ಅಮೆರಿಕನ್ನಡ
Amerikannada
ಹೊರನಾಡ ಕನ್ನಡಿಗರು ಒಂದು ಸಮಗ್ರ ನೋಟ
-ನಾಗಲಕ್ಷ್ಮೀ ಹರಿಹರೇಶ್ವರ
ಯಾವುದೇ ಒಂದು ವಸ್ತು ವಿಷಯ ನಮ್ಮ ಕೈಗೆ ದೊರಕದಿದ್ದಾಗ ಅದರ ಮೇಲೆ ಇನ್ನೂ ಹೆಚ್ಚಿನ ಪ್ರೀತಿ ಅಭಿಮಾನ ಹುಟ್ಟುವುದು ಸಹಜ. ಹೊರನಾಡು, ಹೊರದೇಶಗಳಿಗೆ ಹೋದವರಿಗೆ ತಮ್ಮ ತಾಯಿ, ತಾಯಿನಾಡು, ದೇಶ, ಭಾಷೆ, ಸಂಸ್ಕೃತಿ ಇವುಗಳನ್ನು ಅಲ್ಲಿ ಕಳೆದುಕೊಂಡಾಗ ಅದನ್ನು ದೊರಕಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುತ್ತೇವೆ. ನನ್ನ ಪತಿಯವರಾದ ಹರಿಹರೇಶ್ವರರಿಗೆ ಕನ್ನಡತನವೇ ಉಸಿರಾಗಿತ್ತು. ಅವರು ತಮಿಳುನಾಡಿನ ನೈವೇಲಿ, ಅರುಣಾಚಲದ ನೇಫಾ, ಇರಾನ್, ಅಮೆರಿಕಾದ ಹಲವು ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದಾಗ ಅಲ್ಲೆಲ್ಲಾ ಕನ್ನಡ ಸಂಘಗಳನ್ನು ಕಟ್ಟಿ, ಕನ್ನಡಿಗರನ್ನು ಒಟ್ಟುಗೂಡಿಸಿ, ಕನ್ನಡ ಉಳಿವು ಬೆಳವಿನ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಇವರೊಂದಿಗೆ ನಾನೂ ಸಹ ಕನ್ನಡ ಕೆಲಸಕ್ಕಾಗಿ ಕೈಜೋಡಿಸುತ್ತಿದ್ದೆ.
ನಾವಿಬ್ಬರೂ ದಿನಗಟ್ಟಲೆ ಕನ್ನಡದ ಬಗ್ಗೆ ಚಿಂತಿಸುತ್ತಿದ್ದೆವು. ಕುವೆಂಪು ವಾಣಿಯಂತೆ ನಾವಿರುವಲ್ಲಿಯೇ ಕನ್ನಡ ನಾಡನ್ನು ಸೃಷ್ಟಿಸಿಕೊಂಡಿದ್ದೆವು. ನಮಗೆ ಹೊರದೇಶದಲ್ಲಿದ್ದೇವೆ ಎಂಬ ಭಾವನೆಯ ಬರುತ್ತಿರಲಿಲ್ಲ. ಏಕೆಂದರೆ ವಾರಾಂತ್ಯದಲ್ಲಿ ನಾವೆಲ್ಲ ಕನ್ನಡಿಗರು ಕನ್ನಡದ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತಿದ್ದೆವು. ನಾಟಕ, ಸಂಗೀತ, ಸಾಹಿತ್ಯ ಮುಂತಾದ ಗೋಷ್ಠಿಗಳನ್ನು ನಡೆಸುತ್ತಿದ್ದೆವು.
ನಾನು ಅಮೆರಿಕಾದ ಸೆಂಟ್ ಲೂಯಿಸ್‌ನಲ್ಲಿ ಕನ್ನಡ ಶಾಲೆಯನ್ನು ಪ್ರಾರಂಭ ಮಾಡಿ ಕನ್ನಡ ತರಗತಿಗಳನ್ನು ನಡೆಸುತ್ತಿದ್ದೆ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ತರಗತಿಗಳಿಗೆ ಮಕ್ಕಳನ್ನು ಸೇರಿಸಲು ತಂದೆತಾಯಿಗಳೇ ಪ್ರೋತ್ಸಾಹಿಸುವುದಿಲ್ಲ. ಆದರೆ ನಾನು ನಡೆಸುತ್ತಿದ್ದ ಕನ್ನಡ ಶಾಲೆಗೆ ಅವರ ತಂದೆ ತಾಯಿಗಳು ಮಕ್ಕಳನ್ನು ನೂರರಿಂದ ನೂರಿಪ್ಪತ್ತು ಮೈಲಿ ದೂರ ಕರೆದುಕೊಂಡು ಬರುತ್ತಿದ್ದರು. ಅವರ ಅನನ್ಯ ಪ್ರೇಮ ಮೆಚ್ಚಬೇಕಾದ್ದು.
ಕನ್ನಡ ನಾಡು ಹೊರನಾಡ ಕನ್ನಡಿಗರಾದ ನಮಗೆ ತವರು ಮನೆ. ಇಲ್ಲಿ ಕಷ್ಟ ಎಂದರೆ ನಮಗೆ ಅಲ್ಲಿ ಅಳುಬರುತ್ತದೆ. ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಯಾದ ಸಮಯದಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದಾಗ ಅಮೆರಿಕಾದಲ್ಲಿನ ಕನ್ನಡಿಗರನ್ನು ಭೇಟಿ ಮಾಡಿ ನಮ್ಮ ಮನೆಯವರು ತುಂಬಾ ಕಷ್ಟದಲ್ಲಿದ್ದಾರೆ ಅವರಿಗೆ ನಾವು ಸಹಾಯ ಮಾಡಲೇಬೇಕು ಎಂದು ಹಣ ಸಂಗ್ರಹಿಸಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರಿಗೆ ತಲುಪಿಸಿದೆವು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಆದ ಜಲಪ್ರಳಯದ ಸಮಯದಲ್ಲೂ ಸಹ ಅಮೆರಿಕನ್ನಡಿಗರಾದ ನಾವೆಲ್ಲರೂ ಸಹಾಯ ಮಾಡಿದೆವು.
ಸಿನಿಮಾ ಕ್ಷೇತ್ರದ ಅಪ್ರತಿಮ ದೃವತಾರೆ ಕೆ.ಎಸ್. ಅಶ್ವತ್ಥ್ ಅವರ ಅನಾರೋಗ್ಯದ ಸಮಯದಲ್ಲಿ ಧನ ಸಹಾಯ ಮಾಡಿದೆವು ಅಷ್ಟೆ ಅಲ್ಲ ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರಿಗೂ ಹಾಗೂ ಕೆಲವು ವಿದ್ಯಾಸಂಸ್ಥೆಗಳಿಗೆ ಧನ ಸಹಾಯ ಮಾಡಿದ್ದೇವೆ. ಕೆಲವು ಸಾಹಿತಿಗಳು ತಾವು ಬರೆದ ಪುಸ್ತಕಗಳನ್ನು ಅಚ್ಚು ಹಾಕಿಸಲು ಸಾಧ್ಯವಾಗದವರಿಗೆ, ಅವರ ಆಸೆ ಪೂರೈಸಿದ್ದೇವೆ.
ಇಲ್ಲಿ ಹುಟ್ಟಿ ಬೆಳೆದ ಊರನ್ನೇ ದತ್ತು ತೆಗೆದುಕೊಂಡು, ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ನಾಣ್ನುಡಿಯಂತೆ, ಅಮೆರಿಕಾದಲ್ಲಿ ಸಂಪಾದನೆ ಮಾಡಿದ ಹಣವನ್ನು ಕನ್ನಡನಾಡಿಗಾಗಿಯೇ ಸದ್ವಿನಿಯೋಗ ಮಾಡುತ್ತಿದ್ದೇವೆ.
ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಸಿಗುವುದು ಸರ್ವೇಸಾಮಾನ್ಯ. ಆದರೆ ಅಮೆರಿಕಾದಲ್ಲಿ ನೀವು ಕನ್ನಡ ಪತ್ರಿಕೆಗಳನ್ನು ನೋಡಲು ಸಾಧ್ಯವೇ. ಹೌದು ಸಾಧ್ಯವಿತ್ತು. ಕಾರಣ ನಾವು ‘ಅಮೆರಿಕನ್ನಡ’ ಎಂಬ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿ ಅಮೆರಿಕನ್ನಡರಿಗರಿಂದ ಕತೆ, ಕವನ, ಲೇಖನಗಳನ್ನು ಬರೆಸುತ್ತಿದ್ದೆವು.
ಕನ್ನಡನಾಡಿನ ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ಬಯಸಿ ಆತಿಥ್ಯವನ್ನು ನೀಡಿ, ಸನ್ಮಾನಿಸುತ್ತಿದ್ದೆವು. ಅಷ್ಟೆ ಅಲ್ಲ ಇಲ್ಲಿನ ಕಲಾವಿದರನ್ನು ಕರೆಸಿ ಸ್ಥಳೀಯ ಕಲಾವಿದರೊಂದಿಗೆ ಮನರಂಜನೆ ಕಾರ್ಯಕ್ರಮವನ್ನು ನಡೆಸುತ್ತಿದ್ದೆವು. ನಾವಿಬ್ಬರೂ ಕನ್ನಡವನ್ನು ಹೇಗೆ ಉಳಿಸಿ, ಬೆಳಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿ, ಉಪನ್ಯಾಸ ನೀಡುತ್ತಿದ್ದೆವು. ಈ ಕಾರ್ಯಕ್ಕೆ ನಮ್ಮನ್ನು ಯಾರೂ ನೇಮಿಸಿರಲಿಲ್ಲ. ಇದು ನಮಗೆ ಕನ್ನಡದ ಮೇಲಿನ ಅಭಿಮಾನದ ಸಂಕೇತವಾಗಿತ್ತು.
‘ಅಭಿಮಾನ’ ಎಂದರೆ ಏನು? ಅದು, ಯಾವುದಾದಾದರೊಂದು ವಿಷಯವನ್ನ, ವಸ್ತುವನ್ನ ನಾವು ಮೆಚ್ಚಿಕೊಂಡೆವು ಎನ್ನೋಣ. ನಮಗೆ ಅದರ ಬಗ್ಗೆ ಅಕ್ಕರೆ, ಆದರ, ಗೌರವ, ಪ್ರೀತಿ, ವಿಶ್ವಾಸಗಳನ್ನು ನಾವು ಹೊಂದಿದೆವು -ಎಂದಿಟ್ಟುಕೊಳ್ಳೊಣ. ಆಗ, ನಾವು ಅದರ ಬಗ್ಗೆ ಕಾಣುವ ಮನೋಭಾವನೆಯೇ ‘ಅಭಿಮಾನ’! ಎಷ್ಟೋ ವಿಷಯಗಳಿಗೆ, ಎಲ್ಲ ಒಪ್ಪದಿದ್ದರೂ, ನಾವು ಗೌರವ ಕೊಡುವುದು ಕೇವಲ ಸೌಜನ್ಯದ ಕುರುಹು ಅಷ್ಟೇ. ಹಾಗಾಗಿ, ಮೆಚ್ಚುಗೆಯೊಂದೇ ಅಭಿಮಾನವಾಗದು. ಪ್ರೀತಿ-ವಿಶ್ವಾಸಗಳೂ ಹಾಗೇನೇ. ಉಗುರು ಬೆಚ್ಚನೆಯ ಪ್ರಮಾಣದ ಅಕ್ಕರೆಯನ್ನ ನಾವು ಸಾಂಪ್ರದಾಯಿಕವಾಗಿ ಅಲ್ಲಿ ಇಲ್ಲಿ ತೋರಿದೆವೆಂದರೆ, ಅದು ಸುಸಂಸ್ಕೃತರ ಸೌಹಾರ್ದತೆಯ ಒಂದು ಗುಣ, ಲಕ್ಷಣವಾದೀತು ಅಷ್ಟೇ. ಅದು ‘ಅಭಿಮಾನ’ ವೆನಿಸಿಕೊಳ್ಳದು.
ಹಾಗಾದರೆ, ‘ಅಭಿಮಾನ’ದ ಮಾನದಂಡವಾವುದು? “ಅದು ನನ್ನದು; ನನ್ನದು ಅದೆಂದು ಹೇಳಿಕೊಳ್ಳಲು ನನಗೆ ‘ಹೆಮ್ಮೆ’ ಎಂದು ಅನ್ನಿಸುತ್ತೆ”ನನ್ನದಾಗಿಸಿಕೊಂಡ ಈ ವೈಶಿಷ್ಟ್ಯವನ್ನ ನಾನು ನನ್ನ ನಡೆ-ನುಡಿಗಳಲ್ಲಿ ಬೀಗಬಲ್ಲೆ- ಎಂಬ ಈ ಮನೋಭಾವನೆಯ ಒಳ-ಹೊರ ನೋಟವೇ ‘ಅಭಿಮಾನ’!
ಆ ತನ್ನದಾಗಿಸಿಕೊಳ್ಳುವತ್ತ ಈಗ ಹೊರಳೋಣ; ಒಂದೆರಡು ಉದಾಹರಣೆಗಳನ್ನು ಗಮನಿಸೋಣ: ಯುದ್ಧ ಈಗತಾನೇ ಮುಗಿದಿದೆ. ಸಂಪದ್ಭರಿತ ಲಂಕೆಯನ್ನು ಅಸದೃಶ ಘೋರ ಸಮರದಲ್ಲಿ ಗೆದ್ದ ಬಳಿಕ, ಲಕ್ಷ್ಮಣನನ್ನ ಉದ್ದೇಶಿಸಿ, ಶ್ರೀ ರಾಮನು ಹೇಳಿದನೆಂಬ ಈ ನಾಣ್ಣುಡಿ ನೆನಪಿದೆಯೇ?: ಅಪಿ ಸ್ವರ್ಣಮಯೀ ಲಂಕಾ, ನ ಮೇ, ಲಕ್ಷ್ಮಣ ರೋಚತೇ| ಜನನೀ ಜನ್ಮಭೂಮಿಶ್ ಚ ಸ್ವರ್ಗಾದ್ ಅಪಿ ಗರೀಯಸಿ|| (ಚಿನ್ನದಿಂದಲೇ ಲಂಕೆ ತುಂಬಿರಬಹುದು. ಆದರದು ನನ್ನ ಮನಸೆಳೆಯದು, ಲಕ್ಷ್ಮಣಾ!; ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು!) ಇದು ಅಭಿಮಾನದ ಮಾತು. ಇದೇ ಹುಟ್ಟೂರಿನ ಬಗ್ಗೆ ಹೆಮ್ಮೆಯನ್ನು ತೋರುವವರ ಮನದಾಳದ ಹೊನ್ನುಡಿ!
ಹಾಗೆಯೇ, ‘ಕನ್ನಡತನ’ವನ್ನು ಮೈಗೂಡಿಸಿಕೊಂಡವರು ಮಾತ್ರ ಕನ್ನಡದ ಮೇಲೆ ಅಭಿಮಾನ ತಳೆಯಬಲ್ಲರು. ಮತ್ತೆ ಹುಟ್ಟಿದರೆ, ನಾನು ಕನ್ನಡನಾಡಿನಲ್ಲಿಯೇ ಹುಟ್ಟಬೇಕು, ಒಂದು ಚಿಕ್ಕ ಜೇನು ಅದರೂ ಚಿಂತೆಯಿಲ್ಲ, ಆ ಹೂದೋಟದ ಸವಿ ಸವಿದೇನು; ಒಂದು ಪುಟ್ಟ ಪರಪುಟ್ಟನಾಗಿ ಹುಟ್ಟಿದರೂ ಪರವೆಯಿಲ್ಲ, ಹಾಡಿ ತಣಿದೇನು- ಎನ್ನುವ ವಿಕ್ರಮಾರ್ಜುನವಿಜಯದ ಮಹಾಕವಿ ಪಂಪನ (ಕ್ರಿ.ಶ. ೯೪೧) ಮಾತು ಇಂಥ ಅಭಿಮಾನದ ಝೇಂಕಾರ! ಹೇಳುತ್ತಾನೆ: ಆರ್ (ಯಾರಾದರೂ), ಅಂಕುಸಂ (ಆನೆಯನ್ನು ನಿಯಂತ್ರಿಸುವಂತೆ ಅಂಕುಶವನ್ನು), ಇಟ್ಟೊಡಂ (ಇಟ್ಟರೂ ಸಹ), ಎನ್ನ ಮನಂ (ನನ್ನ ಮನಸ್ಸು), ಬನವಾಸಿದೇಶಮಂ (ಬನವಾಸಿ ಪ್ರದೇಶವನ್ನು, ಅಂದರೆ ಸೂಚ್ಯವಾಗಿ ಕನ್ನಡನಾಡನ್ನು), ನೆನೆವುದು (ಜ್ಞಾಪಿಸಿಕೊಳ್ಳುತ್ತಲೇ ಇರುತ್ತದೆ!); ಅಂತು (ಮಾನಸರಾಗಿ) ಪುಟ್ಟಲ್ ಏನಾಗಿಯುಂ ಏನೋ ತೀರ್ಪುದೇ? ತೀರದೊಡಂ ಮರಿದುಂಬಿಯಾಗಿ, ಮೇಣ್ ಕೋಗಿಲೆಯಾಗಿ ನಂದನದೋಳ್ ಬನವಾಸಿದೇಶದೊಳ್ ಪುಟ್ಟುವುದು! (ಪಂಪಭಾರತ, ೪:೨೯, ೩೦).
ತಾನು ಹುಟ್ಟಿದ ನಾಡಿನ ಬಗ್ಗೆ ರತ್ನನ ಮುತ್ತಿನ ಮಾತೊಂದಿದೆ: ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನುನೆ- ಮೂಗ್ನಲ್ಲ್ ಕನ್ನಡ ಪದ ಹಾಡ್ತೀನಿ- ನನ್ನ ಮನಸನ್ ನೀ ಕಾಣೆ!’(-ಜಿ. ಪಿ. ರಾಜರತ್ನಂ, ರತ್ನಪದಗಳು) -ಇದೆಂದರೆ ಹತ್ತು ಕಟ್ಟುವ ಕಡೆ ಕಟ್ಟಿದ ಒಂದು ಮುತ್ತು, ಇದೀಗ ಅಭಿಮಾನಪುರಸ್ಸರ ಉದ್ಗಾರ!
“ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು!”- ಎಂದ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿ ಕೆಲವರಿಗೆ ಕೊಂಚ ಭಾವೋನ್ಮಾದದ ಉದ್ಗಾರವೆನಿಸಿದರೂ, ನಾಡಿನಿಂದ ದೂರ ಹೋದವರಿಗೆ, ವಿದೇಶವಾಸೀ ಕನ್ನಡಿಗರಿಗರಿಗಂತೂ ಆ ಹೃದಯದ ಮಾತು ಸತ್ಯಸ್ಯ ಸತ್ಯ.
ಇನ್ನೂ ಮುಂದೆ ಒಂದು ಹೆಜ್ಜೆ ಮುಂದೆ ಹೋಗಿ, “ತನು ಕನ್ನಡ, ಮನ ಕನ್ನಡ, ನುಡಿ(ಧನ) ಕನ್ನಡ”- ಎಂದು ಮಂಜೇಶ್ವರ ಗೋವಿಂದ ಪೈಗಳೊಂದಿಗೆ ಹಾಡುತ್ತ, “ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲಮ್ಮೆವು (ಮರೆಯಲಾರೆವು)!” -ಎಂದು ನುಡಿತಾಯಿಯನ್ನ ನಮ್ಮ ಹೃನ್ಮಂದಿರದಲ್ಲಿ ಮೆರೆಸುತ್ತಿರಲೂ ಬಹುದು. ಇದು ಅಭಿಮಾನ!
ಈ ಅಭಿಮಾನವನ್ನು ಸ್ಫುರಿಸುವ ಆ ‘ಕನ್ನಡತನ’ ಯಾವುದು? ಅದರ ಚಹರೆ ಏನು? ತನ್ನದೆಂದು ಹೆಮ್ಮೆ ಪಟ್ಟುಕೊಳ್ಳುವುದೇ ಕನ್ನಡತನವಾದೀತೇ? ಕಲಿತ, ಆಡುವ ಭಾಷೆಯೊಂದೇ ಕನ್ನಡತನವನ್ನು ತಂದು ಕೊಟ್ಟೀತೇ? “ಪ್ರಾದೇಶಿಕತೆಯ ವೈವಿಧ್ಯತೆಯೇ ಒಂದು ಬಗೆಯ ಸೊಬಗನ್ನಿತ್ತು, ಕೊಡಗರ ಕ್ಷಾತ್ರ, ಹಳೆಯ ಮೈಸೂರು ಭಾಗದ ಜನರ ನಾಜೂಕು, ಮಂಗಳೂರಿನ ಕಡೆಯವರ ಜಾಣತನ, ಧಾರವಾಡದ ಮಂದಿಯ ಗಡಸು, ಬಿಜಾಪುರದವರ ಕಸುವು”-ಮುಂತಾದುವೆಲ್ಲ ಮೇಳೈಸಿ ಕನ್ನಡತನವಾಗಿದೆ ಯೆನ್ನೋಣವೇ? ಉಳಿದೆಲ್ಲುದಕ್ಕಿಂತ ಮಿಗಿಲಾದ ಅತಿ ದೊಡ್ಡ ಸಾಂಸ್ಕೃತಿಕ ಪರಂಪರೆಯ ವೈಭವ, ಪೂರ್ವಾರ್ಜಿತ ಸಂಪತ್ತಿನ ಹೆಗ್ಗಳಿಕೆ ನಾವಾಡುವ ನುಡಿಗೆ, ನಾವಿರುವ/ ನಾವು ಹುಟ್ಟಿ ಬೆಳೆದ ನಾಡಿಗೆ ಇದೆಯೆಂಬ ಹಿರಿಮೆಯ ಭಾವವೊಂದೇ ಕನ್ನಡತನವೆನಿಸೀತೇ?
ಹೇಳಿಕೊಳ್ಳಬಹುದು: ನಾವು ಎಂಥವರು ಗೊತ್ತೆ?:
ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ|
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ!||’’
(-ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ, ಕ್ರಿ.ಶ. ೭ನೇಶತಮಾನ)

ನಾವು ಹೇಗಿದ್ದೆವು ಗೊತ್ತೆ?:
ಪದನರಿದು ನುಡಿಯಲುಂ, ನುಡಿದುದನು ಅರಿದು,
ಆರಯಲುಂ ಅರ್ಮದು ಆ ನಾಡವರ್ಗಳ್; ಚದುರರ್, ನಿಜದಿಂ,
ಕುರಿತು ಓದದೆಯುಂ ಕಾವ್ಯ-ಪ್ರಯೋಗ-ಪರಿಣತಮತಿಗಳ್||
(-ನೃಪತುಂಗ ದೇವಾನುಮತಮಪ್ಪ ಶ್ರೀವಿಜಯ, ಕವಿರಾಜಮಾರ್ಗ, ಕ್ರಿ.ಶ.೧೧೩೮)

ನಮ್ಮ ಕಮ್ಮಿತ್ತ ನಾಡು ಹಿಂದೆ ಹೇಗಿತ್ತು ಗೊತ್ತೆ?:
ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ ಮಳೆಗಳಿಂ
ದಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ
ದಲ್ಲಿಗಲ್ಲಿಗೆ ರನ್ನದರೆಗಳಿಂ ಕೆರೆಗಳಿಂ ಪರಿವ ಪರಿಕಾಲ್ಗಳಿಂದೆ
ಅಲ್ಲಿಗಲ್ಲಿಗೆ ತೋರ್ಪ ಗಿರಿಗಳಿಂ ಕರಿಗಳಿಂ
ದಲ್ಲಿಗಲ್ಲಿಗೆ ನೆರೆದ ಶುಕಗಳಿಂ ಪಿಕಗಳಿಂ
ದಲ್ಲಿಗಲ್ಲಿಗೆ ಗವಾಸ್ಪದಗಳಿಂ ನಡಗಳಿಂಡ್ ಆ ದೇಶಂ ಒಪ್ಪಿರ್ದುದು!
(-ವಿರೂಪಾಕ್ಷ, ಚೆನ್ನಬಸವ ಪುರಾಣ, ಕ್ರಿ.ಶ. ಸುಮರು ೧೫೮೪)

ನಮ್ಮಲ್ಲಿ ಸಮೃದ್ಧಿ ಎಷ್ಟಿತ್ತು ಗೊತ್ತಾ?
ಜೋಳದ ಬೋನಕ್ಕೆ ಬೇಳೆಯಾ ತೊಗೆಯಾಗಿ
ಕಾಳೆಮ್ಮೆ ಕರೆದ-ಹೈನಾಗಿ ಬೆಳವಲದ
ಮೇಳನೋಡೆಂದ- ಸರ್ವಜ್ಞ||

ಕಿಚ್ಚುಟು ಕೆಸರುಂಟು, ಬೆಚ್ಚನಾ ಮನೆಯುಂಟು,
ಇಚ್ಛೆಗೆ ಬರುವ ಸತಿಯುಂಟು, ಮಲೆನಾಡ
ಮೆಚ್ಚು ನೋಡೆಂದ-ಸರ್ವಜ್ಞ||
(-ಸರ್ವಜ್ಞ, ಸುಮಾರು ಕ್ರಿ.ಶ. ೧೭೦೦)

ನಮ್ಮ ಕನ್ನಡ ನುಡಿಯ ಅಂದ ಚೆಂದವೇನು ಗೊತ್ತಾ?:
ಸುಲಿದ ಬಾಳೆಯ ಹಣ್ಣಿನಂದದಿ
ಕಲಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮುಕ್ತಿಯ
ಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲಿನ್ನೇನು?
(-ಮಹಲಿಂಗರಂಗ, ಸುಮಾರು ಕ್ರಿ.ಶ. ೧೬೭೫)

-ಇವೆಲ್ಲ ಹೆಗ್ಗಳಿಕೆಯ ಸ್ಮರಣೆಯೊಂದೇ ಕನ್ನಡತನವೆನಿಸೀತೆ? ಇರುವ ಓರೆಕೋರೆಗಳನ್ನು ನಿರ್ಲಕ್ಷಿಸಿ, ಅಥವಾ ಆ ಕುಂದು-ಕೊರತೆಗಳನ್ನೇ ಒಂದು ತರಹಾ ವೈಶಿಷ್ಟ್ಯಗಳೆಂದು ಸಮಜಾಯಿಷಿಸಿಕೊಳ್ಳುವುದಷ್ಟೇ ‘ಕನ್ನಡತನ’ವಾಗುವುದೇ? ಕೀಳರಿಮೆಯನ್ನು ಮುಚ್ಚಿಡುವ ಜವನಿಕೆಯ ಮುಸುಕಿನಲ್ಲಿ ತನ್ನಂಗಳದ ಬದಿಯ ಗುಡ್ಡವನ್ನೇ ಪರ್ವತವನ್ನಾಗಿ ಕಾಣುವ ಹವಣಿಕೆಯೇ ‘ಕನ್ನಡತನ’ವೆ? ಇತರರದ್ದನ್ನು ತಾಳೆನೋಡುವಾಗ ತಾಳ್ಮೆಗೆಟ್ಟಾಗ ತಾಳುವ ನಿಲುವೇ ಕನ್ನಡತನವೆನಿಸೀತೇ?
-ಹೀಗೆಲ್ಲ ಕನ್ನಡತನದ ಬಗ್ಗೆ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡಿದ್ದೇವೆ; ಕೆಲವು ಸರಿ, ಇನ್ನು ಕೆಲವು ಆ ಈ ಸನ್ನಿವೇಶಗಳಲ್ಲಿ ಬೇಡ,; ‘ನ ಇತಿ, ನೇತಿ’ ಎನ್ನುತ್ತರಲ್ಲ, ಹಾಗೆ ಮೇಲಿನದಕ್ಕಿಂತ ಇನ್ನೂ ಬೇರೆ ರೀತಿ ಹೇಳಬಹುದು- ಹೀಗೆ ನಿರ್ದಿಷ್ಟ ನಿರ್ವಚನದಿಂದ ‘ಕನ್ನಡತನ’ ಜಾರಿಕೊಳ್ಳುತ್ತದೆ. ‘ಇದು ಹೀಗೇ (ಇದಂ ಇತ್ಥಂ)’- ಎಂದು ಹೇಳಲು ಬಾರದ, ಮೂರ್ತರೂಪವಲ್ಲದ, ಸುಲಭವಾಗಿ ಕೈಗೆ ಸಿಲುಕದ, ಅವರವರ ಮನೋಭಾವಕ್ಕೆ ಅನುಗುಣವಾಗಿ ಸರಿತೋರಬಲ್ಲ ಲಕ್ಷಣ, ಒಂದು ವಿಶೇಷ ಸಂಕೇತ- ಈ ‘ಕನ್ನಡತನ’!
‘ಅಭಿಮಾನ’ಕ್ಕೂ ‘ಕನ್ನಡತನ’ಕ್ಕೂ ಇರುವ ಅವಿನಾ ಸಂಬಂಧದ ಬಗ್ಗೆ ಯೋಚಿಸುವಾಗ, ಕನ್ನಡದ ಈ ದಿಗ್ವಿಜಯಕ್ಕೆ ಬಹು ಮುಖ್ಯ ಸಾಧನವಾಗಿರುವುದು ಯಾವುದು? “ಕ್ರಿಯಾ-ಸಿದ್ಧಿ: ಸತ್ತ್ವೇ ಭವತಿ ಮಹತಾಂ ನ ಉಪಕರಣೇ”- ಎಂಬ ಮಾತೊಂದಿದೆ. ಕನ್ನಡದ ಬಗ್ಗೆ ಮಮತೆ ಉಳ್ಳವರು, ಅಭಿಮಾನ ತಳೆದವರು, ಅಕ್ಕರೆ ಉಳಿಸಿಕೊಂಡವರು ಮತ್ತು ಕನ್ನಡವನ್ನೇ ಉಸಿರಾಗಿಸಿಕೊಂಡವರು ಬಗೆ ಬಗೆಯಲ್ಲಿ, ಬೇರೆ ಬೇರೆ ಪ್ರಮಾಣಗಳಲ್ಲಿ ಸತ್ವಯುತವಾಗಿ ಶ್ರಮಿಸಿದುದೇ ವಿಶ್ವಾದ್ಯಂತ ಈ ಕನ್ನಡದ ಏಳ್ಗೆಗೆ ಕಾರಣವಾಗಿದೆ. ಕೇವಲ, ಉಗುರು ಬೆಚ್ಚನೆಯ ಪ್ರೀತಿ ವಿಶ್ವಾಸದ ನೀರೆರದು ವಿದೇಶಗಳಲ್ಲಿ ಕನ್ನಡವನ್ನು ಪೋಷಿಸಲು, ಉಳಿಸಿಕೊಳ್ಳಲು, ಬೆಳಸಿಕೊಳ್ಳಲು ಸಾಧ್ಯವಿಲ್ಲ. ಅತ್ಯಾಸಕ್ತರೂ, ತಮ್ಮ ಮಗು ಹೇಗೇ ಇರಲಿ ಅದಕ್ಕೆ ಎಣೆ ಯಾರಿಹರು - ಎಂಬ ತಾಯಿಯ ಮನೋಭಾವದವರು, ತನ್ನದಿದೆಂಬ ಹೆಮ್ಮೆಯಲ್ಲಿ ಖುಶಿ ಕಾಣುವವರು, ಬೇರೆಯವರ ಕಣ್ಣಿಗೆ ಹುಚ್ಚರು -ಇವರೆಲ್ಲ ತಾವಿರುವ ಪ್ರತಿಕೂಲ ವಾತಾವರಣದಲ್ಲೂ ತಮ್ಮ ಭಾಷೆಯ ಉಳಿ-ಬಾಳುವೆಗೆ ಕಾರಣರಾಗುತ್ತಾರೆ.
ಇನ್ನೊಂದು ಮಾತು: ‘ದೇವರು’ ಎಂದಾಗ ಬೇರೆ ಬೇರೆ ರೀತಿ ಅರ್ಥ ಹೊಳೆಯುವುದಿಲ್ಲವೇ? ಹಾಗೆಯೇ, ಕನ್ನಡ ಎಂದೊಡನೆ ಬೇರೆ ಬೇರೆಯವರಿಗೆ ಬೇರೆ ಬೇರೆ ಬಗೆಯ ಕಲ್ಪನೆ ಒಡಮೂಡುವದುಂಟು! ಭಾರತದಲ್ಲಿ, ಕರ್ನಾಟಕದಲ್ಲಿ ಇದ್ದಾಗ ‘ಕನ್ನಡ’ದ ಬಗ್ಗೆ ನಮಗೆ ಆಗುತ್ತಿದ್ದ ಕಲ್ಪನೆ ಒಂದು ರೀತಿಯದಾದರೆ, ತೌರಿನಿಂದ ದೂರ ಹಾರಿ ಬಂದ ಮೇಲೆ, ವಿದೇಶದ ಕನ್ನಡಿಗರಿಗೆ ಆ ಕಲ್ಪನೆ ಗರಿಗೆದರಿ ಬಣ್ಣ ಬಣ್ಣದ ಕಾಮನಬಿಲ್ಲಾಗಿ ತೋರುವುದು ಸಹಜ.
ಅನುಭವದ ಮಾತನ್ನು ಕೇಳಿ: ವಿದೇಶದ ಕನ್ನಡಿಗರಿಗೆ ‘ಕನ್ನಡ’ ಒಂದು ಬರಿಯ ಭಾಷೆಯಾಗಿ ಉಳಿದಿಲ್ಲ. “ಕನ್ನಡ ಎನೆ ಕಿವಿ ನಿಮಿರುವುದು” ಎಂಬುದು, ಕನ್ನಡದ ಸೊಲ್ಲು ಕಿವಿಗೆ ಬಿದ್ದಾಗ ಅದೇನೋ ಅನಿರ್ವಚನೀಯ ಆನಂದ ಆಗುತ್ತೆ. ಎಂಬ ಧ್ವನಿ ‘ಕನ್ನಡ’ದ ನುಡಿಗಾಯ್ತು. ಅದು ಅಷ್ಟಕ್ಕೇ ನಿಲ್ಲುವುದಿಲ್ಲ; ಕನ್ನಡದ ಜನರ ನಡೆ, ನಡವಳಿಕೆ, ಆಚಾರ, ವಿಚಾರ, ವ್ಯವಹಾರ, ಕನ್ನಡದ ಇನಿ ದನಿ, ಹಾಡು ಹಸೆ, ಕುಣಿತ, ನರ್ತನ, ಕನ್ನಡಿಗರ (ವಿಶೇಷವಾಗಿ ಕನ್ನಡತಿಯರ) ವೇಷ-ಭೂಷಣ-ಕೇಶಾಲಂಕಾರ, ಕನ್ನಡಿಗರ ಮಾತುಕತೆ (ಹಾಗೂ ಪ್ರಾದೇಶಿಕ ವೈವಿಧ್ಯತೆ), ಒಟ್ಟಾರೆ ಕನ್ನಡಕ್ಕೇ ವಿಶಿಷ್ಟವೆನಿಸಿಕೊಳ್ಳುವ ‘ಸಂಸ್ಕೃತಿ’ - ಇವೆಲ್ಲದರ ಸಾರಸರ್ವಸ್ವವೇ “ಕನ್ನಡ” ಎನಿಸಿಕೊಳ್ಳುತ್ತದೆ, ವಿದೇಶದ ಕನ್ನಡಿಗರ ಮನದಾಳಗಳಲ್ಲಿ! ಈ ಕನ್ನಡಕ್ಕೆ ಮಾರುಹೋದಾಗ, “ಕನ್ನಡವೆನೆ ಕುಣಿದಾಡುವುದು ಎನ್ನ ಎದೆ!” ಸ್ಥಳೀಕರ ಕಣ್ಣಲ್ಲಿ ನಾವೆಲ್ಲಾ ಭಾರತೀಯರೇ, ನಿಜ; ಹೀಗಿದ್ದೂ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಈ ಕನ್ನಡತನ ನಮ್ಮನ್ನ ಒಂದುಗೂಡಿಸುತ್ತದೆ.
“ಭಾರತ ಜನನಿಯ ತನುಜಾತೆ”ಯಾಗಿ ಕನ್ನಡವನ್ನ, ಅಮ್ಮನನ್ನು ಕಾಣಲು ಮಗು ತವಕಿಸುವಂತೆ, “ತಾಯೆ ಬಾರ, ಮೊಗವ ತೋರ!” ಎಂದು ಕಳಕಳಿಸುವಂತೆ, ವಿಶೇಷವಾದ ಬೆಳಕನ್ನು ಚೆಲ್ಲುವ ಆ “ಕನ್ನಡದ ದೀಪವ ಹಚ್ಚೇವ!”-ಎನ್ನುತ್ತಾ, ಕನ್ನಡಲ್ಲಿ ನಡೆದಿರುವ ಮಹತ್ಸಾಧನೆಗಳ ನೆನಪಿನಲ್ಲಿ, ಕನ್ನಡವೆಂಬ ಪದ ಹೆಮ್ಮೆಯ ಕಾರಂಜಿಯಾಗಿ ಚಿಮ್ಮಿ, ಅನ್ಯರೊಂದಿಗೆ ನಾವು ಸಮ ನಿಮಗೆಂದು ಮೆರೆಸುತ್ತದೆ!
ಹೀಗಾಗಿ, ನಾವು ಅನುಭವಿಸುವ ನಮ್ಮ ‹ಕನ್ನಡತನ’ ಒಂದು ತ್ರಿಕೋಣದಂತೆ! ಅದರ ಕೇಂದ್ರದಲ್ಲಿ, ಹೃದಯಸ್ಥಾನದಲ್ಲಿ ‘ಅಭಿಮಾನ’ ಇದೆ; ಅದರ ಮುಮ್ಮೂಲೆಗಳಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಈ ‘ಅಭಿಮಾನ’ಕ್ಕೆ ರಕ್ಷೆಯಾಗಿವೆ. ಇಲ್ಲಿಯವರೆಗೆ ಇಚ್ಛೆ ಮತ್ತು ಜ್ಞಾನಗಳು ಈ ‘ಅಭಿಮಾನ’ವನ್ನು ಪೋಷಿಸಿದುದನ್ನು ಮನಗಂಡೆವು. ಈಗ ಕ್ರಿಯಾಶಕ್ತಿಯತ್ತ, ಕನ್ನಡದ ಅಭಿಮಾನಿಗಳು ಏನನ್ನು ಮಾಡಬೇಕು ಎಂಬುದರ ಕಡೆ, ವಾಲ್ಮೀಕಿಂii ಸೀತೆ ಶ್ರೀರಾಮನಿಗೆ ಹೇಳಿದಂತೆ, “ನಿಮಗೆ ಎಲ್ಲಾ ಗೊತ್ತೇ ಇದೆ, ಜ್ಞಾಪಿಸುತ್ತಿದ್ದೇನೆ, ಅಷ್ಟೆ”(‘ಸ್ಮಾರಯೇ ನ ತು ಶಿಕ್ಷಯೇ’) -ಎಂಬಂತೆ, ನಿಮ್ಮ ಗಮನ ಸೆಳೆಯ ಬಯಸುತ್ತೇನೆ:
ಕರ್ನಾಟ ಜನಪದವಿಂದು ಕುರಿಮಂದೆ, ನರಿ ಬಳಗ, ಹೆಬ್ಬಾವು ಸಂಸಾರ, ಎಮ್ಮೆ ದೊಡ್ಡಿ, ತಟ್ಟುಕೊಟ್ಟಿಗೆ, ಇರುವೆ ಗೂಡು; ಎಲ್ಲವನು ಎಲ್ಲರನು ಎಚ್ಚರಿಸಿ ಇದಿರು ನಿಲ್ಲಿಸಿಕೊಂಡು ಆಣತಿ ಪಾಲಿಸಯ್ಯ, ಕನ್ನಡವ ಕಾಪಿಡಲು ಸಂಕಲ್ಪ ತಿಳಿಸಯ್ಯ, ಕೌಶಲ್ಯ ಕಲಿಸಯ್ಯ- ಎನ್ನುತ್ತಾರೆ ರಂಗಬಿನ್ನಪದ ಎಸ್.ವಿ. ರಂಗಣ್ಣನವರು. ಈ ಪೀಳಿಗೆ (ತಲೆಮೊರೆ) ಯೊಂದಿಗೇ ಇಲ್ಲಿ ಕನ್ನಡ ಮರೆಯಾಗುವುದೇ ಎಂಬ ಆತಂಕದ ಬಿಳಿ ಮೋಡಗಳು ಕಪ್ಪಾಗುವುದನ್ನು ತಡೆಗಟ್ಟಲು ಕೆಲವು ಸಂಗತ, ಸಮಂಜಸ ಕ್ರಮಗಳು ಮುಖ್ಯ. ಈ ದಿಶೆಯಲ್ಲಿ ಈಗಾಗಲೇ ಕಲಿತು ಕರಗತ ಮಾಡಿಕೊಂಡಿರುವ ತಾಯ್ನುಡಿಯನ್ನು ನಾವು ಮಾತನಾಡುವುದು ಅವುಗಳಲ್ಲಿ ಮೊದಲನೆಯದು: ‘ನಿಮಗಿಬ್ಬರಿಗೂ ಕನ್ನಡ ಗೊತ್ತಿದ್ದರೆ, ಕನ್ನಡದಲ್ಲೇ ಮಾತನಾಡಿ!’
ಎರಡನೆಯದು: ಓದಿ, ಕನ್ನಡ ಪುಸ್ತಕಗಳನ್ನು ಓದಿ! ಎಲ್ಲ ಕನ್ನಡ ಸಂಘಗಳೂ ಇಲ್ಲಿನವರ ಕನ್ನಡದ ಬರಹಗಳನ್ನು ಆಗಾಗ್ಗೆ ಪ್ರಕಟಿಸುವ ಮನಸ್ಸು ಮಾಡಬೇಕು. ಕನ್ನಡ ಕೂಟಗಳು ಹೊರತರುವ ಸಮಾಚಾರ ಪತ್ರಗಳು ಮೈ ತುಂಬಿ ಕೊಂಡು ಕನ್ನಡದ ಸಾಹಿತ್ಯ ಸಂಚಿಕೆಗಳಾಗಬೇಕು.
ಮೂರನೆಯದು: ಓದಿದ ಕನ್ನಡದ ಬರಹದ ಬಗ್ಗೆ ನಿಮಗೇನನ್ನಿಸಿತು ತಪ್ಪದೆ ಬರೆಯಿರಿ. ವಿದೇಶದ ಈ ಪ್ರತಿಕೂಲ ಪರಿಸರದಲ್ಲಿ ಕನ್ನಡವನ್ನು ನಮ್ಮ ಪಾಲಿಗಾದರೂ ಉಳಿಸಿಕೊಳ್ಳಲು ನಾವು ಆದಾಗಲೆಲ್ಲಾ ಕನ್ನದಲ್ಲಿ ಬರೆಯುತ್ತಲೇ ಇರಬೇಕಾದದ್ದು ಅಗತ್ಯ; ಕನ್ನಡ ನಿಯತಕಾಲಿಕ ಪತ್ರಿಕೆಗಳ ‘ಪ್ರತಿಕ್ರಿಯೆ’,‘ಓದುಗರ ಓಲೆ’ವಿಭಾಗಗಳು ಬರೆಯಬೇಕೆನ್ನುವವರ ಒಂದು ಬಗೆಯ ‘ಅನುಭವ ಮಂಟಪ’; ಉಪಯೋಗಿಸಿಕೊಳ್ಳಿ.
ನಾಲ್ಕನೆಯದು: ಕೊಂಡು ಓದುವ ಹವ್ಯಾಸದ ಉರಿ ನಮ್ಮ ಪಾಲಿಗೆ ತಣ್ಣಗಾಗದಿರಲಿ! ಕನ್ನಡ ಪ್ರೇಮಿಗಳಲ್ಲದೆ, ಹೇಳಿ, ಬೇರೆ ಯಾರು ತಾನೆ ಕನ್ನಡ ಪುಸ್ತಕಗಳನ್ನು ಕೊಂಡಾರು? ಕೊಂಡು ಓದಬೇಕು, ಉಳ್ಳವರು, ಬಲ್ಲಿದರು. ಹಂಚಿದಷ್ಟೂ ಹೆಚ್ಚುವ ಮೋಜು ನೋಡ ಬೇಕೆ? ಹಬ್ಬ ಹುಣ್ಣಿಮೆಗೆ, ಸಂತೋಷ ಸಮಾರಂಭಗಳಲ್ಲಿ ಕನ್ನಡ ಪುಸ್ತಕವೊಂದನ್ನು ಉಡುಗೊರೆಯಾಗಿ ಕೊಡಿ.
ಐದನೆಯದು: ಇನ್ನು, ಕನ್ನಡದಲ್ಲಿ ಬರೆಯುವ ಅಭಿಲಾಷೆ ಆಸಕ್ತಿ ಪರಿಶ್ರಮ ಉಳ್ಳವರ ಕುರಿತು ನಾಲ್ಕು ಮಾತು; ಬರೆಯಿರಿ, ಬರೆಯಿರಿ, ಬರೆಯಿರಿ, ಸಾಧ್ಯವಾದಾಗಲೆಲ್ಲ ಬರೆಯಿರಿ. ಅನುಭವಕ್ಕೆ ಕಲ್ಪನೆಯ, ಕಲ್ಪನೆಗೆ ಅನುಭವದ, ಎರಡಕ್ಕೂ ತನ್ನತನದ ಮೆರಗು ಹಚ್ಚಿ ಹೊಸತನ್ನು ಹುಟ್ಟಿಸಬಲ್ಲ ಸೃಜನಶೀಲ ಬರಹಗಾರರೇ, ಬಿಡದೆ ಕನ್ನಡದಲ್ಲಿ ಬರೆಯುತ್ತಿರಿ !
ಆರನೆಯದು: ಕನ್ನಡದ ಪ್ರಖ್ಯಾತ ಕವಿ ಕತೆಗಾರ ಕಾದಂಬರಿಕಾರ ವಿಮರ್ಶಕ ನಾಟಕಕಾರ-ರನ್ನು ಅನುಕೂಲವಾದಾಗಲೆಲ್ಲ ನಾವೇ ಅವರಿದ್ದಲ್ಲಿಂದ ಆಹ್ವಾನಿಸಿ ಕರೆಸಿಕೊಂಡು, ಅವರಿತ್ತ ಪ್ರವಾಸಿಯಾಗಿ ಬಂದಿದ್ದರೆ ನಾವಿದ್ದಲ್ಲಿಗೆ ಅವರನ್ನು ಬರಮಾಡಿಕೊಳ್ಳಬೇಕು. ಸಾಂಘಿಕವಾಗಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ, ಅವರ ಸಾಧನೆ ಸಿದ್ಧಿಗಳನ್ನು ಗುರುತಿಸಿ ಗೌರವಿಸುವುದು- ನಮ್ಮನ್ನು ನಾವೇ ಗೌರವಿಸಿಕೊಂಡಂತೆ!
ಕೊನೆಯದಾಗಿ, ಕನ್ನಡ ಗಣಕೀಕರಣದ (ಕಂಪ್ಯುಟರೀಕರಣದ) ಬಗ್ಗೆ ನಾಲ್ಕು ಮಾತುಗಳು: ಸರ್ವತೋಮುಖವಾಗಿ ಪ್ರಗತಿ ಪಥದಲ್ಲಿ ನಾಗಾಲೋಟದಿಂದ ಓಡುತ್ತಿರುವ ಕನ್ನಡದ ಗಣಕೀಕರಣ, ಕಂಪ್ಯುಟರೀಕರಣ! ಇದು ನಮ್ಮ ಪಾಲಿಗೆ ಸಕಾಲಕ್ಕೆ ಬಂದ ವರ!
ಸುಲಭವಾಗಿ ಬಳಸುವಂಥ ವಿನ್ಯಾಸದ, ಸ್ನೇಹಪರ ಗುಣಭರಿತ ಕನ್ನಡ ತಂತ್ರಾಂಶ, ಸಾಫ್ಟ್‌ವೇರ್ ಈಗ ನಮಗೆಲ್ಲರಿಗೂ ಸಿಗತೊಡಗಿವೆ. ಪದ-ಸಂಸ್ಕರಣೆಯ ಚೌಕಟ್ಟನ್ನು ದಾಟಿ, ದತ್ತ ಸಂಸ್ಕರಣ (ಡೇಟಾ ಪ್ರೊಸೆಸಿಂಗ್), ವಿಂಗಡಣೆ (ಸಾರ್ಟಿಂಗ್), ಲಿಪಿಗ್ರಹಣ, ಧ್ವನಿಗ್ರಹಣ ಇತ್ಯಾದಿ ವಿವಿಧ ಉದ್ದೇಶಗಳನ್ನ ಪೂರೈಸಬಲ್ಲ ತಂತ್ರಾಂಶಗಳು, ಏಕರೂಪತೆ ಹಾಗೂ ಪ್ರಮಾಣಿಕರಣಗಳತ್ತ ಸಾಗುತ್ತ, ನಮ್ಮ ಮೇಧಾವೀ ಗಣಕ ವಿಜ್ಞಾನಿಗಳ ಅವಿರತ ಶ್ರಮದ ಫಲವಾಗಿ ಹೊರಬಂದಿವೆ. ಇದೀಗ ಕನ್ನಡ ಗಣಕೀಕರಣದ ಹೆಬ್ಬಾಗಿಲು ತೆರೆದಂತೆಯೇ!
ಬನ್ನಿ, ನಿಜವಾದ ಅಭಿಮಾನದ, ಸತ್ತ್ವದ ಜೊತೆ ಜೊತೆಗೆ ಎಲ್ಲ ಬಗೆಯ ಪೋಷಕ ಪೂರಕ ಸಾಧನಗಳನ್ನೂ ಬಳಸಿಕೊಳ್ಳೋಣ! ಬಳಸಿಕೊಂಡಂತೆ ಬೆಳೆಯುತ್ತ ಹೋಗುವ ಪ್ರಭಾವ ವಲ್ಲರಿಯ ಹೊಂಬೆಳಕಿನಲ್ಲಿ ಕನ್ನಡವನ್ನ ಸಿಂಗರಿಸಿ ಮೆರೆಸೋಣ!