ಅಮೆರಿಕನ್ನಡ
Amerikannada
ಕಾರಿರುಳ ನೀಗೆ ಬಂದ ದೀಪಾವಳಿ
-ಭವಾನಿ ಲೋಕೇಶ್, ಮಂಡ್ಯ
ವಾರದ ಕೊನೆಯ ರಜೆ ಸಿಕ್ಕಾಗಲೆಲ್ಲಾ ಹಳೆಯ ವೃತ್ತಪತ್ರಿಕೆಗಳ ಮೇಳೆ ಕಣ್ಣಾಡಿಸುವುದು ನನ್ನ ಅಭ್ಯಾಸ. ಪ್ರತಿದಿನದ ಪತ್ರಿಕೆಯನ್ನು ಅಂದು ಸಂಜೆಯೇ ಓದಿದ್ದರೂ! (ಬೆಳಗಿನ ಓದು ನಮ್ಮಂತಹ ವೃತ್ತಿನಿರತ ಹೆಣ್ಣುಮಕ್ಕಳ ಸ್ವತ್ತಲ್ಲ ಬಿಡಿ) ಮತ್ತೊಮ್ಮೆ ಇಡೀ ವಾರದ, ಕೆಲವೊಮ್ಮೆ ಇಡೀ ವರ್ಷದ ಅಥವಾ ಪತ್ರಿಕೆಗಳು ಶೆಲ್ಪುಗಳನ್ನಾವರಿಸಿ ಛೇ! ಸಾಕಿನ್ನು ಇವುಗಳನ್ನು ಮಾರಿಬಿಡಬೇಕು ಅಂದುಕೊಂಡಾಗಲೆಲ್ಲ ಹಾಗೆ ಮಾಡುವುದು ರೂಢಿ. ಎಷ್ಟೋ ಬಾರಿ ಹಾಗೆ ಓದುವಾಗಲೇ ಅಪರೂಪದ ಸಂಗತಿಗಳೋ, ನುಡಿಮುತ್ತುಗಳೋ, ಸೂಕ್ತಿಗಳೋ, ಮಹಾತ್ಮರ ಸಾಲುಗಳೋ ಕಣ್ಣಿಗೆ ಬಿದ್ದದ್ದುಂಟು. ಆಗ ಅವುಗಳನ್ನು ಹೆಕ್ಕಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಳ್ಳುವುದೆಂದರೆ ಏನೋ ಒಂಥರಾ ಖುಷಿ. ಅವುಗಳನ್ನು ಆಗಾಗ ನನ್ನ ನಿರೂಪಣೆಯಲ್ಲೋ ಇನ್ನಾವುದೋ ಸಮಾರಂಭದಲ್ಲೋ ಉಪಯೋಗಿಸಿಕೊಂಡೇನು. ಮೊನ್ನೆ ವರ್ಷಗಳ ಹಿಂದೆ ಪ್ರಕಟವಾಗಿದ್ದ ಒಂದು ಪತ್ರಿಕೆಯಲ್ಲಿ ಹಾಗೆಯೇ ಸಿಕ್ಕ ಒಂದೆರಡು ಸಾಲುಗಳು ನನ್ನನ್ನೆಷ್ಟು ಕಾಡಿದವೆಂದರೆ ಅದನ್ನು ನಿಮಗೂ ಹೇಳಬೇಕು ಎನಿಸಿತು. ಓದಿ....
ಕುಂಭವಾಗಬಹುದಿತ್ತು, ಹಣತೆಯಾದೆ
ಹೀಗೆಂದು ವರ್ಷವಿಡೀ ನನ್ನೊಳಗೇ ನೊಂದುಕೊಂಡೆ
ಆದರೆ ಕುಂಭವನ್ನೂ ನನ್ನನ್ನೂ ಒಟ್ಟಿಗೇ ಸೃಷ್ಟಿಸಿದ್ದ
ಕುಂಬಾರ ಕುಂಭದಲ್ಲಿ ತುಂಬಿಟ್ಟಿದ್ದ ಎಣ್ಣೆಯನ್ನು
ನನ್ನ ಒಡಲಿಗೆರೆದು ನನ್ನನ್ನೊಂದು
ದೀಪವನ್ನಾಗಿಸಿ ನನಗೆ ಬಾಗಿನಮಿಸಿದ
ನಾನು ನನ್ನ ಒಡಲುರಿಯನ್ನು ಮುಚ್ಚಿಟ್ಟು
ಬೆಳಕನ್ನಾಗಿಸಿ ಅವನ ಕಣ್ಣಿಗೆರೆದು ಪ್ರತಿನಮನ ಸಲ್ಲಿಸಿದೆ

ಯಾವ ಕವಿ ಬರೆದ ಸಾಲುಗಳೋ ಏನೋ ಗೊತ್ತಿಲ್ಲ. ಮೇಲ್ನೋಟಕ್ಕೆ ಎಷ್ಟು ಸರಳವಾದ ಸಾಲುಗಳು ಅನ್ನಿಸಿದರೂ ಮಣ್ಣು ತನ್ನೊಳಗಿನ ಭಾವವನ್ನು ಅಭಿವ್ಯಕ್ತಿಗೊಳಿಸುವ ಈ ಸಾಲುಗಳನ್ನು ಓದಿದಾಗಲೆಲ್ಲ ನನ್ನೊಳಗೆ ಸ್ಫೂರ್ತಿ ಸೆಲೆ ಚಿಮ್ಮುತ್ತದೆ. ಇವತ್ತು ನಾವೇನಾಗಿದ್ದೇವೋ ಅದಕ್ಕಾಗಿ ಸಂತಸಪಟ್ಟು ಹಳೆಯದನ್ನು ಕೊರಗದಿರೋಣ ಅನ್ನುವ ಆ ಮಣ್ಣಿನ ಸಹನೆಯನ್ನೊಮ್ಮೆ ನೋಡಿ. ಒಮದು ಪುಟ್ಟ ಹಣತೆಯಾಗಿ ಬೆಳಕು ನೀಡಿ ಆ ಕಾರಣದಿಂದಲೇ ದೈವತ್ವಕ್ಕೇರಿದ ಮಣ್ಣು ಕುಂಭವಾಗಲಿಲ್ಲ ಅನ್ನುವ ತನ್ನ ಒಡಲುರಿಯನ್ನು ತಗ್ಗಿಸಿಕೊಂಡಿತು. ತನ್ನನ್ನು ಸೃಷ್ಟಿಸಿದ್ದ ಕುಂಬಾರನ ಕಣ್ಣಿಗೆ ಬೆಳಕ ನೆರೆದು ಅವನ ನಮನಕ್ಕೆ ಪ್ರತಿನಮನ ಸಲ್ಲಿಸಿತು. ಎಂಥ ಸೊಗಸಾದ ಸಂದರ್ಭ ಅಲ್ಲವೇ?
ಈ ಸಾಲುಗಳನ್ನು ನೀವು ಓದುವ ಹೊತ್ತಿಗೆ ದೀಪಾವಳಿಯ ಸಂಭ್ರಮದಲ್ಲಿ ಉರುಳಾಡುತ್ತಿರುತ್ತೀರಿ. ಘಮ ಘಮಿಸುವ ಎಣ್ಣೆಯನ್ನು ತಲೆಗೂ, ಮೈಗೂ ಹೊತ್ತಿಸಿಕೊಂಡು ಸುಡುಸುಡುವ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರಂಭಗೊಳ್ಳುವ ದೀಪಾವಳಿಯ ಸಂಭ್ರಮ ಚಿನಕುರಳಿ, ಆನೆಪಟಾಕಿ, ಸರಪಟಾಕೊ, ಹೂಕುಂಡ, ನಕ್ಷತ್ರಕಡ್ಡಿ, ಸಿಡಿಮದ್ದು, ಹಾವು ಪಟಾಕಿ, ಕೃಷ್ಣನ ಚಕ್ರ, ಆಟಂಬಾಂಬು ಮುಂತಾದ ಬಗೆಬಗೆಯ ಪಟಾಕಿಗಳನ್ನು ರಾತ್ರಿಯೆಲ್ಲಾ ಸುಟ್ಟು ಕಿವಿಗಡ ಚಿಕ್ಕುವ ಸದ್ದಿನೊಂದಿಗೆ ಕುಣಿದು ಕುಪ್ಪಳಿಸಿ ನಿದ್ರೆಗೆ ಅಪ್ಪಳಿಸುವ ತನಕ ನಾವು ಆಡಿದ್ದೇ ಆಟ. ನವವಧುವರರಿಗಂತೂ ದೀವಳಿಗೆ ತವರಿನ ಸಂಭ್ರಮ. ಹೊಸ ಬಟ್ಟೆ, ಬಗೆಬಗೆಯ ತಿಂಡಿ, ದೇವರ ಪೂಜೆ ಮಾಡಿ ಬಂಧುಗಳೊಂದಿಗೆ ಪಟಾಕಿ ಸಿಡಿಸಿ ಮನೆಮನೆಗಳನ್ನು ಬೆಳಗುವ ಗೂಡು ದೀಪಗಳನ್ನು ತೂಗಿಸಿ ಖುಷಿಪಡುವ ಹಬ್ಬ.
ಉತ್ತರ ಭಾರದಲ್ಲಿ ‘ರಾಮ್ ಲೀಲಾ’ ಹೆಸರಿನಲ್ಲಿ ಆಚರಿಸುವ ದೀಪಾವಳಿಗೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಆಚರಣೆಗಳಿಗೆ ಪ್ರಾಂತೀಯ ವಿವಿಧತೆ ಇದೆ. ನರಕಾಸುರನನ್ನು ಕೊಂದ ದಿನವನ್ನು ನರಕ ಚತುರ್ದಶಿಯಾಗಿಯೂ, ಬಲಿಚಕ್ರವರ್ತಿಯ ನೆನಪಿನಲ್ಲಿ ಬಲಿಪಾಡ್ಯಮಿಯಾಗಿಯೂ ದೀಪಾವಳಿ ಆಚರಿಸಲ್ಪಡುತ್ತದೆ. ನಮ್ಮ ಹಳ್ಳಿಯ ಕಡೆ ಇದು ಕೊಯ್ಲಿನ ಹಬ್ಬ. ಜೈನ ಸಮುದಾಯದಲ್ಲಿ ಮಹಾವೀರರ ನಿರ್ವಾಣದ ದಿನ. ಹೀಗೆಲ್ಲ ಆಚರಿಸುವ ದೀಪಾವಳಿ ಮತ್ತೊಮ್ಮೆ ನಮ್ಮ ಮನೆಗೆ ಧಾಂಗುಡಿ ಇಟ್ಟಿದೆ.
ನನಗಂತೂ ಹೇಳಿ ಕೇಳಿ ಪಟಾಕಿಗಳೆಂದರೆ ಭಯ. ಅದರಲ್ಲೂ ಕಿವಿಗಡ ಚಿಕ್ಕುವ ಹಾಗೆ ಶಬ್ದ ಮಾಡುವ ಪಟಾಕಿಗಳಂತೂ ಭಯ ಹುಟ್ಟಿಸುತ್ತವೆ. ಅಲ್ಲೊಂದು ಇಲ್ಲೊಂದು ಸುರುಸುರು ಬತ್ತಿಯನ್ನೋ, ಹೂಕುಂಡವನ್ನೋ ಹಚ್ಚಿ ಅಷ್ಟಕ್ಕೇ ತೃಪ್ತಿಪಟ್ಟುಕೊಂಡೇನು. ಅದಕ್ಕೆ ಕಾರಣವೂ ಇದೆ. ಪಟಾಕಿಗಳಿಂದಾಗುವ ಅಪಾಯ, ಅನಾಹುತ ನೆನೆದರೆ ಪಟಾಕಿ ಮುಟ್ಟಲಿಕ್ಕೂ ಭಯವಾಗುತ್ತದೆ. ಚಿಕ್ಕಮಕ್ಕಳ ಕೈಗೆ ಬಾಕ್ಸ್‌ಗಟ್ಟಲೆ ಪಾಟಕಿಕೊಟ್ಟು ಮೈಮರೆತು ನಿಂತು ಅದೆಷ್ಟು ಕಣ್ಣುಗಳು ಪಟಾಕಿಗೆ ಆಹುತಿಯಾಗಿಲ್ಲ? ಜಗತ್ತಿನ ಸಂತಸವನ್ನೆಲ್ಲಾ ಕಣ್ತುಂಬಿಕೊಳ್ಳಬೇಕಾದ ಪುಟ್ಟ ಕಂದಮ್ಮಗಳ ಬದುಕೇ ಕತ್ತಲಾಗಿ ಹೋಗಿಲ್ಲ. ಪ್ರತೀವರ್ಷದ ದೀವಳಿಗೆಯೂ ಅಂತಹದೊಂದು ಕೆಟ್ಟ ಕಣ್ಣುಗಳನ್ನು ಕಳೆದುಕೊಂಡಿರುವ ಮಕ್ಕಳಿರುವ ಹೆತ್ತವರಿಗೆ ಇಡೀ ಬದುಕು ಕಾರ್ಗತ್ತಲ ಸೆರೆಮನೆಯೇ. ಅವರಿಗೆ ದೀಪಾವಳಿ ಎಂದರೆ ಕನಸಲ್ಲೂ ಬೆಚ್ಚಿಬೀಳುವ ಹಾಗಾಗುತ್ತದೆ. ಅದನ್ನೆಲ್ಲಾ ಒತ್ತಟ್ಟಿಗಿಟ್ಟು ಹಾಗಾಗದಿರಲಿ ಅಂತ ಹಾರೈಸಿಕೊಂಡು ದೀಪಾವಳಿಯನ್ನು ನೆನೆದರೆ ನನಗೆ ಎಸ್.ವಿ. ಪರಮೇಶ್ವರ ಭಟ್ಟರ ಕವನದ ಸಾಲುಗಳು ಮನಸ್ಸಿಗೆ ಬರುತ್ತದೆ.
ಹಳೆ ಬಾಳು ಸತ್ತಿತ್ತು
ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು
ದೀಪ ಹಚ್ಚಾ...
ದಿನದಿನದ ಲೋಕಾನುಭವ
ದೊಳೆದೆಯನು ತುಂಬಿ
ಜೀವನವನನುಗೊಳಿಸಿ ದೀಪಹಚ್ಚಾ...

ಹಾಗೆ ಹಳೆಯ ಕೊಳೆಯನ್ನೆಲ್ಲಾ ಸುಟ್ಟು ಹೊಸಬಾಳಿಗೆ ತೆರೆದುಕೊಳ್ಳುವ ಈ ದೀಪಾವಳಿಯು ನಮ್ಮೆಲ್ಲರ ಮನೆ-ಮನಗಳಲ್ಲಿ ನೆಮ್ಮದಿಯನ್ನು, ಶಾಂತಿಯನ್ನು ನೀಡುವ ಬೆಳಕ್ಕಾಗಿ ಬೆಳಗಲಿ. ದಿಕ್ಕು ದಿಕ್ಕುಗಳನ್ನು ತಬ್ಬಿದ ಬಣ್ಣದ ಬೆಳಕು ಕಣ್ಣಿಗೆ ಆನಂದವನ್ನು ನೀಡಲಿ. ದೀವಳಿಗೆಯಂದು ಹೋಳಿಗೆಯ ತಿಂದು ಪ್ರತಿಯೊಬ್ಬರಲ್ಲೂ ಸಂಭ್ರಮದ ಸಂತಸದ ಹಾವಳಿಯಾ..................