ಅಮೆರಿಕನ್ನಡ
Amerikannada
ಪ್ರಜಾಪ್ರಭುತ್ವ
- ಜಿ.ಆರ್. ವಿದ್ಯಾರಣ್ಯ, ಮೈಸೂರು
ನಾವು ದೇಶದ ಪ್ರಜೆಗಳು ಭಾರತಾಂಬೆಯ ಮಕ್ಕಳು
ಪ್ರಜೆಗಳೇತಕೆ ಕೇವಲ ನಾವೆ ದೇಶದ ಪ್ರಭುಗಳು
ಸಂವಿಧಾನವು ನೀಡಿದೆ ನಮಗೆ ಹಲವು ಬಲಗಳು
ಏಕೆ ಅರಿತಿಲ್ಲ ಇದನು ನೀವು ಕಳೆದರು ಯುಗಗಳು || ೧ ||

ನಾವು ನೀಡುವ ತೆರಿಗೆಯೇ ನಮ್ಮ ದೇಶಕೆ ಧನಬಲ
ಈ ಹಣದಿಂದತಾನೆ ಸರಕಾರಿ ನೌಕರರ ಸಂಬಳ
ನಮ್ಮ ಸೇವೆಗೆಂದು ನಾವೆ ನೇಮಿಸಿದ ಆಳ್ಗಳ
ವಿಳಂಬ ನೀತಿಯ ಕೆಲಸಕೆ ಏಕೆ ಬೇಕು ಗಿಂಬಳ || ೨ ||

ನಮ್ಮ ಅರ್ಜಿ ಸಾಗುತಿಲ್ಲ ಏಕೆ ಮುಂದಿನ ಮೇಜಿಗೆ
ಧೂಳು ಹಿಡಿವ ಕಡತವಾಗಿ ಏಕೆ ಬಿದ್ದಿದೆ ಸುಮ್ಮಗೆ
ಈ ಕಛೇರಿ ರಹಸ್ಯವ ಅರಿವ ಹಕ್ಕು ನಿಮಗಿದೆ
ಮಾಡಬೇಕಿಲ್ಲ ಇದಕೆ ಯಾರ ಕೈಯೂ ಬೆಚ್ಚಗೆ || ೩ ||

ಗಂಟೆಗಟ್ಟಲೆ ಕಾಯ್ದರೂ ಏಕಿಲ್ಲ ರಾಜ್ಯ ಸಾರಿಗೆ
ಏಕೆ ಸಿಗುತಿಲ್ಲ ಪಡಿತರ ಎಂದು ಕೇಳಲಿ ಯಾರಿಗೆ
ಏಳು ವರ್ಷದಿ ಬಂದಿದೆ ಮಾಹಿತಿ ಹಕ್ಕು ಜಾರಿಗೆ
ಏಕೆ ಬಳಸಿಲ್ಲ ಅದನು ನೀವು ಪ್ರತಿ ಬಾರಿಗೆ || ೪ ||

ಜನರಿಂದ ಜನರಿಗಾಗಿ ಇರುವುದೇ ಈ ಸರಕಾರ
ಜನರೆ ದೂರ ಸರಿದರೆ ಹೇಗೆ ಸಾಧ್ಯ ವ್ಯವಹಾರ
ಅರಿಯಿರಿ ಪ್ರಜೆಗಳಾಗಿ ನಿಮ್ಮ ಹಕ್ಕು-ಕರ್ತವ್ಯವ
ಕಲಿಯಿರಿ ನೀವು ಪ್ರಭುಗಳಾಗುವ ಮರ್ಮವ ||೫||

ಭಾಗಿದಾರರಾಗದೆ ನೀವು ಭ್ರಷ್ಟಾಚಾರದಿ
ಜನರು ಸಹಕರಿದಲ್ಲಿ ದೇಶದ ಆಡಳಿತದಿ
ಕ್ರಿಯಾಶೀಲರಾದರೆ ಎಲ್ಲರೂ ಈ ಕೆಲಸಕೆ
ಅರ್ಥ ಬರಬಹುದಲ್ಲವೆ ಪ್ರಜಾಪ್ರಭುತ್ವಕೆ || ೬ ||