವಳ ಭವಿಷ್ಯ ಭದ್ರವಾಗಿರಲೆಂದು ಅಪ್ಪ ಅಮ್ಮ ಚೆನ್ನಾಗಿ ಓದಿಸಿರುತ್ತಾರೆ. ಹರೆಯದ ವಯಸ್ಸು, ಏನೇನೋ ಕನಸುಗಳು, ಎಂಥೆಂಥವೋ ಆಸೆ ಆಕಾ೦ಕ್ಷೆಗಳು. ಮೂರುವಾರದ ರಜೆಗೆ ಬಂದ ಹೊರನಾಡ ವರನೊಬ್ಬ ಬಂದಿದ್ದಾನಂತೆ. ಕನ್ಯಾಪಿತೃಗಳಿಗೆ ಎಲ್ಲಿಲ್ಲದ ಸಂಭ್ರಮ. ಮೂರುದಿನದಲ್ಲಿ ಮೂವತ್ತು ಹೆಣ್ಣುಗಳ ಪ್ರದರ್ಶನ ನಡೆಸಿಬಿಡುತ್ತಾರೆ. ಒಂದು ವಾರದಲ್ಲೇ ಯಾರೋ ಒಬ್ಬ ಸಿರಿವಂತರ ಒಬ್ಬಳೇ ವಿದ್ಯಾವಂತೆ ಹುಡುಗಿಯನ್ನು ಒಪ್ಪಿ ಬಿಟ್ಟನಂತೆ. ಇಂದು ನಿಶ್ಚಿತಾರ್ಥವಾಯಿತು; ಎರಡನೇ ವಾರದಲ್ಲೇ, ಇಂದಿನ ದಿನವೇ ಶುಭದಿನವು, ಇ೦ದಿನ ದಿನವೇ ಶುಭ ದಿನವು -ಎಂದು ಒಂದು ದಿನ ಅದ್ಧೂರಿಯಾಗಿ ಹೋಟೆಲನಲ್ಲಿ ಮದುವೆ ಮತ್ತು ಆರತಕ್ಷತೆ ಆಯಿತು, ಅಲ್ಲ ಆಗಿ ಹೋಯಿತಂತೆ. ಮಾರನೇ ದಿನವೇ ಊರಿಗೆ ಹೊರಡಲು ತಯಾರಿ ನಡೆಯುತ್ತಿದೆ. ನಮ್ಮ ಮನೆಯಂಗಳದಿ ಬೆಳೆಸಿದ ಆ ನವಿರು ಹೂವನ್ನ ನಿಮ್ಮ ಮಡಿಲಿಗಿಡಲು ಬಂದಿರುವೆವು - ಎಂದು ಕಣ್ಣೀರು ಸುರಿಸುತ್ತಿದ್ದಾರೆ. ನಂತರದ ಎರಡು ದಿನಗಳಲ್ಲಿ ಗೊತ್ತಿಲ್ಲದ ಹುಡುಗನೊಡನೆ, ಕಂಡಿಲ್ಲದ ಊರಿಗೆ, ಯಾರ ಪರಿಚಯವೂ ಇಲ್ಲದ ಜಾಗಕ್ಕೆ ಆ ಹುಡುಗಿ ಹೊರಟು ಬಂದಿದ್ದಾಳೆ.
ಸಾಮಾನ್ಯವಾಗಿ ಎಲ್ಲ ಕಾಲಕ್ಕೂ, ಎಲ್ಲ ತಂದೆ ತಾಯಿಗಳೂ ಬಯಸುವುದು ಹೀಗೆ ತಾನೆ?- ನಾವಂತೂ ಕಷ್ಟಪಟ್ಟೆವು, ನಮ್ಮ ಮಕ್ಕಳು ಕಷ್ಟ ಪಡುವುದು ಬೇಡ. ಹೊಟ್ಟೆ ಬಟ್ಟೆಯನ್ನಾದರೂ ಕಟ್ಟಿ ಓದಿಸೋಣ. ಅವರು ಮಾತ್ರ ಚೆನ್ನಾಗಿರಲಿ- ಅಂತ. ಇಲ್ಲೇ ನಾವು ಬಹಳ ಜನ ದಾರಿ ತಪ್ಪುವುದು. ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮ್ಮ ಮಕ್ಕಳು ಕಷ್ಟದ ಪರಿವೆಯಿಲ್ಲದೆ ಬೆಳೆಯ ತೊಡಗುತ್ತವೆ. ಅದು ತಪ್ಪು ಎನ್ನುವುದಿಲ್ಲ. ಸ್ವಲ್ಪ ಬುದ್ಧಿವ೦ತ ಹುಡುಗಿಯಾದರಂತೂ ಹೆಚ್ಚು ಹೇಳುವುದೇ ಬೇಡ. ಮಗಳು ಸೂಕ್ಷ್ಮಪ್ರವೃತ್ತಿಯವಳೆಂಬ ಆತಂಕ. ಮೊದಲೇ ಬೆಳ್ಳಿಯದೋ ಹಿತ್ತಾಳೆಯದೋ ಎಂಥದೋ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ. ತನ್ನ ಕೋರಿಕೆಗಳನ್ನು ತಂದೆ ತಾಯಿಯರು ತುದಿಗಾಲಿನಲ್ಲಿ ನಿಂತು ಪೂರೈಸುತ್ತಿದ್ದಾರೆ. ಎಷ್ಟು ಒಳ್ಳೆಯವರಪ್ಪ, ನಮ್ಮ ಮಮ್ಮಿ ಡ್ಯಾಡಿ! ಯಿವರ್ ಡಿಮ್ಯಾಂಡ್ ಈಸ್ ಯಿವರ್ ಕಮ್ಯಾ೦ಡ್- ಅನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಥ್ಯಾಂಕ್ ಗಾಡ್, ವಿದ್ಯೆ ಇದೆ, ರೂಪವಿದೆ, ಸಂಪತ್ತಿದೆ, ಎಲ್ಲಾ ಇದೆ. ಆದರೆ ಪ್ರಪಂಚ ಜ್ಞಾನ? ಸಾಮಾನ್ಯ ಜ್ಞಾನ, ಕಾಮನ್ ಸೆನ್ಸ್ ಏನೂ ಇಲ್ಲ, ಕೊಂಚವೂ ಇಲ್ಲ, ಕನಸುಗಳನ್ನು ಮೂಟೆಮೂಟೆಯಾಗಿ ಕಟ್ಟಿಕೊಂಡು. ಕುಬೇರನ ರಾಜ್ಯಕ್ಕೇ ಹೋಗಿರಬಹುದು ಆದರೆ ಅಲ್ಲಿಗೆ ಹೋದ ಕೂಡಲೇ, ಆಗುವುದೇನು? ಭ್ರಮನಿರಸನ. ಮೇಲೇರಿದ್ದ ಬಿಸಿ ಗಾಳಿಯ ಬಲೂನ್ ಕ್ರಮೇಣ ಕೆಳಗಿಳಿಯ ತೊಡಗಿದಾಗ, ಆಗುವ ಆಘಾತ ಭೀಕರ.
ಮನೆಯಲ್ಲಿ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳಬೇಕು. ಅಪರಿಚಿತ ಜಾಗದಲ್ಲಿ ಸಹಾಯಕ್ಕೆ ಜನ ಎಲ್ಲಿಂದ ಬಂದಾರು. ಕೈ ತುಂಬ ಸಂಬಳ ತರುವ ಗಂಡ ಬಹಳ ಬಿಜಿ, ಕೆಲಸದಲ್ಲಿಯೇ ನಿರತ. ಬೆಳಗ್ಗೆ ಮನೆ ಬಿಟ್ಟರೆ, ಅವನು ಬರುವುದು ರಾತ್ರಿಯೇ. ಇಡೀ ದಿನ ಒಂಟಿಯಾಗಿ ಇದ್ದಾಗ ಎಷ್ಟು ಸಮಯ ತಾನೇ ಟಿ.ವಿ. ನೋಡುತ್ತಾ ಕಾಲ ಕಳೆಯುವುದು? ಮನೆಯಲಿ ಅಡಿಗೆ ತಿಂಡಿ ಮಾಡಿ ಕೊಂಚವೂ ಅಭ್ಯಾಸ ಇಲ್ಲದ ಕಾರಣ, ಕೈಸುಟ್ಟುಕೊಳ್ಳುವ ಪರಿಸ್ಥಿತಿ ಎದುರಿಸಬೇಕಾಗುತ್ತೆ.
ಇಷ್ಟು ದಿನ ತಂದೆಯ ಮನೆಯಲ್ಲಿ, ನಡೆದರೆ ಸವಿಯುವಳೇನೋ ಎನ್ನುವಂತೆ, ಅಪ್ಪ ಅಮ್ಮನ ಕಣ್ಣ ಮುಂದೆ ಬೆಳೆದ ಹುಡುಗಿ, ಅವಳ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ; ಹಾಗಾಗಿ ಯಾವ ಕೆಲಸದ ಪರಿಚಯವೂ ಇಲ್ಲ, ಹೇಗೆ ಮಾಡುವುದು ಎಂದೂ ತಿಳಿದಿಲ್ಲ. ಅದಕ್ಕಿಂತ ಮುಖ್ಯವಾಗಿ, ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲೂ ತನಗೆ ಗೊತ್ತಿಲ್ಲ, ಇನ್ನು ಇನ್ನೊಬ್ಬರಿಗಾಗಿ ಕೆಲಸ ಮಾಡುವುದೆಂದರೆ ಅದು ದಾಸ್ಯ ಎಂಬ ಮನೋಭಾವ. ಈ ದಾಸ್ಯದ ಭಾವ ಮೂಡಿದೊಡನೆ, ಶುರುವಾಗುತ್ತೆ ನೋಡಿ, ಜಟಾಪಟಿ, ಬಿಡುವಿನ ಸಮಯದಲ್ಲಿ ಖಾಲಿ ತಲೆಯಲ್ಲಿ ದೊಂಬರಾಟ, ಡಿಪ್ರೆಷನ್, ತೌರಿನಲ್ಲಿನ ತನ್ನವರ ನೆನಪು. ಒಂದಕ್ಕೊಂದು ಸೇರಿ, ಎಲ್ಲ ಮೇಳೈಸಿ, ಬಾಧಿಸಿ, ಜೀವನ ನಡೆಸುವುದೇ ದುರ್ಭರವಾಗಿ ಹೋಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹೀಗೆ, ಮಕ್ಕಳು ಮನೆಯ ಕೆಲಸ ಕಲಿಯದೆ, ಬರೀ ಕುಡುಮಿಯಾಗಿದ್ದರೆ, ಪುಸ್ತಕದ ಬದನೆಕಾಯಿಯಾಗಿದ್ದರೆ, ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ- ಎಂಬುದೇ ನನ್ನ ಆತಂಕದ ವಿಷಯ.
ಇದಕ್ಕೆ ಪರಿಹಾರವೇ ಇಲ್ಲವೇ? ಇದೆ. ಮಕ್ಕಳ ತಾಯಿತಂದೆಯರಲ್ಲಿ ಅತಿ ವಿನಯದಿಂದ ಕೇಳಿಕೊಳ್ಳುವುದೇನೆಂದರೆ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಜೊತೆಗೆ ತಮ್ಮ ಕೆಲಸ ತಾವೇ ಮಾಡಿಕೊಳ್ಳುವುದನ್ನೂ ಮನೆಯಲ್ಲಿ ಹೇಳಿಕೊಡಬೇಕು, ಅಲ್ಲದೆ, ತೊಂದರೆಗೊಳಗಾದವರಿಗೆ ಸ್ವಲ್ಪ ಸಹಾಯ ಮಾಡುವ ಪ್ರವೃತ್ತಿಯನ್ನೂ ಬೆಳೆಸಬೇಕು.
ಇನ್ನು ಮದುವೆಗೆ ಸಂಬಂಧಿಸಿದ ವರಾನ್ವೇಷಣೆಯ ವಿಚಾರ. ಸಾಮಾನ್ಯವಾಗಿ, ಒಂದು ಬದನೆಕಾಯಿಯನ್ನು ಕೊಂಡುಕೊಳ್ಳಬೇಕಾದರೂ ಯೋಚಿಸಿ, ಚಿಗುರು ಬದನೆಯೋ, ಬಲಿತಿದೆಯೋ ಗುಳ್ಳ ಬದನೆಯೋ, ಇನ್ನೂ ಹೀಗೆ ಪರೀಕ್ಷೆ ಮಾಡಿ ತಿಳಿದುಕೊಳ್ಳುತ್ತೇವೆ, ತೆಗೆದುಕೊಳ್ಳುತ್ತೇವೆ. ಹೀಗಿರುವಾಗ, ಮದುವೆಯ ಸಮಯದಲ್ಲಿ ಹುಡುಗ ಒಪ್ಪಿದ ಎಂದ ಕೂಡಲೇ, ಬೇರೆ ಯವುದನ್ನೂ ಯೋಚಿಸದೇ, ದಿಢೀರ್ ಮದುವೆ ಮಾಡಿ ಕಳಿಸುತ್ತಾರಲ್ಲ, ಇದರಿಂದ ಆಗುತ್ತಿರುವ ತೊಂದರೆಗಳ ಪರಿವೆ ಕನ್ಯಾಪಿತೃಗಳಿಗೆ ಸಾಕಷ್ಟಿದೆಯಾ?
ಇದಕ್ಕೇನು ಸುಲಭ ಪರಿಹಾರ? ಅನುರೂಪತೆ, ವರಸಾಮ್ಯಗಳು ಒಂದೇ ಸಾಲದು; ಹುಡುಗ ಒಪ್ಪಿದ ಮೇಲೆ, ಒಂದು ಒಪ್ಪಂದ ಮಾಡಿಕೊಂಡು, ನಾಲ್ಕಾರು ತಿಂಗಳ ಕಾಲ ಸಮಯ ತೆಗೆದುಕೊಂಡು, ಆ ಅವಧಿಯಲ್ಲಿ ಮುಖತ:, ಈ-ಮೇಲ್, ಯಾ ಫೋನ್, ಮುಖಾ೦ತರ ವಧೂವರರು ಪರಸ್ಪರ ಪರಿಚಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ವರಮಹಾಶಯ ಕೊಟ್ಟ ಮಾಹಿತಿಯ ಬಗ್ಗೆ ವಿಚಾರಿಸಿ, ಖಚಿತಪಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅಷ್ಟು ಇಷ್ಟು ಉತ್ಪ್ರೇಕ್ಷೆಯಿರಬಹುದು, ಅದಕ್ಕೆಲ್ಲಾ ರಿಯಾಯಿತಿ ತೋರಿಸಿದರಾಯಿತು. ನಮಗೆ ಗೊತ್ತು- ಯಾವ ಉದ್ಯೋಗಾರ್ಥಿಯೂ ತನ್ನ ರೆಸ್ಯೂಮೆಯನ್ನ ಕೆಟ್ಟದಾಗಿ ಬರೆದು ಅರ್ಜಿ ಗುಜರಾಯಿಸುವುದಿಲ್ಲ.
ಈ ಅವಧಿಯಲ್ಲಿ ಹುಡುಗಿಯು ಅಡಿಗೆ ಮಾಡಲು, ಮಾಡಿದ್ದನ್ನು ಹಂಚಿಕೊಟ್ಟು ತಿನ್ನಲು, ಕಲಿಸೋಣ. ಅದಲ್ಲದೆ ಸಂಬಂಧಪಟ್ಟ ಬೇರೆ ಮನೆಕೆಲಸಗಳನ್ನು ಕಲಿತುಕೊಳ್ಳಲು ಅವಕಾಶ ಮಾಡಿಕೊಡೋಣ. ಮುಖ್ಯವಾಗಿ ಅವಳು ಗೃಹಕೃತ್ಯದ ಕೆಲಸಗಳನ್ನು ತಾನೊಬ್ಬಳೇ ನಿರ್ವಹಿಸುವ ತಂತ್ರವನ್ನು ಕಲಿತಿರಬೇಕು. ಇದನ್ನ, ಬೇಕಾದರೆ, ಅವಳು ಗೃಹನಿರ್ವಹಣಾ ವಿಷಯದ ಬಗ್ಗೆ, ಮಾಸ್ಟರ್ ಆಫ್ ಹೌಸ್ ಅಡ್ಮಿನಿಸ್ಟ್ರೇಷನ್ ಬಗ್ಗೆ, ಒಂದು ಅಲ್ಪಾವಧಿಯ ಕ್ರಾಷ್ ಕೋರ್ಸ್ ಅಂದುಕೊಳ್ಳಲಿ. ಹೀಗೆ ಜೀವನ ಎದುರಿಸುವ ಎದೆಗಾರಿಕೆಯನ್ನು ಕಲಿತರೆ, ಯಾವುದೇ ಸಮಸ್ಯೆ ಎದುರಾದರೂ, ಕಷ್ಟಗಳ ಮಳೆ ಸುರಿದರೂ, ಎದೆಯನ್ನು ಕಲ್ಲಾಗಿಸಿಕೊಂಡು, ಬೆಟ್ಟದಡಿಯ ಹುಲ್ಲಾಗಿ, ಮನೆಗೆ ಮಲ್ಲಿಗೆಯಾಗಿ, ಜೀವನವನ್ನು ಪ್ರೀತಿಸುವ ರೀತಿಯಲ್ಲಿ ಬೆಲ್ಲ ಸಕ್ಕರೆಯಾಗಿ, ಎಲ್ಲರೊಳಗೊಂದಾಗಿ ಬದುಕಬಹುದು. ಪೂರ್ವಸಿದ್ಧತೆಯೊಂದೇ ಎಲ್ಲರಿಗೂ ನೆಮ್ಮದಿ ತರುವ ಸಿದ್ಧೌಷಧ.
ಗಂಡು ಮಕ್ಕಳು ಹೇಗೋ ನಿಭಾಯಿಸಿಕೊಂಡು ಹೋದಾರು. ನಮ್ಮ ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು, ಹಗಲು ಕಂಡ ಬಾವಿಗೆ ರಾತ್ರಿ ಬೀಳುವಂತಾಗಬಾರದು. ಹಿಂದಿನ ಕಾಲದಲ್ಲಿಯಾದರೋ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು- ಆಗಿತ್ತು. ಈಗಿನ ಮಕ್ಕಳಿಗೆ ಜಗತ್ತೇ ಮೊದಲ ಪಾಠಶಾಲೆಯಾಗುತ್ತಿರುವ ಕಾರಣ ಬುನಾದಿಯಿಲ್ಲದ ಕಟ್ಟಡದಂತಾಗ ಬಾರದು ನಮ್ಮ ನಾಡಿನ ಹೆಣ್ಣುಮಕ್ಕಳ ಜೀವನ- ಎಂಬುದೇ ನನ್ನ ಮನದಾಸೆ.