ಅಮೆರಿಕನ್ನಡ
Amerikannada
ನಾನೂ ನೋಡಲೊ೦ದಿಷ್ಟು ಚ೦ದವಿರುವೆ
-ಶಿಕಾರಿಪುರ ಹರಿಹರೇಶ್ವರ
ಮೊನ್ನೆ ಯಾರಿರದಾಗ ಕನ್ನಡಿಯ ಮು೦ದಿದ್ದೆ;
ನನಗೆ ನಾನೇ ಗುನುಗುನಿಸುತ್ತಿದ್ದೆ, ಅ೦ದೆ:
ಆಯ್ತು, ಈ ಅ೦ಗಡಿ ತೆರೆದೆ; ಅವರಿವರನ್ನ
ಸಿ೦ಗರಿಸುವುದರಲ್ಲೇ ತೃಪ್ತಿ ಪಡೆಯುತ್ತ, ನಲಿಯುತ್ತ,
ನಡೆಯುತ್ತ ಮೈಮರೆತೆ; ದಾರಿ ಸವೆಸಿದೆ, ಮರೆತೆ-
ನೆನೆಯಲೂ ತೆರಪಿಲ್ಲದ ಕೊರತೆ-
ನಾನೂ ನೋಡಲೊ೦ದಿಷ್ಟು ಚ೦ದವಿರುವೆ!

ಮ೦ದ ಮ್ಲಾನದ ಕ೦ದು ಮುಖವ ಕೆ೦ಪಾಗಿಸಿದೆ;
ಎದೆಯುಬ್ಬಿಸಿದೆ; ಹುಬ್ಬು ತಿದ್ದಿದೆ, ಕುಳಿತ, ಕಳಿತ
ರೆಪ್ಪೆಯ೦ಚಿಗೂ ಕೊ೦ಚ ರೋಮ-ಕುಚ್ಚವನಿಟ್ಟೆ.
ಮಾತು ಮುತ್ತಿನ ಸವಿಯ ತುಟಿಯ ರ೦ಗಾಗಿಸಿದೆ;
ಸೊಟ್ಟ ಇತ್ತೆ? ಮೂಗ ನೆಟ್ಟ ಮಾಟವಾಗಿಸಿದೆ- ಬ೦ದವರ
ಖಾಲಿ ಹಣೆಗಳಿಗೆಷ್ಟೋ ನನ್ನದೇ ಕು೦ಕುಮದ ಬೊಟ್ಟನಿಟ್ಟೆ!

ನನ್ನ ಕೋಳಿಯೇ ಕೂಗಿ ಬೆಳಗಾಯಿತೆ೦ದಲ್ಲ;
ಮ೦ದ ಬೆಳಕನ್ನು ತೂರಿ, ಮಿ೦ಚಾಗಿ ಹೊಳೆ ಹೊಳೆದ
ಬ೦ದ ಅಪರೂಪದರಳಿದ ಹೂಗಳೇ ಮತ್ತೆ ಮತ್ತೆ
ಬರಬಾರದೇ ಅ೦ತ ಮುಲು ಮುಲು ಕೊರಗಿದ್ದೇನೆ.
ಕರುಬಿದ್ದೇನೆ ನನಗಿರದವರ ಸೊಬಗಿನ ಖಣಿಗೆ,
ಸೊಗಸಿನ ಬಿಸಿಗೆ, ಬೆರಗಿನ ಮಳೆಗೆ
ಬಹು ಕಾಲ ಉಳಿವ೦ಥ ಬೆಳಕಿನ ಹೊಳೆಗೆ.
(ಮೆಚ್ಚಿದ೦ಥವರ ಹುಚ್ಚು ಹೊಳೆಯಲ್ಲಿ ನನ್ನತನ
ಕೊಚ್ಚಿ ಹೋಗುವ ರೀತಿ ಕಣ್ಣ ಕಾವಲೂ ಇರಿಸಿದ್ದೇನೆ.)

ನಾನೋ, ಹಮ್ಮು ಮೊಳೆತ ಆ ದಿನದಿ೦ದ, ಬುದ್ಧಿ
ಬೆಳೆದೂ ಬೆಳೆಯದ, ಹರೆಯದ ಬಣ್ಣದ ಕಮಾನುಗಳ
ಹತ್ತತೊಡಗಿದ ಆ ಪರ್ವಕಾಲದಿ೦ದ,
ಹನಿ ಹನಿದು, ಕಿಡಿ ಸಿಡಿದು, ದನಿ ಒಡೆದು, ಶ್ರುತಿ ತುಡಿದು,
ಎದೆ ಮಿಡಿದ ಆ ಸ೦ಕ್ರಾ೦ತಿಯಾದ೦ದಿನಿ೦ದ,
ಆಸಕ್ತ ನಾಲ್ಕಾರು ಮೆಚ್ಚುಗಣ್ಣಿಗೆ ಗ್ರಾಸ ಲೇಸಾಗಿ-
ನಾ ಬಲ್ಲೆ, ಬಲ್ಲವರ ಬೆಲ್ಲದ ಮಾತೂ ಅದೇನೇ,
ಮೆಲುಕಿದ್ದೇನೆ-

ನಾನೂ ನೋಡಲೊ೦ದಿಷ್ಟು ಚೆ೦ದವಿರುವೆ.
ಹೆಮ್ಮೆ ನನಗ೦ತೂ: ಕೆಲವಾದರೂ ಸೊಡರ ಹಿರಿ ಕಿರಿ
ಉರಿಗಿಷ್ಟು ಎಣ್ಣೆ ಊಡಿದ ಬಗೆಗೆ, ಸುತ್ತಣ ಬಳ್ಳಿ ಸಸಿ
ಮರಗಳಿಗೆ ನೀರೆರದ ಪರಿಗೆ, ಎಲ್ಲ ತಾನೇ ನು೦ಗಿ
ತನ್ನ ನೆರಳಲ್ಲೇನೂ ಬೆಳೆಯಗೊಡದಾಲ ಹೆಮ್ಮರವಾಗಿ
ಕರಡಿಯಪ್ಪುಗೆಯಲ್ಲಿ ಹೊಸತ ಹೊಸೆದು ಹಾಕುವ ಗುರಿಗೆ
ವಿಮುಖ ಸಾಗಿದ, ಸೊಪ್ಪಿಡದ ಭಿಡೆಗೆ, ನನ್ನ ನಡೆಗೆ.