ಅಮೆರಿಕನ್ನಡ
Amerikannada
ದೀಪಾವಳಿ
-ಡಾ. ಕೆ. ಲೀಲಾಪ್ರಕಾಶ್, ಮೈಸೂರು
ಅಜ್ಞಾನದಿಂದ ಜ್ಞಾನದೆಡೆಗೆ
ಬಂಧನದಿಂದ ಮುಕ್ತಿಯೆಡೆಗೆ
ದೈತ್ಯದಿಂದ ದೇವನೆಡೆಗೆ
ಅಂಧಃಕಾರದಿಂದ ಬೆಳಕಿನೆಡೆಗೆ
ಈ ಆಶಯವನು ಹೊತ್ತ ಹಬ್ಬವೇ ದೀವಳಿಗೆ

ಅನುದಿನವೂ ನರಕಾಸುರನ ಗೆಲ್ಲುತ
ತ್ರಿವಿಕ್ರಮನಾಗಿ ಬಲಿಕೊಟ್ಟ ತ್ರಿಪಾದವನೆಳೆಯುತ
ಶ್ರೀ ಕೃಷ್ಣನ ಧ್ಯಾನ ಮಾಡುತ ಅನವರತ
ನಾವೆಲ್ಲ ಶ್ರಮಿಸಿಬೇಕಾಗಿ ಆದರ್ಶ ಮಾನವರಾಗುವತನಕ

ರಾಕೆಟ್ಟು, ಪ್ಯಾರಚೂಟು, ಫ್ಲವರಪಾಟ್ಗಳ ಮೇಲ್ಬಿಟ್ಟು
ಮೂರುದಿನ ಮನೆಯಲಿ ಮೆಲ್ಲುತ ಪಾಯಸ ಒಬ್ಬಟ್ಟು
ನಾವು ಆಸ್ತಿಕರಾಗಿ ಸಾರ್ಥಕವಾದವೆಂದು ಹೆಮ್ಮೆಪಟ್ಟು
ಮಾಡುತ ಖರ್ಚನು ಬಾರಿಬಾರಿಗೂ ದುಪ್ಪಟ್ಟು
ಬೆಳೆಸುತಿಹೆವು ಪ್ರತಿಷ್ಠೆ ಅಹಂಕಾರಗಳಿಗೆ ಇಂಬು ಕೊಟ್ಟು

ಅರಿಷಡ್ವರ್ಗಗಳೆಂಬ ದೈತ್ಯನ ದಮನ
ಪಂಚೇಂದ್ರಿಯಗಳ ಅವ್ಯಾಹತ ಶಮನ
ವಾಙ್ಮನಸುಕಾಯದ ಮಲದ ದಮನ
ಮಾಡಬೇಕಾಗಿಹುದು ನಿರ್ಮಲ ಮನ

ಭಾರತೀಯರು ಆಚರಿಸುವ ಹಬ್ಬಗಳೆಲ್ಲ
ಆ ಅಜ್ಜ ನೆಟ್ಟ ಆಲದ ಮರದಂತೆ
ಸತ್ಯಾಸತ್ಯತೆಯ ಅರಿಯುವ ಬದಲು
ಯಾವ ವಿಶೇಷ ಖಾದ್ಯಗಳು, ಕಂದಾಚರಣೆಗಳಿರಬೇಕೆಂದು ಯೋಚಿಸುವ ಮೊದಲು
ಪ್ರತಿ ಪರ್ವದಾಚರಣೆಯಿಂದ ಮನೆಮನದಲಿ ಹರಡಲಿ ಹರುಷದ ಹೊನಲು
ನಾವೆಲ್ಲ ನಿಜರ್ಥದಲ್ಲಿ ಮಾನವರಾಗಲು ಪ್ರಯತ್ನಿಸುವ ಮೊಟ್ಟಮೊದಲು