ಅಮೆರಿಕನ್ನಡ
Amerikannada
ಕನ್ನಡವೆಂದರೆ....!
-ಜಯಪ್ಪ ಹೊನ್ನಾಳಿ, ಮೈಸೂರು
ಕನ್ನಡವೆಂದರೆ ಸಲ್ಲದೊ ಭಾವನೆ
ಕನ್ನಡ ಬರಿ ಭಾಷೆ!
ಕನ್ನಡವೆಂದರೆ ಕನ್ನಡ ಶಿವನೆದೆ
ಮನಸುಗಳಾ ಆಸೆ!

ಕನ್ನಡವೆಂದರೆ ಮಿರಿ ಮುತ್ತಿನಸರ
ಕನ್ನಡವೋ ಸಿರಿ ಸಂಸ್ಕೃತಿಯೋ!
ಕನ್ನಡವೆಂದರೆ ವಾಗ್ದೇವಿಯ ವರ!
ಕನ್ನಡಕೆ ಸರಿ ಎಲ್ಲಿದೆಯೋ!?

ಕನ್ನಡ ಬರಿಹುರಿ ನುಡಿಯಲ್ಲವೊ ಅದು
ಹೊನ್ನುಡಿ ಜ್ಯೋತಿರ್ಲಿಂಗ!
ನೆಲಕುಲ ತಣಿಸಿದ ಅನ್ನವ ಉಣಿಸಿದ
ಕಾವೇರಿಯೊ ಪಾವನ ಗಂಗಾ!

ಹಿಡಿ ಹೊಡಿ ಕಡಿ ಮಡಿಯಲ್ಲವೊ ಕನ್ನಡ
ಮಮತೆಯ ಮಾತೆಯ ಗುಡಿಯು!
ಪಂಪಕುಮಾರರ ಬಸವಾದಿ ಅಕ್ಕರ
ಸರ್ವಜ್ಞರ ಹಿರಿ ಉಡಿಯು!

ಭಾಷೆಯ ಬನದಲಿ ಕನ್ನಡ ಜೇನು
ಹಕ್ಕಿಯ ಬಳಗದಿ ಕೋಗಿಲೆ ತಾನು
ಬನಿಯಿದೆ ಧ್ವನಿಯಿದೆ ಹದಮಿದುವಿಲ್ಲಿದೆ
ರಸರೂಪಿದೆ ಬೇಕಿನ್ನೇನು!?

ಕನ್ನಡವಿದು ಕೇಳ್ ಕನ್ನಡ ಕಲಿಕುಲ
ಸಾರಿದ ಶ್ರೀವಾಣಿ!
ಖಗ ಮಿಗ ಕಾನ್ ಬಾನ್ ನೆಲ ಜಲ
ಎಲ್ಲವೂ, ಕನ್ನಡವೇ ರಾಣಿ!

ಕನ್ನಡವೆಂದರೆ ಕರುನಾಡಿನಲಿ
ಪ್ರವಹಿಸೊ ‘ಧೀ’ ಶಕ್ತಿ!
ಕನಕ ಪುರಂದರ ಭಕ್ತಿಯ ಬಾಗಿಲು
ಕನ್ನಡವೇ ಮುಕ್ತಿ!