ಅಮೆರಿಕನ್ನಡ
Amerikannada
ಅರ್ಜುನನ ಅದ್ಧೂರಿ ಜಂಬೂಸವಾರಿ
ರಾಜ್ಯದಲ್ಲಿ ಬರಗಾಲದ ಬೇಗೆ ತಾಂಡವವಾಡುತ್ತಿದ್ದರೂ, ಮೊನ್ನೆ ಮೊನ್ನೆಯವರೆಗೂ ಕಾವೇರಿ ಹೋರಾಟದಿಂದ ಸಪ್ಪೆಗೊಂಡಿದ್ದ ಜನರಿಗೆ ಮೈಸೂರಿನ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಆಹ್ಲಾದ ನೀಡಿತು. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ಬುಧವಾರ ವೈಭವದಿಂದ ಜರುಗಿತು. ಇದರೊಂದಿಗೆ ನವರಾತ್ರಿ ಮತ್ತು ದಸರಾ ಉತ್ಸವಕ್ಕೆ ತೆರೆ ಬಿತ್ತು.
402ನೇ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ ದೇಶ, ವಿದೇಶಗಳಿಮದ ಆಗಮಿಸಿದ್ದ ನಾಲ್ಕರಿಂದ ಐದು ಲಕ್ಷಕ್ಕೂ ಅಧಿಕ ಮಂದಿ ಕಣ್ಣಾರೆ ಕಂಡು ಸಂಭ್ರಮಿಸಿದರು.
ಈ ಬಾರಿಯ ಮೈಸೂರು ದಸರಾ ವಿಶೇಷ ಎಂದರೆ ಜಂಬೂ ಸವಾರಿಯ ಮುಖ್ಯ ಆಕರ್ಷಣೆಯಾದ 52 ವರ್ಷದ ಆನೆ ಅರ್ಜುನ. 14 ವರ್ಷಗಳ ಕಾಲ ಅಂಬಾರಿ ಹೊತ್ತಿದ್ದ ಬಲರಾಮ ಈ ಬಾರಿ ಸುಸ್ತಾದ ಕಾರಣ ಅರ್ಜುನನಿಗೆ ಅವಕಾಶ ಸಿಕ್ಕಿತ್ತು. 1992ರಲ್ಲಿ ಒಂದು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ, 20 ವರ್ಷಗಳ ನಂತರ ಅವಕಾಶ ಪಡೆದು ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರನಾದ. ಬಲರಾಮ ಈ ಬಾರಿ ನಿಶಾನೆ ಆನೆಯಾಗಿ ಗಜಪಡೆಗೆ ಮಾರ್ಗ ತೋರಿಸಿದ್ದು ವಿಶೇಷವಾಗಿತ್ತು. ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ವಿಗ್ರಹ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ನೆರೆದಿದ್ದ ಜನರ ಆನಂದ ಮೇರೆ ಮೀರಿತ್ತು. ನಾಡದೇವಿಯ ಮೂರ್ತಿಯ ದಿವ್ಯತೆ, ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯ ಸಿರಿ, ಅರ್ಜುನನ ನಡಿಗೆಯ ಗತ್ತನ್ನು ಜನರು ಮನದುಂಬಿಕೊಂಡರು. ಕಟ್ಟಡಗಳು, ಮರಗಳ ಮೇಲೆ ಹತ್ತಿದ್ದ ಜನರು ಅರ್ಜುನನ ವಿಜಯಯಾತ್ರೆಗೆ ಸಾಕ್ಷಿಯಾದರು. ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅರ್ಜುನ ತನ್ನ ಬಗ್ಗೆ ಇದ್ದ “ಸಂಶಯ”ಗಳನ್ನೂ ನಿವಾರಿಸಿದ. ಮುಂಜಾಗ್ರತ ಕ್ರಮವಾಗಿ ಅರ್ಜುನನ ಸುತ್ತ ಮುತ್ತ ಹೈಅಲರ್ಟ್ ಘೋಷಿಸಲಾಗಿತ್ತು.
ರೇಷ್ಮೆ ಕುಸುರಿಯ ಚೆಂದದ ಹೊದಿಕೆ ಸಹಿತ ಅಲಂಕೃತಗೊಂಡಿದ್ದ 2.87 ಮೀಟರ್ ಎತ್ತರ ಮತ್ತು 5055 ಕೆಜಿ ತೂಕದ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ. ಈತನಿಗೆ ಅಕ್ಕಪಕ್ಕ ಆನೆಗಳಾದ ಚೈತ್ರಾ ಮತ್ತು ಕಾಂತಿ ಸಾಥ್ ನೀಡಿದವು.
ಬಲರಾಮ ದ್ವಾರದ ಮೂಲಕ ನಗರಕ್ಕೆ ಕಾಲಿಟ್ಟ ಜಂಬೂ ಸವಾರಿಯು ಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಬಂಬೂ ಬಜಾರ್, ಹೈವೆ ವೃತ್ತ, ನೆಲ್ಸನ್ ಮಂಡೇಲಾ ರಸ್ತೆ ಮೂಲಕ ಸಾಗಿ ಸಂಜೆ 6:20ಕ್ಕೆ ಬನ್ನಿಮಂಟಪದ ಮುಖ್ಯದ್ವಾರ ಪ್ರವೇಶಿಸಿತು. ಗಜಪಡೆಯ ಅತ್ಯಂತ ಬಲಶಾಲಿ ಆನೆ ಅರ್ಜುನನ್ನು ಯಶಸ್ವಿಯಾಗಿ ಗುರಿ ಮುಟ್ಟಿಸಿದ ಮಾವುತ ದೊಡ್ಡಮಾಸ್ತಿ ಮತ್ತು ಆತನ ಪುತ್ರ, ಕಾವಾಡಿಗ ಸಣ್ಣಪ್ಪ ಅವರ ಮುಖ ಅರಳಿತು.
ಸಾಲಂಕೃತ ಆನೆಗಳಾದ ವಿಜಯ, ವಿಕ್ರಂ, ಶ್ರೀರಾಮ, ಹರ್ಷ, ಕಾವೇರಿ, ಹಿಂಬಾಲಿಸಿದವು. ಸಂಗೀತದ ಗಾಡಿಯನ್ನು ಎಳೆದುಕೊಂಡು ಬಂದ ಆನೆ ಅಭಿಮನ್ಯು ಮುಂದೆ ಸಾಗಿತು. ಇದೇ ಸಂದರ್ಭದಲ್ಲಿ ಪ್ಯಾರಾಸೇಲಿಂಗ್ ಪಟು ಆಗಸದಿಂದಲೇ ಪುಷ್ಪಾರ್ಚನೆ ಮಾಡಿದರು. ನಂತರದ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಮತ್ತು ವಿವಿಧ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಸಾಗಿ ಗಮನ ಎಳೆದವು
ಇದಕ್ಕೂ ಮೊದಲು ಮಧ್ಯಾಹ್ನ 1.46ಕ್ಕೆ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂದೆ ನಂದಿಧ್ವಜಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಪತ್ನಿ ಶಿಲ್ಪಾ ಶೆಟ್ಟರ್ ಅವರೊಂದಿಗೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿಯ ಮೆರವಣಿಗೆಗೆ ಚಾಲನೆ ನೀಡಿದರು.”ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ“ ಎಂದು ಶೆಟ್ಟರ್ ಚಾಮುಂಡಿಯನ್ನು ಪ್ರಾರ್ಥಿಸಿದರು.