ಅಮೆರಿಕನ್ನಡ
Amerikannada
ಅಮೇರಿಕೆಯಲ್ಲಿ ಕನ್ನಡ ಸಂಘಗಳು
ಡಾ. ಮೈ.ಶ್ರೀ. ನಟರಾಜ್, ಮೇರಿಲ್ಯಾಂಡ್
ಸಂಕ್ಷಿಪ್ತ ಅವತರಣಿಕೆ:
ಅಮೇರಿಕೆಯಲ್ಲಿರುವ ಕನ್ನಡಿಗರ ಸುಮಾರು ನಾಲ್ಕು ದಶಕಗಳ ಚರಿತ್ರೆಯನ್ನು ಸ್ಥೂಲವಾಗಿ ಪರಿಶೀಲಿಸುವ ಯತ್ನ ಇದು. ಅನೇಕ ಗಣ್ಯ ಮಹನೀಯರ ಮತ್ತು ಮಹಿಳೆಯರ ಉತ್ಸಾಹ, ಶ್ರಮ ಮತ್ತು ತ್ಯಾಗದ ಫಲವಾಗಿ ಅಮೇರಿಕೆಯಲ್ಲಿ ಇಂದು ಹತ್ತಾರು ನಗರಗಳಲ್ಲಿ ಕನ್ನಡ ಸಂಘಗಳು ಬಾಳಿ ಬೆಳೆಯುತ್ತಿವೆ. ಈ ಎಲ್ಲ ಸಂಸ್ಥೆಗಳ ಚರಿತ್ರೆಯನ್ನು ಕಾಗದದ ಮೇಲಿಳಿಸಲು ಒಂದು ಪುಸ್ತಕವನ್ನೇ ಬರೆಯಬೇಕಾದೀತು. ಹಾಗೆ ಮಾಡುವ ಬದಲು ಎಲ್ಲ ಸಂಘಗಳಿಗೂ ಸಂಬಂಧಪಟ್ಟಂತೆ ನಾಲ್ಕು ಮಾತುಗಳನ್ನು ಬರೆಯಲಾಗಿದೆ. ಇದು ವ್ಯಕ್ತಿಪ್ರಧಾನವಾದ ಪ್ರಬಂಧವಲ್ಲದ ಕಾರಣ ಯಾರ ಹೆಸರಿಗೂ ಪ್ರಾಮುಖ್ಯತೆ ಕೊಟ್ಟಿಲ್ಲ.
ಹಿನ್ನೆಲೆ/ಮೊದಲ ಘಟ್ಟ:
ಸುಮಾರು ೧೯೬೦ನೇ ಇಸವಿಯಿಂದ ಪ್ರಾರಂಭವಾಗುತ್ತದೆ- ಅಮೆರಿಕೆಯಲ್ಲಿ ಕನ್ನಡಿಗರ ಚರಿತ್ರೆ. ಆ ದಶಕದಲ್ಲಿ ಸುಮಾರು ಜನ ಭಾರತೀಯ ವಿದ್ಯಾರ್ಥಿಗಳು ಅಮೇರಿಕೆಗೆ ಬರಲಾರಂಭಿಸಿದ್ಡು, ಹಾಗೆ ಓದಲು ಬಂದ ವಿದ್ಯಾರ್ಥಿಗಳಲ್ಲನೇಕರು ಇಲ್ಲೇ ತಳ ಊರಿದ್ದು ಎಲ್ಲರಿಗೂ ತಿಳಿದ ಸಂಗತಿ. ಹಾಗೆ ಬಂದು ನೆಲಸಿದ ಕನ್ನಡಿಗರ ಸಂಖ್ಯೆ, ಇತರ ಭಾರತೀಯರ, ಅಂದರೆ- ಪಂಜಾಬೀ, ಗುಜರಾಥೀ- ಮುಂತಾದ ಭಾಷೆಯ ಜನಗಳಿಗೆ ಹೋಲಿಸಿದರೆ, ಕಮ್ಮಿಯೇ. ಅಮೇರಿಕೆಯಲ್ಲಿ ಓದಲು ಬಂದ ಕನ್ನಡೇತರ ವಿದ್ಯಾರ್ಥಿಗಲ್ಲಿ ಹಲವಾರು ಮಂದಿ ಓದನ್ನು ಮಧ್ಯದಲ್ಲೇ ನಿಲ್ಲಿಸಿ ಕೆಲಸಗಳನ್ನು ಹಿಡಿದು ಹೊರಟದ್ದುಂಟು. ಆದರೆ ಓದಲು ಬಂದ ಕನ್ನಡ ವಿದ್ಯಾರ್ಥಿಗಳು ಪದವಿ ಪಡೆಯದೇ ಹಿಂದಿರುಗಿದ್ದಾಗಲೀ, ಓದನ್ನು ಮಧ್ಯದಲ್ಲಿ ನಿಲ್ಲಿಸಿ ಕೆಲಸ ಹುಡುಕಿಕೊಂಡು ಹೋದದ್ದಾಗಲೀ ಅಪರೂಪವೆನ್ನಬಹುದು. ಅಂತೂ, ಸುಮಾರು ೧೯೭೦ರ ಹೊತ್ತಿಗೆ ನೂರಾರು ಕನ್ನಡಿಗರು ಎಂ.ಎಸ್. ಅಥವಾ ಪಿ.ಎಚ್.ಡಿ. ಪದವಿಗಳನ್ನು ಮುಗಿಸಿ ಒಂದೆರಡು ವರ್ಷಗಳ ಕಾಲ ದುಡಿಡು ಒಂದಷ್ಟು ಹಣವನ್ನು ಶೇಖರಿಸಿ, ತಂತಮ್ಮ ವೃತ್ತಿರಂಗದಲ್ಲಿ ಒಂದಿಷ್ಟು ಅನುಭವವನ್ನೂ ಪಡೆದು ಭಾರತಕ್ಕೆ ಹಿಂದಿರುಗುವ ಯೋಜನೆ ಹಾಕುತ್ತಿದ್ದರು. ಹೀಗೆ ಕೆಲಸಕ್ಕೆ ಸೇರಿದ ತರುಣರು ಮತ್ತು ಇನ್ನೂ ವಿದ್ಯಾಭ್ಯಾಸದಲ್ಲಿ ತೊಡಗಿದ್ದವರು (ಅರ್ಥಾತ್, ವಿದ್ಯಾಭ್ಯಾಸದ ಅವಧಿ ತಾವು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುವುದೆಂಬ ಅನುಮಾನ ಬಲವಾದವರು), ಭಾರತಕ್ಕೆ ಹಿಂದಿರುಗಿ ಜೀವನಸಂಗಾತಿಗಳನ್ನು ಹುಡುಕಿ ಮದುವೆ ಮಾಡಿಕೊಂಡು ಹಿಂದಿರುಗಿದರು. ಅಪರೂಪಕ್ಕೆ ಕೆಲವರು ಇಲ್ಲಿಯೇ ತಮ್ಮ ಸಂಗಾತಿಗಳನ್ನು ವರಿಸಿ ಗೃಹಸ್ಥರಾದರು. ಹೀಗೆ ಸಂಸಾರ ಹೂಡಿದವರ ಸಂಖ್ಯೆ ಬೆಳೆದು, ಅವರಲ್ಲಿ ಅನೇಕರಿಗೆ ಮಕ್ಕಳಾಗಿ, ತಮಗೇ ಅರಿವಿಲ್ಲದಂತೆ ಹಲವಾರು ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಕನ್ನಡ ಮಾತು ಹೇರಳವಾಗಿ ಕೇಳಲು ಶುರುವಾಯಿತು. ಈ ಮಧ್ಯೆ, ಭಾರತದಲ್ಲಿ ರಾಂಚಿ ಮುಂತಾದ ಕೈಗಾರಿಕಾ ನಗರಗಳಲ್ಲಿದ್ದ ಹಲವಾರು ಒಂಟಿ ಹಾಗೂ ಸಂಸಾರಸ್ತ ಕನ್ನಡಿಗರ ‘ಪಚ್ಚೆಪರವಾನಗಿ’ (ಗ್ರೀನ್ ಕಾರ್ಡ್) ಅರ್ಜಿಗಳು ಇದ್ದಕ್ಕಿದ್ದಂತೆ ಹೆಚ್ಚಿನಸಂಖ್ಯೆಯಲ್ಲಿ ಮಂಜೂರಾಗಿ ಕನ್ನಡ ಮಾತಾಡುವ ವಲಸೆಗಾರ ಇಂಜಿನಿಯರುಗಳ ದೊಡ್ಡ ಗುಂಪೇ ಅಮೆರಿಕೆಯಮೇಲೆ ದಂಡೆತ್ತಿ ಬಂದಿತು! ಇದರ ಜೊತೆಗೆ, ಕನ್ನಡ ಮಾತಾಡುವ ನೂರಾರು ವೈದ್ಯರು ನೇರವಾಗಿ ಭಾರತದಿಂದ, ಇನ್ನು ಕೆಲವರು ಕೆನಡಾ ಮತ್ತು ಇಂಗ್ಲೆಂಡ್ ಮೂಲಕ ಹೆಚ್ಚಿನ ಪರಿಣತಿ ಪಡೆಯುವುದಕ್ಕಾಗಿ ಇಲ್ಲಿಗೆ ಬರುವುದು, ಮತ್ತು ಹಾಗೆ ಬಂದವರು ಹಿಂದಿರುಗದೇ ಇಲ್ಲೇ ಉಳಿದುಬಿಡುವುದು ಸರ್ವೇಸಾಧಾರಣವಾಯಿತು. ಹೀಗೆ ಕನ್ನಡಿಗರ ಸಂಖ್ಯೆ ಬೆಳೆಯುತ್ತ ಬಂತು. ಇಷ್ಟು ಹೊತ್ತಿಗಾಗಲೇ ಅನೇಕ ಕನ್ನಡಿಗರು (ಇನ್ನಿತರ ಭಾರತೀಯರಂತೆ) ಅವಕಾಶಗಳ ಬೀಡಾದ ಅಮೇರಿಕವನ್ನು ಬಿಟ್ಟು ಬಡ ಭಾರತಕ್ಕೆ ಹಿಂದಿರುಗುವುದು ಸಾಧ್ಯವಿಲ್ಲದ ಮಾತು ಎಂಬ ನಿಷ್ಠುರ ಸತ್ಯವನ್ನು ಮನಗಂಡಾಗಿತ್ತು. ಹೀಗೆ, ಅಮೇರಿಕೆಯ ಮಹಾವೃಕ್ಷದ ಬೇರುಗಳ ಮಧ್ಯೆ ಕನ್ನಡದ ಬೇರು ಹೊಸೆದುಕೊಂಡು ನೆಲವನ್ನು ಕಚ್ಚಲು ತೊಡಗಿತು. ೧೯೬೦ರಿಂದ ೧೯೭೦ರವರೆಗಿನ ಈ ದಶಕವನ್ನು ಅಮೇರಿಕನ್ನಡ ಚರಿತ್ರೆಯ ಮೊದಲನೇ ಘಟ್ಟವೆನ್ನೋಣ. ಮಿಚಿಗನ್ನಿನ ಕನ್ನಡಪ್ರೇಮಿಗಳ ಬಳಗವೊಂದು ಇಡೀ ಅಮೇರಿಕೆಯಲ್ಲಿರುವ ಎಲ್ಲಾ ಕನ್ನಡ ವಿದ್ಯಾರ್ಥಿಗಳ ಮತ್ತು ಇತರ ಕಾರಣಗಳಿಂದ ತಾತ್ಕಾಲಿಕವಾಗಿಯಾಗಲೀ ದೀರ್ಘಕಾಲದ ವಲಸೆಯ ದೃಷ್ಟಿಯಿಂದಲಾಗಲೀ ಬಂದು ವಿವಿಧ ಪ್ರದೇಶಗಳಲ್ಲಿ ನೆಲಸಿರುವವರ ಹೆಸರುಗಳು, ದೂರವಾಣಿ ಸಂಖ್ಯೆ ಮತ್ತು ವಿಳಾಸಗಳ ಪಟ್ಟಿಯನ್ನು, ತಯಾರಿಸುವ ಶ್ಲಾಘನೀಯ ಪ್ರಯತ್ನ ಮಾಡಿದ್ದೂ ಈ ಮೊದಲಘಟ್ಟದಲ್ಲೇ ಎಂಬುದು ಚರಿತ್ರಾರ್ಹ ಅಂಶ.
ಸಂಘಗಳ ಹುಟ್ಟು/ಎರಡನೇ ಘಟ್ಟ:
ವಿಶ್ವವಿದ್ಯಾಲಯಗಳ ಆವರಣಗಳಿಂದ ಹೊರಬಂದ ಕನ್ನಡಿಗರು, ಅಮೇರಿಕೆಯ ನಾನಾ ಪ್ರದೇಶಗಳಲ್ಲಿ ಬಂದು ನೆಲಸಲು ಪ್ರಾರಂಭಿಸಿದ್ದರ ಫಲಿತಾಂಶವಾಗಿ, ಪೂರ್ವತೀರದಲ್ಲಿ- ನ್ಯೂಯಾರ್ಕ್, ವಾಷಿಂಗ್ಟನ್, ಬಾಸ್ಟನ್, ಮತ್ತು ಫಿಲಡೆಲ್ಫಿಯ ಸುತ್ತಮುತ್ತಲ ಪ್ರದೇಶಗಳಲ್ಲಿ, ಪಶ್ಚಿಮದಲ್ಲಿ- ಲಾಸ್ ಏಂಜಲೀಸ್, ಸ್ಯಾನ್ ಫ್ರ್ಯಾನ್ಸಿಸ್ಕೋ, ದಕ್ಷಿಣದಲ್ಲಿ- ಅಟ್ಲಾಂಟ, ಹ್ಯೂಸ್ಟನ್ ಮತ್ತು ಉತ್ತರದಲ್ಲಿ- ಮಿನಿಯಾಪಲಿಸ್, ಚಿಕಾಗೊ, ಡಿಟ್ರಾಯಿಟ್ ಮುಂತಾದ ನಗರಗಳ ಸುತ್ತಮುತ್ತ ಕನ್ನಡಿಗರ ಸಂಖ್ಯೆ ಬೆಳೆಯುತ್ತ ಬಂದಂತೆಲ್ಲ ಪರಸ್ಪರ ಸಾಮಾಜಿಕ ಒಡನಾಟ ಮತ್ತು ಒಬ್ಬರ ಮನೆಗೆ ಮತ್ತೊಬ್ಬರು ಹೋಗಿಬರುವುದು ಸಾಮಾನ್ಯವಾಯಿತು. ಚಳಿಗಾಲದಲ್ಲಿ ಮನೆಗಳಲ್ಲಿ ಸೇರಿದಾಗ, ವಸಂತಕಾಲದಲ್ಲಿ ಉದ್ಯಾನಗಳಲ್ಲಿ ಸೇರಿದಾಗ, ತೌರೂರಿನ ಊಟ ತಿಂಡಿ, ಹಬ್ಬ ಹರಿದಿನಗಳ ನೆನಪುಬಂದು, ಎಲ್ಲರೂ ಒಟ್ಟಾಗಿ ಕೆಲವು ಸಮಾರಂಭಗಳನ್ನು ಏಕೆ ಆಚರಿಸಬಾರದು ಎಂದು ಎಲ್ಲರೂ ತಮ್ಮತಮ್ಮಲ್ಲೆ ಮಾತನಾಡಿಕೊಳ್ಳಲು ಪ್ರಾರಂಭಿಸಿದರು. ಹೀಗೆ ಯಾರದೋ ಒಬ್ಬರ ಮನೆಯ ನೆಲಮಾಳಿಗೆಯಲ್ಲಿ ಸೇರಿದ ಇಸ್ಪೀಟ್ ಕಛೇರಿಯೋ, ಮತ್ತೊಬ್ಬರ ಮನೆಯ ಗಣಪತಿ ಪೂಜೆಯೋ, ಮತ್ತೊಂದು ಗೆಳೆಯರ ಗುಂಪಿನ ವನವಿಹಾರವೋ ಬೇರೆ ಬೇರೆ ಪ್ರದೇಶಗಳ ಕನ್ನಡ ಸಂಘಗಳ ಸ್ಥಾಪನೆಗೆ ನಾಂದಿ ಯಾದದ್ದು ಆಚ್ಚರಿಯೇನಲ್ಲ. ಅಮೇರಿಕಾದಲ್ಲಿರುವ ಪ್ರತಿಯೊಂದು ಕನ್ನಡ ಸಂಘದ ಚರಿತ್ರೆಯ ಮೊದಲ ಅಧ್ಯಾಯವೂ ಹೆಚ್ಚು ಕಮ್ಮಿ ಈ ರೀತಿಯೇ ಪ್ರಾರಂಭವಾಗುತ್ತದೆ. ಕನ್ನಡ ಸಂಘಗಳನ್ನು ಪ್ರಾರಂಭಿಸಬೇಕೆಂದು ಚಿಂತಿಸುತ್ತಿದ್ದ ಅನೇಕ ಗಣ್ಯರು ಬೇರೆ ಬೇರೆ ಕಡೆ ಹಂಚಿಹೋಗಿದ್ದ ಆ ದಿನಗಳಲ್ಲಿ ಮಿಚಿಗನ್ನಿನಲ್ಲಿದ್ದ ಕೆಲ ಕನ್ನಡ ಪ್ರೇಮಿಗಳು ಇಡೀ ಉತ್ತರ ಅಮೇರಿಕೆಗೆಲ್ಲ ಒಂದು ಕನ್ನಡ ಕೂಟವನ್ನು ಪ್ರಾರಂಭಿಸುವ ಯೋಜನೆ ಹಾಕಿದ್ದೇ ನಾಂದಿಯಾಗಿ ನಾಲ್ಕಾರು ಸಂಸ್ಥೆಗಳು ಹುಟ್ಟಿಕೊಳ್ಳುವುದು ಸಾಧ್ಯವಾಯಿತು. ಆದರೆ ಮಿಚಿಗನ್ ಕನ್ನಡ ಕೂಟವನ್ನು ಮಾತೃಸಂಸ್ಥೆಯನ್ನಾಗಿಟ್ಟುಕೊಂಡು ಬೇರೆ ಬೇರೆ ಊರುಗಳಲ್ಲಿ ಇದರ ‘ಮರಿ-ಸಂಘ’ಗಳನ್ನು ತೆರೆಯಬೇಕೆಂಬ ಅಂದಿನ ಅವರ ಕನಸು ಮಾತ್ರ ಕನಸಾಗಿಯೇ ಉಳಿಯಿತು. ನಾನಾ ಕಾರಣಗಳಿಂದ ಇಂಥಾ ಒಂದು ಪ್ರಯತ್ನ ಕೈಗೂಡದ್ಡಿದ್ದರೂ ೧೯೭೦ರಿಂದ ೭೫ರವರೆಗಿನ ಕಾಲದಲ್ಲಿ ಅನೇಕ ಕನ್ನಡ ಕೂಟಗಳು ತಲೆ ಎತ್ತಿದವು. ಈ ರೀತಿ ಪ್ರಾರಂಭವಾದ ಸಂಸ್ಥೆಗಳ ಹೆಸರುಗಳು ಕನ್ನಡನಾಡಿನಷ್ಟೇ ವೈವಿಧ್ಯಮಯವಾಗಿವೆ! ಪವಿತ್ರ ನದಿ (ಕಾವೇರಿ), ಘಮಘಮಿಸುವ ಹೂವು (ಮಲ್ಲಿಗೆ, ಸಂಪಿಗೆ), ಅಮೂಲ್ಯವಾದ ವೃಕ್ಷ ಸಂಪತ್ತು (ಶ್ರೀಗಂಧ), ಪ್ರಸಿದ್ಧ ಚಕ್ರವರ್ತಿ (ನೃಪತುಂಗ), ಆದಿಕವಿ (ಪಂಪ), ಪೂಜ್ಯ ಯತಿವರ್ಯ (ವಿದ್ಯಾರಣ್ಯ), ಪವಿತ್ರಸ್ಥಳಗಳು (ಸಂಗಮ, ತ್ರಿವೇಣಿ), ಇವುಗಳ ಜೊತೆಗೆ ಸಂಘಟನೆಯನ್ನು ಸೂಚಿಸುವ- ಕೂಟ, ಬಳಗ, ಸಂಘಗಳು ಸೆರಿದಂತೆ ಅಮೇರಿಕೆಯಲ್ಲಿ ಸುಮಾರು ೨೫ ಕನ್ನಡ ಸಂಸ್ಥೆಗಳಿವೆ. ಇವಲ್ಲದೇ ಕನ್ನಡಿಗರೇ ಪ್ರಾರಂಭಿಸಿದ/ನಡೆಸುತ್ತಿರುವ ಅನೇಕ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಾಹಿತ್ಯ, ನಾಟಕ, ವೇದಾಂತ, ಸಂಗೀತ, ನೃತ್ಯ, ಇನ್ನೂ ಮುಂತಾದ ಆಯಾಮಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿವೆ.
ಸಮ್ಮೇಳನಗಳು/ಮೂರನೆಯ ಘಟ್ಟ:
ಬಹುತೇಕ ತರುಣರೇ ಆಗಿದ್ದ ಅಂದಿನ ಕನ್ನಡಿಗರ ಸಾಮಾಜಿಕ ಚಟುವಟಿಕೆಗಳೆಂದರೆ, ಮಕ್ಕಳ ಹುಟ್ಟು ಹಬ್ಬಗಳು. (ಆಗಿನ ಅನೇಕ ಯುವ ದಂಪತಿಗಳಿಗೆ ಪುಟ್ಟ ಪುಟ್ಟ ಮಕ್ಕಳು!) ಆಪ್ತರನ್ನು ಮನೆಗೆ ಕರೆದು ಬಗೆಬಗೆಯ ತಿಂಡಿ-ತಿನಿಸುಗಳನ್ನು ತಯಾರುಮಾಡಿ ಪುಷ್ಕಳವಾದ ಭೋಜನ-ಕೂಟಗಳನ್ನೇರ್ಪಡಿಸುವುದು ೭೦ರ ದಶಕದ ವೈಶಿಷ್ಟ್ಯವೆನ್ನಬಹುದು. ಅವರ ಸಾಮಾಜಿಕ ಜೀವನದ ಪ್ರತಿಬಿಂಬವೋ ಎಂಬಂತೆ, ಕನ್ನಡಿಗರು ಕಟ್ಟಿದ ಸಂಘಗಳ ಸಾಂಸ್ಕೃತಿಕ ಚಟುವಟಿಕೆಗಳೂ ಸಹ ಮನೆಯಲ್ಲೇರ್ಪಡಿಸಿದ ಸಂತೋಷಕೂಟಗಳ ಒಂದು ಬಡಾವಣೆಯಂತೆ, ಸಣ್ಣದೊಂದು ಇಗರ್ಜಿಯ ಸಭಾಂಗಣದಲ್ಲೋ ಅಥವಾ ಹೆಚ್ಚೆಂದರೆ ಪ್ರಾಥಮಿಕ ಶಾಲೆಗಳ ಸಭಾಂಗಣದಲ್ಲೋ ಸೇರಿ, ಯಾವ ಪೂರ್ವನಿಯೋಜಿತ ಕಾರ್ಯಕ್ರಮಗಳೂ ಇಲ್ಲದೆ ಒಂದು ದೊಡ್ಡ ‘ಅರಿಶಿನ-ಕುಂಕುಮದ’ ಪಾರ್ಟಿಯಂತೆ ಇರುತ್ತಿದ್ದವು. ಆರತಿಗೆ ಆಹ್ವಾನಿಸಿದ ಮನೆಯೊಡತಿ ‘ಯಾರಾದರೂ ಒಂದು ಹಾಡು ಹೇಳಿ’ ಎಂದು ಕೇಳಿದಾಗ, “ನೀವ್ ಹೇಳ್ರೀ ಸಾತಮ್ಮ” “ಇಲ್ಲಾ ನೀವೇ ಹೇಳ್ ಬಿಡ್ರೀ ಪಾತಮ್ಮ” “ನನಗಿವತ್ತು ಗಂಟಲು ಕಟ್ಟಿದೆ” ಇತ್ಯಾದಿ, ಇತ್ಯಾದಿಗಳಾದ ಮೇಲೆ, ಗಣೇಶನಿಗೆ ಮಂಗಳಾರತಿ ಎತ್ತಿದ ಶಾಶ್ತ್ರಮಾಡಿ, ನಾಲ್ಕಾರು ಮಹಿಳೆಯರು ಪ್ರೀತಿಯಿಂದ ಮಾಡಿತಂದ ಹುಳಿಯನ್ನ, ಮೊಸರನ್ನ, ಕೋಸಂಬರಿ, ಕಡುಬು ಗಳನ್ನು ಯಥಾಶಕ್ತಿ ಮೆದ್ದು, ತಕ್ಷಣ ಮನೆಗೆ ಹಿಂತಿರುಗಲು ಮನಸ್ಸಿಲ್ಲದೇ, ಯಾರಾದರೂ ಸರಿ ದಾರಿಯಲ್ಲಿ ಸಿಕ್ಕುವ ಒಬ್ಬ (ನತದೃಷ್ಟ)ರ ಮನೆಯಲ್ಲಿ ಪುನಃ ಸಭೆ ಸೇರಿ, ಅಂದಿನ ಆಗುಹೋಗುಗಳನ್ನು ವಿಮರ್ಶೆಮಾಡಿ, ಎಷ್ಟೋ ಹೊತ್ತಿನವರೆಗೆ ಇಸ್ಪೀಟಾಡಿ, ಕೆಲವರು ಮನೆಗೂ ಹಿಂದಿರುಗದೇ ಮನೆಯೊಡತಿಯ ಆತಿಥ್ಯದ ದುರುಪಯೋಗಮಾಡಿಕೊಂಡು, (ಕೊನೆಗೆ, ದಬ್ಬಿಸಿಕೊಂಡು) ಮನೆಗೆ ಹಿಂದಿರುಗುತ್ತಿದ್ದುದೂ ಕನ್ನಡ ಸಂಘಗಳ ಕಾರ್ಯಕಾರೀ ಸಮಿತಿಯ ಸದಸ್ಯರ ಕಾರ್ಯಕಲಾಪಗಳ ಭಾಗವಾಗಿತ್ತು.
೧೯೮೦ ರ ದಶಕದ ಸಾಧನೆ:
ಸುಮಾರು ೧೯೮೦ರ ವರೆಗೆ ಇದೇ ಧಾಟಿಯ ಸಂಕ್ರಾಂತಿ, ಉಗಾದಿ, ದೀವಳಿಗೆಗಳು ನಡೆಯುತ್ತಿದ್ದವು. ಕುಣಿಯುವ ವಯಸ್ಸಿನ ಮಕ್ಕಳಿದ್ದರೆ ಅವರುಗಳಿಂದ ಸಣ್ಣ ಪುಟ್ಟ ನೃತ್ಯಗಳನ್ನೋ, ಅಥವಾ, ಹಾಡುವ ಮಕ್ಕಳಿದ್ದರೆ, ಅವರಿಂದ ಕನ್ನಡ ಹಾಡುಗಳನ್ನೋ ಹಾಡಿಸುವುದರ ಮೂಲಕ ಮಕ್ಕಳ ತಾಯ್ತಂದೆಯರಿಗೆ ಹಿಗ್ಗನ್ನೂ (ಇತರರಿಗೆ ಸಿಡಿಯುವ ತಲೆನೋವನ್ನೂ?) ಉಂಟುಮಾಡಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು ಈ ದಶಕದ ಸಾಧನೆ. ಆಗಿಂದಾಗ್ಗೆ ಕೆಲವು ಮಹನೀಯರು/ಮಹಿಳೆಯರು ಕನ್ನಡ ಭಾವಗೀತೆಗಳ, ಜಾನಪದಗೀತೆಗಳ ವೃಂದಗಾನಗಳನ್ನು ಏರ್ಪಡಿಸಿ ಕಾರ್ಯಕ್ರಮಗಳ ಮಟ್ಟವನ್ನು ಏರಿಸಲು ಯತ್ನಿಸುತ್ತಿದ್ದರು. ಆಗಾಗ್ಗೆ, ಕೋಲಾಟ ಮುಂತಾದ ಕಾರ್ಯಕ್ರಮಗಳೂ ಬಂದವು. ಕೆಲವು ಸಂಘಗಳು ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೂ ಕೈಹಾಕಿ ಕೈ ಸುಟ್ಟುಕೊಂಡರು. ೧೯೭೫ರಲ್ಲಿ ಮೊಟ್ಟ ಮೊದಲ ಕನ್ನಡ ಚಿತ್ರ (ಹೆಸರು ನೆನಪಾಗುತ್ತಿಲ್ಲ, ಆಕಾಶವೆ ಬೀಳಲಿ ಮೇಲೆ, ನಾನಿಂದು ನಿನ್ನವನು ಹಾಡಿದ್ದ... ರಾಜ್ ಕುಮಾರ್-ಭಾರತಿ ನಟಿಸಿದ ಚಿತ್ರ?)ವನ್ನು ನ್ಯೂಯಾರ್ಕಿನಲ್ಲಿ ನೋಡಿದ ನೆನಪು.
೧೯೭೫-೭೬ರ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ನಡೆದ ಒಂದು ಬೆಳವಣಿಗೆಯೆಂದರೆ, ಈಶಾನ್ಯ ಅಮೆರಿಕದ ಎಲ್ಲ ಕನ್ನಡ ಸಂಘಗಳೂ ಒಂದೆಡೆ ಸೇರಿ ನಡೆಸಿದ ಸಮ್ಮೇಳನಗಳು ಇದ್ದಕ್ಕಿದ್ದಂತೆ ಚಟುವಟಿಕೆಗಳ ಮಟ್ಟವನ್ನೂ ವೈವಿಧ್ಯತೆಯನ್ನೂ ಹೆಚ್ಚಿಸಿದವು. ಇಂಥಾ ಒಂದು ಸಮ್ಮೇಳನವನ್ನು ಮೊಟ್ಟ ಮೊದಲು ಏರ್ಪಡಿಸಿದ ಕೀರ್ತಿ ನ್ಯೂಯಾರ್ಕ್ ಕನ್ನಡ ಕೂಟಕ್ಕ ಸೇರುತ್ತದೆ. ಮೊದಲು ವರ್ಷಕ್ಕೊಂದು ಬಾರಿ, ನಂತರ ಎರಡು ವರ್ಷಗಳಿಗೊಮ್ಮೆ ಈಶಾನ್ಯ ಅಮೇರಿಕಾದ ನಾಲ್ಕು ಸಂಸ್ಥೆಗಳು ಸಮ್ಮೇಳನಗಳನ್ನು ಅದ್ಧೂರಿಯಿಂದ ನಡೆಸಿಡವು. ಅನೇಕ ಸಂಘಗಳು ತಮ್ಮದೇ ಆದ ಪತ್ರಿಕೆಗಳನ್ನು ಹೊರಡಿಸಿದ್ದವಷ್ಟೆ. ಸಮ್ಮೇಳನಗಳ ಸ್ಮರಣಸಂಚಿಕೆಗಳಾದರೋ ಹೆಚ್ಚಿನ ಸಂಖ್ಯೆಯ ಬರಹಗಳನ್ನೊಳಗೊಂಡು ಪ್ರಕಟವಾದವು. ಮೊದಮೊದಲು ಕೈಬರಹದಿಂದ ಪ್ರಾರಂಭವಾಗಿ, ನಂತರ ಕನ್ನಡದ ಬೆರಳಚ್ಚಿನ ಉಪಯೋಗವನ್ನು ಪಡೆದು ಇನ್ನು ಕೆಲವು ಭಾರತದಿಂದ ಅಚ್ಚಾಗಿ ಬಂದವು. ಸಮ್ಮೇಳನಗಳ ಸಂದರ್ಭದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಚರ್ಚೆಗಳು ನಡೆದವು, ಕವಿಗೋಷ್ಟಿಗಳಲ್ಲಿ ಉದಯೋನ್ಮುಖ ಬರಹಗಾರರು ತಮ್ಮ ಸ್ವಂತ ರಚನೆಗಳನ್ನು ಓದಿದರು. ಕೈಲಾಸಂ, ಕುವೆಂಪು, ಪರ್ವತವಾಣಿ, ದಾಶರಥಿ ದೀಕ್ಷಿತ್, ಗುಂಡಣ್ಣ, ಮುಂತಾದವರ ಅನೇಕ ನಾಟಕಗಳು ರಂಗದಮೇಲೆ ಬಂದವು. ಕೆಲವು ಹೊಸ ನಾಟಕಗಳ ಸೃಷ್ಟಿಯೂ ಆಯಿತು, ಅವುಗಳ ಯಶಸ್ವೀ ಪ್ರದರ್ಶನಗಳೂ ಆದವು. ಕೆಲವು ಹವ್ಯಾಸೀ ಕಲಾವಿದರು ಉತ್ಸಾಹದಿಂದ ನಾಟಕಗಳನ್ನು ಕಟ್ಟಿಕೊಂಡು ಊರಿಂದೂರಿಗೆ ಓಡಾಡಿದರು. ಉತ್ತಮಮಟ್ಟದ ವಿಚಾರಸಂಕಿರಣಗಳು ಏರ್ಪಟ್ಟವು, ಭಾರತದಿಂದ ಆಹ್ವಾನಿತ ಅತಿಥಿಗಳುಬಂದು ಭಾಗವಹಿಸಿದರು. ಈಶಾನ್ಯದಲ್ಲಿ ನಡೆದ ಸಮ್ಮೇಳನಗಳ ಭರಾಟೆ ಅಮೇರಿಕೆಯ ಇತರ ಪ್ರದೇಶಗಳಿಗೂ ಹರಡಿ, ಮಧ್ಯ ವಲಯ, ಮಧ್ಯ-ಪಶ್ಚಿಮ, ಹಾಗೂ ದಕ್ಷಿಣಭಾಗದ ಕನ್ನಡಸಂಘಗಳು ಸಹ ಸಮ್ಮೇಳನಗಳನ್ನು ಏರ್ಪಡಿಸಿದರು. ಹೊಸ ನಿರೀಕ್ಷೆಗಳೊಂದಿಗೆ ಕನ್ನಡ ಸಂಘಗಳು ೧೯೯೦ರ ದಶಕಕ್ಕೆ ಕಾಲಿಟ್ಟವು.
ಬೆಳ್ಳಿಹಬ್ಬಗಳು/ನಾಲ್ಕನೆಯ ಘಟ್ಟ:
ಪರದೇಶಗಳಲ್ಲಿ ನಾವು ಕಟ್ಟಿಕೊಂಡಿರುವ ಕನ್ನಡ ಸಂಘಗಳ ಉದ್ದೇಶವೇನು ಎಂಬ ಪ್ರಶ್ನೆ ಕಾರ್ಯಕರ್ತರನ್ನು ಆಗಿಂದಾಗ್ಗೆ ಕಾಡುತ್ತಲೇ ಇರುತ್ತದೆ ಎನ್ನುವುದು ಅನುಭವದ ಮಾತು. ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು, ಬೆಳೆಸಲು ಯತ್ನಿಸುವುದು, ಕರ್ಣಾಟಕದ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಮಾಡಿಸುವುದು, ಈ ಸಂಘಗಳ ಉದ್ದೇಶವೆಂಬುದನ್ನು ಎಲ್ಲಾ ಸಂಸ್ಥೆಗಳ ಸಂವಿಧಾನದಲ್ಲೂ ನಾವು ಕಾಣಬಹುದಾಗಿದೆ. ಆದರೆ, ಅನೇಕ ಕಾರ್ಯಕರ್ತರಿಗೇ ಕನ್ನಡ ಭಾಷೆಯ ಪರಿಚರವಿಲ್ಲದಿರುವುದು, ಭಾಷೆಯ ಜ್ಞಾನವುಳ್ಳವರೂ ಕನ್ನಡವನ್ನು ಸಭೆಗಳಲ್ಲಿ ಬಳಸದೇ ಇರುವುದೂ, ಸರ್ವೇಸಾಧಾರಣವಾದ ಮಾತಾಗಿದೆ. ಹೀಗಾಗಿ ಕನ್ನಡಪ್ರೇಮ ಮತ್ತು ಕನ್ನಡ ಸಂಸ್ಕೃತಿ ಇಂಗ್ಲೀಷಿನಲ್ಲಿ ಬರೆದ ಸಂವಿಧಾನಗಳಲ್ಲಿ ಮಾತ್ರ ಅಡಕವಾಗಿದ್ದು ಆಗಿಂದಾಗ್ಗೆ ಚರ್ಚೆಗೆ ವಸ್ತುವಾಗುವುವೇ ವಿನಃ ಕನ್ನಡ ಭಾಷೆಯಾಗಲೀ ಸಂಸ್ಕೃತಿಯಾಗಲೀ ಮುಂದಿನ ಪೀಳಿಗೆಗೆ ತಲಪುವುದು ಕೇವಲ ಕನಸಾಗಿಯೇ ಉಳಿದಿದೆ. ಆದರೆ ಕಾಲ ಯಾರನ್ನೂ, ಯಾವುದನ್ನೂ ಕಾದು ಕೂರುವುದಿಲ್ಲವಲ್ಲ! ಅಂತೂ ೭೦ರ ದಶಕದಲ್ಲಿ ಹುಟ್ಟಿದ ಅಮೇರಿಕೆಯ ಅನೇಕ ಕನ್ನಡ ಸಂಘಗಳು ೯೦ರ ದಶಕದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿದವು ಎನ್ನುವುದು ಕಾಲದ ಪ್ರಭಾವವನ್ನು ತೋರುವುದೇ ವಿನಃ ನಿಜವಾದ ಬೆಳವಣಿಗೆಯನ್ನಲ್ಲ ಎಂದು ವಿಷಾದದಿಂದ ಗಮನಿಸಬೇಕಾಗಿದೆ. ಕರ್ಣಾಟಕ ಸರ್ಕಾರವು ಹಲವು ಕಲಾವಿದರನ್ನು ಇಂಥಾ ಬೆಳ್ಳಿಹಬ್ಬಗಳಲ್ಲಿ ಭಾಗವಹಿಸಲು ಕಳುಹಿಸಿತು ಎಂಬುದನ್ನು ಬಿಟ್ಟರೆ, ಈ ಸಮಾರಂಭಗಳಿಗೂ ಮುಂಚೆ ನಡೆದಿದ್ದ ಸಮ್ಮೇಳನಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇದ್ದಂತೆ ಕಾಣಲಿಲ್ಲ. ಆದರೂ, ಪರದೇಶದಲ್ಲಿ ಸಂಘಗಳನ್ನು ಕಟ್ಟಿಕೊಂಡು ೨೫ ವರ್ಷಗಳಕಾಲ ನಡೆಸುವುದು ಹುಡುಗಾಟದ ಮಾತೇನೂ ಅಲ್ಲ. ಮೊದಲ ಪೀಳಿಗೆಯ ವಲಸೆಬಂದ ಕನ್ನಡಿಗರು ಮುಖಂಡತ್ವ ವಹಿಸಿಕೊಳ್ಳುವುದು ಅಸಾಧ್ಯವಾದಾಗ ಈ ಸಂಘಗಳ ಪಾಡೇನು ಎಂಬುದನ್ನು ಕಾದು ನೋಡ ಬೇಕಾಗಿದೆ. ಯುವಪೀಳಿಗೆಯ ಮಕ್ಕಳನ್ನು ನಾಯಕತ್ವ ವಹಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಅವರನ್ನು ತಯಾರುಮಾಡುವ ಒಂದು ಯೋಜನೆ ಎಂದಿಗಿಂತ ಇಂದು ಅತ್ಯಗತ್ಯವಾಗಿದೆ.
ಹಲವು ಸಮಸ್ಯೆಗಳು:
ಜನಸಂಖ್ಯೆ ಹೆಚ್ಚಿದಂತೆಲ್ಲಾ, ಕನ್ನಡ ಸಂಘಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದು ಹೆಚ್ಚು ಹೆಚ್ಚು ಕಷ್ಟವಾಗುತ್ತಿದೆ. ಸಭಾಂಗಣವನ್ನು ಗೊತ್ತುಮಾಡುವುದು ಅನೇಕ ನಗರಗಳಲ್ಲಿ ಬಹಳ ಕಷ್ಟದ ಮಾತು. ಕೆಲವು ದೊಡ್ಡ ನಗರಗಳಲ್ಲಿ ಐವತ್ತಕ್ಕೂ ಮೀರಿ ಭಾರತೀಯ ಸಾಂಸ್ಕೃತಿಕ ಸಂಘಗಳೇ ಇರುತ್ತವೆ. ಇವಲ್ಲದೇ ಇನ್ನೂ ಇತರ ದೇಶಗಳ ಸಂಘಗಳೂ ಕೂಡ ಮಿತವಾದ ಸಂಖ್ಯೆಯ ಶಾಲಾ ಸಭಾಂಗಣಗಳಿಗಾಗಿ ಸ್ಪರ್ಧಿಸುತ್ತವೆ. ಕಾರ್ಯಕ್ರಮಗಳ ಏಕತಾನತೆ ಒಂದು ಮುಖ್ಯವಾದ ಸಮಸ್ಯೆ. ಊಟ ತಿಂಡಿಗಳ ಏರ್ಪಾಟು ಮತ್ತೊಂದು ದೊಡ್ಡ ತಲೆನೋವು. ಮುಂಚೆ ಮುಂಚೆ ಗಂಡ ಹೆಂಡರಿಬ್ಬರೂ ಕೆಲಸ ಮಾಡುವುದು ಅಪರೂಪವಾಗಿದ್ದ ಕಾಲದಲ್ಲಿ, ಹತ್ತಾರು “ಅನ್ನಪೂರ್ಣೆಯರು” ನೂರಾರು ಜನರಿಗೆ ಸಾಕಾಗುವಷ್ಟು ತಿನಿಸುಗಳನ್ನು ಸಂತೋಷವಾಗಿ ತಯಾರಿಸಿ ತಂದು ನಗುಮುಖದಿಂದ ಹಂಚುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲವಾಗಿದೆ. ಊಟವನ್ನು ನಿಗದಿಯಾದ ಬೆಲೆಗೆ ಮಾಡಿ ತಂದು ಹಂಚುವ ಅನೇಕ ವ್ಯಾಪಾರೀ ಸಂಸ್ಥೆಗಳು ದೊಡ್ಡ ದೊಡ್ಡ ನಗರಗಳಲ್ಲಿ ಈಗ ಹುಟ್ಟಿಕೊಂಡಿವೆಯಾದರೂ, ಅನೇಕವೇಳೆ ಹಣದ ಅಭಾವದಿಂದ ಅಥವಾ ಸಮರ್ಪಕವಾಗಿ ರುಚಿಕರವಾಗಿ ಮಾಡಿಸದಿದ್ದರೆ ದುಡ್ಡಿನ ಖರ್ಚಿನ ಜೊತೆಗೆ ಟೀಕೆಗೂ ಗುರಿಯಾಗಬೇಕಾದೀತೆಂದು ಹೆದರಿ, ಕಾರ್ಯಕಾರೀ ಸಮಿತಿಯವರು ತಬ್ಬಿಬ್ಬಾಗುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸುವುದು ಸಹ ಒಂದು ದೊಡ್ಡ ತಲೆನೋವಿನ ಜವಾಬ್ದಾರಿಯೇ. ಸಂಗೀತದವರು, ನೃತ್ಯದವರು, ನಾಟಕದವರು, ಸಾಹಿತ್ಯಾಭಿಮಾನಿಗಳು, ತಾವು ನಿರೀಕ್ಷಿಸಿದ್ದ ಸಾಧನೆ ಕನ್ನಡ ಸಂಘಗಳ ಮೂಲಕ ಸಾಧ್ಯವಾಗುತ್ತಿಲ್ಲವೆಂದು ಮನಗಂಡು ತಮ್ಮದೇ ಆದ ಸಂಸ್ಥೆಗಳನ್ನು ಕಟ್ಟಿಕೊಂಡು ಬೇರಾಗುತ್ತಿರುವುದು ಇತ್ತೀಚಿನ ಮಾತೇನೂ ಅಲ್ಲ. ಎಷ್ಟು ಯತ್ನಿಸಿದರೂ ಕಾರ್ಯಕ್ರಮವನ್ನು ಕಾಲಕ್ಕೆ ಸರಿಯಾಗಿ ಪ್ರಾರಂಭಿಸುವುದು ಅಸಾಧ್ಯವಾಗಿ ಜನ ಬಂದಹೊರತು ಕಾರ್ಯಕ್ರಮವನ್ನು ಪ್ರಾರಂಭಿಸುವುದು ಹೇಗೆ ಎಂದು ತರ್ಕಿಸಿ ತಡಮಾಡುವುದು ಅನಿವಾರ್ಯ ವಾಗಿಬಿಡುತ್ತದೆ.
ಕನ್ನಡ ಸಂಘಗಳಲ್ಲಿ ಮುಂದಾಳತ್ವ ವಹಿಸುವವರಲ್ಲಿ ಅನೇಕರು ಸಮಾಜ ಸೇವೆಯಲ್ಲಿ ಮತ್ತು ಧಾರ್ಮಿಕ (ಅಂದರೆ, ಮುಖ್ಯವಾಗಿ ದೇವಾಲಯಗಳನ್ನು ಕಟ್ಟುವ ಮತ್ತು ನಡೆಸುವ) ಚಟುವಟಿಕೆಗಳಲ್ಲೂ ಭಾಗಿಗಳಾಗುತ್ತಾರಾದ್ದರಿಂದ ಕೆಲವೊಮ್ಮೆ ಕೂಟಗಳು ಮತ್ತಿತರ ಸಂಸ್ಥೆಗಳ ಪರಸ್ಪರ ಸಹಾಯ ಮತ್ತು ಸಹಕಾರಗಳಿಂದ ಪ್ರಯೋಜನ ಪಡೆದುಕೊಳ್ಳುವುದು ಸಾಧ್ಯವಾಗಿದೆ. ಸಂಗೀತ, ನೃತ್ಯ, ನಾಟಕ ಮುಂತಾದ ಕಾರ್ಯಕ್ರಮಗಳ ಯೋಜನೆಯಲ್ಲಿ ಹಾಗೂ ದಾನ ಧರ್ಮ ಕಾರ್ಯಗಳಿಗೆ ಚಂದಾ ಶೇಖರಣೆ ಮಾಡುವಾಗ ಸಹ ಇಂಥಾ ಸಹಕಾರಗಳು ವ್ಯಕ್ತವಾಗಿವೆ.
ಆಕರ್ಷಣೆಯ ಕೊರತೆ:
ಮೊದಲಸುತ್ತಿನ ಸಮ್ಮೇಳನಗಳಲ್ಲಿದ್ದ ಸೌಹಾರ್ದ-ಮನೋಭಾವ ಎರಡನೆಯ ಮತ್ತು ಮೂರನೆಯ ಸುತ್ತುಗಳಲ್ಲಿ ಕಂಡುಬಂದಿಲ್ಲವೆಂದು ಅನೇಕರು ಗಮನಿಸಿದ್ದರೆ ಅಚ್ಚರಿಯೇನಿಲ್ಲ. ಮೊದಮೊದಲು, ಬೇರೆಬೇರೆ ಊರುಗಳಿಂದ ಬಂದವರನ್ನು ಸ್ಥಳೀಯ ಬಂಧುಗಳು ತಮ್ಮತಮ್ಮ ಮನೆಗಳಲ್ಲಿ ಉಳಿಸಿಕೊಂಡು ಉಪಚರಿಸುತ್ತಿದ್ದರು. ಹಾಗಾಗಿ, ನೇರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇದ್ದವರು ಸಹ ಕನ್ನಡಪ್ರೇಮದ ಒಂದೇ ಕಾರಣದಿಂದ ದೂರದೂರುಗಳಿಗೆ ಗುಂಪುಗುಂಪಾಗಿ ಪ್ರಯಾಣ ಮಾಡಿ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇತ್ತೀಚೆಗೆ ಇಂಥಾ ಆತ್ಮೀಯತೆ ಇಲ್ಲವಾಗಿ ನೇರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕೆಲವೇ ಪ್ರತಿನಿಧಿಗಳನ್ನು ಬಿಟ್ಟು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಸಪ್ಪೆ ಅಥವಾ ಕಳಪೆಯಾದ ಸಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಯ ಮತ್ತು ಹಣವನ್ನು ಖರ್ಚು ಮಾಡುವ ಭಾಗಿಗಳಿಗೆ ತೃಪ್ತಿಕೊಡುವ ಯಾವ ವಿಶೇಷವೂ ಇಲ್ಲದಿರುದು ಸಹ, ಇತ್ತೀಚಿನ ಸಮ್ಮೇಳನಗಳು ಆಕರ್ಷಣೆಯನ್ನು ಕಳೆದುಕೊಳ್ಳಲು ಕಾರಾಣವಾಗಿದೆ.
ಮುಂದಿನ ಘಟ್ಟ:
ಕನ್ನಡ ಸಂಘಗಳು ಹೊಸ ಶತಮಾನ/ ಸಹಸ್ರಮಾನದಲ್ಲಿ ಏನು ಸಾಧಿಸಬೇಕು? ಯಾವರೀತಿ ಬದಲಾವಣೆಗಳನ್ನು/ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕು? ಈ ಪ್ರಶ್ನೆಗಳು ಎಲ್ಲ ಸಂಘಗಳ ಕಾರ್ಯಕರ್ತರನ್ನೂ ಕಾಡುವುದು ಸಹಜ. ಉತ್ತರ ಸುಲಭವಾಗಿ ಸಿಗುವಂಥಾದ್ದಲ್ಲ. ಮೊಟ್ಟ ಮೊದಲನೆಯದಾಗಿ ಕಾರ್ಯಕ್ರಮಗಳ ಗುಣಮಟ್ಟ ಏರಬೇಕು. ಅಂದರೆ, ಎಲ್ಲರನ್ನೂ ಸಂತೋಷಗೊಳಿಸಲು ಹತ್ತಾರು ಕಾರ್ಯಕ್ರಮಗಳನ್ನು ಒಂದೇ ಸಂಜೆಯಲ್ಲಿ ತುರುಕದೇ, ಒಂದೋ ಎರಡೋ ಉತ್ತಮ ಕಾರ್ಯಕ್ರಮಗಳನ್ನು ಚೆನ್ನಾಗಿ ಅಭ್ಯಸಿಸಿ ಪ್ರದರ್ಶನ ಮಾಡುವುದು. ಕಾಲಕ್ಕೆ ಸರಿಯಾಗಿ ಪ್ರಾರಂಭಿಸಿ, ಕಾಲಕ್ಕೆ ಸರಿಯಾಗಿ ಮುಗಿಸುವುದು. ಕಾರ್ಯಕ್ರಮ ನಡೆಯುವಾಗ ಶಿಸ್ತಿನಿಂದ ವರ್ತಿಸುವುದು. ಕನ್ನಡ ಭಾಷೆಯನ್ನು ಹೆಚ್ಚುಹೆಚ್ಚಾಗಿ ಬಳಸುವುದು. ಊಟದ ಕಡೆಗೆ ಮಿತವಾದ ಗಮನ ಕೊಡುವುದು (ಬೇಕಾದರೆ ವರ್ಷದಲ್ಲೊಂದು ಬಾರಿ ಉತ್ತಮ ಭೋಜನಕೂಟವನ್ನೇರ್ಪಡಿಸೋಣ). ದೊಡ್ಡವರ ಜೊತೆ ಜೊತೆಗೇ ಯುವಕ ಯುವತಿಯರನ್ನೂ ಸೇರಿಸಿಕೊಂಡು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ನಡೆಸುವುದು. ಹೀಗೆ ಕಾರ್ಯಕ್ರಮಗಳನ್ನು ನಡೆಸುವಾಗ ಎಲ್ಲಾ ಸಮಾರಂಭಗಳಿಗೂ ಎಲ್ಲರೂ ಖಡ್ಡಾಯವಾಗಿ ಬಂದೇ ತೀರಬೇಕೆಂಬ ಹಟ ಬೇಡ. ಬೇಕಾದವರು ಬೇಕಾದ್ದನ್ನು ಆರಿಸಿಕೊಳ್ಳಲಿ. ಆಸಕ್ತಿ ಇದ್ದವರು ಮಾತ್ರ ಬರಲಿ. ಎಲ್ಲರನ್ನೂ ತೃಪ್ತಿಪಡಿಸುವ ಬಯಕೆ ಬೇಡ.
ವೈ ಟೂ ಕೆ ?
ಇತ್ತೀಚೆಗೆ ಗಣಕಶಾಸ್ತ್ರದಲ್ಲಿ ನೈಪುಣ್ಯತೆ ಪಡೆದವರು (ಇವರನ್ನು “ಶೂನ್ಯಸಮಸ್ಯ್ಯಾ-ಪರಿಹಾರ-ಪ್ರವೀಣರು” ಅಥವಾ, “ಶೂ-ಸ-ಪ-ಪ್ರವೀಣರು” ಎನ್ನೋಣವೆ?) ಹೆಚ್ಚಿನ ಸಂಖ್ಯೆಯಲ್ಲಿ ಕರ್ಣಾಟಕದಿಂದ ಅಮೇರಿಕೆಗೆ ಬಂದಿದ್ದಾರೆ. ಇವರುಗಳು ಬಂದ ಪರಿಸ್ಥಿತಿಗೂ ೬೦/೭೦ರ ದಶಕಗಳಲ್ಲಿ ಬಂದ ಕನ್ನಡಿಗರಿಗೂ ಅನೇಕ ವ್ಯತ್ಯಾಸಗಳಿವೆ. ಈ ಗಣಕಶಾಸ್ತ್ರಿಗಳು ಇಲ್ಲಿಯೇ ತಳ ಊರುವರೋ ಅಥವಾ ಭಾರತಕ್ಕೆ ಹಿಂದಿರುಗಿ, ನಾವುಗಳೆಲ್ಲಾ ಒಂದಾನೊಂದು ಕಾಲದಲ್ಲಿ ಮಾಡಬೇಕೆಂದು ಬಯಸಿ ಸಾಧಿಸಲಾಗದಿದ್ದನ್ನು ಸಾಧಿಸಿಬಿಡುವರೋ - ಕಾದು ನೋಡಬೇಕಾಗಿದೆ. ಇವರಲ್ಲಿ ಕೆಲವರಾದರೋ ಉಳಿದುಕೊಂಡದ್ದೇ ಆದರೆ, ಹೊಸ ಸಹಸ್ರಮಾನದ ಈ ಕನ್ನಡಿಗರು ಇಲ್ಲಿನ ಕನ್ನಡ ಸಂಘಗಳಿಗೆ ಒಂದಿಷ್ಟು ಹೊಸ ರಕ್ತವನ್ನು ತುಂಬ ಬಹುದೇನೋ? ಆದರೆ ಇವರಲ್ಲನೇಕರು ಎರಡು ದೋಣೀಗಳಲ್ಲಿ ಕಾಲಿಟ್ಟವರು. ಅವರಿಗೆ ಈ ಸಂಘ-ಸಂಸ್ಥೆಗಳ ತಲೆನೋವು ಬೇಕಾಗಿದೆಯೋ ಇಲ್ಲವೋ ಬಲ್ಲವರಾರು?
ಸಂಘಗಳ ಸಂಘ:
ಅಮೇರಿಕೆಯ ದೊಡ್ಡ ದೊಡ್ಡ ಊರುಗಳಲ್ಲೆಲ್ಲಾ ಒಂದೊಂದು ಕನ್ನಡ ಸಂಘವೇನೋ ಸಂಘಟಿತವಾಗಿದೆ. ಆದರೆ ಎಲ್ಲಾ ಸಂಘಗಳನ್ನೂ ಒಳಗೊಂಡ ಸಂಘಗಳ ಸಂಘ (ಅಂಬ್ರೆಲ್ಲ ಆರ್ಗನೈಜೇಷನ್ ಅಥವಾ ಛತ್ರೀ ಸಂಘ ?) ವೊಂದಿರಬೇಕೆಂಬ ಅನೇಕ ಕನ್ನಡಿಗರ ಆಸೆ ಇತ್ತೀಚಿನವರೆಗೂ ಕಾರ್ಯರೂಪಕ್ಕಿಳಿದಿರಲಿಲ್ಲ. ಸುಮಾರು ಇಪ್ಪತ್ತೈದು ವರ್ಷಗಳಿಗೂ ಮೊದಲು, ಅಂದರೆ ಇಲ್ಲಿನ ಕನ್ನಡ ಸಂಘಗಳು ಹುಟ್ಟುವ ಮೊದಲೇ ಇಡೀ ಅಮೆರಿಕಾ ಖಂಡದ ಎಲ್ಲಾ ಕನ್ನಡಿಗರನ್ನೂ ಸದಸ್ಯರನ್ನಾಗಿಉಳ್ಳ ಒಂದು ಬೃಹತ್ ಕೂಟವೊಂದನ್ನು ಕಟ್ಟಬೇಕೆಂದು ಮಿಷಿಗನ್ನಿನ ಕೆಲ ಸಾಹಸಿಗಳು ಕನಸು ಕಂಡಿದ್ದರೆಂಬುದನ್ನು ಮೊದಲೇ ತಿಳಿಸಿದೆಯಷ್ಟೆ. ಆ ಪ್ರಯತ್ನ ನಡೆದ ನಂತರ ಇತ್ತೀಚಿನವರೆಗೆ, ಯಾರೂ ಅಂಥ ಕನಸನ್ನು ಮತ್ತೆ ಕಂಡಿರಲಿಲ್ಲವೆನ್ನಬಹುದು. ಒಂದೆರಡು ವರ್ಷಗಳ ಕೆಳಗೆ ಅರಿಜೋನ ಸಂಸ್ಥಾನದಲ್ಲಿ ಕೆಲವು ಉತ್ಸಾಹಿಗಳು ‘ಅಕ್ಕ’ (ಅಸ್ಸೋಸಿಯೇಷನ್ ಆಫ್ ಕನ್ನಡ ಕೂಟಾಸ್ ಆಫ್ ಅಮೇರಿಕಾ) ಎಂಬ ಸಂಸ್ಥೆಯನ್ನು ನೊಂದಾಯಿಸಿಕೊಂಡಿದ್ದಾರೆ. (ನೋಡಿ-ಪರಿಶಿಷ್ಟವನ್ನು). ಇಂಥಾ ಒಂದು ಸಂಸ್ಥೆಯ ಧ್ಯೇಯ ಧೋರಣೆಗಳೇನಾಗಿರಬೇಕು? ಇಂಥಾ ಸಂಸ್ಥೆ ಎಲ್ಲಾ ಸಂಘಗಳ ಪ್ರತಿನಿಧಿಯಾಗಬೇಕಾದರೆ ಏನು ಮಾಡಬೇಕು? ಈ ಸಂಸ್ಥೆಯ ಪ್ರತಿನಿಧಿಗಳನ್ನು ಯಾರು, ಹೇಗೆ, ಯಾವಾಗ, ಎಲ್ಲಿ ಚುನಾಯಿಸಬೇಕು? ಈ ಸಂಸ್ಥೆ ಮಾಡಿದ ತೀರ್ಮಾನಗಳನ್ನು ಸದಸ್ಯ ಸಂಘಗಳು ಗೌರವಿಸಿ ಪಾಲಿಸುವಂತೆ ಮಾಡುವುದು ಹೇಗೇ? ಈ ಸಂಸ್ಥೆಯ ಹಣಕಾಸಿನ ವ್ಯವಸ್ಥೆ ಹೇಗಿರಬೇಕು? ಇವೇ ಮುಂತಾದ ವಿಷಯಗಳ ಬಗ್ಗೆ ‘ಅಕ್ಕ’ ಸಂಸ್ಥೆಯ ಸಂಚಾಲಕರು ಯೋಚಿಸಬೇಕು. ಮುಖ್ಯವಾಗಿ, ಭಾರತದಿಂದ ಬರುವ ಕನ್ನಡ ಕಲಾವಿದರಿಗೆ, ಬರಹಗಾರರಿಗೆ ಇಲ್ಲಿನ ಸಂಘಗಳಲ್ಲಿ ಯಶಸ್ವಿಯಾಗಿ ಭಾಗವಹಿಸಲು ಸಹಾಯಕವಾಗುವುದರಲ್ಲಿ ‘ಅಕ್ಕ’ ಹಿರಿಯ ಪಾತ್ರವನ್ನು ವಹಿಸ ಬಹುದೇನೋ? ಇಂಥಾ ಸಂಸ್ಥೆಯ ಮುಖಂಡರಾಗಬಯಸುವವರು ಸ್ವಾರ್ಥಿಗಳಾಗಿರದೇ ಶುದ್ಧ ಮನಸ್ಸಿನ ಕನ್ನಡ ಪ್ರೇಮಿಗಳಾಗಿದ್ದರೆ ಮಾತ್ರ ಅವರು ಜಯಶೀಲರಾಗಲು ಸಾಧ್ಯ. ಅಕ್ಕನ ಕಛೇರಿ ಒಂದೇ ಊರಿನಲ್ಲಿರಬೇಕಾಗಿಲ್ಲ. ಅದರ ಸದಸ್ಯತ್ವ ಕೂಡ ಅಮೇರಿಕೆಯ ಎಲ್ಲಾ ಸಂಘಗಳನ್ನೂ ತಲುಪಬೇಕು. ಈಗೇನು ವಿ. ಅಂಚೆಯ ಸೌಕರ್ಯವಿರುವುದರಿಂದ ಅನೇಕರನ್ನು ಏಕಕಾಲದಲ್ಲಿ ತಲುಪುವ ಸಾಧ್ಯತೆ ಇದೆ. ಮುಖ್ಯವಾಗಿ, ಇದು ಬಹುಸಂಖ್ಯಾತರ ಪ್ರಾತಿನಿಧಿಕ ಸಂಸ್ಥೆಯಾದರೆ ಮಾತ್ರ ಬದುಕಿ ಬೆಳೆಯಲು ಸಾಧ್ಯ. ಒಟ್ಟಿನಲ್ಲಿ, ಅಕ್ಕ ಎಲ್ಲಾ ಊರಿನ ಎಲ್ಲಾ ಕನ್ನಡ ಸಂಘಗಳ ಎಲ್ಲಾ ಸದಸ್ಯರನ್ನೂ ತಲಪುವ ಪ್ರಾಮಾಣಿಕಯತ್ನವನ್ನು ಇನ್ನೂ ಮಾಡಿಲ್ಲವೆಂಬ ದೂರು ಆಗಾಗ್ಗೆ ಕೇಳಿಬರುತ್ತಿದೆ. ಇಂಥಾ ಸಂಘಗಳನ್ನು ನಡೆಸುವುದು ಕಷ್ಟಸಾಧ್ಯವೆಂಬುದನ್ನು ಅರಿತಿರುವುದರಿಂದ, ಈ ಮಾತುಗಳು ಜವಾಬ್ದಾರಿಯಿಂದ ಹಾಗೂ ಕಳಕಳಿಯಿಂದ ಬರೆದ ಮಾತುಗಳೇ ವಿನಃ ದೂಷಣೆಯ ಉದ್ದೇಷದಿಂದ ಬರೆದ ಮಾತುಗಳಲ್ಲವೆಂಬುದನ್ನು ಓದುಗರು ಗಮನಿಸಬೇಕು.
ಮುಕ್ತಾಯ:
ಅಮೇರಿಕೆಯಲ್ಲಿ ಹುಟ್ಟಿ ಬೆಳೆದ ಕನ್ನಡ ಸಂಘಗಳು ನಡೆದುಬಂದ ದಾರಿಯ ಒಂದು ಪಕ್ಷಿನೋಟವನ್ನು ಇಲ್ಲಿ ಚಿತ್ರಿಸಲು ಯತ್ನಿಸಲಾಗಿದೆ. ಪರಿಶಿಷ್ಟದಲ್ಲಿ, ನಮಗೆ ತಿಳಿದಿರುವ ಅಮೇರಿಕೆಯ ಎಲ್ಲಾ ಕನ್ನಡ ಕೂಟಗಳ ಸಂಕ್ಷಿಪ್ತವಾದ ಪರಿಚಯವನ್ನು ಕೊಡಲಾಗಿದೆ. ಇಲ್ಲಿನ ಕನ್ನಡ ಸಂಘಗಳ ಸಂಪರ್ಕ-ವಿಳಾಸಗಳು ಮತ್ತು ದೂರವಾಣಿಸಂಖ್ಯೆಗಳು ವರ್ಷೇವರ್ಷೇ ಬದಲಾವಣೆಯಾಗುತ್ತವೆ. (ಪ್ರತಿವರ್ಷ ನಡೆಯುವ ಚುಣಾವಣೆಗಳಲ್ಲಿ ಆಯ್ಕೆಯಾದ ಅಧ್ಯಕ್ಷರು ತಮ್ಮ ವಿಳಾಸವನ್ನು ತಾತ್ಕಾಲಿಕವಾಗಿ ಸಂಘದ ವಿಳಾಸವಾಗಿ ಮಾಡಿಕೊಳ್ಳುತ್ತಾರೆ.) ಅಮೇರಿಕೆಯ ಯಾವ ಕನ್ನಡಸಂಘಕ್ಕೂ ತನ್ನದೇ ಆದ ಕಟ್ಟಡವಿಲ್ಲ. ಸಂಘದ ಸ್ವತ್ತಾದ ಪುಸ್ತಕ, ಪಾತ್ರೆ-ಪರಟಿ, ಧ್ವನಿವರ್ಧಕ ಇತ್ಯಾದಿ ವಸ್ತುಗಳನ್ನು ಕಾರ್ಯಕಾರೀ ಸಮಿತಿಯ ಸದಸ್ಯರುಗಳ ಮನೆಗಳಲ್ಲೇ ಇಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಅನೇಕ ಕನ್ನಡ ಸಂಘಗಳು ತಮ್ಮದೇ ಆದ "ಜಾಲ-ನಿವೇಶನ" (ವೆಬ್ ಸೈಟ್)ಗಳನ್ನು ರೂಪಿಸಿಕೊಂಡಿದ್ದಾರೆ. ಪರಿಶಿಷ್ಟದಲ್ಲಿ ಸಂಘಗಳ ಬಗ್ಗೆ ನಮಗೆ ದೊರೆತ ವಿವರಗಳನ್ನು (ಅಂದರೆ, ಸಂಘದ ಹೆಸರು, ಹುಟ್ಟಿದ ವರ್ಷ, ಮೊದಲನೆಯ ಅಧ್ಯಕ್ಷರ ಹೆಸರು, ತಾತ್ಕಾಲಿಕ ಅಂಚೆ ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ, ಜಾಲ-ನಿವೇಶನದ ವಿಳಾಸ, ಇತ್ತೀಚಿನ ಅಧ್ಯಕ್ಷರ ಹೆಸರು ಹಾಗೂ ಸಂಘದ ಹೆಗ್ಗಳಿಕೆಗಳ ಬಗ್ಗೆ ಎರಡು ಮಾತುಗಳು, ಇತ್ಯಾದಿ) ಕೊಡಲಾಗಿದೆ. ಆದಷ್ಟು ಜಾಗರೂಕತೆ ವಹಿಸಿದ್ದಾಗ್ಯೂ, ಈ ವಿಚಾರ ಸಂಗ್ರಹದಲ್ಲಿ ಅನೇಕ ತಪ್ಪುಗಳು ಇರಲು ಸಾಧ್ಯವಿದೆ ಎಂಬುದನ್ನು ಓದುಗರು ಗಮನಿಸಬೇಕು, ಹಾಗೂ ಮನ್ನಿಸಬೇಕು.